ದೀಪಾವಳಿ ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ಆಚರಿಸಲಾಗುತ್ತೆ. ಆ ದಿನ ಬಲೀಂದ್ರನನ್ನು ಪೂಜಿಸುವ ಸಂಪ್ರದಾಯ ಶತಶತಮಾನಗಳಿಂದ ನಡೆದುಬಂದಿದೆ. ಇಷ್ಟಕ್ಕೂ ಯಾರು ಈ ಬಲೀಂದ್ರ ಗೊತ್ತಾ? ದಾನ ವೀರ ಶೂರನಾಗಿದ್ದ ಬಲಿಚಕ್ರವರ್ತಿಯೇ ಬಲೀಂದ್ರ. ಬಲಿ ಚಕ್ರವರ್ತಿ ತನ್ನ ಬಳಿ ಯಾರೇ ಬಂದು, ಏನೇ ಯಾಚಿಸಿದ್ರೂ ಇಲ್ಲ ಎನ್ನದೇ ದಾನ ಕೊಡುತ್ತಿದ್ದ.
ಇಂತಹ ಬಲಿಚಕ್ರವರ್ತಿ ಒಮ್ಮೆ ಯಜ್ಞ ಮಾಡುತ್ತಿದ್ದ ಜಾಗಕ್ಕೆ ವಾಮನ ರೂಪಿ ನಾರಾಯಣ ಬರ್ತಾನೆ. 3 ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ಕೇಳ್ತಾನೆ. 3 ಹೆಜ್ಜೆಯಷ್ಟು ದಾನ ಪಡೆದ ನಂತರ ವಾಮನ ರೂಪಿ ವಿಷ್ಣು ತ್ರಿವಿಕ್ರಮನಾಗಿ ಬೆಳೀತಾನೆ. ಮಹಾವಿಷ್ಣು ಪ್ರಥಮ ಹೆಜ್ಜೆಯಿಟ್ಟಾಗ ಇಡೀ ಆಕಾಶವೇ ವಿಷ್ಣುಮಯವಾಗುತ್ತೆ. ಎರಡನೇ ಹೆಜ್ಜೆಗೆ ಇಡೀ ಭೂಮಂಡಲವೇ ವಿಷ್ಣುವಿನ ವಶವಾಗುತ್ತೆ. ಮೂರನೇಯ ಹೆಜ್ಜೆ ಎಲ್ಲಿಡಲಿ ಎಂದು ನಾರಾಯಣ ಕೇಳ್ತಾನೆ. ಆಗ ಬಲಿ ಚಕ್ರವರ್ತಿ ತನ್ನ ತಲೆಯ ಮೇಲೆ ಇಡುವಂತೆ ಹೇಳುತ್ತಾನೆ. ತ್ರಿವಿಕ್ರಮನಾದ ನಾರಾಯಣ ತನ್ನ 3ನೇ ಹೆಜ್ಜೆಯನ್ನು ವಾಮನನ ತಲೆಯ ಮೇಲಿಟ್ಟು ಬಲಿಯನ್ನು ಪಾತಾಳಕ್ಕೆ ತಳ್ಳುತ್ತಾನೆ. ಬಲಿಯ ಭಕ್ತಿಗೆ ಮೆಚ್ಚಿದ ನಾರಾಯಣ ಬಲೀಂದ್ರನಿಗೆ ಅಪೂರ್ವವಾದ ವರ ನೀಡ್ತಾನೆ.
ಮಹಾವಿಷ್ಣು ಬಲಿಚಕ್ರವರ್ತಿಗೆ ನೀಡಿದ ವರ
ಆಶ್ವೀಜ ಮಾಸದಲ್ಲಿ 3 ದಿನ ಭೂಲೋಕಕ್ಕೆ ಬಲಿ ಬರ್ತಾನೆ
ಪಾಡ್ಯದ ದಿನ ಬಲಿಚಕ್ರವರ್ತಿಯ ಪೂಜೆ
ದೀಪಾವಳಿಯ ಪಾಡ್ಯದ ದಿನ ಬಲಿಪಾಡ್ಯಮಿಯಾಗಿ ಆಚರಣೆ
ದೀಪ ಹಚ್ಚಿ ಬಲೀಂದ್ರನ ಪೂಜೆ
ಬಲಿಪಾಡ್ಯಮಿ ಆಚರಣೆಯಿಂದ ಮಹಾವಿಷ್ಣುವಿನ ಸಂಪೂರ್ಣ ಆಶೀರ್ವಾದ
ಬಲಿಪಾಡ್ಯಮಿ ದಿನ ಏನು ಮಾಡಬೇಕು?
