‘ಕಲರ್ಫುಲ್’ ಭತ್ತ! 5 ಎಕರೆ ಗದ್ದೆಯಲ್ಲಿ ಲಕ್ಷಾಂತರ ಹಣ ಗಳಿಸಿದ ರೈತನ ಸಾಧನೆ ಇದು
ಹೆಚ್ಚು ನೀರಾವರಿ ಇರುವ ಹರಿಹರ ತಾಲ್ಲೂಕಿನ ಕುಂಬಳೂರಿನ ತನ್ನ ಗದ್ದೆಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಆಂಜನೇಯ ಜಪಾನ್ ದೇಶದ ಪ್ರಸಿದ್ಧ ಪ್ಯಾಡಿ ಆರ್ಟ್ Paddy Art ಕಲೆಯನ್ನು ಮಾಡಿ ಗೆದ್ದಿದ್ದಾರೆ.
ದಾವಣಗೆರೆ: ರೈತ ಬಣ್ಣದ ಬದುಕಿಗೆ ಹಂಬಲಿಸುವವನಲ್ಲ. ಅವನಿಗೆ ಕೆಸರು ಹಾಗೂ ಹಸಿರೇ ಸರ್ವಸ್ವ. ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತನ್ನು ಯಾರೇ ಮರೆತರೂ ರೈತ ಮಾತ್ರ ಮರೆಯಲಾರ. ಆದರೆ, ಇಲ್ಲೊಬ್ಬ ರೈತ ತನ್ನ ಹೊಲದಲ್ಲಿ ಬಣ್ಣದಾಟವಾಡಿದ್ದಾನೆ. ನೇಗಿಲು ಹಿಡಿವ ಕೈ, ಕಲಾತ್ಮಕತೆಯನ್ನು ಸೃಷ್ಟಿಸಲೂ ಸೈ ಎಂದು ತೋರಿಸಿಕೊಟ್ಟಿದ್ದಾನೆ.
ಹೊಲದಲ್ಲಿ ಹೋಳಿ ಹಬ್ಬ ಅರೆರೆ! ಹಾಗಂತ ಆತ ಗದ್ದೆಯಲ್ಲಿ ಹೋಳಿ ಆಡಿರಬಹುದು ಅಂತಲೋ, ಉಳುಮೆಯನ್ನು ಬಿಟ್ಟು ಚಿತ್ರ ಬಿಡಿಸಿರಬಹುದು ಅಂತಲೋ ಭಾವಿಸಬೇಡಿ. ಈ ರೈತ ತಾನು ಬೆಳೆವ ಭತ್ತದಲ್ಲೇ ಬಣ್ಣದ ಪ್ರಯೋಗ ನಡೆಸಿದ್ದಾನೆ. ಜಪಾನ್ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಪ್ಯಾಡಿ ಆರ್ಟ್ Paddy Art ಎಂಬ ವಿಶಿಷ್ಟ ಬಗೆಯ ಕಲೆಯನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕುಂಬಳೂರಿನ ಗದ್ದೆಯಲ್ಲಿ ಮಾಡಿ ಗೆದ್ದಿರುವ ಈ ರೈತನ ಹೆಸರು ಆಂಜನೇಯ.
ಒಂದಲ್ಲಾ, ಎರಡಲ್ಲಾ 106 ಬಗೆಯ ಭತ್ತ ಏನೇ ಮಾಡಿದರೂ ವಿಭಿನ್ನವಾಗಿ ಮಾಡಬೇಕು ಎನ್ನುವ ಆಂಜನೇಯ ತನ್ನ ಗದ್ದೆಯಲ್ಲಿ ಸುಮಾರು 106 ಬಗೆಯ ಭತ್ತದ ತಳಿಗಳನ್ನು ಬೆಳೆದಿದ್ದಾನೆ. ಅದರಲ್ಲಿ ಹಲವು ಬಗೆಯ ಬಣ್ಣದ ತಳಿಗಳಿದ್ದು ಭಾರತ ಮೂಲದ್ದೇ ಆದ 13 ವಿವಿಧ ಬಣ್ಣದ ಭತ್ತಗಳನ್ನು ಈತನ ಹೊಲದಲ್ಲಿ ಕಾಣಬಹುದು. ಜೊತೆಗೆ, ಹೊಲದಲ್ಲಿ ಭತ್ತವನ್ನು ಬೇಕಾಬಿಟ್ಟಿ ಬೆಳೆಯದೆ ಕಲಾತ್ಮಕವಾಗಿ ಬೆಳೆದಿರುವುದು ಈತನ ಹೆಚ್ಚುಗಾರಿಕೆ.
