ಯುಗಾದಿಯಲ್ಲಿ ಸಂವತ್ಸರದ ಫಲ ಏನು ಎಂದು ಕೇಳುವುದು ರೂಢಿ. ಅದು ಆಯಾ ರಾಶಿಗಷ್ಟೇ ಸಂಬಂಧಪಟ್ಟ ಸಂಗತಿಯಲ್ಲ. ಇಡೀ ದೇಶದ ಮೇಲೆ ಹೇಗೆ ಪರಿಣಾಮ ಆಗಲಿದೆ ಎಂಬುದರ ವಿವರಣೆ ಆಗಿರುತ್ತದೆ. ನಮ್ಮ ಹಿರಿಯರು ಸಹ ಆಯಾ ಸಂವತ್ಸರದ ರಾಜ, ಮಂತ್ರಿಗಳು ಯಾರು ಎಂದು ನೋಡಿಕೊಂಡು, ಇಂಥಿಂಥ ಫಲಗಳು ಎಂದು ನಿರ್ಧರಿಸುತ್ತಿದ್ದರು. ಹೇಗೆ ಈಗಿನ ಮಂತ್ರಿಮಂಡಲದ ಪೋರ್ಟ್ಫೋಲಿಯೋಗಳು ಮತ್ತು ಪ್ರಧಾನಮಂತ್ರಿ ಎಂದೆಲ್ಲ ಇದೆಯೋ ಅದೇ ರೀತಿ ಸಂವತ್ಸರಕ್ಕೆ ಒಂದು ಗ್ರಹ ಇರುತ್ತದೆ. ಆ ಗ್ರಹ ಹೇಗೆ ಮತ್ತು ಯಾವ ದಿಕ್ಕಿನಿಂದ ಪ್ರವೇಶ ಮಾಡಿದರೆ ಏನು ಫಲ ಎಂದು ತಿಳಿಸಲಾಗುತ್ತದೆ. ಈಗಿನದೇ, ಅಂದರೆ ಪ್ಲವನಾಮ ಸಂವತ್ಸರದ ಫಲದ ಬಗ್ಗೆ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9 ಕನ್ನಡ ಡಿಜಿಟಲ್ ಓದುಗರಿಗಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
***
ಏಪ್ರಿಲ್ 13ನೇ ತಾರೀಕಿನ ಮಂಗಳವಾರ (ನಮಗೆ ವಾರ ಅಂದರೆ ಸೂರ್ಯೋದಯದಿಂದ ಮರುದಿನದ ಸೂರ್ಯೋದಯದ ತನಕ) ರಾತ್ರಿ 2.40ಕ್ಕೆ ಮಕರ ಲಗ್ನದಲ್ಲಿ ಮೇಷ ಸಂಕ್ರಮಣಕ್ಕೆ ಕಾಲಪುರುಷನ ಪ್ರವೇಶ ಆಗುತ್ತದೆ. ಈತನ ಹೆಸರು ಮಹೋದರಿ. ಬಲ್ಲಾತಕೀ ಎಂಬ ತೈಲವನ್ನು ಮೈಗೆ ಹಚ್ಚಿಕೊಂಡು, ಗಂಗಾ ನದಿಯಲ್ಲಿ ಸ್ನಾನವನ್ನು ಮಾಡಿಕೊಂಡು, ವಿಚಿತ್ರವಾದ ಬಟ್ಟೆಗಳನ್ನು ಧರಿಸಿ, ಬೆಳ್ಳಿಯ ಆಭರಣಗಳಿಂದ ಅಲಂಕಾರ ಮಾಡಿಕೊಂಡು, ಹಣೆಗೆ ಚಂದನದ ಗಂಧವನ್ನು ಹಚ್ಚಿಕೊಂಡು, ಬಕುಳದ ಪುಷ್ಪಗಳಿಂದ ಸಿಂಗರಿಸಿಕೊಂಡು, ಸಣಕ್ಕಿಯನ್ನು ಹಣೆಗೆ ಹಚ್ಚಿಕೊಂಡಿರುತ್ತಾನೆ. ತಾಮ್ರದ ಪಾತ್ರೆಯಲ್ಲಿ ಭಕ್ಷ್ಯವನ್ನು ಭುಂಜಿಸುತ್ತಾ, ಮಾವಿನಹಣ್ಣನ್ನು ಕೈಯಲ್ಲಿ ಹಿಡಿದಂಥ ಕಾಲಪುರುಷನು ಹಂದಿಯ ಮೇಲೆ ಕುಳಿತಿರುತ್ತಾನೆ.
ಇನ್ನೇನು ಹಾಳಾದ ಛತ್ರವನ್ನು ಹಿಡಿದುಕೊಂಡು, ಕಬ್ಬಿಣದ ಆಯುಧದೊಂದಿಗೆ, ಮೃದಂಗ ವಾದ್ಯಗಳ ಸಹಿತ, ವೈಶ್ಯರ ಗುಂಪಿನಲ್ಲಿ ನಾಚಿಕೆ ಮುಖದವನಾಗಿ, ಉತ್ತರದಿಕ್ಕಿನಿಂದ ಬಂದವನು ವಾಯವ್ಯ ದಿಕ್ಕನ್ನು ನೋಡುತ್ತಾ ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡುತ್ತಾನೆ. ಇವೆಲ್ಲವೂ ಸಂವತ್ಸರದಲ್ಲಿನ ಫಲವನ್ನು ಹೇಳುವುದಕ್ಕೆ ನೀಡಿರುವ ಶ್ಲೋಕದ ವಿವರಣೆ. ಆದರೆ ಇದನ್ನು ಬಿಡಿಸುತ್ತಾ ಹೋದಂತೆ ಈ ಸಂವತ್ಸರದಲ್ಲಿ ಯಾವುದೆಲ್ಲ ತುಟ್ಟಿ ಆಗುತ್ತದೆ ಮತ್ತು ದೇಶದ ಯಾವ ಭಾಗದಲ್ಲಿ ಒಳಿತಾಗುತ್ತದೆ ಎಂಬ ಸಂಗತಿಯು ಗೊತ್ತಾಗುತ್ತದೆ.
