Valentine’s Day: ಹಳೇ ಪ್ರೀತಿಯನ್ನು ಮತ್ತೆ ನೆನಪಿಸಿಕೊಂಡು ಮನಸ್ಸು ಕೇಳಿತು ಈಗ ನಿಮ್ಮ ಹೀರೋ ಏನ್ ಮಾಡ್ತಿದ್ದಾನೆ?
My Love Story: S ಅಕ್ಷರದಿಂದ ಹೆಸರು ಆರಂಭವಾಗುವ ಆ ಪುಣ್ಯಾತ್ಮ ನನಗಿಂತ ಎರಡು ವರ್ಷ ಸೀನಿಯರ್. ತುಂಬಾ ನೀಟಾಗಿ ಡ್ರೆಸ್ ಮಾಡಿಕೊಂಡು ಕಾಲೇಜಿಗೆ ಬರುತ್ತಿದ್ದ ಅವ ರ‍್ಯಾಗಿಂಗ್ ವಿರುದ್ಧ ದನಿಯೆತ್ತಿ ಮುಷ್ಕರ ಹೂಡಿದ ವಿದ್ಯಾರ್ಥಿಗಳ ಗುಂಪಿನ ನೇತೃತ್ವ ವಹಿಸಿದ್ದ.
ಪ್ರತೀ ಭಾನುವಾರ ಸಂಜೆ ನಾವೆಲ್ಲರೂ ನಮ್ಮ ವಾಟ್ಸಾಪ್ ಗ್ರೂಪ್ನಲ್ಲಿ ಸೇರುತ್ತೇವೆ. ಗ್ರೂಪ್ ಅಂದರೆ ಅಲ್ಲಿರುವುದು ನಾವು ನಾಲ್ಕೇ ಮಂದಿ, ಕಾಲೇಜಿನ ಗೆಳತಿಯರು. ಮದುವೆ, ಮಕ್ಕಳು, ಸಂಸಾರ, ಉದ್ಯೋಗ ಎಲ್ಲವನ್ನೂ ಸಂಭಾಳಿಸುತ್ತಾ ಒಂದಷ್ಟು ಹೊತ್ತು ಹರಟೆ ಹೊಡೆಯುವ ತಾಣವೇ ನಮ್ಮ ಆ ವಾಟ್ಸಾಪ್ ಗ್ರೂಪ್. ಅಲ್ಲೇನು ಘನ ಗಂಭೀರ ಚರ್ಚೆಗಳಾಗಲ್ಲ. ಪರಸ್ಪರ ಕಾಲೆಳೆಯುತ್ತಾ ಮಕ್ಕಳ ತುಂಟಾಟ, ಅಡುಗೆ, ಬದುಕಿನ ಸಣ್ಣ ಪುಟ್ಟ ಖುಷಿಗಳನ್ನು ಹಂಚುವ ಗ್ರೂಪ್ ಅದು. ಅಲ್ಲಿ ನಮ್ಮ ಹುಟ್ಟುಹಬ್ಬದ ದಿನ ಮಾತ್ರ ಜಾಸ್ತಿ ಗೌಜಿ ಇರುತ್ತದೆ. ಹಳೇ ಫೋಟೊಗಳನ್ನೆಲ್ಲ ಸೇರಿಸಿ ವಿಡಿಯೊ ಮಾಡಿ, ಇಮೋಜಿ, ಸ್ಟಿಕ್ಕರ್ಗಳಿಂದ ನಗಿಸುತ್ತಾ ವರ್ಚುವಲ್ ಹುಟ್ಟುಹಬ್ಬ ಆಚರಣೆ ನಡೆಯುತ್ತದೆ. ಇಬ್ಬರು ಹೊರದೇಶದಲ್ಲಿಯೂ ಮತ್ತೊಬ್ಬಳು ಹೊರ ರಾಜ್ಯದಲ್ಲಿಯೂ ಇರುವುದರಿಂದ ಅವರವರ ಊರಿನ ಕತೆಗಳೊಂದಿಗೆ ಆಗಾಗ ಶೇರ್ ಮಾಡುವ ಊರಿನ ಫೋಟೊಗಳು ಖುಷಿ ಕೊಡುತ್ತವೆ.
