Valentine’s Day: ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ!
Valentine's Week | My Love Story: ಧೋ ಎಂದು ಸುರಿಯುವ ಈ ಮಳೆಗೆ ಅದೇಕೆ ನನ್ನ ಮೇಲೆ ಇಷ್ಟೊಂದು ದ್ವೇಷವಿರಬಹುದು? ನೆನಪಿನ ಗರ್ಭದಲ್ಲಿ ಆಳವಾಗಿ ಹುದುಗಿದ್ದ ಎಲ್ಲ ನೆನಪುಗಳನ್ನ ಇಂಚಿಂಚೂ ಬಿಡದೇ ಕೆದಕಿ ಕಣ್ಮುಂದೆ ತಂದು ಸೇಡು ತೀರಿಸಿಕೊಳ್ಳುತ್ತಿದೆ.
ಪರೀಕ್ಷೆ ಇದೆ ಓದ್ಬೇಕು ಎಂಬ ಕಾರಣಕ್ಕೆ ನನ್ನಿಂದ ತಾತ್ಕಾಲಿಕ ಅಂತರ ಬಯಸಿದ ನಿನಗೆ ಮೊದಲಿಗೆ ಆಲ್ ದಿ ಬೆಸ್ಟ್. ಪರೀಕ್ಷೆಯ ನೆಪವೊಡ್ಡಿ ಪ್ರೀತಿಗೆ ತಿಲಾಂಜಲಿ ಇಟ್ಟು ಮುನ್ನಡೆಯುವ ಬಹುತೇಕ ಹುಡುಗಿಯರ ಮಧ್ಯೆ ನಿನ್ನ ಓದಿನ ಹಂಬಲದ ನಡುವೆಯೂ ಪ್ರೀತಿ ಉಳಿಸಿಕೊಂಡು ಹೋಗಬೇಕೆಂಬ ತುಡಿತಕ್ಕೆ ಸಾವಿರ ಶರಣು. ನಿನಗೀಗ ಪರೀಕ್ಷೆ ಇದೆ ಎಂದು ಗೊತ್ತಿದ್ದರೂ ಪತ್ರ ಬರೆದು ಡಿಸ್ಟರ್ಬ್ ಮಾಡ್ತಿದ್ದೇನೆ.. ಕ್ಷಮಿಸುತ್ತೀಯಾ ಅಲ್ವಾ? ನಿನಗಲ್ಲಿ ಓದಿನ ಪರೀಕ್ಷೆ ಆದ್ರೆ ನನಗಿಲ್ಲಿ ತಾಳ್ಮೆಗೆ ಪರೀಕ್ಷೆ. ನಾಲ್ಕು ವರ್ಷದ ಪ್ರೀತಿಯನ್ನು ನಾಲ್ಕು ದಿನ ಬಿಟ್ಟು ಕಾಲ ಕಳೆಯೋ ನನ್ನ ಈ ಪರೀಕ್ಷೆಯ ಮುಂದೆ ನಿನ್ನ ಪರೀಕ್ಷೆ ಏನು ಮಹಾ ಹುಡುಗಿ?
‘ಹಲೋ ದಿಸ್ ಈಸ್ ಮೈ ಲಾಸ್ಟ್ ಮೆಸೇಜ್. ಯು ಆಲ್ಸೋ ಡೋಂಟ್ ಮೆಸೇಜ್ ಮಿ ಅಗೇನ್…’ ಅಂತ ನೀನು ಅದೆಷ್ಟೋ ಬಾರಿ ನಂಗೆ ಹೇಳಿದರೂ ನನ್ನ ಹುಚ್ಚು ಮನಸು ಯಾಕೋ ನಿನ್ನ ಮಾತನ್ನ ಕೇಳೋ ಸ್ಥಿತಿಯಲ್ಲಿ ಇಲ್ಲದೇ ಅಡ್ವಾನ್ಸ್ ಸಾರಿ ಕೇಳಿ ಮತ್ತೆ ಮತ್ತೆ ನಿನ್ನ ಮಾತನಾಡಿಸೋಕೆ ಹಾತೊರೆಯುತ್ತಿದೆ ಸ್ಪೂರ್ತಿ. ಮನಸಿನ ಮಾತು ಕೇಳಿ ಲೇಖನಿಯೇ ನನ್ನ ಕೈಬೆರಳನ್ನು ಎಳೆದು ಹಾಳೆ ಮೇಲೆ ಬರೆಯುವಂತೆ ಬೇಡಿಕೊಳ್ಳುತ್ತಿದೆ. ಮನಸ್ಸಿಗೇನು ಗೊತ್ತು ನೀನು ನಿನ್ನ ಹೃದಯದಿಂದ ಅದನ್ನ ಯಾವತ್ತೋ ಕಿತ್ತು ಬೀಸಾಕಿದ್ದೀಯೆಂದು? ನೀನು ನನ್ನ ಮನಸ್ಸಿನಿಂದ ಬೇಡವೆಂದು ಹೊರಟು ಹೋದ ಮೇಲೂ.. ಹೃದಯದಲ್ಲಿ ನೀನು ನಲಿದು ಕುಣಿದಾಡಿದ ಹೆಜ್ಜೆಗಳು ಮಾಸದೇ ಕ್ಷಣಕ್ಷಣಕ್ಕೂ ಕಣ್ಮುಂದೆ ಬಂದು ಹಂಗಿಸತೊಡಗಿವೆ. ಕಳೆದು ಹೋದ ಆ ಘಳಿಗೆಯನ್ನು ನೆನೆ-ನೆನೆದು ಕಾಡುತ್ತಿವೆ. ನಿದ್ದೆ ರಜೆ ಹಾಕಿ ವರುಷವಾಗಿದೆ. ನಿನ್ನ ಹೆಸರು ನನ್ನ ಹೃದಯಕ್ಕೆ ಕಾಲಿಟ್ಟಾಗಿನಿಂದ ಬೇರೇನೂ ಬೇಡವಾಗಿದೆ. ಇರಲಿ, ಈ ಪ್ರೀತಿಗೂ ಆ ನಿದ್ರೆಗೂ ಯಾವುದೋ ಜನ್ಮದ ವೈರತ್ವವಿರಬಹುದೇನೋ. ಅದೇನೆ ಇದ್ದರೂ, ಪ್ರೀತಿ-ಪ್ರೇಮದ ವಿಷಯವೆಂದರೆ ಮಾರುದ್ದ ಜಿಗಿಯುತ್ತಿದ್ದ ನನ್ನಂಥ ಅಮಾಯಕನನ್ನು ಒಂದು ಮಾತೂ ಹೇಳದೇ ನಿನ್ನ ಓರೆಗಣ್ಣೆಂಬ ಅದೃಶ್ಯ ಪಾಶದಿಂದ ಎಣಿಕೆಗೂ ನಿಲುಕದಷ್ಟು ಆಳದ ಪ್ರೇಮ ಪ್ರಪಾತಕ್ಕೆ ಬೀಳಿಸಿದ ಘೋರ ಅಪರಾಧಿ ನೀನು. ಅಂತಹದ್ದರಲ್ಲಿ ಈಗೇಕೆ ನನಗೆ ವಿರಹವೆಂಬ ಶಿಕ್ಷೆ..? ಯಾರೋ ಮಾಡಿದ ತಪ್ಪಿಗೆ ಯಾರಿಗೂ ಕಾಣದ ಶಿಕ್ಷೆ ಅನುಭವಿಸುತ್ತಿರುರುವ ಈ ಬಡಪಾಯಿಯ ಬಗ್ಗೆ ಒಮ್ಮೆಯಾದರೂ ಯೋಚಿಸು ಗೆಳತಿ.
