ಈ ಜಾತ್ರೆಯಲ್ಲಿ ಬಳೆ ಸದ್ದು ಕೇಳುವಂತಿಲ್ಲ.. ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ No Entry

| Updated By: ಸಾಧು ಶ್ರೀನಾಥ್​

Updated on: Dec 02, 2020 | 5:07 PM

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಮುರಘಾ ಮಠದ ಡಾ. ಶಿವಮೂರ್ತಿ ಮುರಘಾ ಶರಣರು ಮಹಿಳೆಯನ್ನ ಮಹೇಶ್ವರ ಕ್ಷೇತ್ರಕ್ಕೆ ಕರೆದುಕೊಂಡು ಹೋಗಲು ನಿಶ್ಚಯಿಸಿದ್ದರು. ಆದರೆ ಆಗ ಊರಿನವರಿಂದ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಮೇಲಾಗಿ ಯಾವುದೇ ಮಹಿಳೆಯರೇ ಹಿಂದೇಟು ಹಾಕಿದ ಕಾರಣ ಅವರ ಪ್ರಯತ್ನ ಕೈಗೂಡಲಿಲ್ಲ.

ಈ ಜಾತ್ರೆಯಲ್ಲಿ ಬಳೆ ಸದ್ದು ಕೇಳುವಂತಿಲ್ಲ.. ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ No Entry
ಮಹೇಶ್ವರ ಸ್ವಾಮಿಯ ಭಕ್ತರು
Follow us on

ದಾವಣಗೆರೆ: ಸಾಧಾರಣವಾಗಿ ಜಾತ್ರೆ ಎಂದ ಕೂಡಲೇ ಗೌಜು ಗದ್ದಲ, ಸಾಲು ಸಾಲು ಅಂಗಡಿಗಳು, ಹೆಣ್ಣು ಮಕ್ಕಳನ್ನು ಸೆಳೆಯುವ ಬಳೆ, ಕಿವಿಯೋಲೆ, ಸರ ಇಂತಹವುಗಳೇ ನೆನಪಾಗುತ್ತವೆ. ಜಾತ್ರೆ, ಸಂತೆ, ಹಬ್ಬ, ಸಂಭ್ರಮಗಳಲ್ಲಿ ಹೆಣ್ಣುಮಕ್ಕಳದ್ದೇ ಮೇಲುಗೈ. ಆದರೆ, ಇಲ್ಲೊಂದು ವಿಚಿತ್ರ ಜಾತ್ರೆಯಿದೆ. ಇಲ್ಲಿ ಬಳೆ ಸದ್ದು ಕೇಳುವಂತೆಯೇ ಇಲ್ಲ. ಇಲ್ಲಿ ಹೆಂಗಸರಿಗೆ ಪ್ರವೇಶ ನಿಷಿದ್ಧ. ಹಾಗಾಗಿ ಈ ಜಾತ್ರೆಗೆ ಗಂಡಸರ ಜಾತ್ರೆ ಎಂಬ ಹೆಸರೂ ಇದೆ.

ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ
ಚಳಿಗಾಲ ಆರಂಭವಾಗುತ್ತಿದ್ದಂತೆಯೇ ದಾವಣಗೆರೆ ಜಿಲ್ಲೆಯಲ್ಲಿ ಮಹೇಶ್ವರ ಜಾತ್ರೆಯ ಸಂಭ್ರಮ. ತಾವರಿಕೆರೆ, ಜಗಳೂರು, ಬಸಾಪೂರ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 17ಕ್ಕೂ ಹೆಚ್ಚು ಕಡೆ ಮಹೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ.

ದೇವರ ಮೂರ್ತಿ

ಉಗ್ರ ಸ್ವರೂಪಿ ಮಹೇಶ್ವರ ಸ್ವಾಮಿಯನ್ನು ಕಂಡರೆ ಭಯ, ಭಕ್ತಿ
ಗ್ರಾಮಗಳಿಂದ ಸುಮಾರು ಎರಡು ಕಿ.ಮೀ ಅಂತರದಲ್ಲಿರುವ ಮಹೇಶ್ವರ ಸ್ವಾಮಿಯನ್ನು ಉಗ್ರ ಸ್ವರೂಪಿ ಎಂದೇ ಜನ ನಂಬಿದ್ದಾರೆ. ಭಕ್ತರಿಂದ ಸಣ್ಣ ಪ್ರಮಾದವಾದರೂ ದೇವರು ಶಿಕ್ಷೆ ನೀಡುವುದು ಖಚಿತವಂತೆ. ಹೀಗಾಗಿ ಸುತ್ತಲಿನ ಗ್ರಾಮಗಳ ಜನರು ಇಲ್ಲಿ ಕಟ್ಟು ನಿಟ್ಟಾಗಿ ಬಂದು ಜಾತ್ರೆಯ ದಿನ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಈ ಸಂಪ್ರದಾಯವನ್ನು ಕಳೆದ 400 ವರ್ಷಗಳಿಂದ ಚಾಚೂತಪ್ಪದೇ ನಡೆಸಿಕೊಂಡು ಬರಲಾಗಿದೆ.

