ಪ್ರತಿಯೊಂದು ಜೀವಿಯೂ ತನ್ನನ್ನು ತಾನು ಪ್ರೀತಿಸಿಕೊಳ್ಳುವುದರ ಜೊತೆಗೆ ತನ್ನ ಸುತ್ತಲಿರುವ ಒಂದಷ್ಟು ಸಹಜೀವಿಗಳನ್ನು ಪ್ರೀತಿಸುತ್ತವೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅವುಗಳ ರಕ್ಷಣೆಗೆ ನಿಲ್ಲುತ್ತವೆ. ತಾನು ಪ್ರೀತಿಸುವ ಜೀವಕ್ಕೆ ನೋವಾದಾಗ ಒಳಗೊಳಗೇ ಮರುಗುತ್ತವೆ. ಇದು ಪ್ರಕೃತಿ ಸಹಜ ನಿಯಮ. ಈ ವಿಚಾರದಲ್ಲಿ ಮನುಷ್ಯ ಒಂದು ಹೆಜ್ಜೆ ಮುಂದಿದ್ದಾನೆ ಅಷ್ಟೇ. ತನಗಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಪ್ರೀತಿಯನ್ನು ತರಹೇವಾರಿ ವಿಧದಲ್ಲಿ ವ್ಯಕ್ತಪಡಿಸುವ ಜೊತೆಗೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳಲೂ ತುಸು ಹೆಚ್ಚೇ ಶ್ರಮಿಸುತ್ತಾನೆ. ಆದರೆ, ಮನುಷ್ಯನ ಈ ಭಾವುಕ ಗುಣ ಎಷ್ಟೋ ಸಂದರ್ಭದಲ್ಲಿ ಆತನ ಜೀವಕ್ಕೇ ಮುಳುವಾಗುತ್ತದೆ. ತಾನಿಷ್ಟಪಟ್ಟವರು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲವೆಂದರೆ, ನಡುವಲ್ಲಿ ಬಿಟ್ಟು ಹೋದರೆಂದರೆ, ಇನ್ನಾರದ್ದೋ ಕೈ ಹಿಡಿದರೆಂದರೆ ಅದನ್ನು ಒಪ್ಪಿಕೊಳ್ಳುವುದರ ಬದಲು ಖಿನ್ನತೆಗೆ ಒಳಗಾಗಿ ತಮ್ಮನ್ನು ತಾವು ಕೊಂದುಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ಹದಿಹರೆಯದಲ್ಲಿ ಪ್ರೀತಿಗೆ ಬೀಳುವವರು ಅನಿರೀಕ್ಷಿತ ಆಘಾತ ಎದುರಾದರೆ ಅದನ್ನು ಸಮರ್ಪಕವಾಗಿ ನಿರ್ವಹಿಸಲಾರದೇ ಸಾವಿನ ದಾರಿ ತುಳಿಯುವುದೇ ಹೆಚ್ಚು.
ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ನಾವು ಪ್ರೀತಿ, ಪ್ರೇಮ, ಸಂಭ್ರಮಗಳ ಜೊತೆಗೆ ಈ ಸೂಕ್ಷ್ಮತೆಯ ಬಗ್ಗೆ ಅವಲೋಕಿಸುವುದೂ ಅನಿವಾರ್ಯವಾಗಿದೆ. ಪ್ರೀತಿಯಲ್ಲಿ ಸೋತ ತಕ್ಷಣ ಈ ಜಗತ್ತಿನ ಸಹವಾಸವೇ ಸಾಕು ಎಂದು ಬದುಕು ಕೊನೆಗಾಣಿಸಿಕೊಳ್ಳುವ ನಿರ್ಧಾರಕ್ಕೆ ಬರುವವರ ಮನಸ್ಥಿತಿಯ ಬಗ್ಗೆ ಯೋಚಿಸಬೇಕಿದೆ. ಈ ದುಡುಕು ನಿರ್ಧಾರಕ್ಕೆ ಪ್ರೇರೇಪಣೆ ಏನು? ಯುವಕರು ಪ್ರೇಮ ವೈಫಲ್ಯವನ್ನು ಒಪ್ಪಿಕೊಳ್ಳಲಾಗದಷ್ಟು ಅಶಕ್ತರಾಗುತ್ತಿರುವುದೇಕೆ? ಅವರಲ್ಲಿ ಧೈರ್ಯ ತುಂಬಬೇಕಾದವರು ಯಾರು? ಎಂಬೆಲ್ಲಾ ವಿಚಾರಗಳನ್ನೂ ಈ ಹೊತ್ತಿನಲ್ಲಿ ಕೊಂಚ ವ್ಯವಧಾನದಿಂದ ಆಲೋಚಿಸಬೇಕು.
