ಕೆ.ನೀಲಾ ಸುದೀರ್ಘ ಬರಹ | ನಮ್ಮದೇ ಬೆರಳಿನಿಂದ ನಮ್ಮ ಕಣ್ಣನ್ನೇ ಕೀಳಿಸುವ ಹುನ್ನಾರ

|

Updated on: Dec 10, 2020 | 5:09 PM

ಮಾನವ ಹಕ್ಕುಗಳಿಗಾಗಿ ಹೋರಾಡಲು ಹೋರಾಟಗಾರರು ಇದ್ದಾರೆ. ನಾವ್ಯಾಕೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂಬ ಅಭಿಪ್ರಾಯವುಳ್ಳವರು ನಮ್ಮ ಸಮಾಜದಲ್ಲಿ ಇದ್ದಾರೆ. ಇಂದು (ಡಿ.10) ವಿಶ್ವ ಮಾನವ ಹಕ್ಕುಗಳ ದಿನ. ಈ ಹಿನ್ನೆಲೆಯಲ್ಲಿ ಹೋರಾಟಗಾರ್ತಿ ಕೆ.ನೀಲಾ ಮಾನವ ಹಕ್ಕುಗಳ ಹೋರಾಟದ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕೆ.ನೀಲಾ ಸುದೀರ್ಘ ಬರಹ | ನಮ್ಮದೇ ಬೆರಳಿನಿಂದ ನಮ್ಮ ಕಣ್ಣನ್ನೇ ಕೀಳಿಸುವ ಹುನ್ನಾರ
ಪ್ರಾತಿನಿಧಿಕ ಚಿತ್ರ
Follow us on

ಮಾನವ ಹಕ್ಕುಗಳಿಗಾಗಿ ಹೋರಾಟ ಎಂಬುದಕ್ಕೆ ಜ್ವಲಂತ ಉದಾಹರಣೆ ರೈತರ ಹೋರಾಟ. ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ಎನ್ನುವುದು ಯಾವುದೋ ಕೇವಲ ಕೃಷಿಕರ ಹೋರಾಟ ಮಾತ್ರವಲ್ಲ. ಅದು ಒಟ್ಟಾರೆಯಾಗಿ ಮಾನವ ಹಕ್ಕುಗಳ ಹೋರಾಟವೂ ಹೌದು. ಮಾನವ ಹಕ್ಕುಗಳು ಅಂದರೆ ಎಲ್ಲ ಮನುಷ್ಯರಿಗೂ ಘನತೆ, ಗೌರವದಿಂದ ಬದುಕುವ ಸ್ವಾತಂತ್ರ್ಯ. ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಹಕ್ಕುಗಳೊಂದಿಗೆ ಬದುಕಬೇಕು. ಈಗ ದೇಶದ ವಿವಿಧೆಡೆ ನಡೆಯುತ್ತಿರುವುದು ಮೇಲ್ನೋಟಕ್ಕೆ ರೈತರ ಹೋರಾಟ ಎನಿಸಿದರೂ ಇದು ಸಕಲ ಚರಾಚರ ಜೀವಿಗಳಿಗೆ ಸಂಬಂಧಿಸಿದ್ದು.

ಮೊನ್ನೆ ಭಾರತ್ ಬಂದ್ ನಡೆಯಿತು. ಕೋಟ್ಯಂತರ ಜನರು ಇದರಲ್ಲಿ ಭಾಗಿಯಾಗಿದ್ದರು. ಹಲವಾರು ವ್ಯಾಪಾರಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಭಾಗಿಯಾದವು. ಗಮನಿಸಬೇಕಾದ ಅಂಶವೆಂದರೆ ಯಾರೂ ಒತ್ತಾಯಪೂರ್ವಕ ಬಂದ್ ಮಾಡಿಲ್ಲ. ಇಂದಿನ ಪ್ರಭುತ್ವವು ನಮ್ಮಿಂದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಸಮಸ್ತ ಜನರಿಗೂ ಎಲ್ಲ ರೀತಿಯ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದಲೇ ಈ ಹೋರಾಟ ನಡೆಯುತ್ತಿದೆ.

ಆದರೆ ಇದನ್ನು ಹಿಮ್ಮೆಟ್ಟಿಸಲು ಪ್ರಯತ್ನಪಡುವ ಶಕ್ತಿಗಳೂ ನಮ್ಮ ಸಮಾಜದಲ್ಲಿವೆ. ಅಂಥವರೇ ನಾವು ಯಾಕೆ ಹೋರಾಟ ಮಾಡಬೇಕು, ಹೋರಾಟ ಮಾಡಲು ಬೇರೆ ಯಾರೋ ಇದ್ದಾರೆ ಎಂದು ಹೇಳುವುದು. ಇಂಥವರು ಮಾನವ ಹಕ್ಕುಗಳ ವಿರೋಧಿಗಳು. ಸುರಕ್ಷಿತ ವಲಯ ಅಂದರೆ ಸೇಫ್ ಜೋನ್​ನಲ್ಲಿ ಕುಳಿತು, ನಾವ್ಯಾಕೆ ಈ ಹೋರಾಟಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದು ವಾದ ಮಾಡುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ.

ರೈತರು ಹೋರಾಟ ಮಾಡುತ್ತಿರುವುದಾದರೂ ಯಾಕೆ? ಈಗಿನ ಕೃಷಿ ಕಾನೂನುಗಳು ಜಾರಿಗೆ ಬಂದರೆ ಮುಂದಿನ ದಿನ ಆಹಾರದ ಅಭಾವ ಸೃಷ್ಟಿಯಾಗುತ್ತದೆ. ಒಂದು ಕೆಜಿ ಅಕ್ಕಿಗೆ ₹ 300 ಕೊಟ್ಟು ಖರೀದಿಸುವ ಪರಿಸ್ಥಿತಿ ಬರಬಹುದು. ಆದರೆ ಜವಾಬ್ದಾರಿ ಮರೆತು ಈಗ ಸೇಫ್ ಜೋನ್​​ನಲ್ಲಿ ಕುಳಿತಿರುವ ಜನ ಈ ಬಗ್ಗೆ ಚಿಂತಿಸುವುದಿಲ್ಲ. ಅವರು ಕೂಡಾ ಮಾನವ ಹಕ್ಕುಗಳನ್ನು ಕಳೆದುಕೊಂಡಿರುತ್ತಾರೆ.

ಇದನ್ನೂ ಓದಿ: Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು

ದೆಹಲಿ ಚಲೋದಲ್ಲಿ ಪಂಜಾಬ್ ರೈತರು

ದಿಕ್ಕು ತಪ್ಪಿಸುವವರು ಯಾರು?

ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಪ್ರಜ್ಞೆಯೇ ಜನರಲ್ಲಿ ಬರಲಾರದಂತೆ ದಿಕ್ಕು ತಪ್ಪಿಸುವವರು ಯಾರು? ಅಡ್ಡಿ ಪಡಿಸುವವರು ಯಾರು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ನಡೆಯುವ ಯಾವುದೇ ಕೆಟ್ಟ ಬೆಳವಣಿಗೆ ಆಗಿರಲಿ, ಅದನ್ನು ಖಂಡಿಸಿ ನಡೆಯುವ ಹೋರಾಟಕ್ಕೆ ಅಡ್ಡಿಪಡಿಸುವವರು ಇದ್ದೇ ಇರುತ್ತಾರೆ.

