Valentine’s Day: ಕಡಲಿನ ಅಂತರಾಳದಲ್ಲಿ ಅವಿತಿರುವ ಅಷ್ಟೂ ಮುತ್ತುಗಳು ನಿನ್ನದೇ ಆಗಲಿ ಗೆಳೆಯ!

Valentine's Week | My Love Story: ಬಾಳ ದಾರಿಯಲಿ ಬೇರೆಯಾದರೂ ಚಂದಿರ ಬರುವನು ನನ್ನ ಜೊತೆ, ಕಾಣುವೆನು ಅವನಲಿ ನಿನ್ನನೇ. ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೇ... ಎಂದು ಗುನುಗುತ್ತಾ ಉಳಿದುಬಿಡುವೆ.

Valentine's Day: ಕಡಲಿನ ಅಂತರಾಳದಲ್ಲಿ ಅವಿತಿರುವ ಅಷ್ಟೂ ಮುತ್ತುಗಳು ನಿನ್ನದೇ ಆಗಲಿ ಗೆಳೆಯ!
ನಿನ್ನ ಬರುವಿಕೆಗಾಗಿ ಕಾಯುತ್ತಿರುವೆ ಹುಡುಗ
Follow us
Skanda
|

Updated on:Feb 11, 2021 | 5:30 PM

ಜನಜಂಗುಳಿಯ ಮಧ್ಯೆ ರೈಲಿನಲ್ಲಿ ಕಿಟಕಿ ಪಕ್ಕ ಕೂತಿದ್ರೂ ನನ್ನ ಮನಸ್ಸು ಮಾತ್ರ ನಿಷ್ಠೆಯಿಂದ ಭಾವನಾ ಲೋಕದ ಸಂಚಾರದಲ್ಲಿ ನಿರತವಾಗಿತ್ತು. ಓಡ್ತಾ ಇರೋ ಮನಸ್ಸನ್ನ ಕೆಲ ಕಾಲ ಕಟ್ಟಿ ಹಾಕೋ ಜಾಣ್ಮೆ ಇರೋದು ಅನುರಾಗಕ್ಕೆ ಮಾತ್ರ. ಅಂಥದ್ದೇ ಒಂದು ಅನುರಾಗದ ಸುಳಿಯಲ್ಲಿ ಸ್ವಲ್ಪ ತಾಸು ಹಾಯಾಗಿ, ಜಗದ ಪರಿವೆ ಇಲ್ಲದೆ ಉಸಿರಾಡಿದ ಕತೆಯಿದು. ಜೀವನದಲ್ಲಿ ಜೊತೆಗೆ ಸಾಗಿದ ಅದೆಷ್ಟೋ ಮಂದಿ ಗುರುತುಗಳೂ ಇಲ್ಲದೆ ಮಾಸಿಹೋದ್ರು. ಎಲೋ ಇದ್ದ ಕೆಲವರು ನೋಡನೋಡ್ತಾನೇ ತೀರಾ ಹತ್ರವಾಗ್ತಾರೆ ಅಂತ ಎಲ್ಲೋ ಓದಿದ್ದು ಮಾತ್ರ ಈಗ ನಿಜವಾಗ್ತಿದೆ. ನಂಬಿಕೆ, ಧರ್ಮ, ಮತ, ಮನೋಭಿಲಾಷೆ ಅನ್ನೋ ಸುಮಾರು ಕಟ್ಟಳೆಗಳನ್ನು ದಾಟಿ ಈ ಚಂಚಲ ಮನಸ್ಸಿನ ಶರಧಿಯಲ್ಲಿ ಏಳೋ ಕೆಲ ಆಕರ್ಷಣೆಗಳ ಭೀಕರ ಸುಳಿಗೆ ಶರಣಾಗೋದೇ ಒಂದು ವಿಪರ್ಯಾಸ. ಇದೇನು ಜೀವನದ ಮಜಲುಗಳಾ? ಒಟ್ಟಾರೆ, ಅರಿವಿಗೆ ಬಂದಷ್ಟನ್ನೂ ಅಕ್ಷರಕ್ಕಿಳಿಸುವ ಅಗಮ್ಯ ಬಯಕೆ ನನ್ನದಾಗಿದೆ.