ಪ್ರೀತಿ, ಪ್ರೇಮ ಬದುಕಿನ ಒಂದು ಭಾಗವೇ ಹೊರತು ಅದೇ ಬದುಕಿನ ಕಟ್ಟಕಡೆಯ ಉದ್ದೇಶವಲ್ಲ. ಯಾರಾದರೂ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲವೆಂದರೆ ಅದು ನಿಮ್ಮ ಬದುಕಿನ ಸೋಲು ಅಂತಾಗಲೀ, ಎದುರಾದ ಅಪಮಾನವೆಂದಾಗಲೀ ಯೋಚಿಸಬೇಕಿಲ್ಲ. ಪರೀಕ್ಷೆಯಲ್ಲಿ ಫೇಲಾಗುವುದು, ಪ್ರೀತಿಯಲ್ಲಿ ತಿರಸ್ಕರಿಸಲ್ಪಡುವುದು, ಅಂದುಕೊಂಡಿದ್ದನ್ನು ಸಾಧಿಸಲಾಗದೇ ಇರುವುದು.. ಇವೆಲ್ಲಾ ಬದುಕಿನ ಒಂದೊಂದು ಪಾಠಗಳಷ್ಟೇ. ಈ ಚಿಕ್ಕ ಕಾರಣಗಳಿಗೆ ನೀವು ನಿಮ್ಮ ಜೀವವನ್ನೇ ಕೊನೆಗಾಣಿಸುತ್ತೀರಿ ಎಂದರೆ ಅದಕ್ಕೆ ಯಾವ ಅರ್ಥವೂ ಇಲ್ಲ ಅಥವಾ ಸತ್ತ ಕೂಡಲೇ ಆ ಸೋಲುಗಳಿಂದ ನೀವು ಮುಕ್ತರಾದಿರಿ ಅಂತಲೂ ಅಲ್ಲ. ವಾಸ್ತವವಾಗಿ ಎಲ್ಲಾ ಸೋಲು ಅಪಮಾನಗಳನ್ನು ಒಪ್ಪಿ ಮುನ್ನೆಡೆಯುವುದೇ ನಿಜವಾದ ಬದುಕು.