ಅತ್ಯಾಚಾರ ನಡೆದರೆ ಆ ಹೆಣ್ಣು ಅಷ್ಟೊತ್ತಿನಲ್ಲಿ ಯಾಕೆ ಒಬ್ಬಳೇ ಹೊರಗೆ ಹೋದಳು? ಅವಳು ಉಟ್ಟ ಬಟ್ಟೆ ಆ ರೀತಿಯದ್ದಾಗಿತ್ತು ಎಂಬ ವಾದಗಳು ಹುಟ್ಟಿಕೊಳ್ಳುತ್ತವೆ. ಯಾರದ್ದೋ ಹೆಣ್ಣು ಮಗಳ ಅತ್ಯಾಚಾರವಾದರೆ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು ಎಂಬ ಧೋರಣೆ. ಹೀಗಿರುವವರಿಗೆ ಅವರದ್ದೇ ಆದ ಅಜೆಂಡಾ ಇರುತ್ತದೆ. ಈ ರೀತಿ ಅಜೆಂಡಾ ಹೊಂದಿರುವವರೇ ದುಡಿಯುವ ವರ್ಗ ಗುಲಾಮರಾಗಿಯೇ ಇರಬೇಕು. ಅವರು ಹಸಿವಿನಿಂದಲೇ ಬಿದ್ದಿರಬೇಕು. ಇವರ ಹಕ್ಕುಗಳಿಗಾಗಿ ಹೋರಾಡುವುದು ಸಂಘ ಸಂಸ್ಥೆಗಳ ಕೆಲಸ ಎಂದು ಅಂದುಕೊಂಡಿರುತ್ತಾರೆ. ಹೋರಾಟಗಾರರನ್ನು ಅವಮಾನಿಸುತ್ತಾರೆ.

ಈ ರೀತಿ ಅವಮಾನಿಸುವುದು ನಿನ್ನೆ ಇಂದಿನದಲ್ಲ, ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಸಮಸ್ತ ಮಹಿಳೆಯರಿಗೆ ಅಕ್ಷರ ಜ್ಞಾನ ಕಲಿಸಲು ಹೊರಟ ಸಾವಿತ್ರಿಬಾಯಿ ಪುಲೆ ಮೇಲೆ ಕಲ್ಲು ಎಸೆಯಲಾಯಿತು. ಆಕೆಯನ್ನು ಅವಮಾನಿಸಿದರು. ಪುಲೆಯವರು ಕೇವಲ ಶಿಕ್ಷಣಕ್ಕಾಗಿ ಮಾತ್ರ ಅಲ್ಲ ಮಾನವ ಹಕ್ಕುಗಳಿಗಾಗಿ ಹೋರಾಡಿದವರು. ಬುದ್ಧ, ಅಂಬೇಡ್ಕರ್, ಬಸವಣ್ಣ ಎಲ್ಲರೂ ಸಮಾನತೆಗಾಗಿ ಹೋರಾಡಿದರು. ಅವರನ್ನು ಅವಮಾನಿಸಿ ಬುದ್ಧ ಸಾಹಿತ್ಯ, ವಚನ ಸಾಹಿತ್ಯವನ್ನು ನಾಶ ಮಾಡಲಾಯಿತು.

12ನೇ ಶತಮಾನದಲ್ಲಿ ಬಸವಣ್ಣನ ಮುಂದಾಳತ್ವದಲ್ಲಿ ಜಾತಿ ನಿರ್ಮೂಲನೆಯ ಪ್ರಯತ್ನ ನಡೆದಿತ್ತು. ಹರಳಯ್ಯನ ಮಗ ಶೀಲವಂತ ಮಧುವರಸರ ಮಗಳು ಲಾವಣ್ಯವತಿಯ ಅಂತರ್ಜಾತಿ ವಿವಾಹಕ್ಕೆ ಮುಂದಾದಾಗ ಇದನ್ನು ಸಹಿಸದ ಮೇಲ್ವರ್ಗದ ಜನ ಆನೆ ಕಾಲಿಗೆ ಕಟ್ಟಿ ಅವರನ್ನು ಶಿಕ್ಷಿಸಿದ್ದರು. ಈಗ ಅದರ ಮುಂದುವರಿದ ಭಾಗದಂತೆ ಲವ್ ಜಿಹಾದ್, ಮತಾಂತರ ನಿಷೇಧ ಕಾಯ್ದೆಯನ್ನು ತರಲಾಗುತ್ತಿದೆ. ಅಂದರೆ ನಿರ್ದಿಷ್ಟ ಜಾತಿಯವರು ಧರ್ಮ, ದೇವರು, ಕರ್ಮ ಸಿದ್ಧಾಂತವನ್ನು ನಂಬಿಕೊಂಡು ಬದುಕಬೇಕು ಎಂದು ಹೇಳುತ್ತಾರೆ. ಅಲ್ಲಿ ಬದಲಾವಣೆಗಳನ್ನು ಮಾಡಲು ಹೊರಟಾಗ ಅದಕ್ಕೆ ಅಡ್ಡಿಪಡಿಸುತ್ತಾರೆ.