ಇವುಗಳ ನಡುವೆ ನಾವೆಲ್ಲರೂ ಖುಷಿ ಪಡುವ ಚಾಟಿಂಗ್ ಎಂದರೆ ನಮ್ಮ ಹಳೇ ನೆನಪುಗಳನ್ನು ಕೆದಕುವುದು. ಕಾಲೇಜು ದಿನಗಳ ನೆನಪುಗಳು ಅಂದರೆ ಹೇಳ್ಬೇಕಾ ಕಲರ್ಫುಲ್ ಆಗಿಯೇ ಇರುತ್ತದೆ. ಈ ಕಲರ್ಫುಲ್ ನೆನಪುಗಳಲ್ಲೊಂದು ನಮ್ಮ ಹಳೇ ಪ್ರೀತಿ, ಕ್ರಶ್ಶುಗಳು. ಮದುವೆ ಆಗಿ ಮಕ್ಕಳಾದರೂ ಇವುಗಳನ್ನೆಲ್ಲ ಮರೆಯುವುದುಂಟೇ. ದಿನಾ ನೆನಪಿಸಿಕೊಳ್ಳದೇ ಇದ್ದರೂ ಆ ಮಧುರ ಅನುಭವವನ್ನು ಮತ್ತೊಮ್ಮೆ ನೆನಪಿಗೆ ತಂದು ಅದೊಂದು ಕಾಲವಾಗಿತ್ತು ಎಂದು ಎಂದು ಟೈಪಿಸಿ ಡಿಲೀಟ್ ಮಾಡುತ್ತೇವೆ. ಹೌದು ಆ ಚಾಟ್ ಗಳನ್ನೆಲ್ಲ ಡಿಲೀಟ್ ಮಾಡ್ತೀವಿ, ಕಾರಣ ಹೇಳ್ಬೇಕಾಗಿಲ್ಲ ತಾನೇ!
ಎರಡು ದಿನಗಳ ಹಿಂದೆ ಫೇಸ್ಬುಕ್ ಬರ್ತ್ ಡೇ ನೋಟಿಫಿಕೇಶನ್ ಹಳೇ ನೆನಪನ್ನು ಕೆದಕಿತು. ಅಂದು ಅವನ ಬರ್ತ್ ಡೇ. ನನ್ನ ಫ್ರೆಂಡ್ ಲಿಸ್ಟ್ನಲ್ಲಿರುವ ಕೆಲವು ಗೆಳೆಯರು ಅವನ ಫೇಸ್ಬುಕ್ ವಾಲ್ ಮೇಲೆ ಹ್ಯಾಪಿ ಬರ್ತ್ ಡೇ ಎಂದು ಬರೆದಿದ್ದರು. ಸುಮಾರು 10 ವರ್ಷದಿಂದ ಅವ ನನ್ನ ಫ್ರೆಂಡ್ ಲಿಸ್ಟ್ನಲ್ಲಿದ್ದರೂ ನಾವೆಂದೂ ಚಾಟ್ ಮಾಡಿಲ್ಲ. ಅವನು ಆ್ಯಕ್ಚಿವ್ ಆಗಿದ್ದನ್ನು ನಾನು ನೋಡಿಯೇ ಇಲ್ಲ. ಆದರೂ ನನ್ನದೊಂದು ವಿಷ್ ಇರಲಿ ಎಂದು ಗೂಗಲ್ ನಿಂದ ಬರ್ತ್ ಡೇ ವಿಷ್ವೊಂದನ್ನು ಹುಡುಕಿ ಕಾಪಿ ಮಾಡಿ ಅವನ ಫೇಸ್ಬುಕ್ ಗೋಡೆಗೆ ಅಂಟಿಸಿ ಒಂದು ಕೇಕ್ ಮತ್ತೊಂದು ಬಲೂನ್ ಇಮೋಜಿ ಹಾಕಿ ಸುಮ್ಮನಾದೆ. ಮಧ್ಯಾಹ್ನದ ಹೊತ್ತಿಗೆ ಮೆಸೆಂಜರ್ ಸದ್ದು ಮಾಡಿತು. ಥ್ಯಾಂಕ್ಸ್ ಡಿಯರ್ ಎಂಬ ಮೆಸೇಜ್ ಅಲ್ಲಿತ್ತು. ನಾನು ನೋಡಿದ್ದೇನೆ ಎಂದು ಆತನಿಗೆ ಗೊತ್ತಾದ ಕೂಡಲೇ Watsup ಎಂದು ಮತ್ತೊಂದು ಮೆಸೇಜ್ ತೇಲಿಬಿಟ್ಟ. ನಾನು @office ಎಂದು ಉತ್ತರಿಸಿದೆ. Carry on TTYL ಎಂದು ಹೇಳಿ ಹೋದ. ಮನಸ್ಸಿನಲ್ಲಿ ಖುಷಿ. ಅಂತೂ ಮೆಸೆಂಜರ್ನಲ್ಲಿ ಬಂದು ಥ್ಯಾಂಕ್ಸ್ ಹೇಳಿದನಲ್ಲಾ ಎಂದು.
S ಅಕ್ಷರದಿಂದ ಹೆಸರು ಆರಂಭವಾಗುವ ಆ ಪುಣ್ಯಾತ್ಮ ನನಗಿಂತ ಎರಡು ವರ್ಷ ಸೀನಿಯರ್. ತುಂಬಾ ನೀಟಾಗಿ ಡ್ರೆಸ್ ಮಾಡಿಕೊಂಡು ಕಾಲೇಜಿಗೆ ಬರುತ್ತಿದ್ದ ಅವ ರ‍್ಯಾಗಿಂಗ್ ವಿರುದ್ಧ ದನಿಯೆತ್ತಿ ಮುಷ್ಕರ ಹೂಡಿದ ವಿದ್ಯಾರ್ಥಿಗಳ ಗುಂಪಿನ ನೇತೃತ್ವ ವಹಿಸಿದ್ದ. ನಾವಾಗ ಫಸ್ಟ್ ಇಯರ್ ಸ್ಟೂಡೆಂಟ್ಸು. ನಿಮಗೇನಾದರೂ ಸಮಸ್ಯೆ ಇದ್ದರೆ ನಮಗೆ ತಿಳಿಸಿ. ಈ ಕಾಲೇಜಿನಲ್ಲಿ ರ‍್ಯಾಗಿಂಗ್ ಇರ್ಬಾರ್ದು ಎಂದು ಹೇಳಿ ಹೋಗಿದ್ದ. ಇಂಜಿನಿಯರಿಂಗ್ ಕಾಲೇಜ್ ಆಗಿದ್ದ ಕಾರಣ ಪದವಿ ಪೂರೈಸಲು ನಾಲ್ಕು ವರ್ಷ. ನಾವು ಎರಡನೇ ವರ್ಷಕ್ಕೆ ತಲುಪಿದಾಗ ಆತ ಫೈನಲ್ ಇಯರ್. ಅಷ್ಟೊತ್ತಿಗೆ ನಾವು ಒಳ್ಳೆಯ ಸ್ನೇಹಿತರಾಗಿದ್ದೆವು.