ಒಮ್ಮೆ ಸೂಕ್ಷ್ಮವಾಗಿ ಯೋಚಿಸಿ.. ಈ ಜಗತ್ತಿನಲ್ಲಿ ಅಪ್ಪ ಅಮ್ಮನ ಮುಖವನ್ನೇ ಕಾಣದ ಅದೆಷ್ಟೋ ಮಕ್ಕಳಿದ್ದಾರೆ. ಮಕ್ಕಳ ಪ್ರೀತಿಯಿಂದ ವಂಚಿತರಾದ ಅದೆಷ್ಟೋ ತಂದೆತಾಯಿ ಇದ್ದಾರೆ. ದೇಹದ ಪ್ರಮುಖ ಅಂಗಗಳು ಇಲ್ಲದೇ ಬದುಕು ಸಾಗಿಸುವವರು ಇದ್ದಾರೆ. ಕಿತ್ತು ತಿನ್ನುವ ಬಡತನದಲ್ಲೂ ಸಾಧಿಸಿ ತೋರಿಸಿದವರಿದ್ದಾರೆ. ಹೊತ್ತು ಊಟಕ್ಕೆ ಗತಿಯಿಲ್ಲದಿದ್ದರೂ ಹಸಿವನ್ನು ಮೆಟ್ಟಿ ನಿಂತು ಮುನ್ನಡೆದವರಿದ್ದಾರೆ.. ಇವರಾರೂ ತಮ್ಮ ಬದುಕು ಪರಿಪೂರ್ಣ ಇಲ್ಲವೆಂದು ಕೊರಗುತ್ತಾ ಕೂತವರಲ್ಲ, ಹತಾಶರಾಗಿ ಜೀವ ಕಳೆದುಕೊಳ್ಳುವವರೂ ಅಲ್ಲ. ಬದಲಾಗಿ ಬದುಕಬೇಕು ಒಂಬ ಆಸೆಯ ಎಳೆಯೊಂದನ್ನು ಹಿಡಿದು ಉಳಿದಿರುತ್ತಾರೆ.
ಆದರೆ, ಪ್ರೀತಿಯ ವಿಚಾರಕ್ಕೆ ಬಂದಾಗ ಹೆಚ್ಚಿನವರು ಪ್ರೀತಿ, ಪ್ರೇಮ ಜೀವಕ್ಕಿಂತ ಹೆಚ್ಚು ಎಂಬ ಭ್ರಮೆಗೆ ಒಳಗಾಗಿಬಿಡುತ್ತಾರೆ. ಪ್ರೇಮ ವೈಫಲ್ಯವಾದರೆ ಬದುಕೇ ಮುಗಿಯಿತು ಎಂದು ಹತಾಶರಾಗುತ್ತಾರೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ನನ್ನನ್ನು ತಿರಸ್ಕರಿಸಿದವರು ಬೇರೆಯವರಿಗೂ ಸಿಗಬಾರದು ಎಂದು ಅವರ ಜೀವಕ್ಕೂ ಹಾನಿ ಮಾಡುತ್ತಾರೆ. ಇದೆಲ್ಲವೂ ತಮ್ಮನ್ನು ತಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದವರ ಅತಿರೇಕದ ನಡವಳಿಕೆಗಳು. ಇಂದಿನ ಯುವ ಸಮುದಾಯ ಸೋಲನ್ನು ಒಪ್ಪಿಕೊಳ್ಳುವ, ಅರಗಿಸಿಕೊಳ್ಳುವ ಮನೋಗುಣವನ್ನು ಅಭ್ಯಸಿಸಿಕೊಳ್ಳಬೇಕಿದೆ. ಯಾರೋ ಒಬ್ಬರು ಪ್ರೀತಿಯನ್ನು ನಿರಾಕರಿಸಿದರು ಎಂದರೆ ಅದರಾಚೆಗೂ ಬದುಕಿದೆ ಎನ್ನುವುದನ್ನು ಅರಿಯಬೇಕಿದೆ.
ಪ್ರೇಮಿಗಳ ದಿನಾಚರಣೆಯ ಈ ಹೊತ್ತಿನಲ್ಲಿ ಯುವ ಸಮುದಾಯ ಪ್ರೀತಿ, ಪ್ರೇಮಕ್ಕೆ ಪ್ರಾಮುಖ್ಯತೆ ನೀಡುವ ಮೊದಲು ತಮ್ಮನ್ನು ತಾವು ಎಷ್ಟು ಪ್ರೀತಿಸಿಕೊಳ್ಳುತ್ತಿದ್ದೇವೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ಮುನ್ನ ನಡೆಯಬೇಕು. ಒಂದೊಮ್ಮೆ ಪ್ರೇಮ ನಿವೇದನೆಯನ್ನು ನೀವು ಇಷ್ಟಪಟ್ಟವರು ನಿರಾಕರಿಸಿದರೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಿದ್ಧರಾಗಬೇಕು. ಮನೆಯರು ಒಪ್ಪಲಿಲ್ಲವೆಂದೋ, ಜಾತಿ, ಧರ್ಮ ಅಡತಡೆಯ ಆಯಿತೆಂದೋ ದುಡುಕುವ ಮುನ್ನ ನಿಮ್ಮ ಹೃದಯ ಬಡಿತವನ್ನೊಮ್ಮೆ ಆಲಿಸಿಕೊಳ್ಳಿ. ಅದು ಈ ಜಗದ ಎಲ್ಲಾ ಸದ್ದುಗಳಿಗಿಂತಲೂ ಪವಿತ್ರವಾದದ್ದು. ಅದನ್ನು ನಿಲ್ಲಿಸಿ ನಿಮಗೆ ನೀವು ಮೋಸ ಮಾಡಿಕೊಳ್ಳಬೇಡಿ.
ಇದನ್ನೂ ಓದಿ: ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ!
ಬದುಕುವುದಕ್ಕೆ ಇದೆ ಹಲವಾರು ದಾರಿ
ಪ್ರೇಮ ವೈಫಲ್ಯ ಅಥವಾ ಬದುಕಿನಲ್ಲಿ ಸೋಲು ಅನುಭವಿಸಿದಾಗ ಇನ್ನು ಬದುಕಿ ಪ್ರಯೋಜನವೇನು? ಎಂಬ ಯೋಚನೆ ಬರುವುದು ಸಹಜ. ಆದರೆ ಈ ನೋವು, ಹತಾಶೆ ಶಾಶ್ವತವಲ್ಲ. ದುಃಖದ ಹಿಂದೆಯೇ ಸುಖ, ಅಳುವಿನ ಹಿಂದೆ ನಗು ಬಂದೇ ಬರುತ್ತದೆ . ಯಾರೊಬ್ಬರ ಬದುಕು ಹೂವಿನ ಹಾಸಿಗೆ ಅಥವಾ ಕಲ್ಲು ಮುಳ್ಳಿನ ದಾರಿ ಆಗಿರುವುದಿಲ್ಲ. ಇವೆರಡೂ ಬದುಕಿನಲ್ಲಿ ಇರಲೇಬೇಕು. ನೋವುಣ್ಣದೆ ಸುಖದ ಅರಿವಾದರೂ ಹೇಗಾಗುತ್ತದೆ. ಯಾರೋ ಕೈ ಕೊಟ್ಟು ಹೋದರು ಎಂದ ಮಾತ್ರಕ್ಕೆ ಬದುಕು ನಿಲ್ಲುವುದಿಲ್ಲ. ಅಷ್ಟು ವರ್ಷ ಅವರಿಲ್ಲದೆ ನಾವು ಬದುಕಿಲ್ಲವೇ? ಅವರಿಲ್ಲದೆ ಮುಂದೆಯೂ ಬದುಕಬಹುದು. ನಮ್ಮ ಬದುಕಿನ ರೂವಾರಿಗಳು ನಾವೇ. ಬದುಕು ಮುಗಿಸಲು ದುಡುಕಿನ ನಿರ್ಧಾರವೊಂದು ಸಾಕು, ಆದರೆ ಕಣ್ಣೀರು ಒರೆಸಿ ಎದ್ದು ನಿಂತು Life Moves On ಎಂದು ಮುನ್ನಡೆಯುವ ಛಲ ಇದೆಯಲ್ಲಾ ಅದೇ ನಮ್ಮನ್ನು ಕೈಹಿಡಿದು ಮೇಲೆತ್ತುವುದು. ನೆನಪಿಡಿ, ಕಾಲ ಎಲ್ಲವನ್ನೂ ಮರೆಸುತ್ತದೆ. ಬದುಕು ತುಂಬಾ ಅಮೂಲ್ಯ.
Published On - 12:41 pm, Fri, 12 February 21