ಪ್ರಮುಖ ಸಂವಹನ ಮಾಧ್ಯಮ ವಾಟ್ಸಾಪ್ WhatsApp ಪ್ರಪಂಚದಾದ್ಯಂತ ದೊಡ್ಡ ಬಳಕೆದಾರರ ಬಳಗವನ್ನೇ ಹೊಂದಿದೆ. ಆದರೆ ಇತ್ತೀಚೆಗೆ ವಾಟ್ಸಾಪ್ ತನ್ನ ಪ್ರೈವಸಿ ಪಾಲಿಸಿಯಲ್ಲಿ ತಂದಿರುವ ಕೆಲ ಬದಲಾವಣೆಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ. ಈ ಮೂಲಕ ವಾಟ್ಸಾಪ್ ತನ್ನ ಬಳಕೆದಾರರಿಗೆ ಮೋಸ ಮಾಡಲು ಹೊರಟಂತಿದೆ ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಳಕೆದಾರರ ಮಾಹಿತಿಯನ್ನು Facebookನ ಹಲವಾರು ಉದ್ಯಮಗಳೊಂದಿಗೆ ಅದು ಹಂಚಿಕೊಳ್ಳಲು ಮುಂದಾಗಿದೆ. ಇದು ಎಷ್ಟು ಸರಿ? ಇದರಿಂದ ನಮಗೆ ಎಂತಹ ಹಾನಿಯಾಗಬಹುದು? ತೊಂದರೆಯೇ ಆಗುವುದಿಲ್ಲವೇ? ಎಂಬ ಅನುಮಾನಗಳಿಗೆ ತೆರ ಎಳೆಯುವ ಸಲುವಾಗಿ ಟಿವಿ9 ಕನ್ನಡ ಡಿಜಿಟಲ್ ಇಂದು ಫೇಸ್ಬುಕ್ ಲೈವ್ ಸಂವಾದ ನಡೆಸಿತು.
ಸಂವಾದದಲ್ಲಿ ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಜಾಲತಾಣದ ಮೇಲೆ ಪಿಎಚ್ಡಿ ಮಾಡಿರುವ ಆಶಾ ಕೃಷ್ಣಸ್ವಾಮಿ ಹಾಗೂ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಆರ್. ಶ್ರೀಕುಮಾರ್ ಭಾಗವಹಿಸಿದ್ದರು. ಟಿವಿ9 ಆ್ಯಂಕರ್ ಆನಂದ್ ಬುರಲಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಬಲ ಕಾನೂನು ಇಲ್ಲ..
Whatsappನಲ್ಲಿರುವ ಪ್ರೈವಸಿ ಹಾಗೂ ಸೆಕ್ಯುರಿಟಿಯಲ್ಲಿನ ನ್ಯೂನತೆ ಬಗ್ಗೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಆರ್. ಶ್ರೀಕುಮಾರ್ ಮಾತನಾಡಿ, ನಾವು ಇಂಟರ್ನೆಟ್ ಹಾಗೂ ಇತರೆ ಆ್ಯಪ್ಗಳನ್ನ ಬಳಕೆ ಮಾಡುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ. ಇಂಟರ್ನೆಟ್ನಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಬೇರೆಯವರು ಗಮನಿಸಬಹುದು ಎಂಬುದು ನಮ್ಮ ಅರಿವಿನಲ್ಲಿರಬೇಕು. ಕೆಲ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರೈವಸಿ ಹಾಗೂ ಸೆಕ್ಯುರಿಟಿ ಬಗ್ಗೆ ಕಠಿಣ ಕಾನೂನುಗಳಿವೆ. ನಮ್ಮ ದೇಶದಲ್ಲಿ ಅಂಥ ಕಾನೂನುಗಳು ಜಾರಿಗೆ ಬರುವವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದರು.