‘ನಮ್ಮಿಬ್ಬರ ಪ್ರೀತಿ ನದಿಯ ದಡದಲ್ಲಿ ಕುಳಿತು ಮರಳ ಮೇಲೆ ಗೀಚುವ ಚಿತ್ತಾರವಾಗದಿರಲಿ, ತೇಲಿ ತೇಲಿ ಬರುವ ತೆರೆಗೆ ಸಿಲುಕಿ ನಲುಗದಿರಲಿ, ನಮ್ಮಿಬ್ಬರ ಪರಸ್ಪರ ಪ್ರೀತಿ ತುರ್ತು ರೋಗಿಗೆ ಕೊಡುವ ಆಮ್ಲಜನಕದಂತೆ ಇರಲಿ ಯಾವತ್ತೂ’ ಎಂದು ಊರ ದಿಬ್ಬದ ಮೇಲಿನ ಹಾಳು ಹುಣಸೇ ಮರದ ಕೆಳಗೆ ನನ್ನ ತೊಡೆಯ ಮೇಲೆ ತಲೆಯಿಟ್ಟು ಪ್ರೀತಿಯ ಬಗ್ಗೆ ನೀನು ಬಿಗಿಯುತ್ತಿದ್ದ ಉದ್ದುದ್ದ ಉಪದೇಶಗಳು ಇಷ್ಟು ಬೇಗ ಗಾಳಿಗೆ ತೂರಿ ಹೋಗುತ್ತಿವೆ ಎಂದರೆ ನಮ್ಮಿಬ್ಬರ ಪ್ರೀತಿಯ ಮಧ್ಯೆ ದೊಡ್ಡ ಬಿರುಗಾಳಿಯೇ ಬೀಸುತ್ತಿದೆ ಎಂದು ನನಗನಿಸುತ್ತಿದೆ ಸ್ಪೂರ್ತಿ. ನಿನಗಾಗಿ ಅದೇ ಹಾಳು ಹುಣಸೇ ಮರದ ಕೆಳಗೆ ಸಂಜೆಯ ಇಳಿ ಹೊತ್ತಿನಲ್ಲಿ ಕಾಯುತ್ತಿರುವೆ. ಸೂರ್ಯ ಮುಳುಗಿದರೂ ನಮ್ಮಿಬ್ಬರ ಪ್ರೀತಿ ಮುಳುಗುವುದಿಲ್ಲವೆಂಬ ಆಶಾಭಾವನೆ ನನಗೆ ಧೈರ್ಯ ನೀಡಿ ನಿನ್ನನ್ನು ಕರೆಯುತ್ತಿದೆ. ಮುನಿಸಿಕೊಂಡಿರುವ ಪ್ರೀತಿಯನ್ನು ಮತ್ತೆ ಚಿಗುರಿಸಲು ಬರ್ತೀಯಾ ತಾನೇ..?
ಇದನ್ನೂ ಓದಿ: ಕಡಲಿನ ಅಂತರಾಳದಲ್ಲಿ ಅವಿತಿರುವ ಅಷ್ಟೂ ಮುತ್ತುಗಳು ನಿನ್ನದೇ ಆಗಲಿ ಗೆಳೆಯ!
ಧೋ ಎಂದು ಸುರಿಯುವ ಈ ಮಳೆಗೆ ಅದೇಕೆ ನನ್ನ ಮೇಲೆ ಇಷ್ಟೊಂದು ದ್ವೇಷವಿರಬಹುದು? ನೆನಪಿನ ಗರ್ಭದಲ್ಲಿ ಆಳವಾಗಿ ಹುದುಗಿದ್ದ ಎಲ್ಲ ನೆನಪುಗಳನ್ನ ಇಂಚಿಂಚೂ ಬಿಡದೇ ಕೆದಕಿ ಕಣ್ಮುಂದೆ ತಂದು ಸೇಡು ತೀರಿಸಿಕೊಳ್ಳುತ್ತಿದೆ. ನೆತ್ತಿ ಸುಡುವ ಬಿಸಿಲಲ್ಲಿ ನಿನಗೆ ನಾ ನೆರಳಾಗಿದ್ದು, ನಡುಗುವ ಚಳಿಯಲ್ಲೂ ಬೆಚ್ಚನೆಯ ಕಾವಾಗಿದ್ದು, ಮೊನ್ನೆಯ ಕಾಲೇಜಿನ ಕಾರ್ಯಕ್ರಮವೊಂದರ ಸಭೆಯಲ್ಲಿ ನಾನು ಭಾಷಣ ಮಾಡುತ್ತಿದ್ದಾಗ ನಿನ್ನತ್ತ ಕಣ್ಣು ನೆಟ್ಟ ಕೂಡಲೇ ನನ್ನ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಂದು ತಲೆ ಹಿಡಿದು ಕುಳಿತಿದ್ದು, ಅತ್ತಿಂದಿತ್ತ ಬೀಸಿದ ಬಿರುಗಾಳಿಗೆ ನಿನ್ನ ಕೈಯಲ್ಲಿದ್ದ ಕೊಡೆ, ಗಾಳಿ ಪಾಲಾಗಿ ಮೇಲೆ ಹಾರಿದಾಗ ನಿಸ್ಸಹಾಯಕಳಾಗಿ ನಿಂತಿದ್ದ ನಿನಗೆ ಮಳೆಹನಿ ತಾಗದಂತೆ ಓಡಿ ಬಂದು ನಾನು ಕೊಡೆಯಾಗಿದ್ದು, ಇವೆಲ್ಲವೂ ಈಗ ಕಣ್ಮುಂದೆ ಗಿರಕಿ ಹೊಡೆಯುತ್ತಿವೆ. ಸುರಿದು ತೆರೆಗೆ ಸರಿದ ಮಳೆಗಿಂತ ನಾನೇನು ಕಡಿಮೆ ಇಲ್ಲ ಎನ್ನುವಂತೆ, ಆ ಎಲೆಯಿಂದ ಚಿಟಪಟ ಉದುರುತ್ತಿರುವ ಹನಿಗಳೂ ನಿನ್ನ ಕಾಲ್ಗೆಜ್ಜೆಯ ನಾದಕ್ಕೆ ಸೆಡ್ಡು ಹೊಡೆಯುತ್ತಿವೆ. ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ. ಈ ‘ಕಾಯುವಿಕೆ’ಗೂ ಒಂದು ಧೈರ್ಯ ಬೇಕು. ಕಾಯಿಸುವವರಿಗಿಂತ ಕಾಯುವವರ ಕರ್ಮ ಹೇಳತೀರದು. ಅದೊಂದು ರೀತಿ ನಗು ತಾಳದಷ್ಟು ಕಚಗುಳಿ, ಹೃದಯ ಹಿಂಡುವಷ್ಟು ಕಿರುಕುಳ.
ಇದನ್ನೂ ಓದಿ: ಹೆಣ್ಣಿಗೆ ತುಸು ಹೆಚ್ಚೇ ನಾಚಿಕೆ ಕಣೋ.. ಸತಾಯಿಸದೇ ಕಣ್ಮುಂದೆ ಬಂದು ಬಿಡು
ಶುಭಾಶಯ ಹೇಳುವ ನೆಪದಲ್ಲಿ ಪುಟಗಟ್ಟಲೇ ಪುರಾಣ ಗೀಚಿದನೆಂದು ಬೇಸರಿಸಿಕೊಳ್ಳಬೇಡ ಗೆಳತಿ. ಚೆನ್ನಾಗಿ ಪರೀಕ್ಷೆ ಬರೆ. ನೀ ಪರೀಕ್ಷೆಯಲ್ಲಿ ಅಂದುಕೊಂಡಷ್ಟು ಯಶಸ್ಸು ಕಂಡರೆ ಸಾಕು ಈ ವಿರಹದ ಘಳಿಗೆ ಸಾರ್ಥಕವಾದಂತೆಯೇ. ಅಲ್ಲಿಯವರೆಗೂ ನಿನ್ನೀ ಜಾಗದಲ್ಲಿ ವಿರಹ, ಮೌನ ನನ್ನ ಜೊತೆಗಿರಲಿ. ಪರೀಕ್ಷೆಯ ಮರುಘಳಿಗೆಯೇ ಭೇಟಿಯಾಗೋಣ. ಬಳಿಕ ಮಡುಗಟ್ಟಿದ ಮೌನ ಕರಗಿ ಮಾತಿನ ಮಳೆ ಸುರಿಯಬೇಕು. ಈ ಮೌನಕ್ಕೊಂದು ತಿಲಾಂಜಲಿ ಇಡಬೇಕು. ನಿನ್ನ ಪ್ರೀತಿ ಪರೀಕ್ಷೆಯಲ್ಲಿ ನಾನು ನಪಾಸಾಗುವ ಮಾತೇ ಇಲ್ಲ. ಮತ್ತೊಮ್ಮೆ ಆಲ್ ದಿ ಬೆಸ್ಟ್..ನಮ್ಮಿಬ್ಬರಿಗೂ!
ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ
Published On - 6:59 pm, Thu, 11 February 21