5 ಎಕರೆ ಜಮೀನಿನಿಂದ ಲಕ್ಷಾಂತರ ರೂಪಾಯಿ ಆದಾಯ ಈತ ಬೆಳೆಯುವ ಭತ್ತದಲ್ಲಿ ಸಕ್ಕರೆ ಕಾಯಿಲೆಯವರಿಗೆ, ಮಕ್ಕಳಿಗೆ, ವೃದ್ಧರಿಗೆಂದೇ ಕೆಲವು ವಿಶಿಷ್ಟ ತಳಿಗಳಿವೆ. ಹೀಗೆ ವಿವಿಧ ಬಗೆಯ ಭತ್ತ ಬೆಳೆಯುವ ಈತ ಪ್ರತಿ ಶನಿವಾರ ದಾವಣಗೆರೆಗೆ ಬಂದು ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡುವುದನ್ನು ರೂಢಿಸಿಕೊಂಡಿದ್ದಾನೆ. ಐದು ಎಕರೆ ಜಮೀನಿನಿಂದ ಲಕ್ಷಾಂತರ ರೂಪಾಯಿ ಆದಾಯ ತೆಗೆಯುವ ಈ ಚಾಣಾಕ್ಷ ಯುವ ರೈತನನ್ನು ಗುರುತಿಸಿ ದಾವಣಗೆರೆ ಜಿಲ್ಲಾಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಗದ್ದೆಯಲ್ಲಿ ಚಿತ್ರಸಂತೆ ಮೂಡಿಸುವ ಆಂಜನೇಯ ಪ್ಯಾಡಿ ಆರ್ಟ್ನಿಂದಲೇ ಹೆಚ್ಚು ಸುದ್ದಿಯಲ್ಲಿರುವ ಆಂಜನೇಯ, ನಾಟಿ ಮಾಡುವ ಮುನ್ನವೇ ತನಗೆ ಬೇಕಾದ ಚಿತ್ರಗಳು ಬೆಳೆಯಲ್ಲಿ ಮೂಡಬೇಕು ಎಂಬ ಕಾರಣಕ್ಕೆ ಕಲಾವಿದರನ್ನು ಗದ್ದೆಗೆ ಕರೆಸಿ ಆಕೃತಿ ರೂಪಿಸುತ್ತಾನೆ. ನಂತರ ಕಲಾವಿದರ ಮಾರ್ಗದರ್ಶನದಂತೆ ನಾಟಿ ಮಾಡುವುದರಿಂದ ಬೆಳೆ ಫಸಲಿಗೆ ಬರುವಾಗ ಗದ್ದೆಯಲ್ಲಿ ಚಿತ್ರಸಂತೆಯನ್ನು ಕಾಣಬಹುದು.
ಅನ್ನ ಕೊಡುವ ಹೊಲದಲ್ಲಿ ಅವ್ವನ ಚಿತ್ರ ಈ ಹಿಂದೆ ಸ್ವಚ್ಛ ಭಾರತ್ ಯೋಜನೆಯ ಚಿಹ್ನೆಯಾದ ಗಾಂಧೀಜಿ ಕನ್ನಡಕ, ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡಿರುವ ಚಿತ್ರವನ್ನು ಗದ್ದೆಯಲ್ಲಿ ಮೂಡಿಸಿ ಹಲವರ ಗಮನ ಸೆಳೆದಿದ್ದ. ಆರು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕೃಷಿ ಮೇಳಕ್ಕೆ ಹೋಗಿದ್ದಾಗ ಅಲ್ಲಿ ಕಂಡ ಬಣ್ಣ ಬಣ್ಣದ ಭತ್ತಗಳೇ ಪ್ಯಾಡಿ ಆರ್ಟ್ ಮಾಡಲು ಎನ್ನುವುದು ಆಂಜನೇಯನ ಮಾತು.