ಅವ ಕೊನೆಯ ಸೆಮಿಸ್ಟರ್, ಪ್ರಾಜೆಕ್ಟ್ ಗಡಿಬಿಡಿಯಲ್ಲಿದ್ದ. ನಾವು ನಾಲ್ಕು ಮಂದಿ ಗೆಳತಿಯರು ಟೆರೇಸ್ ಮೇಲೆ ಗಾಸಿಪ್ ಮಾತಾಡ್ಕೊಂಡು ಕುಳಿತಿರುವಾಗ ನಾನು ಅವರಲ್ಲಿ ನನ್ನ ಮನಸ್ಸಿನ ಮಾತು ಹೇಳಿದೆ. ಯಾರು ಅವನಾ? ಎಂಬ ನೋಟದೊಂದಿಗೆ ಅವರೆಲ್ಲ ನನ್ನನ್ನು ನೋಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಓ ಹಾಗಾ? ನೀನು ಹೆದರ್ಬೇಡ, ನಾವೆಲ್ಲ ಜೊತೆಗಿದ್ದೀವಿ, ನೀನೇ ಪ್ರೊಪೋಸ್ ಮಾಡಿ ಬಿಡು ಅಂದಳು ಒಬ್ಬ ಗೆಳತಿ. ಅರೇ ನಾನು ಪ್ರೊಪೋಸ್ ಮಾಡಿದರೆ ಅವನೇನು ಅಂದ್ಕೊತಾನೋ ಎಂದು ನಾನು ಹಿಂಜರಿದೆ. ನೋಡು ಇನ್ನೇನು ಅವ ಕೋರ್ಸ್ ಮುಗಿಸಿ ಅವನ ಊರಿಗೆ ಹೋಗಿ ಬಿಡ್ತಾನೆ ಅದಕ್ಕಿಂತ ಮುಂಚೆ ಹೇಳಿ ಬಿಡು. ಯೆಸ್ ಅಂದ್ರೆ ಖುಷಿ, ನೋ ಅಂದರೆ ಅವನಿಗೆ ಭಾಗ್ಯ ಇಲ್ಲ ಅಂತ ಅಂದ್ಕೋ ಅಂದ್ಳು ಗೆಳತಿ ನಿಮ್ಮಿ. ಆ ರಾತ್ರಿಯಿಡೀ ನಾವು ಇದೇ ವಿಷಯದ ಬಗ್ಗೆ ಚರ್ಚಿಸಿದೆವು. ಅದು ಶನಿವಾರವಾಗಿತ್ತು, ಭಾನುವಾರವೂ ನಮಗೆ ಚಿಂತಿಸಲು ಸಮಯ ಸಿಕ್ಕಿತು.
ಇದನ್ನೂ ಓದಿ: ಈ 4 ರಾಶಿಯ ಹುಡುಗಿಯರು ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ! ನನ್ನ ಕಿವಿಯ ಜುಮ್ಕಿಯನ್ನು ಅವನೂ ಗಮನಿಸಿದ್ದ ಸೋಮವಾರ ಅವನಲ್ಲಿ ಮನದ ಮಾತು ಹೇಳೇಬಿಡೋಣ ಎಂದು ಧೈರ್ಯ ತಂದುಕೊಂಡೆ. ಆದರೆ ಅವನೆಲ್ಲಿ? ಮಧ್ಯಾಹ್ನ ಊಟದ ವಿರಾಮದ ವೇಳೆ ಅವ ನಾಲ್ಕೈದು ಗೆಳೆಯರೊಡನೆ ಕ್ಯಾಂಟೀನ್ನಿಂದ ನಮ್ಮ ಕ್ಲಾಸಿನತ್ತ ನಡೆದು ಬರುತ್ತಿದ್ದ. ಮನಸ್ಸಿನಲ್ಲಿ ಪುಕುಪುಕು. ಕಾಲೇಜು ವರಾಂಡದಲ್ಲಿ ನಿಂತಿದ್ದ ಬೇರೆ ಕ್ಲಾಸಿನ ವಿದ್ಯಾರ್ಥಿಗಳ ಜತೆಗೂ ಹಾಯ್ ಹಲೋ ಎಂದು ಹೇಳುತ್ತಾ ಅವ ನಮ್ಮ ಕ್ಲಾಸಿನತ್ತ ಬರುತ್ತಿದ್ದರೆ ನನಗೆ ಅಲ್ಲಿಂದ ಓಡಿಹೋಗಿ ಬಿಡಬೇಕು ಎಂದೆನಿಸಿತು. ನನ್ನನ್ನು ಕಂಡ ತಕ್ಷಣವೇ ನೀನಿಲ್ಲಿದ್ದೀಯಾ? ಇದೇನು ಹೊಸ ಜುಮ್ಕಿ, ಚೆನ್ನಾಗಿದೆ ಎಂದು ಹೇಳಿ ಹೋದ. ಜುಮ್ಕಿ ಗಮನಿಸ್ತಾನೆ ಅಂದರೆ ಅವನ ಮನಸ್ಸಿನಲ್ಲಿಯೂ ಪ್ರೀತಿ ಇರಬಹುದು ಎಂದು ನಾನು ಅಂದುಕೊಂಡೆ. ನನ್ನ ಗೆಳತಿಯರೂ ಇದಕ್ಕೆ ಹೂಂ ಅಂದರು. ಆ ದಿನ ಬೇರೇನೂ ಮಾತಾಡದೆ ಕಳೆದು ಹೋಯಿತು.
ಮರುದಿನ ಹೇಳೇ ಬಿಡಬೇಕು, ಅದಕ್ಕಾಗಿ ಅವನನ್ನು ನನ್ನ ಮುಂದೆ ತಂದು ನಿಲ್ಲಿಸು ಭಗವಂತಾ ಎಂದು ಪ್ರಾರ್ಥಿಸಿ ಕಾಲೇಜಿಗೆ ಹೊರಟೆ. ಭಗವಂತನಿಗೆ ನನ್ನ ಪ್ರಾರ್ಥನೆ ಕೇಳಿಸಿತು, ನಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಅವನು ಸಿಕ್ಕ. ನಾನು, ನನ್ನ ಗೆಳತಿಯರು, ಅವನೂ ಮಾತನಾಡುತ್ತಾ ನಡೆದೆವು. ಮೆಕ್ಯಾನಿಕಲ್ ಡಿಪಾರ್ಟ್ಮೆಂಟ್ಗೆ ಹೋಗುವ ದಾರಿ ಬೇರೆ ಆಗಿದ್ದರಿಂದ ನಾನು ಹೋಗ್ತೇನೆ, ಬಾಯ್ ಎಂದು ಅವ ಇನ್ನೊಂದು ಪುಟ್ಟ ರಸ್ತೆಯತ್ತ ತಿರುಗಿದ. ನನ್ನ ಗೆಳತಿ ನನ್ನ ಕೈಗೆ ಚಿವುಟುತ್ತಾ ಅವನಲ್ಲಿ ಹೇಳು ಅಂತಿದ್ದಳು. ನಾನು ಎಲ್ಲ ಧೈರ್ಯವನ್ನು ತಂದುಕೊಂಡು ನನಗೆ ಒಂದು ವಿಷಯ ಹೇಳ್ಬೇಕಿತ್ತು ಅಂದೆ. ಸಂಜೆ ಲೈಬ್ರರಿಗೆ ಬಾ, ನಾನೂ ನಿನ್ನಲ್ಲಿ ಮಾತಾಡ್ಬೇಕು ಎಂದು ಹೇಳಿದಾಗ ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳೆಲ್ಲವೂ ಒಮ್ಮೆಲೆ ನೆನಪಾದವು. ಶಾರುಖ್ ಖಾನ್ ಗುಳಿ ಕೆನ್ನೆ ತೋರಿಸಿ ನಗುತ್ತಾ ಆಲ್ ದಿ ಬೆಸ್ಟ್ ಎಂದು ಹೇಳಿದಂತೆ, ದಿಢೀರ್ ಸುರಿದ ಮಳೆಗೆ ಓಡಿ ಹೋಗಿ ಮರದ ಕೆಳಗೆ ನಾವಿಬ್ಬರೂ ನಿಂತಂತೆ ಸಿನಿಮೀಯ ಕಲ್ಪನೆಗಳೆಲ್ಲವೂ ಬಂದವು.
