ಹಾವೇರಿ: ಬರ್ತ್ ಡೇ ಸಂಭ್ರಮದಲ್ಲಿ ಸೇರಿರುವ ಜನ ಸಾಗರ. 25 ಕೆಜಿ ತೂಕದ ಬೃಹದಾಕಾರದ ಕೇಕ್. ಅಲಂಕಾರಗೊಂಡು ಕಂಗೊಳಿಸುತ್ತಿರುವ ಬರ್ಡೇ ಬಾಯ್. ಮಿರ ಮಿರ ಮಿಂಚಿವ ಬರ್ಡೇ ಬಾಯ್ ತಲೆ ಮೇಲೆ ಆಗಸದೆತ್ತರಕ್ಕೆ ಕಾಣೋ ಬಲೂನ್‌ಗಳು. ಹಾವೇರಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಂಡುಬಂದ ದೃಶ್ಯಗಳಿವು.
ಇಷ್ಟೊಂದು ಅದ್ಧೂರಿಯಾಗಿ ಬರ್ಡೇ ಆಗ್ತಾ ಇರೋದು ಅನ್ನದಾತನದ್ದು. ಅಂದ್ರೆ ಹೋರಿಯ್ದು. ಅಂಬೇಡ್ಕರ ನಗರದ ಸಂತೋಷ್ ಕಳೆದೊಂದು ವರ್ಷದ ಹಿಂದೆ ತಮಿಳುನಾಡಿನಿಂದ ಈ ಹೋರಿಯನ್ನ ಖರೀದಿಸಿದ್ರು. ಹೋರಿಗೆ ಅನ್ನದಾತ ಎಂಬ ನಾಮಕರಣ ಮಾಡಿ ಹೋರಿ ಸ್ಪರ್ಧೆಗಳಲ್ಲಿ ಭಾಗವಹಿಸ್ತಿದ್ರು. ಅನ್ನದಾತ ಭಾಗವಹಿಸಿದ ನಾಲ್ಕೂ ಸ್ಪರ್ಧೆಗಳಲ್ಲಿ ಮಿಂಚಿನ ಓಟ ಓಡಿ ಬಂಗಾರದ ಆಭರಣ ಹಾಗೂ ಬೈಕ್‌ನ್ನ ಬಹುಮಾನ ಗೆದ್ದುಕೊಂಡು ಬಂದಿದ್ದಾನೆ. ಅನ್ನದಾತ ಹೆಸರಿನ ಈ ಹೋರಿಯನ್ನ ಸಂತೋಷ್ ಮನೆಗೆ ತಂದು ಬರೋಬ್ಬರಿ ಈಗ ಒಂದು ವರ್ಷವಾಗಿದ್ರಿಂದ ಹೋರಿಯ ಬರ್ತ್ ಡೇ ಆಚರಿಸಿದ್ರು.
ಹೋರಿಯ ಭರ್ಜರಿ ಬರ್ತ್ ಡೇ:
ಇನ್ನು ಬರ್ತ್ ಡೇಗಾಗಿ ಹೋರಿಯನ್ನ ಭರ್ಜರಿಯಾಗಿ ಅಲಂಕಾರ ಮಾಡಿದ್ರು. ಹೋರಿಗೆ ಜೂಲಾ ಹಾಕಿ, ಕೊಬ್ಬರಿ ಹಾರ ಕಟ್ಟಿ, ಆಗಸದೆತ್ತರಕ್ಕೆ ಕೋಡಿಗೆ ಬಲೂನ ಕಟ್ಟಿದ್ರು. ಮನೆಯ ಮುಂದೆ ಥೇಟ್ ಮದುವೆ ಮನೆಯಂತೆ ಭರ್ಜರಿ ಪೆಂಡಾಲ್ ಹಾಕಿಸಿ, ಬಾಜಾ ಭಜಂತ್ರಿಗಳನ್ನ ತರಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಹೋರಿ ಅಭಿಮಾನಿಗಳು ಬಾಜಾ ಭಜಂತ್ರಿಗಳ ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ರು. ಭರ್ಜರಿಯಾಗಿ ಅಲಂಕಾರ ಮಾಡಿದ್ದ ಹೋರಿ ಮುಂದೆ ಇಪ್ಪತ್ತೈದು ಕೆ.ಜಿ ತೂಕದ ಕೇಕ್ ಇಟ್ಟು, ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಲಾಯ್ತು. ಕೇಕ್ ಕತ್ತರಿಸಿ ಅನ್ನದಾತನಿಗೆ ಮೊದಲು ತಿನ್ನಿಸಲಾಯ್ತು.
ಅಷ್ಟೇ ಅಲ್ಲ ಬಂದವರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಒಟ್ನಲ್ಲಿ ಪ್ರೀತಿಯಿಂದ ಸಾಕಿರೋ ಕೊಬ್ಬರಿ ಹೋರಿಗೆ ಮನುಷ್ಯರ ಹುಟ್ಟು ಹಬ್ಬ ಮೀರಿಸುವಂತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದು, ಹೋರಿ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.