ಇದನ್ನೂ ಓದಿ: I can’t breath | ಮನುಷ್ಯರು ಮನುಷ್ಯರಾಗಿ ಬಾಳಲು ಅದೆಷ್ಟು ಸವಾಲುಗಳು?

ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ

ಪುಲೆಯವರು ಮಹಿಳೆಯರಿಗೆ ಅಕ್ಷರ ಕಲಿಸಲು ಹೋದಾಗ, ನೀವು ಅವರಿಂದ ಅಕ್ಷರ ಕಲಿಯಬೇಡಿ. ಹಾಗೆ ಕಲಿತರೆ ನೀವು ವಿಧವೆಯಾಗುತ್ತೀರಿ. ಮುತ್ತೈದೆತನವೇ ಸೌಭಾಗ್ಯ ಎಂದು ಮಹಿಳೆಯರನ್ನು ಹೆದರಿಸಲಾಯಿತು. ಈ ಹೊತ್ತಿನಲ್ಲಿ ಸಾವಿತ್ರಿಬಾಯಿ ಪುಲೆ ಮತ್ತು ಜ್ಯೋತಿ ಬಾ ಪುಲೆ ಅವರು ಮೂಢನಂಬಿಕೆ ವಿರುದ್ಧ ಹೋರಾಡಬೇಕಾಗಿ ಬಂತು. ಅದೇ ರೀತಿಯಲ್ಲಿ ಈಗ ಹೋರಾಟದ ಬಗ್ಗೆ ತಪ್ಪಾದ ಮಾಹಿತಿಗಳನ್ನು ಹಂಚುವ ಮೂಲಕ, ಹೋರಾಟಗಾರರನ್ನು ಅವಮಾನಿಸಲಾಗುತ್ತಿದೆ. ರೈತರು ಎಂದರೆ ಅನಕ್ಷರಸ್ಥರು, ಅವರು ಹರಿದ ಬಟ್ಟೆಗಳನ್ನೇ ಧರಿಸಬೇಕು, ಅವರು ಹೊಲಗಳಲ್ಲೇ ಬಿದ್ದಿರಬೇಕು ಎಂದು ಅಪೇಕ್ಷಿಸುವುದು ಕೂಡಾ ಮಾನವ ಹಕ್ಕುಗಳ ಉಲ್ಲಂಘನೆಯೇ ಅಲ್ಲವೇ? ಈ ನಡುವೆಯೇ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬುದನ್ನು ಗೊತ್ತಾಗದಂತೆ ಮಾಡಲಾಗುತ್ತಿದೆ.

