Happy Ugadi 2021: ಯುಗಾದಿ ಹಬ್ಬದ ದಿನ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರ

Ugadi Festival 2021: ಯುಗಾದಿ ಹಬ್ಬದ ದಿನ ಸಂತೋಚದಿಂದ ಆಚರಿಸಿ ಹಬ್ಬದ ದಿನ ಸಂಜೆ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರವಾಗುತ್ತದೆ ಎಂಬುದು ಹಳ್ಳಿಯ ಜನರ ನಂಬಿಕೆ. ಸಾಂಪ್ರದಾಯಿಕವಾಗಿ ಬಂದ ಆಚರಣೆ.

Happy Ugadi 2021: ಯುಗಾದಿ ಹಬ್ಬದ ದಿನ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರ
ಪ್ರಾತಿನಿಧಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on: Apr 13, 2021 | 9:21 AM

ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಬೇವು-ಬೆಲ್ಲ ತಿಂದು ಸಿಹಿ ಒಬ್ಬಟ್ಟಿನ ಜೊತೆಗೆ ಊಟ ಸವಿಯುವದರೊಂದಿಗೆ ಯುಗಾದಿಯ ವಿಶೇಷ ಆಚರಣೆಯನ್ನು ಮಾಡುತ್ತೇವೆ. ಸಾಮಾನ್ಯವಾಗಿ ವಿವಿಧ ಬಗೆಯ ಸಸ್ಯಹಾರಿ ಊಟದ ಜೊತೆ, ಸಿಹಿ ಒಬ್ಬಟ್ಟು, ಕಾಯಿ ಹೋಳಿಗೆಯನ್ನು ಸಿದ್ಧಪಡಿಸಿ ಊಟದಲ್ಲಿ ಸವಿಯುತ್ತಾರೆ.  ಹಬ್ಬ ಎಂದಾಕ್ಷಣ ಊಟದಲ್ಲಿ ವಿವಿಧ ಖಾದ್ಯಗಳು ಇರಲೇಬೇಕು. ಜೊತೆಗೆ ಸಿಹಿ ಹಬ್ಬದ ಆಚರಣೆಯನ್ನು ಹೆಚ್ಚಿಸುತ್ತದೆ. ಹೋಳಿಗೆಯನ್ನು ಸಾಮಾನ್ಯವಾಗಿ ಸಿಹಿತಿಂಡಿಯಾಗಿ ಮಾಡುತ್ತಾರೆ. ಜೊತೆಗೆ ಹಪ್ಪಳ, ಸಂಡಿಗೆ, ಚಿತ್ರಾನ್ಹ, ಪಲ್ಯದ ಜೊತೆಗೆ ಹಬ್ಬದ ಊಟ ಸಿದ್ಧಗೊಂಡಿರುತ್ತದೆ. ಜೊತೆಗೆ ಬಾಳೆ ಹಣ್ಣಿನ ರಸಾಯನ ಮಾಡಿ ಸವಿಯುತ್ತಾರೆ. ಆದರೆ ಮಾಂಸಹಾರ ಸೇವಿಸುವವರು ಹಬ್ಬದ ಮರುದಿನ ತಮ್ಮ ಆಹಾರವಾದ ಮಾಂಸಾಹಾರದ ವಿವಿಧ ಬಗೆಯ ತಿನಿಸುಗಳನ್ನು ಮಾಡಿಕೊಂಡು ಸವಿಯುತ್ತಾರೆ.

ಹಬ್ಬದ ಮಾರನೇ ದಿನ ವಿಶೇಷವಾಗಿ ಮಾಂಸಹಾರಿ ಪದಾರ್ಥಗಳನ್ನು ಮಾಡಿ ಬಾಡೂಟ ಸವಿಯುವುದು ಮೊದಲಿನಿಂದಲೂ ಬಂದಂತಹ ಆಚರಣೆ. ಈಗಲೂ ಕೂಡಾ ಈ ಆಚರಣೆಯನ್ನು ವಿವಿಧ ಪ್ರದೇಶಗಳಲ್ಲಿ ಜನರು ಪಾಲಿಸುತ್ತಾ ಬರುತ್ತಿದ್ದಾರೆ.

ವರ್ಷ ತೊಡಕು ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸುತ್ತಾರೆ. ವರ್ಷ ಪೂರ್ತಿ ಯಾವ ತೊಡಕುಗಳೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ದಿನ. ಹಾಗಾಗಿ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ ಈ ದಿನಕ್ಕೂ ಇರುತ್ತದೆ.

ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ದನ-ಕರುಗಳ ಮೈತೊಳೆದು ಹಸುಗಳನ್ನು ಅಲಂಕಾರಗೊಳಿಸುತ್ತಾರೆ. ತದನಂತರ ಜನರು ಮೈ ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆ ಬಾಗಿಲಿಗೆ ಹೂವಿನ ಹಾರ, ಮಾವಿನ ಎಲೆಯ ತೋರಣದಿಂದ ಅಲಂಕಾರ ಮಾಡಲಾಗುತ್ತದೆ. ಜೊತೆಗೆ ಬೇವು ಬೆಲ್ಲ ಮಾಡಿ, ಸಿಹಿ-ಕಹಿ ಎರಡನ್ನೂ ಸಮವಾಗಿ ಸ್ವೀಕರಿಸಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಹೆಚ್ಚಾಗಿ ಊರಿನ ದೇವರಿಗೆ ಸೂಜೆ ಸಲ್ಲಿಸುವುದು ವಾಡಿಕೆ.