ಮುಂದಿನ ಪೀಳಿಗೆಗೆ ಈ ಭತ್ತಗಳನ್ನು ತಲುಪಿಸುವ ಆಸೆ ಸಂಪೂರ್ಣ ಸಾವಯವ ಗೊಬ್ಬರವನ್ನೇ ಬಳಸಿ ವಿವಿಧ ತಳಿ ಬೆಳೆಯುವ ಆಂಜನೇಯನಿಗೆ ಮುಂದಿನ ಪೀಳಿಗೆಯವರಿಗೆ ಈ ಭತ್ತಗಳನ್ನು ತಲುಪಿಸಬೇಕು ಎನ್ನುವ ಮಹದಾಸೆ. ಈತನ ಈ ವಿಭಿನ್ನ ಆಸಕ್ತಿಯನ್ನು ಗುರುತಿಸಿ ಕೇಂದ್ರ ಸರ್ಕಾರ ಉತ್ತಮ ಕೃಷಿಕ ಎಂಬ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದೆ.
ಊಟಕ್ಕೆ ಯೋಗ್ಯ ಎಂದು ವೈಜ್ಞಾನಿಕವಾಗಿ ಒಪ್ಪಿಗೆ ಪಡೆದ ಭತ್ತವನ್ನೇ ಬೆಳೆಯಲಾಗುತ್ತದೆ ರಾಜ್ಯದಲ್ಲಿ ಅತಿ ಹೆಚ್ಚು ನೀರಾವರಿ ಇರುವ ಎರಡನೇ ತಾಲೂಕು ಎಂದು ಪ್ರಸಿದ್ಧಿಯಾಗಿರುವ ಹರಿಹರದ ಸೋನಾ ಮಸೂರಿ ಭತ್ತಕ್ಕೆ ಹೆಸರುವಾಸಿ. ಆದರೆ, ಆಂಜನೇಯ ಹೊಸ ಪ್ರಯತ್ನಕ್ಕೆ ಕೈ ಹಾಕಿ ಊಟಕ್ಕೆ ಯೋಗ್ಯವೆಂದು ವೈಜ್ಞಾನಿಕ ಒಪ್ಪಿಗೆ ಪಡೆದ ಭತ್ತಗಳನ್ನೇ ಬೆಳೆಯುವ ಮೂಲಕ ಯಶಸ್ಸು ಕಂಡಿರುವುದು ಗಮನಾರ್ಹ.
ಬಣ್ಣದ ಬದುಕಿಗಿಂತ ಬಣ್ಣದ ಬೆಳೆಯಲ್ಲೇ ಖುಷಿ ಕಂಡುಕೊಂಡವನು ಯುವಕರು ಹೊಲ, ಗದ್ದೆಗಳಿಂದ ದೂರ ಸರಿದು ಪಟ್ಟಣದ ಕಟ್ಟಡಗಳಿಗೆ ಜೋತು ಬೀಳುತ್ತಿರುವ ಕಾಲದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ ಆಂಜನೇಯ ಯುವ ಸಮುದಾಯಕ್ಕೆ ಮಾದರಿ. ಶರಣ ಮುದ್ದಣ್ಣ ಸಾವಯವ ಸಂಘ ಅಂತಾ ತಮ್ಮದೇ ಒಂದು ಸಂಘ ಮಾಡಿಕೊಂಡಿರುವ ಈತನ ವಿಶಿಷ್ಟ ಆಸಕ್ತಿ ಮತ್ತು ಕಾಯಕಕ್ಕೆ ಒಂದು ಸಲಾಂ. -ಬಸವರಾಜ್ ದೊಡ್ಮನಿ
ಸಚಿವ ಜಗದೀಶ್ ಶೆಟ್ಟರ್ ಮನೆ ಎದುರಿಗೇ ಭತ್ತ ನಾಟಿ ಮಾಡಿದರು!
Published On - 3:42 pm, Thu, 3 December 20