ಮಹಿಳೆ ಕಲಿತರೆ ಆಕೆ ಪ್ರಶ್ನಿಸುತ್ತಾಳೆ ಎಂಬ ಕಾರಣದಿಂದಲೇ ಆಕೆಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಮಹಿಳೆ ಅಂದರೆ ಮಹಾಲಕ್ಷ್ಮಿ, ಆಕೆ ಮಕ್ಕಳನ್ನು ಹೆತ್ತು ಮನೆಯಲ್ಲಿಯೇ ಇರಬೇಕು ಎಂದು ಹೇಳಿದರು. ಆಮೇಲೆ ಹೆಣ್ಣಿಗೆ ಹೆಣ್ಣೇ ಶತ್ರು ಎಂದರು. ಅತ್ಯಾಚಾರವಾದಾಗ ಅದನ್ನು ಎಲ್ಲಿಯೂ ಹೇಳದಂತೆ ಬಾಯ್ಮುಚ್ಚಿಸಿದರು. ಹಾಗೊಂದು ವೇಳೆ ಹೇಳಿದರೆ ಅಲ್ಲಿ ಹೆಣ್ಣಿನ ವಿರುದ್ಧವೇ ಆರೋಪಗಳನ್ನು ಹೊರಿಸಲಾಗುತ್ತದೆ. ಇದೂ ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ. ನಮ್ಮ ಬೆರಳಿನಿಂದ ನಮ್ಮ ಕಣ್ಣನ್ನೇ ಕೀಳಿಸುವ ಹುನ್ನಾರ ಇದು.

ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ದನಿಯೆತ್ತಬೇಡಿ ಎಂಬ ಧೋರಣೆ ಇವತ್ತಿಗೂ ಇದೆ. ರೈತರ ಹೋರಾಟಕ್ಕೆ ನಾವು ಯಾಕೆ ಬೆಂಬಲ ನೀಡಬೇಕು ಎಂದು ಕೇಳುವವರು ಇದ್ದಾರೆ. ಅನ್ನ ಉಣ್ಣುವ ಎಲ್ಲರೂ ರೈತರ ಮಕ್ಕಳೇ. ರೈತರು ನಮ್ಮ ಎರಡನೇ ತಾಯಿ. ಒಬ್ಬ ತಾಯಿ ನಮಗೆ ಜನ್ಮ ನೀಡಿದರೆ, ರೈತ ಬೆಳೆ ಬೆಳೆದು ಅನ್ನ ನೀಡುವ ಮೂಲಕ ನಮ್ಮನ್ನು ಪೋಷಿಸಿದ ತಾಯಿ. ಇವತ್ತು ಸರ್ಕಾರ ನಮ್ಮ ತಾಯಿಯ ಹಕ್ಕುಗಳನ್ನು ಕಸಿಯುವ ಕಾಯ್ದೆಯನ್ನು ತಂದಿದೆ. ಭೂಸುಧಾರಣಾ ಕಾಯ್ದೆಯೂ ಮಾನವ ಹಕ್ಕುಗಳ ಉಲ್ಲಂಘನೆ.

ಕೃಷಿ ಕಾನೂನು ಜಾರಿ ಆದರೆ ಆಹಾರ ಭದ್ರತೆ ಇಲ್ಲದಾಗುತ್ತದೆ. ಕೃಷಿ ಸಂಸ್ಥೆಗಳ ಕಂಪನೀಕರಣ ಆಗಿ ರೈತ ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ರೈತರು ಬೆಳೆದ ಆಹಾರ ನಾಶ ಆಗುತ್ತದೆ. ಕಾರ್ಪೊರೇಟ್ ಕಂಪನಿಗಳು ಗೋದಾಮುಗಳಲ್ಲಿ ಆಹಾರವಸ್ತುಗಳನ್ನು ದಾಸ್ತಾನು ಮಾಡಿ ಆಹಾರದ ಕೊರತೆ ಕಾಡುವಂತೆ ಮಾಡುತ್ತವೆ. ಹಸಿವು ಎಲ್ಲರಿಗೂ ಆಗುತ್ತದೆ ಅಲ್ಲವೇ. ಜನರು ಹೆಚ್ಚಿನ ಬೆಲೆ ತೆತ್ತು ಆಹಾರ ವಸ್ತುಗಳನ್ನು ಖರೀದಿಸಲೇ ಬೇಕಾಗುತ್ತದೆ. ಯಾವುದೇ ರಾಜ್ಯದಲ್ಲಿ ಹಸಿವಿನಿಂದ ಸಾವು ಸಂಭವಿಸಿದರೆ ಅದಕ್ಕ ಸರ್ಕಾರವೇ ಹೊಣೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಈಗಿನ ಸರ್ಕಾರ ದಪ್ಪಚರ್ಮದ್ದು. ಹಾಗಾಗಿಯೇ ಶೇ 1ರಷ್ಟು ಜನರ ಹಿತಕ್ಕೋಸ್ಕರ 39 ಕೋಟಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ರೈತರು ಜೀವದ ಹಂಗು ತೊರೆದು ಹೋರಾಟ ಮಾಡುತ್ತಿರುವಾಗ ಅವರನ್ನು ಅವಮಾನ ಮಾಡುತ್ತಿರುವುದು ಕೂಡಾ ಮಾನವ ಹಕ್ಕುಗಳ ಉಲ್ಲಂಘನೆ.

ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ಪ್ರಾತಿನಿಧಿಕ ಚಿತ್ರ

ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ ಎಲ್ಲವೂ ಸರಿಯಾಗಿಯೇ ಇದೆಯಲ್ಲವೇ? ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಲ್ಲಿ ನಡೀತಿದೆ? ಎಲ್ಲಿದೆ ಜಾತಿ ಭೇದ? ಎಲ್ಲಿದೆ ಹಸಿವು ಎಂದು ಕೇಳುವವರು ಅಜ್ಞಾನಿಗಳು. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಅದನ್ನು ಸಮರ್ಥಿಸಿಕೊಳ್ಳುವವರು ಇದ್ದೇ ಇರುತ್ತಾರೆ. ಹತ್ರಾಸ್​ನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಸುಟ್ಟು ಹಾಕಿದಾಗ ಅದನ್ನು ಅಲ್ಲಿನ ಠಾಕೂರ್​ಗಳು ಸಮರ್ಥಿಸಿಕೊಂಡರು. ಈಗ ಗೋಹತ್ಯೆ ನಿಷೇಧ ಕಾನೂನು ತರುತ್ತಿದ್ದಾರೆ. ಆದರೆ ನಮ್ಮ ಮಕ್ಕಳನ್ನು ಕೊಂದಾಗ ಅದಕ್ಕಾಗಿ ಕಾಯ್ದೆ ತಂದಿದ್ದಾರಾ? ಅಖ್ಲಾಕ್​ನನ್ನು ಹೊಡೆದು ಸಾಯಿಸಿದ ಮೇಲೆ ಆತನ ಮನೆಯ ಫ್ರಿಡ್ಜ್​ನಲ್ಲಿದ್ದುದು ಗೋಮಾಂಸ ಅಲ್ಲ ಎಂಬುದು ಗೊತ್ತಾಯ್ತು. ಹಾಗಂತ ಅಖ್ಲಾಕ್​ನ ಪ್ರಾಣ ವಾಪಸ್ ಕೊಟ್ರಾ?

ಇಡೀ ದೇಶದಲ್ಲಿ ಧರ್ಮದ ಹೆಸರಲ್ಲಿ ಕೊಲೆಗಳು ಆಗುತ್ತಿವೆ. ಮಹಿಳೆಯರನ್ನು ಸಂಸ್ಕೃತಿ ಹೆಸರಲ್ಲಿ ಕಟ್ಟಿಹಾಕುತ್ತಿದ್ದೇವೆ. ಮೊದಲು ಮನುಷ್ಯ ಈ ಜಗತ್ತಿಗೆ ಬಂದ, ಅವನ ಜೊತೆಗೆಯೇ ಪ್ರೀತಿ ಬಂತು, ಅದಾದ ಮೇಲೆ ಧರ್ಮ ಇನ್ನೊಂದು-ಮತ್ತೊಂದು ಹುಟ್ಟಿದ್ದು. ಆದರೆ ಇಲ್ಲಿ ಲವ್ ಜಿಹಾದ್, ಮತಾಂತರ ನಿಷೇಧ ಕಾಯ್ದೆಗಳ ಮೂಲಕ ಪ್ರಭುತ್ವವು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ.