ಆ ದಿನ ಸಂಜೆಯಾಗುವುದನ್ನೇ ಕಾದೆ. ಕ್ಲಾಸು ಮುಗಿಸಿ ಲೈಬ್ರರಿಗೆ ಹೋಗಬೇಕಿತ್ತು. ಗೆಳತಿಯರು ನನ್ನನ್ನು ಹುರಿದುಂಬಿಸಲು ಹಲವಾರು ಸಿನಿಮಾಗಳ ರೊಮ್ಯಾಂಟಿಕ್ ದೃಶ್ಯಗಳನ್ನು ನನ್ನ ಮುಂದೆ ಹೇಳಿದರು. ಅವನೂ ನಾನು, ನಮ್ಮ ಮದುವೆ, ನಮಗೆ ಹುಟ್ಟಲಿರುವ ಮಕ್ಕಳ ಹೆಸರು ಕೂಡಾ ಯೋಚಿಸಿ ಬಿಟ್ಟೆ. ಗೆಳತಿಯರ ಆಲ್ ದ ಬೆಸ್ಟ್ ಎನ್ನುವ ಹಾರೈಕೆ, ನಿನ್ನಲ್ಲಿ ಮಾತಾಡ್ಬೇಕು ಎಂದು ಅವ ಹೇಳಿದ ಮಾತು ಮತ್ತೆ ಮತ್ತೆ ಕಿವಿಯಲ್ಲಿ ರಿಂಗಣಿಸುತ್ತಿತ್ತು. ಲೈಬ್ರರಿ ಮುಂಭಾಗದಲ್ಲಿ ಅವ ಕಾಯುತ್ತಾ ಕುಳಿತಿದ್ದ. ಹುಡುಗಿಗಾಗಿ ಕಾಯುತ್ತಿದ್ದಾನೆ ಅಂದರೆ Something is there ಎಂಬುದು ನಮ್ಮ ನಂಬಿಕೆ, ಊಹೆ ಆಗಿತ್ತು. ನನ್ನನ್ನು ನೋಡಿದವನೇ ಬಾ ಆ ಕಡೆ ಹೋಗೋಣ ಎಂದು ಲೈಬ್ರರಿ ವರಾಂಡದ ಮೂಲೆಗೆ ಕರೆದುಕೊಂಡು ಹೋದ. ಏನೋ ಹೇಳ್ಬೇಕಾಗಿತ್ತು ಅಂದಿಯಲ್ಲಾ ಎಂದ.. ಏನಿಲ್ಲ ಎಂದು ನಾನು ಮೆಲ್ಲನೆ ಹೇಳಿದೆ. Come on Yaar, ಹೇಳು ಏನಾಯ್ತು? ಎಂದಿದ್ದೇ ತಡ. ಅದೆಲ್ಲಿ ಧೈರ್ಯ ಅಡಗಿತ್ತೋ ನನಗೆ ನೀನಂದ್ರೆ ಇಷ್ಟ ಅಂದೆ. ಅದಕ್ಕೆ ಅವನು ನಗುತ್ತಾ, ನನಗೆ ಗೊತ್ತಿತ್ತು. ಅದನ್ನೇ ನಾನು ಹೇಳೋಣ ಅಂತ ಇದ್ದೆ ಎಂದು ಹೇಳಿ ಮುಂದಿನ ಮಾತು ಶುರುಮಾಡುವ ಆ ಗ್ಯಾಪ್ನಲ್ಲಿ ಅವನೀಗ ಮಂಡಿಯೂರಿ ಗುಲಾಬಿ ಕೊಟ್ಟು I love you ಹೇಳ್ತಾನೆ ಎಂದೇ ನಾನು ಕಲ್ಪಿಸಿಕೊಂಡೆ. ಆದರೆ ಅವ ನಗುತ್ತಾ, ಬುದ್ದೂ, ಇದೆಲ್ಲಾ ಈ ವಯಸ್ಸಿನಲ್ಲಿ ಸಹಜ. ಪ್ರೀತಿ ಪ್ರೇಮ ಅಂತ ಸುಮ್ಮನೆ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಇದು ಕಲಿಯುವ ಸಮಯ. ಎಲ್ಲರೂ ಲವ್ ಮಾಡ್ತಾರೆ, ನನಗೂ ಲವರ್ ಬೇಕು ಎಂದು ನಿನಗೂ ಅನಿಸಬಹುದು. ಆದರೆ ಅಂಥಾ ಭಾವನೆ ಪಕ್ಕಕ್ಕಿಟ್ಟು Concentrate on your Studies ಅಂದುಬಿಟ್ಟ.
ಈ ಭೂಮಿ ಬಿರಿದು ನನ್ನನ್ನು ನುಂಗಿ ಬಿಡಬಾರದೇ ಎಂದು ಅನಿಸಿದ ಕ್ಷಣ ಆಗಿತ್ತು ಅದು. ಇನ್ನು ಸ್ವಲ್ಪ ಹೊತ್ತು ನಿಂತರೆ ಅತ್ತು ಬಿಡುವುದು ಗ್ಯಾರೆಂಟಿ ಎಂದು Excuse Me ಎಂದು ಹೇಳಿ ಅಲ್ಲಿಂದ ಹೊರಟೆ. ಆ ಹೊತ್ತಲ್ಲಿ ಮನಸ್ಸು ಭಾರವಾಗಿದ್ದೋ, ಕಾಲು ಭಾರವಾಗಿದ್ದೋ ಗೊತ್ತಿಲ್ಲ, ಎಷ್ಟು ನಡೆದರೂ ಹಾಸ್ಟೆಲ್ ತಲುಪುತ್ತಿಲ್ಲ. ಹಾಸ್ಟೆಲ್ ಕೋಣೆಗೆ ಹೋಗಿ ಚಪ್ಪಲಿ ಮೂಲೆಗೆ ಎಸೆದು ಬಾತ್ ರೂಂ ಲಾಕ್ ಹಾಕಿ ಸುಮಾರು ಹೊತ್ತು ಅತ್ತುಬಿಟ್ಟೆ. ಆಮೇಲೆ ಮುಖ ತೊಳೆದು ಹೊರಗೆ ಬಂದಾಗ ನನ್ನ ಗೆಳತಿಯರಿಗೆ ಎಲ್ಲವೂ ಅರ್ಥವಾಗಿತ್ತು. ನನ್ನನ್ನು ಅಪ್ಪಿಕೊಂಡು ಸಂತೈಸಿದರು. ಅವನಿಗೆ ಭಾಗ್ಯವಿಲ್ಲ ಬಿಡು ಎಂದಳು ನಿಮ್ಮಿ.