ಅವನೊಬ್ಬ ನಿಶೆಯ ನಂಟ! ಅವನೊಬ್ಬ ನಿಶೆಯ ನಂಟ, ಕಣ್ಣಳತೆಗೆ ಸಹನಾಮೂರ್ತಿ, ಧಾರಾಳ ವ್ಯಕ್ತಿತ್ವ, ಸ್ನೇಹಜೀವಿಯಂತೆ ಕಂಡರೂ, ಅವನ ಅಂತರಾಳದ ಬಗ್ಗೆ ಎಳ್ಳಷ್ಟೂ ಅರಿವಿಲ್ಲ ನನಗೆ. ಆದರೆ ಎಲ್ಲೆ ಮೀರಿದ ಹುಡುಗಾಟ ಮಾತ್ರ ಮನವರಿಕೆಯಾಗಿತ್ತು. ಪರಿಚಯ ಹೇಳಿಕೊಳ್ಳುವಷ್ಟು ಇಲ್ಲದಿದ್ರೂ, ಅವನ ಬಗ್ಗೆ ಹೀಗೊಂದು ದಿನ ಬರೀತೀನಿ ಅನ್ನೋ ಸಂದರ್ಭವನ್ನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಭೇಟಿಗಳು ಬೆರಳೆಣಿಕೆಯಷ್ಟಾದರೂ, ಇತ್ತೀಚಿಗೆ ಭಾವನೆಗಳು ಮಾತ್ರ ಅಂದಾಜಿಗೂ ಸಿಗದ ನಕ್ಷತ್ರ ಪುಂಜ! ಅವನೊಬ್ಬ ವಿಸ್ಮಯದ ಗೂಡು. ಹೇಳತೀರದಷ್ಟು ಸಂಯಮ. ಅಲ್ಲೆಲ್ಲೋ ಇಣುಕಿ, ನೆರಳು ಬೆಳಕಿನ ಆಟದ ಜೊತೆ ಕಣ್ಮರೆಯಾಗ್ತಾ ಇಷ್ಟವಾಗಿ, ಕಷ್ಟವೆಂದು ನನ್ನಲ್ಲೇ ಮಣ್ಣಾದ ಅದೆಷ್ಟೋ ಗತಕಾಲದ ಕಲೆಗಳಿಗೆ ಮತ್ತೊಮ್ಮೆ ಕನ್ನಡಿ ಹಿಡಿದು, ಮನದಂಗಳದ ಹುಚ್ಚು ಕುಣಿತಕ್ಕೆ ಸುಳಿವಿಲ್ಲದೆಯೇ ಗೆಜ್ಜೆಕಟ್ಟಿ ಹೋಗಿದ್ದ. ಹಾಡು, ತಂಗಾಳಿ, ತೂಗುವ ಹಸಿರು, ಪಕ್ಷಿ ಸಮೂಹ, ಆಕಾಶದಡಿಯಲ್ಲಿನ ಅಷ್ಟೂ ಸೃಷ್ಟಿಯಲ್ಲೂ ಅವನದೇ ಝೇಂಕಾರ ಈಗ. ಪ್ರತಿಯೊಂದರಲ್ಲೂ ಅವನ ಪ್ರತಿಬಿಂಬವೇ.