ಬಲಿಚಕ್ರವರ್ತಿಯ ಜನ್ಮೋದ್ಧಾರವಾದ ಬಲಿಪಾಡ್ಯಮಿಯ ದಿನ ಕೆಲವು ಆಚರಣೆಗಳನ್ನು ಪಾಲನೆ ಮಾಡಿದ್ರೆ ಭಗವಂತನ ಕೃಪೆ ಸದಾ ಕಾಲ ನಮ್ಮನ್ನು ಕಾಯುತ್ತೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
* ಪಾಡ್ಯದ ದಿನ ಎಳ್ಳೆಣ್ಣೆ ಮೈಗೆ ಹಚ್ಚಿ ಸ್ನಾನ ಮಾಡಿದ್ರೆ ಸಾತ್ವಿಕ ಗುಣ ಲಭಿಸುತ್ತೆ. ದೇಹದಲ್ಲಿ ತೇಜಸ್ಸು ಹೆಚ್ಚುತ್ತೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹೀಗಾಗೇ ಬಲಿಪಾಡ್ಯಮಿಯಂದು ಅಭ್ಯಂಜನ ಸ್ನಾನಕ್ಕೆ ವಿಶೇಷ ಮಹತ್ವವಿದೆ.
* ಬಲಿಪಾಡ್ಯಮಿಯಂದು ಬೆಳಗ್ಗೆ ಗೋವುಗಳಿಗೆ ಪೂಜೆ ಮಾಡಿ, ಹಸುಗಳಿಗೆ ಇಷ್ಟವಾದ ಬೆಲ್ಲ, ಹುಲ್ಲನ್ನು ನೀಡಬೇಕು. ಗೋ ಪೂಜೆಯಿಂದ ವಂಶಾಭಿವೃದ್ಧಿಯಾಗುತ್ತೆ ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ.
* ಶ್ರೀಕೃಷ್ಣ ಗೋಕುಲದ ಜನರನ್ನು ಸತತ ಮಳೆಯಿಂದ ಕಾಪಾಡಿದ ಸುದಿನವೇ ಬಲಿಪಾಡ್ಯಮಿ ಎನ್ನಲಾಗುತ್ತೆ. ಇಂದ್ರನ ಅಹಂಕಾರ ಅಡಗಿಸಲು ಶ್ರೀಕೃಷ್ಣ ಪರಮಾತ್ಮ ಈ ದಿನ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತಿ ಹಿಡಿದು ಗೋಕುಲದ ಜನರನ್ನು ರಕ್ಷಿಸಿದ್ದ. ಹೀಗಾಗೇ ಈ ದಿನ ಗೋವರ್ಧನಧಾರಿ ಕೃಷ್ಣನ ಪೂಜೆ ಮಾಡಬೇಕು.
* ಬಲಿಚಕ್ರವರ್ತಿ ಪ್ರಸಿದ್ಧಿ ಪಡೆದದ್ದೇ ದಾನದಿಂದ. ದಾನ ಮಾಡೋದ್ರಲ್ಲಿ ಅವನು ನಿಷ್ಣಾತ. ಹೀಗಾಗೇ ಬಲಿಪಾಡ್ಯಮಿಯ ದಿನ ಶಕ್ತ್ಯಾನುಸಾರ ಅಹಂಕಾರ ಇಲ್ಲದೇ ದಾನ ಮಾಡಿ. ನೀವು ಮಾಡಿದ ದಾನ ಮಹಾವಿಷ್ಣುವಿಗೆ ಪ್ರೀತಿಯಾಗಿ ನಿಮ್ಮ ಜೀವನದಲ್ಲಿ ಸುಖ, ಸಮೃದ್ಧಿ ಅಕ್ಷಯವಾಗುತ್ತೆ ಎನ್ನಲಾಗುತ್ತೆ.
Published On - 7:51 am, Mon, 28 October 19