ಇದನ್ನೂ ಓದಿ: ಮನ ಮೆಚ್ಚಿದ ಹುಡುಗಿಯನ್ನು ಮನೆಯವರು ಒಪ್ಪಲಿಲ್ಲ, ನಾನು ಬಿಡಲಿಲ್ಲ
ನನ್ನ ಗಂಡನ ಫೋಟೋ ನೋಡಿ ಅವನು ವಾವ್ ಅಂದಾಗ ನಾನು ಹಿರಿಹಿರಿ ಹಿಗ್ಗಿದ್ದೆ ಅದೇ S ಈಗ ಅಂದರೆ ಹತ್ತು ವರ್ಷಗಳ ನಂತರ ಚಾಟ್ ಮಾಡಲು ಬಂದಿದ್ದಾನೆ. ಅವನ ಫೇಸ್ಬುಕ್ ಪ್ರೊಫೈಲ್ ಪಿಕ್ ನೋಡಿದೆ. ತುಂಬಾ ಬದಲಾಗಿದ್ದಾನೆ. ಹೆಚ್ಚು ಅಪ್ಡೇಟ್ಸ್ ಏನೂ ಇಲ್ಲ, ರಾತ್ರಿ ಮೆಸೆಂಜರ್ ಸದ್ದು ಮಾಡಿತು. ನೋಡಿದರೆ ಅವನೇ. ನಾನು ಉತ್ತರಿಸಿದೆ. ವಾಟ್ಸಾಪ್ ನಂಬರ್ ಕೇಳಿದ ಕೊಟ್ಟೆ. ವಾಟ್ಸಾಪ್ ಡಿಪಿಯಲ್ಲಿ ಮಗುವಿನ ಫೋಟೊ ಇತ್ತು. ನೈಸ್ ಡಿಪಿ ಎಂದು ನನ್ನ ಡಿಪಿ ಬಗ್ಗೆ ಹೇಳಿದ. ಅವನ ಹೆಂಡ್ತಿ ಹೇಗಿದ್ದಾಳೆ ಎಂದು ನೋಡುವ ಕುತೂಹಲ ನನಗೆ. ಫ್ಯಾಮಿಲಿ ಫೋಟೊ ಕಳಿಸು ಅಂದೆ, ಕಳಿಸಿದ. ನಿನ್ನ ಫ್ಯಾಮಿಲಿ ಫೋಟೊ ಕಳಿಸು ಅಂದ. ಗ್ಯಾಲರಿಯಲ್ಲಿ ಹುಡುಕಾಡಿ ಬೆಸ್ಟ್ ಫೋಟೊವೊಂದನ್ನು ಕಳಿಸಿದೆ. Wow.. He is Handsome, Lucky Guy ಎಂದು ನನ್ನ ಗಂಡನ ಬಗ್ಗೆ ಹೇಳಿದ. ನಾನು ಒಂದು ಸ್ಮೈಲಿಂಗ್ ಇಮೋಜಿ ಹಾಕಿದೆ.
ಅವ ಈ ಮಾತು ಹೇಳಿದಾಗ ಒಳಗಿಂದೊಳಗೆ ಖುಷಿ. ಅವತ್ತು ನನ್ನ ಪ್ರೇಮವನ್ನು ನಿರಾಕರಿಸಿದವ ಇವತ್ತು ನನ್ನ ಗಂಡನನ್ನು Lucky Guy ಅಂದನಲ್ಲಾ ಅಷ್ಟೇ ಸಾಕು. ಅವನ ಲೈಫ್ ಬಗ್ಗೆ ನಾನು ಹೆಚ್ಚಿಗೇನೂ ಕೇಳಲು ಹೋಗಿಲ್ಲ. ಅವನೂ ನನ್ನಲ್ಲಿ ಕೇಳಿಲ್ಲ. ಆದರೆ ನಾನು ಹಾಕುವ ಪ್ರತೀ ವಾಟ್ಸಾಪ್ ಸ್ಟೇಟಸ್ಸನ್ನು ಅವ ನೋಡುತ್ತಿರುತ್ತಾನೆ. ಹಾಗಾಗಿಯೇ ಆಗಾಗ ಗಂಡನ ಜತೆಗಿರುವ ಫೋಟೊ ಸ್ಟೇಟಸ್ ಹಾಕಿ ಪ್ರೇಮದ ಸಾಲುಗಳನ್ನು ಬರೆಯುತ್ತಿರುತ್ತೇನೆ.
Published On - 4:29 pm, Thu, 11 February 21