ಮಕ್ಕಳೆಲ್ಲಾ ಮನೆತುಂಬ ಓಡಾಡುತ್ತಾ ರಂಗಿನ ಉಡುಪು ಧರಿಸಿ ನಗುತ್ತಾ ಆಟವಾಡುತ್ತಿರುತ್ತಾರೆ. ಮಹಿಳೆಯರೆಲ್ಲಾ ಲಘುಬಗೆಯಿಂದ ವಿವಿಧ ತೆರೆನಾದ ಅಡುಗೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಪುರುಷರೆಲ್ಲಾ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ.

ಯುಗಾದಿ ಹಬ್ಬ ಅಂದರೆ ಹೊಸ ವರ್ಷದ ಆಗಮನ. ಮುಂದಿನ ದಿನಗಳು ಸಂತೋಷದಿಂದ ಕೂಡಿರಲಿ ಎಂಬುದರ ಮೊದಲ ಹೆಜ್ಜೆಯದು. ಆದ್ದರಿಂದ ಯುಗಾದಿ ದಿನ ಆದಷ್ಟು ಖುಷಿಯಿಂದ ಮನೆಯವರೊಡನೆ ಕಾಲ ಕಳೆದು, ದೇವರ ಪೂಜೆಯಲ್ಲಿ ತೊಡಗಿಕೊಳ್ಳುತ್ತಾರೆ.

ಬಾಳೆ ಎಲೆಯಲ್ಲಿ ಊಟ ಹಸಿರಾದ ಬಾಳೆ ಎಲೆಯಲ್ಲಿ ಸಿಹಿ ಪದಾರ್ಥದ ಜೊತೆ ಊಟ ನೋಡುವುದೇ ಖುಷಿ. ಜೊತೆಗೆ ಬಾಳೆಯಲ್ಲಿ ವಿವಿಧ ಖಾದ್ಯಗಳನ್ನು ಸವಿಯುತ್ತಿದ್ದರೆ ಅದು ನೀಡುವ ರುಚಿಗೆ ಸಾಟಿ ಬೇರಿಲ್ಲ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ನೆಲಕ್ಕೆ ಕೂತು ಬಾಳೆ ಎಲೆ ಊಟ ಮಾಡುವುದು ಸಾಂಪ್ರದಾಯಿಕವಾಗಿ ಬಂದಂಥದ್ದು. ಅದರಲ್ಲೂ ಹಬ್ಬದ ದಿನದಂದು ಹಿರಿಯರಿಂದ ಕಿರಿಯರವರೆಗೆ ಎಲ್ಲರೂ ಒಟ್ಟಿಗೆ ಕೂತು ಹಬ್ಬದ ದಿನ ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ.

ಹಬ್ಬದ ದಿನದ ಸಂಜೆ ಚಂದ್ರ ದೇವನಲ್ಲಿ ಪ್ರಾರ್ಥನೆ ಹಬ್ಬದ ಆಚರಣೆಯ ದಿನದ ಸಂಜೆ ಚಂದ್ರ ಉದಯವಾದಾಗ ಮನೆಯ ಅಂಗಳದಲ್ಲಿ ನಿಂತು ಚಂದ್ರನನ್ನು ನೇರವಾಗಿ ಎರಡು ನಿಮಿಷಗಳ ಕಾಲ ನೋಡುತ್ತಾರೆ. ಚಂದ್ರ ಕಿರಣಗಳು ನಮ್ಮನ್ನು ಸ್ಪರ್ಷಿಸಿದ ನಂತರ ದೇವನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ವರ್ಷದ ಮುಂದಿನ ದಿನಗಳಲ್ಲಿ ನಮ್ಮ ಬಾಳಿನಲ್ಲಿ ಖುಷಿ-ಸಂತೋಷವೇ ಹೆಚ್ಚಾಗಿ ಇರಲಿ. ಕಷ್ಟಗಳು ಬಂದರೆ ಎದುರಿಸುವ ಶಕ್ತಿಯನ್ನು ನಮ್ಮಲ್ಲಿ ತುಂಬು ಎಂದು ಬೇಡಿಕೊಳ್ಳುತ್ತಾರೆ.

“ಹಳ್ಳಿಗಳಲ್ಲಿ ಜನರು ಕೃಷಿಯ ಕಡೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಕೃಷಿ ಭೂಮಿ ಮುಂದಿನ ದಿನಗಳಲ್ಲಿ ನಮ್ಮ ಜೀವನಕ್ಕೆ ಏಳಿಗೆ ತರಲಿ, ಇಡೀ ವರ್ಷ ನಮ್ಮ ಜೀವನ ಸುಖ- ಸಂತೋಷದ ಜೊತೆ ಕೂಡಿರಲಿ. ಜೊತೆಗೆ ಕಷ್ಟ ಕಾಲವನ್ನು ಎದುರಿಸಿ ನಿಲ್ಲುವ ಶಕ್ತಿ ಸಾಮರ್ಥ್ಯವನ್ನು ದೇವರು ನಮಗೆ ಕರುಣಿಸಲು ಎಂದು ಚಂದ್ರ ದೇವನಲ್ಲಿ ಯುಗಾದಿ ಹಬ್ಬದ ದಿನ ಪ್ರಾರ್ಥಿಸಿಕೊಳ್ಳುತ್ತೇವೆ. ಹಬ್ಬದ ದಿನ ಮನೆಯವರೆಲ್ಲ ಸೇರಿ ಸಂತೋಷದಿಂದ ಸಮಯ ಕಳೆಯುತ್ತೇವೆ ಎಂದು ಮಂಡ್ಯದ ಹನಿಯಂಬಾಡಿ ಊರಿನ ರೈತ ನಾಗರಾಜ್​ ಅಭಿಪ್ರಾಯ ಹಂಚಿಕೊಂಡರು”

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಶುಭ ಮುಹೂರ್ತ ಮತ್ತು ಆಚರಿಸುವ ವಿಧಾನ ಇಲ್ಲಿದೆ

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು