ಧರ್ಮಸ್ಥಳಕ್ಕೆ ಅಷ್ಟೊಂದು ಜನರು ಹೋಗಲು ಏನು ಕಾರಣ?: ಇಲ್ಲಿನ ಹೊಯ್ಲು ಪದ್ದತಿ ಬಗ್ಗೆ ನಿಮಗೆ ಗೊತ್ತೇ?

|

Updated on: May 12, 2024 | 3:08 PM

ಬಂದರು ನಗರಿ ಮಂಗಳೂರಿನಿಂದ 60 ಕಿ.ಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಭೂಕೈಲಾಸ ಎಂದೇ ಪ್ರಖ್ಯಾತವಾಗದೆ. ಶ್ರೀ ಮಂಜುನಾಥನ ದರ್ಶನಕ್ಕೆ ವರ್ಷಕ್ಕೆ ಕೋಟ್ಯಾಂತರ ಭಕ್ತಾದಿಗಳು ಆಗಮನಿಸುತ್ತಾರೆ. ಇಷ್ಟೊಂದು ಜನರು ಇಲ್ಲಿದೆ ಬರಲು ಏನು ಕಾರಣ?. ಇಲ್ಲಿನ ವಿಶೇಷ ಹೊಯ್ಲು ಪದ್ದತೆ ಏನು?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಧರ್ಮಸ್ಥಳಕ್ಕೆ ಅಷ್ಟೊಂದು ಜನರು ಹೋಗಲು ಏನು ಕಾರಣ?: ಇಲ್ಲಿನ ಹೊಯ್ಲು ಪದ್ದತಿ ಬಗ್ಗೆ ನಿಮಗೆ ಗೊತ್ತೇ?
Dharmasthala
Follow us on

ಶ್ರೀ ಕ್ಷೇತ್ರ ಧರ್ಮಸ್ಥಳ, ಸದಾಚಾರ ಮತ್ತು ಧಾರ್ಮಿಕತೆಯ ನಾಡು. 800 ವರ್ಷಗಳಷ್ಟು ಹಳೆಯದಾದ ಇತಿಹಾಸವನ್ನು ಹೊಂದಿರುವ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಹೆಗ್ಗುರುತುಗಳಲ್ಲಿ ಒಂದಾಗಿದೆ. ನ್ಯಾಯ, ನೀತಿ, ಧರ್ಮಕ್ಕೆ ಹೆಸರು ಶ್ರೀ ಕ್ಷೇತ್ರ ಧರ್ಮಸ್ಥಳ. ”ಎದ್ದೇಳು ಮಂಜುನಾಥ, ಏಳು ಬೆಳಗಾಯಿತು.. ಧರ್ಮದೇವತೆಗಳು ನಿನ್ನ ದರುಶನಕೆ ಕಾದಿಹರು, ಅಣ್ಣಪ್ಪಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು” ಎಂಬ ಸುಪ್ರಭಾತದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯ ನಿತ್ಯಸೇವೆ ಆರಂಭವಾಗುತ್ತದೆ. ನೇತ್ರಾವತಿಯಲ್ಲಿ ಮಿಂದ ಜನರು ಸ್ವಾಮಿ ಶ್ರೀ ಮಂಜುನಾಥನ ದರುಶನಕ್ಕಾಗಿ ಸರತಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ವರ್ಷಕ್ಕೆ ಕೋಟ್ಯಾಂತರ ಭಕ್ತಾದಿಗಳು ಆಗಮನಿಸುತ್ತಾರೆ. ಇಷ್ಟೊಂದು ಜನರು ಇಲ್ಲಿದೆ ಬರಲು ಏನು ಕಾರಣ?. ಇಲ್ಲಿನ ವಿಶೇಷ ಹೊಯ್ಲು ಪದ್ದತೆ ಏನು?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಂದರು ನಗರಿ ಮಂಗಳೂರಿನಿಂದ 60 ಕಿ.ಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಭೂಕೈಲಾಸ ಎಂದೇ ಪ್ರಖ್ಯಾತವಾಗದೆ. ನೇತ್ರಾವತಿಯ ಮಡಿಲ ಘಟ್ಟಪ್ರದೇಶದ ಸುಂದರ ಮಡಲಲ್ಲಿ ಶಿವನೇ ನೆಲೆಸಿಹ ಪುಣ್ಯಕ್ಷೇತ್ರ. ಧರ್ಮಸ್ಥಳ, ಧರ್ಮದ ನೆಲೆವೀಡು. ಈ ದೇವಾಲಯದಲ್ಲಿ ಈಶ್ವರನ ಪೂಜಿಸುವ ಅರ್ಚಕರು ವೈಷ್ಣವರು, ದೇಗುಲದ ಧರ್ಮಾಕಾರಿಗಳು ಜೈನ ಧರ್ಮೀಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು.

ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಇದೊಂದು ನ್ಯಾಯಪೀಠ, ಸಾಹಿತ್ಯ ಸರಸ್ವತಿಯ ನೆಲೆವೀಡು, ಅನ್ನಪೂಣೆಯ (ನಿತ್ಯ ದಾಸೋಹದ) ಸಿರಿನಾಡು, ಒಟ್ಟಿನಲ್ಲಿದು ಧರ್ಮಕರ್ಮಗಳ ಸಂಗಮ ಸ್ಥಳ. ಈ ಕ್ಷೇತ್ರಕ್ಕೆ ಒಂದು ಇತಿಹಾಸವಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಇತಿಹಾಸವೇನು?

ಈ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ. ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ-ಪತಿ ವಾಸವಾಗಿದ್ದರು. ಒಮ್ಮೆ ಇವರ ಮನೆಗೆ 4 ಮಂದಿ ಅತಿಥಿಗಳು ಬಂದರು. ನೇಮನಿಷ್ಠೆಯಿದ ದಂಪತಿ ಅಥಿತಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ನಾವೆಲ್ಲರೂ ಈ ಮನೆಯಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಆಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟುಕೊಟ್ಟರು.

ಕಾಳರಾಹು, ಕಾಳಕಾಯ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಆ ಮನೆಯಲ್ಲಿ ನೆಲೆನಿಂತರು. ಈ ದೈವಗಳ ಆಜ್ಞೆಯಂತೆ ಪೆರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಅರ್ಚಕರು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಧರ್ಮದೇವತೆಗಳೂ ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ ಮಂಜುನಾಥನ ಲಿಂಗ ಬರುವುದರೊಳಗೆ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಆ ಸ್ಥಳದಲ್ಲಿ ಜನಜನಿತ.

ಅಂದಿನಿಂದ ಅಲ್ಲಿ ಧರ್ಮ ನೆಲೆ ನಿಂತಿದ್ದಾರೆ. ತಾವೂ ಮಂಜುನಾಥನ ಪೂಜಿಸುತ್ತಾ, ಧರ್ಮರಕ್ಷಣೆಗೆ ತೊಡಗಿದ್ದಾರೆ. ಇಂದೂ ಇಲ್ಲಿ ಧರ್ಮಕಾರ್ಯಗಳು ನಿರಂತರವಾಗಿ ಯಾವ ವಿಘ್ನವೂ ಇಲ್ಲದೆ ಜರುಗುತ್ತವೆ. ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ ಮಹೋತ್ಸವ, ಸರ್ವಧರ್ಮ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಧರ್ಮಸ್ಥಳದ ದೇವಾಲಯದ ಆಡಳಿತದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ನಿರುದ್ಯೋಗಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ರುಡ್‌ಸೆಟ್ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಅಲ್ಲಿ ನಿರುದ್ಯೋಗಿ ಯುವಕರಿಗೆ ವೃತ್ತಿ ತರಬೇತಿ ನೀಡಿ ಆತ್ಮವಿಶ್ವಾಸ ತುಂಬಲಾಗುತ್ತದೆ.

1933ರಿಂದ ಇಲ್ಲಿ ಸರ್ವಧರ್ಮ ಸಾಹಿತ್ಯ ಸಮ್ಮೇಳನವೂ ಜರುಗುತ್ತಾ ಬಂದಿದೆ. ಸುಮಾರು 60 ವರ್ಷಗಳ ಹಿಂದೆಯೇ ಸರ್ವಧರ್ಮ ಸಮ್ಮೇಳನ ನಡೆಸಿದ ಕೀರ್ತಿ ಧರ್ಮಸ್ಥಳದ್ದು. ಇದರ ಹಿಂದಿನ ಶಕ್ತಿ ಅಂದಿನ ಧರ್ಮಾಕಾರಿಗಳಾದ ಮಂಜಯ್ಯ ಹೆಗ್ಗಡೆ ಅವರು. ವೀರೇಂದ್ರ ಹೆಗ್ಗಡೆ ಅವರು ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಧರ್ಮಸ್ಥಕ್ಕೆ ಇಷ್ಟೊಂದು ಜನ ಬರಲು ಕಾರಣವೇನು?

ಧರ್ಮಸ್ಥಕ್ಕೆ ಇಷ್ಟೊಂದು ಜನ ಬರಲು ಕಾರಣವೇನು?, ಈ ಬಗ್ಗೆ ಸ್ಥಳೀಯರ ಬಳಿ ಕೇಳಿದಾಗ ಟಿವಿ9 ಆ್ಯಪ್ ಜೊತೆ ಮಾತನಾಡಿದ ಸ್ನೇಹಾ ಉಜಿರೆ, ”ದೇವಾಲಯದ ಆವರಣದಲ್ಲಿ ಅನೇಕ ಉತ್ಸವಗಳು ಮತ್ತು ವಾರ್ಷಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ಇದು ಕೇವಲ ದೇಶದ ಮಾತ್ರವಲ್ಲದೆ ವಿದೇಶಿ ಯಾತ್ರಾರ್ಥಿಗಳನ್ನು ಕೂಡ ಆಕರ್ಷಿಸುತ್ತವೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಯಾತ್ರಾರ್ಥಿಗಳನ್ನು ಜಾತಿ, ಧರ್ಮ, ಸಂಸ್ಕೃತಿ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಗೌರವಾನ್ವಿತ ಅತಿಥಿಯಂತೆ ನೋಡಿಕೊಳ್ಳಲಾಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯು ಹಿಂದೆ ಮಾಡಿದ ಎಲ್ಲ ಪ್ರಮಾಣಗಳನ್ನು (ದೋಷ ಪರಿಹಾರ) ತೆಗೆದುಹಾಕುತ್ತಾನೆ ಎಂಬ ನಂಬಿಕೆ ಇದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತತೆಯು ದಣಿದ ಜನರ ಮನಸ್ಸಿಗೆ ಶಾಂತವಾದ ಅನುಭವವನ್ನು ನೀಡುತ್ತದೆ,” ಹೀಗಾಗಿ ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂಬುದು ಸ್ನೇಹಾ ಅವರ ಮಾತು.

ಪೆರ್ಗಡೆ ದಂಪತಿ 800 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅತಿಥಿ ಸತ್ಕಾರ ಇಂದೂ ಇಲ್ಲಿ ಮುಂದುವರಿದಿದೆ. ಇಲ್ಲಿಗೆ ಬರುವ ಎಲ್ಲ ಭಕ್ತರೂ ಒಂದಲ್ಲಾ ಒಂದು ರೀತಿಯಲ್ಲಿ ಅತಿಥಿಗಳೇ. ನಿತ್ಯ ಇಲ್ಲಿ ಕನಿಷ್ಠ ಹತ್ತಾರು ಸಾವಿರಾರು ಭಕ್ತರಿಗೆ ಉಚಿತವಾಗಿ ಅನ್ನಸಂತರ್ಪಣೆ ನಡೆಯುತ್ತದೆ. ಅನ್ನದಾನದ ಜೊತೆಗೆ ವಿದ್ಯಾದಾನ, ವಸ್ತ್ರದಾನ, ಅಭಯದಾನ ಹಾಗೂ ಔಷಧದಾನವೂ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಅತ್ಯಾಧುನಿಕ ಸಲಕರಣೆಗಳಿಂದ ಸಜ್ಜಾದ ಆಸ್ಪತ್ರೆ ನಿರ್ಮಿಸಿ, ದೀನದಲಿತರಾದಿಯಾಗಿ ಸರ್ವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. 1972 ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.

ಧರ್ಮಸ್ಥಳದಲ್ಲಿ ಹೊಯ್ಲು ಪದ್ದತಿ – “ಮಾತು ಬಿಡ ಮಂಜುನಾಥ”

ಧರ್ಮ ದೇವತೆಗಳು ನೆಲೆಸಿರುವ ಈ ತಾಣ ಒಂದು ರೀತಿಯಲ್ಲಿ ನ್ಯಾಯಾಲಯ ಕೂಡ ಹೌದು. ಕೋರ್ಟ್ ಕಚೇರಿಗಳಲ್ಲಿ ಪರಿಹಾರ ಕಾಣದ ಎಷ್ಟೋ ಪ್ರಕರಣಗಳಿಗೆ ಶ್ರೀಕ್ಷೇತ್ರದಲ್ಲಿ ಪರಿಹಾರ ಸಿಕ್ಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮಾತು ತಪ್ಪುವುದಿಲ್ಲ, ಆದ್ದರಿಂದ “ಮಾತು ಬಿಡ ಮಂಜುನಾಥ” ಎಂಬ ಮಾತು ಕೂಡ ಚಾಲ್ತಿಯಲ್ಲಿದೆ. ಕ್ಷೇತ್ರದ ಚತುರ್ವಿಧ ದಾನ ಪರಂಪರೆಯಲ್ಲಿ ಅಭಯ ದಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಅದರಲ್ಲೂ ಯಾರಿಗಾದರೂ ಕಷ್ಟವಾದಾಗ ನ್ಯಾಯಕ್ಕಾಗಿ ದೇವರಿಗೆ ಮೊರೆ ಇಡುವ ಪದ್ಧತಿಯಿದ್ದು, ಇದನ್ನು ಹೊಯ್ಲು ಎನ್ನಲಾಗುತ್ತದೆ. ಅಂದರೆ ನ್ಯಾಯಕ್ಕಾಗಿ ಮೊರೆ ಇಡುವುದು, ದೇವರಿಗೆ ದೂರು ನೀಡುವುದು ಎಂಬ ಅರ್ಥ.

ಜಾಗದ ವಿಚಾರದಲ್ಲಿ ಹಾಗೂ ಹಣಕಾಸು ವಿಚಾರದಲ್ಲಿ ಮೋಸ ಮಾಡಿರುವ ಶಂಕೆ ಎದುರಾದಾಗ ದೂರು ನೀಡಲಾಗುತ್ತಿತ್ತು. ದೂರು ನೀಡಿದವರನ್ನು ವಾದಿಗಳೆಂದೂ, ಯಾರ ವಿರುದ್ಧ ದೂರು ನೀಡಿದ್ದಾರೋ ಅವರನ್ನು ಪ್ರತಿವಾದಿಗಳೆಂದೂ ಪರಿಗಣಿಸಲಾಗುತ್ತದೆ. ಕ್ಷೇತ್ರದ ಹೊಯ್ಲು ವಿಭಾಗದಲ್ಲಿ, ಹಣಕಾಸಿನ ವಿಚಾರ ಕುರಿತ ಪ್ರಕರಣಗಳ ಲಿಖಿತ ದಾಖಲೀಕರಣ ಮಾಡಲಾಗುತ್ತದೆ. ನಂತರ ವಾದಿಗಳಿಗೆ ಹಾಗೂ ಪ್ರತಿವಾದಿಗಳಿಗೆ ಪತ್ರ ಬರೆದು, ಪತ್ರದೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಹೆಗ್ಗಡೆಯವರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗುತ್ತದೆ. ಹೆಗ್ಗಡೆಯವರು ತಮ್ಮ ಪೀಠದಲ್ಲಿ ಅಥವಾ ಹೆಗ್ಗಡೆಯವರ ಅನುಪಸ್ಥಿತಿಯಲ್ಲಿ ಹೆಗ್ಗಡೆಯವರ ಪ್ರತಿನಿಧಿಗಳಾದ ನಾಲ್ವಿಕೆಯವರು ವಾದ ಹಾಗೂ ಪ್ರತಿವಾದಗಳನ್ನು ಆಲಿಸಿ ನ್ಯಾಯ ತೀರ್ಮಾನ ಮಾಡಿ ತೀರ್ಪು ನೀಡುತ್ತಾರೆ.

ಈ ತೀರ್ಪಿಗೆ ವಾದಿಗಳು ಹಾಗೂ ಪ್ರತಿ ವಾದಿಗಳು ಬದ್ಧರಾಗಿರಬೇಕು. ಹೊಯಿಲು ದಾಖಲಾಗಿ, ನ್ಯಾಯ ತೀರ್ಮಾನ ನಡೆಯುವವರೆಗೆ ವಾದಿಗಳು ಮತ್ತು ಪ್ರತಿವಾದಿಗಳು ಕ್ಷೇತ್ರದ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನ್ಯಾಯಸಮ್ಮತವಲ್ಲದ ಪ್ರಾರ್ಥನೆಯನ್ನು ದ್ವೇಷ ಸಾಧನೆ ಅಥವಾ ಪ್ರತ್ಯಾರೋಪಕ್ಕೆ ಹೊಯ್ಲು ನೀಡಿದಲ್ಲಿ ತಪ್ಪು ಮಾಡಿದವರಿಗೆ ಸಂಕಷ್ಟ ಎದುರಾದ ಸಂದರ್ಭಗಳೂ ಇವೆ.

”ಸಾಮಾನ್ಯವಾಗಿ ಹೊಯ್ಲು ಎಂದರೆ ಪೂರ್ವಜರು ತಮ್ಮ ನಂತರ ಯಾರಿಗೆ ಆಸ್ತಿ ಕೊಡೊಬೇಕು ಎಂಬುದನ್ನು ತಾವು ಬದುಕಿರುವಾಗಲೇ ಬರೆದಿಡುವ ಪದ್ಧತಿ. ಅವರು ಕಾಲಾಮಾನವಾದ ಬಳಿಕ ಯಾರಿಗೆ ಆ ಆಸ್ತಿಯನ್ನ ಬರೆದಿಡುತ್ತಾರೊ ಅವರಿಗೆ ಸೇರುತ್ತದೆ. ಇಂತಹ ಸಂದರ್ಭದಲ್ಲಿ ಜಾಗದ ವಿಚಾರದಲ್ಲಿ ಏನಾದರೂ ತಕರಾರು ಬಂದರೆ ವಕೀಲರ ಮನೆ ಬಾಗಿಲು, ಕೋರ್ಟ್‌ ಕಛೇರಿಗೆ ಹೋಗುವ ಬದಲಿಗೆ ಧರ್ಮಸ್ಥಳದ ಮೊರೆ ಹೋಗುತ್ತಾರೆ. ಇಲ್ಲಿ ಒಂದು ನ್ಯಾಯ ನೀಡುವ ಪರಂಪರೆ ಹಿಂದಿನಿಂದಲೂ ಬೆಳದುಕೊಂಡು ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮಾತು ತಪ್ಪುವುದಿಲ್ಲ ಎಂಬ ನಂಬಿಕೆ. ಇದಕ್ಕಾಗಿ ವಾದಿಗಳಿಗೆ ಹಾಗೂ ಪ್ರತಿವಾದಿಗಳಿಗೆ ಪತ್ರದ ಮೂಲಕ ಸಮಸ್ಯೆಯನ್ನು ಬರೆದು, ಪತ್ರದೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಹೆಗ್ಗಡೆಯವರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುತ್ತಾರೆ,”.

– ಪುಷ್ಪಲತಾ ಜೈನ್, ಧರ್ಮಸ್ಥಳ ನಿವಾಸಿ.