ಉಡುಪಿ: ಕರಾವಳಿಯ ಅರಬ್ಬಿ ಸಮುದ್ರ ತೀರದಲ್ಲಿ ಕಳೆದ ಕೆಲ ದಿನಗಳಿಂದ ವಿಶೇಷ ಅಚ್ಚರಿಯೊಂದು ಕಂಡುಬರುತ್ತಿದ್ದು, ಜನರನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸುತ್ತಿದೆ. ನೀಲಿ ಬಣ್ಣದಿಂದ ಹೊಳೆಯುತ್ತಿರುವ ಕಡಲು ಸಮುದ್ರಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.
ನೀರಮಿಂಚುಳ್ಳಿ ಅಥವಾ Bioluminescence ಎಂದು ಕರೆಯುವ ಈ ಪ್ರಕ್ರಿಯೆಯಿಂದಾಗಿ ಸಮುದ್ರವು ಹೀಗೆ ಬಣ್ಣದ ಬೆಳಕನ್ನು ಸೂಸುತ್ತಿದೆ. ಇರುಳು ನೀಲಿ ಬಣ್ಣದಿಂದ ಹೊಳೆಯುವ ಅಲೆಗಳು ಹಗಲು ಹಸಿರು ಬಣ್ಣದಿಂದ ಕಂಗೊಳಿಸುತ್ತಿವೆ.
ಕಡಲ ಕೌತುಕಕ್ಕೆ ಕಾರಣವೇನು?
ಸಮುದ್ರ ಎಂದರೆ ಖುಷಿ. ಈ ಸಹಜ ಖುಷಿಗೆ ಹೆಚ್ಚಿನ ಅಚ್ಚರಿ ಕೊಡುತ್ತಿರುವುದು ರೇಡಿಯಂನಂತೆ, ನಕ್ಷತ್ರದಂತೆ ಮಿನುಗುವ ಮಿಣಿಮಿಣಿ ಬೆಳಕು. ಈ ಬೆಳಕಿಗೆ ಕಾರಣ ಏನು ಎಂಬ ಕುತೂಹಲ ಬಗ್ಗೆ ಹಿರಿಯ ಪರಿಸರ ವಿಜ್ಞಾನಿ ಹಾಗೂ ಜೀವಶಾಸ್ತ್ರಜ್ಞ ಡಾ. ಎನ್.ಎ.ಮಧ್ಯಸ್ಥ ಟಿವಿ9 ಡಿಜಿಟಲ್ ತಂಡದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನೊಕ್ಟಿಲುಕ ಪ್ರೊಟೊಜೊವ (Noctiluca Protozoa) ಎಂಬ ಸೂಕ್ಷ್ಮಜೀವಿ ಸಮುದ್ರ ಹೀಗೆ ಬೆಳಕು ಸೂಸಲು ಕಾರಣ. ನೊಕ್ಟಿಲುಕ ಸೂಕ್ಷ್ಮಜೀವಿಯು ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿದಾಗ ದೊಡ್ಡ ಪ್ರಮಾಣದ ಬೆಳಕು ಕಂಡುಬರುತ್ತದೆ. ಈ ಬೆಳಕನ್ನು ಕೋಲ್ಡ್ ಲೈಟ್ ಎಂದು ವಿವರಿಸುವ ಡಾ.ಮಧ್ಯಸ್ಥರು ಇದೊಂದು ಬಯೊಲಾಜಿಕಲ್ ಪ್ರಕ್ರಿಯೆ ಎಂದಿದ್ದಾರೆ. ಇತರ ಬೆಳಕಿನಂತೆ ಈ ಬೆಳಕು ಶಾಖ ಹೊರಸೂಸುವುದಿಲ್ಲ ಎಂದು ಹೇಳಿದ್ದಾರೆ.
ಇದೊಂದು ಸಹಜ ನೈಸರ್ಗಿಕ ಪ್ರಕ್ರಿಯೆ!
ಇದು ಕರ್ನಾಟಕ ಕರಾವಳಿಯಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಸಮುದ್ರ ತೀರಗಳಲ್ಲಿ ಕಂಡುಬರುವ ಸಂಗತಿ ಎಂದು ವಿವರಿಸುವ ಡಾ. ಮಧ್ಯಸ್ಥರು, ಜಪಾನ್ ಸಮುದ್ರ ತೀರದಲ್ಲಿ ಕಾಣಬಹುದಾದ ರೆಡ್ ಟೈಡ್ (ಕೆಂಪು ಅಲೆಗಳು) ಬಗ್ಗೆ ಹೇಳಿದ್ದಾರೆ. ಅಲ್ಲಿ ರೆಡ್ ಪಿಗ್ಮೆಂಟ್ ಹೊಂದಿದ ಸಮುದ್ರದ ಜೀವಿಗಳು ಕೆಂಪು ಬಣ್ಣ ಹೊರಸೂಸುತ್ತವೆ. ಹಾಗಾಗಿ ಸಮುದ್ರವು ಕೆಂಪು ಬಣ್ಣದಿಂದ ಕಾಣುತ್ತದೆ ಎಂದಿದ್ದಾರೆ.
35 ವರ್ಷದ ಹಿಂದೊಮ್ಮೆ ಹೀಗಾಗಿತ್ತು!