ವಾಟ್ಸಾಪ್ ಕಂಪನಿ ಖರೀದಿಸಲು ಫೇಸ್ಬುಕ್ 3 ಕೋಟಿ ಡಾಲರ್ ಖರ್ಚು ಮಾಡಿದೆ. ಅವರು ವ್ಯಾಪಾರಸ್ಥರಾಗಿರುವುದರಿಂದ ಸಾರ್ವಜನಿಕರ ಖಾಸಗಿ ಮಾಹಿತಿ ಇಟ್ಟುಕೊಂಡು ಹೇಗೆ ತಾವು ಆದಾಯ ಮಾಡಿಕೊಳ್ಳಬೇಕು ಎಂಬುದನ್ನ ಯೋಚಿಸುತ್ತಿರುತ್ತಾರೆ. ಹೀಗಾಗಿ ವಾಟ್ಸಪ್ ಈಗ ತಂದಿರುವ ತನ್ನ ಹೊಸ ನಿಯಮಗಳಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುವ ಕೆಲವು ಅಂಶಗಳು ಸೇರಿವೆ. ಆದರಿಂದ ನಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುವ ಈ ಸಂಸ್ಥೆಯವರು ತಮ್ಮ ಲಾಭಕ್ಕಾಗಿ ಅದನ್ನ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ವಾಟ್ಸಾಪ್ನಲ್ಲಿ ನಾವಿರುವ ಸ್ಥಳದ ಬಗ್ಗೆ ಮಾಹಿತಿ ದೊರಕುವುದರಿಂದ ನಮ್ಮ ವೈಯಕ್ತಿಕ ಜೀವನಕ್ಕೆ ಧಕ್ಕೆ ತರಬಹುದಾಗಿದೆ ಎಂದರು.
ವಾಟ್ಸಾಪ್ನ ಹೊಸ ನಿಯಮಗಳಲ್ಲಿರುವ ನ್ಯೂನತೆಗಳ ಬಗ್ಗೆ ಮಾತಾನಾಡಿದ ಆಶಾ ಕೃಷ್ಣಸ್ವಾಮಿ, ಫೇಸ್ಬುಕ್ ಒಂದು ಚಾರಿಟಿ ಸಂಸ್ಥೆಯಲ್ಲ, ಹಾಗಾಗಿ ಅವರು ತಮ್ಮ ಸಂಸ್ಥೆಯ ಆದಾಯವನ್ನ ಹೆಚ್ಚಿಸುವ ಸಲುವಾಗಿ ಕೆಲಸ ಮಾಡುತ್ತಿರುತ್ತಾರೆ. ವಾಟ್ಸಾಪ್ ತಂದಿರುವ ಹೊಸ ನಿಯಮಗಳು ಸಾರ್ವಜನಿಕರ ಖಾಸಗಿ ಬದುಕಿಗೆ ಹಾನಿಮಾಡಬಹುದಾಗಿದೆ ಎಂದರು.
ಅಲ್ಲದೆ ಈ ಹಿಂದೆ ನೆದರ್ಲ್ಯಾಂಡ್ನಲ್ಲಿ ಫೇಸ್ಬುಕ್ ಸಂಸ್ಥೆ ನಡೆಸಿದ್ದ ಒಂದು ಮೀಟಿಂಗ್ನಲ್ಲೇ ಹೇಳಿರುವ ಹಾಗೇ ಅವರು ತಮ್ಮ ಒಡೆತನದಲ್ಲಿರುವ ಆ್ಯಪ್ಗಳಲ್ಲಿ ಜಾಹೀರಾತುಗಳನ್ನ ಪ್ರಸಾರ ಮಾಡುವುದರ ಬಗ್ಗೆ ಇಡೀ ಜಗತ್ತಿಗೆ ತಿಳಿಸಿದ್ದರು. ಹಾಗಾಗಿ ಆ ತಂತ್ರದ ಬಳಕೆಗೆ ಈಗ ಡೆಡ್ಲೈನ್ ಕೊಟ್ಟಿದ್ದಾರೆ ಎಂದರು.