ಪುರುಷರಿಗೆ ಮಾತ್ರ ಪ್ರವೇಶ

ಮಹಿಳೆಯರು ಅಪ್ಪಿತಪ್ಪಿಯೂ ಇತ್ತ ಸುಳಿಯುವಂತಿಲ್ಲ
ಆದ್ರೆ ಈ ಜಾತ್ರೆಗೆ ಮಹಿಳೆಯರಾಗಲೀ ಹೆಣ್ಣು ಮಕ್ಕಳಾಗಲೀ ಬರುವಂತಿಲ್ಲ. ಬರೀ ಗಂಡಸರೇ ಸೇರಿ ಆಚರಿಸುವ ಈ ಜಾತ್ರೆಗೆ ಗ್ರಾಮದಲ್ಲಿರುವ ಪ್ರತಿ ಮನೆಯ ಹಿರಿಮಗನೂ ಹಾಜರಾಗಲೇಬೇಕು ಎಂಬ ಅಲಿಖಿತ ನಿಯಮವಿದೆ. ಇಲ್ಲಿ ಎಷ್ಟೇ ಜನ ಭಕ್ತರು ಬಂದರೂ ಊಟದ ವ್ಯವಸ್ಥೇ ಮಾಡಲಾಗುತ್ತದೆ. ಜೊತೆಗೆ ಇಲ್ಲಿಗೆ ಬಂದವರು ಬಾಳೆಹಣ್ಣಿನ ಪ್ರಸಾದ ಸ್ವೀಕರಿಸಿ, ವಿಭೂತಿ ಧರಿಸಿಯೇ ಹೋಗಬೇಕು.

ಕಾರಣ ಗೊತ್ತಿಲ್ಲ ಆದ್ರೂ ಪಾಲನೆ ತಪ್ಪಿಲ್ಲ
ಬಹಳ ಅದ್ಧೂರಿಯಾಗಿ ನಡೆಯುವ ಜಾತ್ರೆಗೆ ಮಹಿಳೆಯರಿಗೆ ಏಕೆ ಪ್ರವೇಶವಿಲ್ಲ ಎನ್ನುವುದಕ್ಕೆ ಮಾತ್ರ ಯಾರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಇಲ್ಲಿಯ ತನಕ ಊರಿನ ಯಾವ ಮಹಿಳೆಯರೂ ಸ್ವ ಇಚ್ಛೆಯಿಂದ ಜಾತ್ರೆಗೆ ತೆರಳಲು ಮನಸ್ಸು ಮಾಡಿಲ್ಲವಂತೆ.

ಭಕ್ತರಿಗೆ ಭೋಜನ ವ್ಯವಸ್ಥೆ

ಮುರುಘಾ ಮಠದ ಸ್ವಾಮಿಗಳ ಪ್ರಯತ್ನಕ್ಕೆ ವಿರೋಧ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಮುರಘಾ ಮಠದ ಡಾ. ಶಿವಮೂರ್ತಿ ಮುರಘಾ ಶರಣರು ಮಹಿಳೆಯನ್ನ ಮಹೇಶ್ವರ ಕ್ಷೇತ್ರಕ್ಕೆ ಕರೆದುಕೊಂಡು ಹೋಗಲು ನಿಶ್ಚಯಿಸಿದ್ದರು. ಆದರೆ ಆಗ ಊರಿನವರಿಂದ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಮೇಲಾಗಿ ಯಾವುದೇ ಮಹಿಳೆಯರೇ ಹಿಂದೇಟು ಹಾಕಿದ ಕಾರಣ ಅವರ ಪ್ರಯತ್ನ ಕೈಗೂಡಲಿಲ್ಲ.

ಪ್ರಸಾದ ಸ್ವೀಕಾರ

ಕಾಲ ಮುಂದುವರೆದರೂ ನಂಬಿಕೆ ಮಾತ್ರ ಬದಲಾಗಿಲ್ಲ
ಈ ವಿಚಿತ್ರ ನಂಬಿಕೆಯ ಕುರಿತು ಚಿಂತಕರು, ಸಂಶೋಧನಾಕಾರರು ಬೆಳಕು ಚೆಲ್ಲಬೇಕಿದೆ. ಜಾತ್ರೆಯ ಕುರಿತಾಗಲೀ, ದೇವರ ಬಗ್ಗೆಯಾಗಲೀ ಮಾತನಾಡಿದರೆ ಕೆಡುಕಾಗುತ್ತದೆ ಎಂಬ ಭಯ ಇಂದಿಗೂ ಮಹಿಳೆಯರ ಮನಸ್ಸಿನಲ್ಲಿದೆ. ಕಾಲ ಇಷ್ಟು ಮುಂದುವರೆದ ಮೇಲೂ ಇಂತಹ ನಂಬಿಕೆಗಳು ಗಟ್ಟಿಯಾಗಿ ಉಳಿದುಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.
-ಬಸವರಾಜ್ ದೊಡ್ಮನಿ