ಪಾಸ್ಪೇಟ್ ನೈಟ್ರೇಟ್ನ ಪರಿಣಾಮ ಸುಮಾರು 35 ವರ್ಷದ ಹಿಂದೆ ಉಡುಪಿಯ ಸಮುದ್ರ ತೀರದಲ್ಲಿ ಇಂಥದ್ದೇ ಪ್ರಕರಣ ಕಂಡುಬಂದಿತ್ತು ಎಂದ ಡಾ. ಮಧ್ಯಸ್ಥರು, ಸಮುದ್ರದ ನೀರಿನಲ್ಲಿ ಹಸಿರು ಬಣ್ಣದ ಸಿರಪ್ ರಚನೆ ಆಗಿತ್ತು ಎಂದು ಹೇಳಿದ್ದಾರೆ. ಅದನ್ನು ಸಂಶೋಧನೆಗೆ ಒಳಪಡಿಸಿ ಅಧ್ಯಯನ ವರದಿಯನ್ನೂ ಬರೆದಿದ್ದ ಅವರು ಬೆಳಕು ಸೂಸುವ ಜೀವಿಗಳು ಮೈಲ್ಡ್ ಪಾಯಿಸನಸ್ ಎಂದು ಗುರುತಿಸಿದ್ದರು.
ಜೊತೆಗೆ ಅದನ್ನು ತಿನ್ನುವ ಮೀನುಗಳು ಸಾಯುವ ಸಾಧ್ಯತೆ ಇದೆ ಎಂದಿದ್ದರು. ಅದರಿಂದ ಮುಂದಿನ ವರ್ಷ ಮತ್ಸ್ಯಕ್ಷಾಮ ಉಂಟಾಗುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಸಿದ್ದರು. ಅದರಂತೆ ಮರುವರ್ಷ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಕಡಿಮೆ ಆಗಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.
ಈ ಪ್ರಕ್ರಿಯೆಗೆ ಅತಿಯಾದ ಮಾಲಿನ್ಯ ಕಾರಣವೇ?!
ಹವಾಮಾನ ಬದಲಾವಣೆ, ಜಲಮಾಲಿನ್ಯದಂಥ ಕಾರಣಗಳಿಂದ ಈ ಜೀವಿಗಳು ಹೆಚ್ಚು ಹೆಚ್ಚಾಗಿ ಬೆಳೆಯುತ್ತವೆ, ಕಾಣಿಸಿಕೊಳ್ಳುತ್ತವೆ. ಇದನ್ನು ಸಮುದ್ರದ ಸಹಜ ಪ್ರಕ್ರಿಯೆ ಎಂದೂ ಗುರುತಿಸಬಹುದು ಎಂದ ಅವರು ಈ ಸಮುದ್ರ ಜೀವಿಗಳ ಬೆಳವಣಿಗೆಯಿಂದ ಮತ್ಸ್ಯಕ್ಷಾಮ ಉಂಟಾಗಬಹುದು ಎಂದು ಹೇಳಿದ್ದಾರೆ. ನೊಕ್ಟಲಿಕೊಸ್ ಜೀವಿಗಳನ್ನು ಮೀನುಗಳು ತಿನ್ನುತ್ತವೆ. ಅದರಿಂದ ಮೀನುಗಳು ಸಾಯುವ ಸಾಧ್ಯತೆ ಇರುವುದನ್ನು ವಿವರಿಸಿದ್ದಾರೆ.
ಕೆಲವೊಂದು ಬಾರಿ ಸಮುದ್ರದ ನೀರಿನಲ್ಲಿ/ಹಿನ್ನೀರಿನಲ್ಲಿ ಕಾಲು ಅಲುಗಾಡಿಸಿದರೆ ಹಸಿರು ಬೆಳಕು ಕಾಣುವುದೂ ಇದೆ. ಅದು ಬ್ಯಾಕ್ಟಿರಿಯಲ್ ಬಯೊಲುಮಿನಸೆನ್ಸ್ ಎಂದಿರುವ ಅವರು ಹಲವು ಸಮುದ್ರ ಜೀವಿಗಳಲ್ಲಿ ಹೀಗೆ ಬೆಳಕು ಸೂಸುವ ಗುಣ ಇದೆ ಎನ್ನುತ್ತಾರೆ ಡಾ. ಎನ್.ಎ. ಮಧ್ಯಸ್ಥ, ಪರಿಸರ ವಿಜ್ಞಾನಿ.
ನೀಲಿ ಅಲೆಗಳು ಉರುಳಿದವು.. ನೋಡಿ ನಾನು ಬೆರಗಾದೆ!
ನೀರ ಮಿಂಚುಳ್ಳಿಯನ್ನು ನಾನು ಮೊದಲು ಗುರುತಿಸಿದ್ದು ಅಕ್ಟೋಬರ್ ಎರಡರ ನಡುರಾತ್ರಿ. ಅದೆಷ್ಟೋ ಕತ್ತಲನ್ನು ಮರಳ ಮೇಲೆಯೇ ಮಲಗಿ ಕಳೆದ ನನಗೆ ಅಚಾನಕಾಗಿ ಅಲೆಯೊಂದರ ನಡುವೆ ನೀಲಿ ಬೆಳಕು ಕಂಡಿತು. ಒಮ್ಮೆಯಂತೂ ಭ್ರಮೆ ಅಂದ್ಕೊಂಡೆ. ಮತ್ತೊಮ್ಮೆ ಬೆಳಕು ತೋರಿತು. ಬಳಿಕ ಹತ್ತು ನಿಮಿಷ ಬೆಳಕಿನ ಸುಳಿವೇ ಇರಲಿಲ್ಲ. ಆಮೇಲೆ ಮತ್ತೆ ನೀಲಿ ಅಲೆಗಳು ಉರುಳಿದವು. ನೋಡಿ ನನಗೆ ಬೆರಗು ಎನ್ನುತ್ತಾರೆ ಮಂಜುನಾಥ್ ಕಾಮತ್, ಪ್ರಾಧ್ಯಾಪಕರು, ಎಂ.ಜಿ.ಎಂ ಕಾಲೇಜು, ಉಡುಪಿ