ಭಗವಂತ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ, ಅದರ ಹಿಂದಿನ ರಹಸ್ಯದ ಬಗ್ಗೆ ಈಗಾಗಲೇ ಕೆಲ ವಿಶೇಷ ಬರಹಗಳಲ್ಲಿ ಹಂಚಿಕೊಳ್ಳಲಾಗಿದೆ. ಅದೇ ರೀತಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರದ ಬಗ್ಗೆ ಇಲ್ಲಿ ತಿಳಿಯಿರಿ. ಕಲಿಯುಗದಲ್ಲಿ ಅಧರ್ಮ, ಅನೀತಿ, ಜನರ ಪಾಪ ಕೃತ್ಯಗಳು ಹೆಚ್ಚಾದಾಗ ಭಗವಾನ್ ವಿಷ್ಣು ಕಲ್ಕಿಯ ಅವತಾರವೆತ್ತಿ ಬಂದು ಧರ್ಮ ಸಂಸ್ಥಾಪನೆ ಮಾಡ್ತಾನೆ ಅಂತಾ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ವಿಷ್ಣು ಪುರಾಣದ ಪ್ರಕಾರ ಕಲ್ಕಿಯ ಅವತಾರ ವಿಷ್ಣುವಿನ 25 ನೆಯ ಅವತಾರ ಎನ್ನಲಾಗಿದೆ. ಆದ್ರೆ ಗರುಡ ಪುರಾಣದ ಪ್ರಕಾರ ಕಲ್ಕಿ ಅವತಾರ ವಿಷ್ಣುವಿನ 10 ನೆಯ ಅವತಾರ ಎನ್ನಲಾಗುತ್ತೆ. ಅದೇ ರೀತಿ ಮತ್ಸ್ಯ ಪುರಾಣ, ಬ್ರಹ್ಮ ವೈವರ್ಥ ಪುರಾಣ, ಭಾಗವತ್ ಪುರಾಣ, ಭವಿಷತ್ ಪುರಾಣ, ಶ್ರೀ ವಾಯು ಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ಕಲ್ಕಿಯ ಬಗ್ಗೆ ಉಲ್ಲೇಖವಿದೆ.
ಭಾಗವತ್ ಪುರಾಣದ ಪ್ರಕಾರ, ಕಲಿಯುಗದ ಅಂತ್ಯದ ವೇಳೆ, ಹಿಮಾಲಯದ ತಪ್ಪಲಿನಲ್ಲಿರುವ ಶಾಂಬಲಾ ಅನ್ನೋ ಗ್ರಾಮದಲ್ಲಿ ವಿಷ್ಣುವೇಶ್ ಅನ್ನೋ ಬ್ರಾಹ್ಮಣನಿಗೆ ಕಲ್ಕಿ ಮಗನಾಗಿ ಜನಿಸ್ತಾನೆ ಎನ್ನಲಾಗಿದೆ. ಭಗವಾನ್ ಮಹಾವಿಷ್ಣು ಶ್ರಾವಣ ಮಾಸದ, ಶುಕ್ಲ ಪಕ್ಷದ, ಷಷ್ಠಿ ತಿಥಿಯಂದು ವಿಷ್ಣುವೇಶ್ ಹಾಗೂ ಆತನ ಪತ್ನಿ ಸುಮತಿಯ ಮಗನಾಗಿ ಕಲ್ಕಿಯ ಅವತಾರವೆತ್ತಿ ಬರ್ತಾನೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕಲ್ಕಿಯ ಅವತಾರ ನಿಷ್ಕಳಂಕ ಅವತಾರ ಅಂತಾ ಪ್ರಸಿದ್ಧಿ ಪಡೆದು, ಎಲ್ಲಾ 64 ಕಲೆಗಳು ಈ ಅವತಾರದಲ್ಲಿ ಕಂಡುಬರಲಿವೆ ಅಂತಾ ಪುರಾಣಗಳು ಹೇಳುತ್ತವೆ. ಇದಿಷ್ಟೇ ಅಲ್ಲದೇ ಪುರಾಣಗಳಲ್ಲಿ ಕಲ್ಕಿಯ ಸಹೋದರರು, ಕುಟುಂಬ ಹಾಗೂ ಮಕ್ಕಳ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಪುರಾಣಗಳ ಪ್ರಕಾರ, ಕಲ್ಕಿಗೆ 3 ಜನ ಅಣ್ಣಂದಿರಿದ್ದು, ಅವರ ಹೆಸರು ಸುಮನ್, ಕವಿ ಹಾಗೂ ಪ್ರಗ್ಯಾನ್ ಅಂತಾ ಹೇಳಲಾಗಿದೆ. ಕಲ್ಕಿಗೆ ಪದ್ಮ ಹಾಗೂ ರಮಾ ಅನ್ನೋ ಇಬ್ಬರು ಪತ್ನಿಯರು ಇದ್ದಾರೆ. ಆ ಇಬ್ಬರು ಪತ್ನಿಯರಿಗೆ ಜಯ, ವಿಜಯ, ಮೇಘ, ಮಾಲ ಹಾಗೂ ಬಲಾಯಕ್ ಅನ್ನೋ ಹೆಸರಿನ ಮಕ್ಕಳು ಇರುತ್ತಾರೆ ಅಂತಾ ಪುರಾಣಗಳು ಹೇಳುತ್ತವೆ.
ಅಧರ್ಮವನ್ನು ನಾಶಪಡಿಸಿ, ಧರ್ಮಸಂಸ್ಥಾಪನೆ ಮಾಡಲೆಂದು ಕಲ್ಕಿ, ದೇವದತ್ತ ಅನ್ನೋ ಹೆಸರಿನ ಬಿಳಿ ಕುದುರೆ ಏರಿ ಬರಲಿದ್ದಾನೆ ಅಂತಾ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೇ, ಕಲ್ಕಿ ರೆಕ್ಕೆಗಳನ್ನು ಹೊಂದಿರುತ್ತಾನೆ, ಬಿಳಿ ಬಣ್ಣದ ಕುದುರೆ ಏರಿ ಬರ್ತಾನೆ ಹಾಗೂ ಎಡಗೈಯಲ್ಲಿ ಖಡ್ಗವನ್ನು ಹಿಡಿದಿರ್ತಾನೆ ಅಂತಲೂ ಪುರಾಣಗಳಲ್ಲಿ ವರ್ಣಿಸಲಾಗಿದೆ.