ಹೀಗೆ ಹೇಳುವಾಗ ಏನೋ ಹಾಯೆನಿಸುತ್ತೆ. ಪ್ರತಿಯೊಂದು ಭಾವಕ್ಕೂ ಜೀವ ಬಂದಂತಹ ಅನುಭವ ಆಗುತ್ತೆ. ವಾಸ್ತವಗಳಿಗೆ ದೂರವಾದ್ರೂ ಅದೇನೋ ಖುಷಿ. ಇದರ ಗುಂಗಲ್ಲಿ ನನ್ನನ್ನೇ ಮರೆತಿದ್ದಂತೂ ನಗ್ನ ಸತ್ಯ. ಅಂದಾಜಿಗೂ ಸಿಗದಷ್ಟು ದೂರ ಸೆಳೆವ, ಕೊನೆಗೆ ನನ್ನ ಏಕಾಂತಕ್ಕೂ ಹ್ಯಾಂಗೋವರ್ ನಶೆ ನೀಡುವ ಪುಣ್ಯಾತ್ಮ ಅವನು. ಆದರೆ, ಅವನು ತೆರೆದ ಮುಕ್ತ ಆಕಾಶವಾದ್ರೆ, ನಾನು ಕಡಲ ಅಂತಾರಾಳ. ಉತ್ತರಕ್ಕೂ ದಕ್ಷಿಣಕ್ಕೂ ಎಲ್ಲಿಂದೆಲ್ಲಿಗೆ ಚುಂಬಕ ಗಾಳಿ?

ಇದನ್ನೂ ಓದಿ: ಹಳೇ ಪ್ರೀತಿಯನ್ನು ಮತ್ತೆ ನೆನಪಿಸಿಕೊಂಡು ಮನಸ್ಸು ಕೇಳಿತು ಈಗ ನಿಮ್ಮ ಹೀರೋ ಏನ್ ಮಾಡ್ತಿದ್ದಾನೆ?

ಹೇ ಹುಡುಗ, ರವಿ ಬೆಳಗೆರೆ ಅವರ ಸಾಲಿನಂತೆ ಹೇಳಿ ಹೋಗು ಕಾರಣ, ನನ್ನ ಕಣ್ಣಂಚಿನಿಂದ ಮರೆಯಾಗುವ ಮುನ್ನ, ನೀ ನನಗೆ ಯಾರೆಂದು ಹೇಳಿಬಿಡು. ಬಾಳದಾರಿಯಲ್ಲಿ ಬೇರೆಯಾಗೋದಂತೂ ನಿಶ್ಚಿತ. “ಬಾಳ ದಾರಿಯಲಿ ಬೇರೆಯಾದರೂ ಚಂದಿರ ಬರುವನು ನನ್ನ ಜೊತೆ, ಕಾಣುವೆನು ಅವನಲಿ ನಿನ್ನನೇ. ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೇ…” ಎಂದು ಗುನುಗುತ್ತಾ ಉಳಿದುಬಿಡುವೆ. ಕಡಲಿನಂತರಾಳದಲ್ಲಿ ಅವಿತಿರುವ ಅಷ್ಟೂ ಮುತ್ತುಗಳೂ ನಿನ್ನದೇ ಆಗಲಿ. ಇದು ಸ್ವಾರ್ಥ ಅನ್ನೋದು ನಿಜವೇ. ಆದರೆ ಅದರಿಂದ ನಿನ್ನ ಹೆಸರಿಗೆ ಮತ್ತಷ್ಟು ಹೊಳಪು ಸೇರಿಸೋ ಆಸೆ. ನಿನ್ನ ಅದೆಷ್ಟೊ ಸಹಕಾರಕ್ಕೆ ನಾನು ಚಿರಋಣಿ. ಒಳ್ಳೆಯದನ್ನೇ ಹಾರೈಸ್ತೀನಿ ನಿನಗೆ. ಈ ಪ್ರೇಮಿಗಳ ದಿನದ ನೆಪದಲ್ಲಿ.

ನಿನ್ನದೇ ಒಲುಮೆಯಲ್ಲಿ ಬಂಧಿಯಾದವಳು ವತ್ಸಲಾ, ಬೆಂಗಳೂರು

Published On - 5:30 pm, Thu, 11 February 21