ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಎಲ್ಲಾ ಕಡೆ ಸೂಚನಾ ಫಲಕಗಳನ್ನ ಹಾಕಿರೋದು ನಾವು ನೋಡೇ ಇರ್ತೀವಿ. ಅಂತೆಯೇ ಅದೇ ಬೋರ್ಡ್ ಮುಂದೆ ಜನ ಮೂತ್ರ ವಿಸರ್ಜನೆ ಮಾಡೋದನ್ನ ನೋಡಿದ್ದೀವಿ. ಜೊತೆಗೆ, ಅಬ್ಬಬ್ಬಾ ಅಂತಾ ಅದರ ದುರ್ವಾಸನೆ ತಡಿಯೋಕಾಗದೆ ಮೂಗು ಮುಚ್ಚಿಕೊಂಡು ಓಡಾಡಿದ್ದು ಸಹ ಉಂಟು. ಆದರೆ, ಅದೇ ಮೂತ್ರವನ್ನ ಬಳಸಿ ಬ್ರೆಡ್ಗೆ ತಯಾರಿಸಲು ಉಪಯೋಗಿಸುವ ಗೋಧಿ ಬೆಳೆಸುತ್ತಾರೆ ಅಂತಾ ಹೇಳಿದ್ರೆ ನಂಬ್ತೀರಾ? ಹೌದು, ಇದು ಕೇಳಲು ಕೊಂಚ ವಿಚಿತ್ರ ಮತ್ತು ಅಸಹ್ಯ ಅನ್ನಿಸಿದರೂ ಇದು ನಿಜ ಸಂಗತಿ.
ಅಂದ ಹಾಗೆ, ಇಂಥ ವಿಚಿತ್ರ ಹಾಗೂ ಕ್ರಿಯೇಟಿವ್ ಐಡಿಯಾಗೆ ಕೈಹಾಕಿರೋದು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ನ ನಿವಾಸಿ ಲೂಯಿಸ್ ರಗೇಟ್ (Louise Raguet). ತನ್ನ ಸ್ಪೆಷಲ್ ರೆಸಿಪಿಯಾದ ಗೋಲ್ಡಿಲಾಕ್ಸ್ ಬ್ರೆಡ್ (Goldilocks Bread) ತಯಾರಿಕೆಯಲ್ಲಿ ಉಪಯೋಗಿಸುವ ಗೋಧಿಯನ್ನು ಮಹಿಳೆಯರ ಮೂತ್ರ ಬಳಸಿ ಬೆಳೆಸುತ್ತಿದ್ದಾರೆ.
‘ಮೂತ್ರದಲ್ಲಿ ಉತ್ತಮ ಪೋಷಕಾಂಶಗಳಿವೆ!’
ಇದಕ್ಕಾಗಿಯೇ, ಲೂಯಿಸ್ ಸಾರ್ವಜನಿಕ ಶೌಚಾಲಯಗಳಿಂದ ಮೂತ್ರವನ್ನ ಶೇಖರಿಸುತ್ತಾರಂತೆ. ಅವರ ಪ್ರಕಾರ ಮೂತ್ರದಲ್ಲಿ ಉತ್ತಮ ಪೋಷಕಾಂಶಗಳಿವೆ. ಹೀಗಾಗಿ ಗೋಧಿ ಬೆಳೆಸಲು ಇದನ್ನು ಗೊಬ್ಬರವಾಗಿ ಬಳಸಬಹುದಂತೆ. ಹಾಗಂತ ಲೂಯಿಸ್ ಮೂತ್ರವನ್ನ ಡೈರೆಕ್ಟ್ ಆಗಿ ಗೋಧಿ ಬೆಳೆಗೆ ಸಿಂಪಡಿಸೋದಿಲ್ಲವಂತೆ. ಅದನ್ನು ಸರಿಸುಮಾರು 20 ಬಾರಿ ಸಾರಗುಂದಿಸಿ ಬಳಸುತ್ತಾರಂತೆ. ಹಾಗಾಗಿ, ಇದರಿಂದ ದುರ್ನಾತ ಸೂಸದೆ, ಸತ್ವಯುತವಾಗಿಯೇ ಉಳಿಯುತ್ತದೆ ಎಂದು ತಿಳಿದುಬಂದಿದೆ.
ಮಾನಿನಿಯರ ಮೂತ್ರವೇ ಏಕೆ ಬಳಸುವುದು?
ಅಂದ ಹಾಗೆ, ಲೂಯಿಸ್ ತಮ್ಮ ಗೋಲ್ಡಿಲಾಕ್ಸ್ ಬ್ರೆಡ್ಗಾಗಿ ಬೆಳೆಸುವ ಗೋಧಿಗೆ ಮಾನಿನಿಯರ ಮೂತ್ರವನ್ನೇ ಬಳಸುತ್ತಾರಂತೆ. ಇದರ ಹಿಂದಿನ ಗುಟ್ಟು; ಮಹಿಳಾ ಸಬಲೀಕರಣ. ಹೌದು, ನಾರಿಯರು ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬಾಳ ಬೇಕು ಎಂಬುದು ಈ ಮಾನಿನಿಯ ಮಹದಾಸೆ.
ಹೀಗಾಗಿ ಈ ಸಂದೇಶವನ್ನು ಎಲ್ಲೆಡೆ ಸಾರಲು ಲೂಯಿಸ್ ಈ ನಿದರ್ಶನಕ್ಕೆ ಮೊರೆ ಹೋಗಿದ್ದಾರಂತೆ. ಬಟ್, ಇದರ ಹಿಂದೆ ವೈಜ್ಞಾನಿಕ ಸಂಶೋಧನೆ ಸಹ ಅಡಗಿದೆ. ಫ್ರಾನ್ಸ್ನ ನಗರ ಯೋಜನಾ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ದೇಶದಲ್ಲಿ ಶೇಖರಿಸಿದ ಮೂತ್ರದಿಂದ ಪ್ರತಿನಿತ್ಯ ಬರೋಬ್ಬರಿ 30 ಮಿಲಿಯನ್ ಬ್ರೆಡ್ ತಯಾರಿಸಬಹುದಂತೆ.
ಜೊತೆಗೆ, ರಾಸಾಯನಿಕ ಗೊಬ್ಬರದ ಮೇಲಿರುವ ಅವಲಂಬನೆ ಸಹ ತಗ್ಗುತ್ತದೆ. ಒಟ್ನಲ್ಲಿ, ಸ್ತ್ರೀಶಕ್ತಿಯನ್ನ ಸಾರಲು ಲೂಯಿಸ್ ಹಿಡಿದಿರುವ ಈ ಹಾದಿಯಲ್ಲಿ ನಾರಿಯರು ಮೂಗು ಮುಚ್ಚಿಕೊಂಡು ಅಲ್ಲ, ತಲೆ ಎತ್ತಿಕೊಂಡು ಓಡಾಡಬೇಕೆಂಬುದು ಅವರ ಮಹದಾಸೆಯಂತೆ!