ಸೂರ್ಯೋದಯಕ್ಕೂ ಮುನ್ನ ಎದ್ದು ಗೃಹಿಣಿಯರು ಮನೆ ಅಂಗಳದ ಕಸ ಗುಡಿಸಿ, ಸಗಣಿಯಿಂದ ಸಾರಿಸೋದು. ಹೊಸ್ತಿಲನ್ನು ನೀರಿನಿಂದ ಸ್ವಚ್ಛಗೊಳಿಸಿ ಅರಿಶಿನ, ಕುಂಕುಮ ಹಚ್ಚಿ ಹೂಗಳನ್ನಿಡೋದು. ಇದೆಲ್ಲಾ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿರೋ ಸಂಪ್ರದಾಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾರು ಅಷ್ಟು ಬೇಗ ಎದ್ದು ಇದೆಲ್ಲಾ ಮಾಡ್ತಾರೆ ಅಂತಾ ಶಾಶ್ವತವಾಗಿ ಹೊಸ್ತಿಲಿಗೆ ಹಳದಿ ಪೇಂಟ್ ಬಳಿಸ್ತಾರೆ. ಅದರ ಮೇಲೆ ಬಿಳಿ ಪೇಂಟ್ನಿಂದ ರಂಗೋಲಿ ಗೆರೆಗಳನ್ನು ಹಾಕಿಸ್ತಾರೆ.
ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಹೀಗಾಗೇ ಮನೆಯ ಮುಂದೆ ಹಾಗೂ ಹೊಸ್ತಿಲ ಮೇಲೆ ರಂಗೋಲಿ ಬಿಡೋದು. ಅರಿಶಿನ, ಕುಂಕುಮ ಹಚ್ಚೋದು ಶುಭದ ಸಂಕೇತ. ಹೊಸ್ತಿಲು ಬರಿದಾಗಿದ್ರೆ ಅದು ಅಶುಭ ಎಂಬ ನಂಬಿಕೆ ಇದೆ. ಮನೆಯ ಹೊಸ್ತಿಲು ಸಾಕ್ಷಾತ್ ಮಹಾಲಕ್ಷ್ಮೀ ಸ್ವರೂಪ ಎನ್ನಲಾಗುತ್ತೆ. ಮನೆಯ ಮುಖ್ಯದ್ವಾರದ ಹೊಸ್ತಿಲಲ್ಲಿ ಸಾಕ್ಷಾತ್ ಲಕ್ಷ್ಮೀ ಇರ್ತಾಳೆ. ಇನ್ನು ಹೊಸ್ತಿಲ ಮೇಲ್ಭಾಗದಲ್ಲಿ ಗೌರಿ ನೆಲೆಸಿರ್ತಾಳೆ. ರಂಗೋಲಿ, ಅರಿಶಿನ-ಕುಂಕುಮ ಇಲ್ಲದ ಮನೆಗೆ ದೇವತೆಗಳ ಪ್ರವೇಶಿಸೋದಿಲ್ಲ ಅಂತಾ ನಮ್ಮ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಿದೆ.
-ಇದು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೆ
-ಮನೆಯ ಶುಚಿತ್ವ ಕಾಪಾಡುತ್ತೆ
-ಹೊಸ್ತಿಲಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ
-ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟುಗಳಿರೋದ್ರಿಂದ ಮನೆಯೊಳಗೆ ಕ್ರಿಮಿಕೀಟಗಳು ಪ್ರವೇಶಿಸಲ್ಲ
-ಕೆಲಸ ಕಾರ್ಯದ ನಿಮಿತ್ತ ಹೊರಗಡೆ ಹೋಗುವವರಿಗೆ ಇದ್ರಿಂದ ಒಳಿತಾಗುತ್ತೆ
-ಮನೆಯ ಬಾಗಿಲು ಸುಂದರವಾಗಿ ಕಾಣುತ್ತೆ
-ಮನೆಯವರಲ್ಲಿ ನಕಾರಾತ್ಮಕ ಚಿಂತನೆಗಳು ಬಾರದಂತೆ ತಡೆಯುತ್ತೆ
-ಮನೆಯಲ್ಲಿ ಸದಾ ಪಾಸಿಟಿವ್ ವೈಬ್ರೇಷನ್ ಉಂಟಾಗಲು ಸಹಕಾರಿಯಾಗುತ್ತೆ
-ಮನೆಯಲ್ಲಿರುವವರ ಆಯಸ್ಸು ಹೆಚ್ಚುತ್ತೆ
-ಮನೆಯಲ್ಲಿ ಆರೋಗ್ಯ, ನೆಮ್ಮದಿ ನೆಲೆಸುತ್ತೆ
ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚೋದು ಮೂಢನಂಬಿಕೆಯಲ್ಲ. ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಪುರಾತನ ಕಾಲದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಮಗೆ ಆರೋಗ್ಯದ ರಕ್ಷಾಕವಚವಿದ್ದಂತೆ. ಇಂತಹ ಆಚರಣೆಗಳ ಬಗ್ಗೆ ಅರಿತು ಆಚರಿಸಿದ್ರೆ ಸುಂದರ, ಸ್ವಾಸ್ಥ್ಯ ಜೀವನ ನಮ್ಮದಾಗುತ್ತೆ.
Published On - 9:01 am, Mon, 25 November 19