ಕಾಲಪುರುಷನು ಯಾವುದೆಲ್ಲ ವಸ್ತುವನ್ನು ಧರಿಸಿದ್ದಾನೋ ಅವೆಲ್ಲವೂ ದುಬಾರಿ ಆಗುತ್ತದೆ. ಬಲ್ಲಾತಕೀ ತೈಲ- ಅಂದರೆ ಎಣ್ಣೆಯ ಬೆಲೆ ಹೆಚ್ಚಾಗುತ್ತದೆ. ಗಂಗಾ ನದಿಯ ಸ್ವಚ್ಛತೆಗಾಗಿ ಹೆಚ್ಚಿನ ಖರ್ಚು ಮಾಡಲಾಗುತ್ತದೆ. ಮಾಂಸಾಹಾರಿಗಳಿಗೆ ಹೇಳಬೇಕೆಂದರೆ, ಹಂದಿ ಮಾಂಸದ ಬೆಲೆ ಹೆಚ್ಚಾಗುತ್ತದೆ. ಬಟ್ಟೆಗಳು, ಬೆಳ್ಳಿ, ಚಂದನ, ಹೂವು, ಸಣಕ್ಕಿ, ತಾಮ್ರ, ಮಾವಿನಹಣ್ಣು, ಕಬ್ಬಿಣ ಇವೆಲ್ಲ ದುಬಾರಿ ಆಗುತ್ತವೆ. ಕಾಲಪುರುಷನು ಬರುತ್ತಿರುವುದು ವೈಶ್ಯರ, ಅಂದರೆ ವರ್ತಕರ ಗುಂಪಿನ ಜತೆಗೆ. ಆ ವರ್ಗಕ್ಕೆ ಶುಭ ಫಲಗಳನ್ನು ಹೇಳಬಹುದು. ಇನ್ನು ಉತ್ತರ ದಿಕ್ಕಿನಿಂದ ಹೊರಟಿದ್ದಾನೆ ಕಾಲಪುರುಷ. ಆದ್ದರಿಂದ ದೇಶದ ಉತ್ತರ ದಿಕ್ಕಿನಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಗುಜರಾತ್, ರಾಜಸ್ಥಾನ, ಹಿಮಾಚಲಪ್ರದೇಶ, ಪಂಜಾಬ್, ಹರ್ಯಾಣ ಈ ರಾಜ್ಯಗಳಿಗೆ ಉತ್ತಮ ಫಲಗಳಿಲ್ಲ.
ಈ ಸಂವತ್ಸರದ ಫಲವನ್ನು ಇನ್ನಷ್ಟು ಡಿಕೋಡ್ ಮಾಡಿದಲ್ಲಿ ಬಹುತೇಕ ದಿನಬಳಕೆ ವಸ್ತುಗಳು ತುಟ್ಟಿ ಆಗುವುದು ಖಾತ್ರಿ ಅಂತ ಖಚಿತವಾಗಿ ಹೇಳಬಹುದು. ಮುಖ್ಯವಾಗಿ ಕಬ್ಬಿಣ, ತಾಮ್ರ, ಬೆಳ್ಳಿ ದುಬಾರಿ ಆಗುತ್ತಿದ್ದಂತೆ ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಕಟ್ಟಡ ನಿರ್ಮಾಣ ವಸ್ತುಗಳು, ಇಂಡಸ್ಟ್ರಿಯಲ್ ಉತ್ಪನ್ನಗಳು ಗಗನಕ್ಕೆ ಏರುತ್ತವೆ. ಇನ್ನು ಬಟ್ಟೆ ಕೂಡ ತುಟ್ಟಿ ಆಗಲಿದೆ. ಸೆಪ್ಟೆಂಬರ್ನಿಂದ ನವೆಂಬರ್ ಮಧ್ಯೆ ಗುರು ಗ್ರಹವು ಮತ್ತೊಮ್ಮೆ ಮಕರ ರಾಶಿಗೆ ಸಂಚಾರ ಮಾಡುವುದರಿಂದ ಆಗ ಆರ್ಥಿಕತೆಯು ಗಂಭೀರ ಸ್ಥಿತಿ ತಲುಪುತ್ತದೆ. ಆ ನಂತರ ಸುಧಾರಿಸಬಹುದಾದರೂ ಈ ಸಂವತ್ಸರದಲ್ಲಿ ಕಾಲಪುರುಷನು ನೀಡುವ ಫಲಗಳಿವು.
ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 6361335497
ಇದನ್ನೂ ಓದಿ: Happy Ugadi 2021: ಯುಗಾದಿ ಹಬ್ಬದ ದಿನ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರ
(Plavanama samvatsara Ugadi phal: Which commodity will become costly.)