ನಿಮ್ಮ ಹುಡುಗಿಯ ಮನಸ್ಸು ಗೆಲ್ಲೋಕೆ ನಾಳೆ (ಫೆ.10) ವಿಶೇಷ ದಿನ. ಯಾಕೆ ಅಂತೀರಾ, ನಾಳೆ ಟೆಡ್ಡಿ ಡೇ (Teddy Day). ಎಷ್ಟೇ ದುಬಾರಿ ಉಡುಗೊರೆಯನ್ನು ತಂದು ಕೊಟ್ಟಿದ್ದರೂ ಈ ದಿನದ ವೈಶಿಷ್ಟ್ಯವನ್ನು ನೀವು ತಿಳಿದುಕೊಳ್ಳಲೇಬೇಕು. ಏಕೆಂದರೆ ಮನಸ್ಸೆಂಬ ಪುಟ್ಟ ಅರಮನೆಯಲ್ಲಿನ ನಿಮ್ಮ ರಾಣಿಗೆ ಟೆಡ್ಡಿ ಕೊಟ್ಟು ಆಕೆಯನ್ನು ಖುಷಿಯ ಆಗಸದಲ್ಲಿ ತೇಲುವಂತೆ ಮಾಡಲು ಇದು ಅತ್ಯುತ್ತಮ ದಿನ. ಹುಡುಗಿಯರಿಗೆ ಟೆಡ್ಡಿಬೇರ್ ಕೊಟ್ಟಾಗ ಆಗುವ ಸಂತೋಷ ವಿವರಿಸಲು ಸಾಧ್ಯವಿಲ್ಲ. ಮನಮೆಚ್ಚಿದ ಪ್ರಿಯತಮೆಗೆ ಮುದ್ದಾಗಿರುವ ಟೆಡ್ಡಿಬೇರ್ ಕೊಟ್ಟರೆ, ಅವರು ಒಂದು ಕ್ಷಣ ಎಲ್ಲವನ್ನೂ ಮರೆತು ಸ್ವರ್ಗ ಸಿಕ್ಕಂತೆ ನೀವು ಕೊಟ್ಟ ಉಡುಗೊರೆಯನ್ನು (Gift) ಅಪ್ಪಿ ಮುದ್ದಾಡುತ್ತಾರೆ.
ಅದೇನೋ ಗೊತ್ತಿಲ್ಲ ಕೆಲ ಹುಡುಗಿಯರಿಗೆ ಬಂಗಾರದ ಗಂಟು ತಂದು ಪಕ್ಕದಲ್ಲಿಟ್ಟರೂ ಅವರ ಆಯ್ಕೆ ಮಾತ್ರ ಟೆಡ್ಡಿಬೇರ್ ಆಗಿರುತ್ತೆ. ಟೆಡ್ಡಿ ಕೊಟ್ಟು ತನ್ನ ಪ್ರೀತಿ ಸಾರವನ್ನು ಎಳೆ ಎಳೆಯಾಗಿ ಆಕೆಗೆ ತಿಳಿಸಬೇಕೆಂದುಕೊಂಡ ಹುಡುಗರ ಲವ್ ಸಕ್ಸಸ್ ಆಗಿದ್ದೇ ಹೆಚ್ಚು. ಈ ಲೆಕ್ಕಾಚಾರದ ಪ್ರಕಾರ ನೋಡಿದರೆ ಟೆಡ್ಡಿಬೇರ್ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡರೆ ಯಾವ ಹುಡುಗಿ ರಿಜೆಕ್ಟ್ ಮಾಡುತ್ತಾಳೆ ಹೇಳಿ.
ಮಲಗುವಾಗ ಟೆಡ್ಡಿಬೇರನ್ನು ಗಟ್ಟಿಯಾಗಿ ಅಪ್ಪಿಕೊಂಡು ತನ್ನ ಹುಡುಗನೆಂದು ಭಾವಿಸಿ ಅದರೊಂದಿಗೆ ಮಾತನಾಡುವ ಜೊತೆಗೆ ಸಂತೊಷದ ಘಳಿಗೆಯನ್ನು ಕಟ್ಟಿಕೊಳ್ಳುವುದೇ ಹುಡುಗಿಯರ ತಾಕತ್ತು. ಅದೆಷ್ಟೋ ಹೆಣ್ಣು ಮಕ್ಕಳು ಟೆಡ್ಡಿಬೇರ್ ಇಲ್ಲದೇ ಮಲಗುವುದಿಲ್ಲ. ಕೆಲವರಿಗೆ ಮಲಗಿದರೂ ನಿದ್ರೆ ಬರುವುದಿಲ್ಲ. ಮೆತ್ತನೆಯ ಟೆಡ್ಡಿಯನ್ನು ತಬ್ಬಿಕೊಂಡು ಮಲಗಿದಾಗ ಆಗುವ ಸಂತೋಷ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ. ಹೀಗಾಗಿ ಹುಡುಗರು ಪ್ರಿಯತಮೆಗೆ ಟೆಡ್ಡಿ ಬೇರ್ ಉಡುಗೊರೆಯಾಗಿ ನೀಡಿದಾಗ ಅವಳಿಗೆ ನಿಮ್ಮ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.