ವಾಟ್ಸಾಪ್ ಬ್ಯುಸಿನೆಸ್ ಮಾಡೆಲ್
ವಾಟ್ಸಾಪ್ ತಂದಿರುವ ಬದಲಾವಣೆಗಳಲ್ಲಿ ಇರುವ ಅಂಶಗಳೆಂದರೆ, ನಾವು ಬಳಕೆದಾರರ ವೈಯಕ್ತಿಕ ಮಾಹಿತಿಗೆ ಯಾವುದೇ ಧಕ್ಕೆ ಉಂಟುಮಾಡುವುದಿಲ್ಲ. ಬದಲಿಗೆ ವಾಟ್ಸಾಪ್ ಅನ್ನು ಬ್ಯುಸಿನೆಸ್ ಮಾಡೆಲ್ ಆಗಿ ಬಳಸಿಕೊಳ್ಳಲು ಮುಂದಾಗಿದ್ದೇವೆ. ಅಂದರೆ ವಾಟ್ಸಾಪ್ನಲ್ಲಿ ಬ್ಯುಸಿನೆಸ್ ಮಾಡುವವರಿಗೆ ಒಂದು ವೇದಿಕೆ ಸೃಷ್ಟಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಇದನ್ನು ಹೇಗೆ ಒಪ್ಪಲು ಸಾಧ್ಯ? ಕೇವಲ ಸಂವಹನಕ್ಕಾಗಿ ವಾಟ್ಸಾಪ್ ಬಳಸುವವರಿಗೂ, ವ್ಯಾಪಾರಕ್ಕಾಗಿ ಬಳಸುವವರಿಗೆ ಈ ಬದಲಾವಣೆಯಿಂದ ವಿನಾಯಿತಿ ಕೊಡಬೇಕು ಎಂದರು. ಅಲ್ಲದೆ ಸಂಸ್ಥೆ ಕೇವಲ ಬ್ಯುಸಿನೆಸ್ ಮಾಡುವವರಿಗೆ ಈ ಆಯ್ಕೆ ನೀಡುತ್ತೇವೆ ಎಂದು ಹೇಳಿದೆ. ಇವರು ಬ್ಯುಸಿನೆಸ್ ಅನ್ನು ಯಾವ ರೀತಿಯ ಮಾನದಂಡದಿಂದ ಅಳೆಯುತ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದು ಆಶಾ ಕೃಷ್ಣಸ್ವಾಮಿ ಹೇಳಿದರು.
ಒಂದು ತಿಂಗಳು ಸೇವ್ ಆಗಿರುತ್ತೆ
ನಾವು ಮೊಬೈಲ್ನಲ್ಲಿ ಬಳಸುವ ಪ್ರತಿಯೊಂದು ಆ್ಯಪ್ಗಳಿಗೂ ಜಿ-ಮೇಲ್ ಐಡಿ ಸೇರಿಸಿರುತ್ತೇವೆ. ಹೀಗಾಗಿ ನಾವು ಮೇಲ್ ಐಡಿಯನ್ನು ನೀಡಿದ ಕೂಡಲೇ ಅಲ್ಲಿ ನಮ್ಮ ಖಾಸಗಿ ಬದುಕಿಗೆ ತೊಂದರೆಯಾದಂತೆಯೇ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚಾದಂತೆ ನಮ್ಮ ಬ್ಯಾಂಕ್ ಖಾತೆಗಳು ಹ್ಯಾಕ್ ಆಗುವುದು ಹೆಚ್ಚಾಗಿದೆ.
ಸಂಸ್ಥೆಯ ಪ್ರಕಾರ ನಾವು ಮತ್ತೊಬ್ಬರಿಗೆ ಕಳುಹಿಸಿದ ಮೇಸೆಜ್ ಅವರಿಗೆ ತಲುಪದೆ ಇದ್ದಲ್ಲಿ, ಆ ಮಾಹಿತಿ ನಮ್ಮ ಸರ್ವರ್ನಲ್ಲಿ 1 ತಿಂಗಳವರೆಗೆ ಸೇವ್ ಆಗಿರುತ್ತದೆ. ಹೀಗಾಗಿ ನಾವು ಕಳುಹಿಸಿದಂಥ ಬಹುಮುಖ್ಯ ಮಾಹಿತಿ ಅವರಿಗೆ ದೊರೆಯುವ ಅವಕಾಶ ಇರುವುದರಿಂದ, ಅವರು ಅದನ್ನು ಹೇಗೆ ಬೇಕಾದರು ಬಳಸಿಕೊಳ್ಳಬಹುದಾಗಿದೆ. ಇದರಿಂದ ನಮ್ಮ ಖಾಸಗಿ ಬದುಕಿಗೆ ಹಾನಿಯಾಗಬಹುದು ಎಂದರು.
ವಾಟ್ಸಾಪ್-ಟೆಲಿಗ್ರಾಂ-ಸಿಗ್ನಲ್: ಯಾವ ಆ್ಯಪ್ ಹೆಚ್ಚು ಸೇಫ್? ಇಲ್ಲಿದೆ ವಿವರ
Published On - 6:12 pm, Mon, 11 January 21