ಪ್ರೇಮ ಎಂಬುದು ತೀರಾ ವೈಯಕ್ತಿಕ ವಿಷಯ. ಅದರಲ್ಲಿ ಜಾತಿ ಧರ್ಮ ತಂದು ಜಾತಿ-ಜಾತಿಗಳ ನಡುವೆ ಕಚ್ಚಾಡುವಂತೆ ಮಾಡುತ್ತಿದ್ದಾರೆ. ಮದುವೆ-ಧರ್ಮದ ವಿಚಾರದಲ್ಲಿ ನಿಯಂತ್ರಣ ಮಾಡಲು ಇವರು ಯಾರು ಎಂಬುದು ನನ್ನ ಪ್ರಶ್ನೆ. ಲವ್ ಜಿಹಾದ್ ಅಂದರೆ ಏನು? ಅದಕ್ಕೆ ಸರಿಯಾದ ವ್ಯಾಖ್ಯಾನವಾಗಲೀ, ನಿರ್ವಚನವಾಗಲಿ ಇಲ್ಲ. ಮದುವೆ ವೈಯಕ್ತಿಕ. ಬಹುಸಂಸ್ಕೃತಿ ಇರುವ ಭಾರತ ದೇಶದಲ್ಲಿ ಜನರ ವೈಯಕ್ತಿಕ ಬದುಕಿನ ನಡುವೆ ಮೂಗು ತೂರಿಸಲು ಇವರು ಯಾರು? ಜನರನ್ನು ಎಮೋಷನಲ್ ಬ್ಲ್ಯಾಕ್​ಮೇಲ್ ಮಾಡಿ ಕಿತ್ತಾಡುವಂತೆ ಮಾಡುತ್ತಿರುವವರು ಯಾರು? ಪ್ರಭುತ್ವವೇ ಈಗ ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ನಿಜವಾಗಿ ಶಿಕ್ಷೆ ಆಗಬೇಕಾಗಿರುವುದು ಪ್ರಭುತ್ವಕ್ಕೆ.

ಇದನ್ನೂ ಓದಿ: ಗುಲಾಮಗಿರಿಯ ನಾನಾ ರೂಪ: ಸಿಗುವುದೇ ಆಧುನಿಕ ಗುಲಾಮಗಿರಿಯಿಂದ ಮುಕ್ತಿ

ಕೆ.ನೀಲಾ

ಕೆ.ನೀಲಾ ಪರಿಚಯ
ಸ್ತ್ರೀಪರ ಚಿಂತಕಿ, ಬರಹಗಾರ್ತಿ, ಹೋರಾಟಗಾರ್ತಿ ಕೆ.ನೀಲಾ ಅವರು 1966 ಆಗಸ್ಟ್ 1ರಂದು ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಜನಿಸಿದರು. ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಅನುಭವಗಳ ಕಥನ ‘ಬದುಕು ಬಂದೀಖಾನೆ’ ಎಂಬ ಕೃತಿ. ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕಥೆ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಅಕ್ಷರದವ್ವ ಸಾವಿತ್ರಿಬಾಯಿ ಪುಲೆ, ಜೆಎನ್​ಯು ಮೇಲೆ ದಾಳಿ ಭಾರತದ ಮೇಲೆ ದಾಳಿ ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. ನೆಲದ ಪಿಸಿಮಾತು, ನೆಲದ ನಂಟು, ಬಾಳ ಕೌದಿ ಅಂಕಣ ಬರಹಗಳು. ವರದಕ್ಷಿಣೆ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸೆ, ಬಾಲ್ಯ ವಿವಾಹ ಮೊದಲಾದವುಗಳ ವಿರುದ್ಧ ಹೋರಾಟ ನಡೆಸಿದವರು ಇವರು.

Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು

Published On - 4:53 pm, Thu, 10 December 20