ನಿಮಗೊಂದು ಸಲಹೆ
ಟೆಡ್ಡಿಬೇರ್ ಇಷ್ಟಪಡುವ ಹುಡುಗಿಯರಲ್ಲಿ ಎರಡು ತರದವರಿರುತ್ತಾರೆ. ಕೆಲವರು ಚಿಕ್ಕ ಟೆಡ್ಡಿಬೇರ್ ಇಷ್ಟಪಟ್ಟರೆ. ಇನ್ನು ಕೆಲವರು ತಮಗಿಂತ ದೊಡ್ಡ ಗಾತ್ರದ ಟೆಡ್ಡಿಬೇರ್ಗಳನ್ನು ಇಷ್ಟಪಡುತ್ತಾರೆ. ಹೀಗಾಗಿ ಹುಡುಗರು ತನ್ನ ಹುಡುಗಿಗೆ ಯಾವ ರೀತಿಯ ಟೆಡ್ಡಿಬೇರ್ ಇಷ್ಟವಾಗುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು. ಜೊತೆಗೆ ಯಾವ ಬಣ್ಣದ ಟೆಡ್ಡಿ ಬೇರ್ ಪ್ರಿಯತಮೆಯ ಮನಸ್ಸನ್ನು ಗೆಲ್ಲಬಹುದೆಂದು ಅರಿಯಬೇಕು. ಆಗ ತಮ್ಮ ಬಜೆಟ್ಗೆ ಸರಿಯಾಗಿ ಟೆಡ್ಡಿಯನ್ನು ಖರೀದಿಸಲೂ ಆಗುತ್ತದೆ. ಜೊತೆಗೆ ಅದನ್ನು ಗಿಫ್ಟ್ ಪ್ಯಾಕ್ ಮಾಡಿ ಆಕೆಗೆ ನೀಡಿದ ನಂತರ ಏನಾಗುತ್ತದೋ ಎಂಬ ನಿಮ್ಮ ಆತಂಕವೂ ನಿವಾರಣೆ ಆಗುತ್ತದೆ. ಗಿಫ್ಟ್ ಕೊಡುವ ಹೊತ್ತಿಗೆ ಆಕೆಯ ಕಣ್ಮುಚ್ಚಿ ಚೆಂದದ ಟೆಡ್ಡಿಬೇರ್ ಅವಳ ಮುಂದಿಡಿ. ನಿಧಾನವಾಗಿ ಕಣ್ತೆರೆದು ನೋಡುವಷ್ಟರಲ್ಲಿ ನಿಮಗಿಷ್ಟವಾಗುವ ಯಾವುದಾದರೊಂದು ಪ್ರೀತಿಯ ಸಾಲನ್ನು ಗುಟ್ಟಾಗಿ ಹೇಳಿ. ಹೀಗೆ ಮಾಡುವಾಗ ಆಕೆಗಾಗುವ ಸಂತೋಷಕ್ಕೆ ನಿಮ್ಮ ಕಣ್ಣು ಅರಳದೇ ಇರದು.
ಟೆಡ್ಡಿ ಯಾಕಿಷ್ಟ?
ಕೆಲವೊಮ್ಮೆ ಮನಸ್ಸಿಗೆ ಆಗುವ ನೋವನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗಲ್ಲ. ತನ್ನವರೊಂದಿಗೆ ಹೇಳಿಕೊಳ್ಳಬೇಕೆಂದಾಗ ಆ ಕ್ಷಣಕ್ಕೆ ಅವರು ಸ್ಪಂದಿಸಲ್ಲ. ಯಾವುದೋ ಕೆಟ್ಟ ಘಳಿಗೆಯಲ್ಲಿ ಮನಸೆಲ್ಲಾ ಭಾರವಾಗಿ ಇಡೀ ದಿನವೇ ಹಾಳಾಗುತ್ತದೆ. ಇಂತಹ ವೇಳೆಯಲ್ಲಿ ಹುಡುಗಿಯರಿಗೆ ತನ್ನ ನೋವುಗಳನ್ನು ಹೇಳಿಕೊಳ್ಳಲು ಇರುವುದು ಮತ್ತು ಅವರ ಕಣ್ಣಿಗೆ ಕಾಣುವುದು ಟೆಡ್ಡಿಬೇರ್ ಮಾತ್ರ. ಈ ಟೆಡ್ಡಿ ಮಾತನಾಡದ ನಿರ್ಜೀವ ಗೊಂಬೆಯಾದರೂ ಹುಡುಗಿಯರು ಅದಕ್ಕೆ ಜೀವ ತುಂಬಿ ಮಗುವಂತೆ ಮುದ್ದಾಡುತ್ತಾರೆ. ಕೆಟ್ಟ ಸಮಯವನ್ನು ಮರೆಯಲು ಟೆಡ್ಡಿಬೇರ್ಗಳನ್ನು ಅಪ್ಪಿಕೊಂಡು ಗುಟ್ಟಾಗಿ ಅದರ ಕಿವಿಯಲ್ಲಿ ಹೇಳಿಕೊಂಡಾಗ ಹುಡುಗಿಯರ ಮನಸು ಹಗುರಾಗುತ್ತದೆ. ಸದಾ ನಗುತ್ತಿರುವ ಟೆಡ್ಡಿಬೇರ್ಗಳನ್ನು ಹಿಡಿದು, ಅದಕ್ಕೆ ರಿಬ್ಬನ್ ಹಾಕಿ, ಹಣೆಗೆ ಬೊಟ್ಟಿಟ್ಟು ಅಲಂಕಾರ ಮಾಡುವ ಹುಡುಗಿಯರು ಅದರಲ್ಲೇ ಖುಷಿ ಕಾಣುತ್ತಾರೆ.
Valentine’s Day: ಸರ್ಪ್ರೈಸ್ ತಂದ ಫಜೀತಿ, ಅವರಿಗೆ ಸಿಗಲೇ ಇಲ್ಲ ಪ್ರೀತಿಯ ಪತ್ರ