World Ranger Day 2022: ಇಂದು ವಿಶ್ವ ರೇಂಜರ್ ದಿನ; ಈ ದಿನದ ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆಗಳು ಇಲ್ಲಿದೆ

| Updated By: Rakesh Nayak Manchi

Updated on: Jul 31, 2022 | 11:05 AM

ಇಂದು ವಿಶ್ವ ರೇಂಜರ್​ಗಳ ದಿನ. ಉದ್ಯಾನವನಗಳು, ನೈಸರ್ಗಿಕವಾಗಿ ಸಂರಕ್ಷಿತ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ರೇಂಜರ್​ಗಳನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜು.31ರಂದು ವಿಶ್ವ ರೇಂಜರ್ ದಿನವನ್ನಾಗಿ ಆಚರಿಸಲಾಗುತ್ತದೆ.

World Ranger Day 2022: ಇಂದು ವಿಶ್ವ ರೇಂಜರ್ ದಿನ; ಈ ದಿನದ ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆಗಳು ಇಲ್ಲಿದೆ
ಸಾಂಕೇತಿಕ ಚಿತ್ರ
Follow us on

ಇಂದು ವಿಶ್ವ ರೇಂಜರ್​ಗಳ ದಿನ. ಸಾಮಾನ್ಯವಾಗಿ ಉದ್ಯಾನವನಗಳು ಮತ್ತು ನೈಸರ್ಗಿಕವಾಗಿ ಸಂರಕ್ಷಿತ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ರೇಂಜರ್​ಗಳನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜು.31ರಂದು ವಿಶ್ವ ರೇಂಜರ್ ದಿನ (World Ranger Day)ವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ರೇಂಜರ್​ಗಳ ಪ್ರಮುಖ ಕೆಲಸವನ್ನು ಬೆಂಬಲಿಸಿ ಗೌರವಿಸಲಾಗುತ್ತದೆ. ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ರೇಂಜರ್‌ಗಳಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಗುತ್ತದೆ. ಹಾಗಿದ್ದರೆ ರೇಂಜರ್ ದಿನದ ಇತಿಹಾಸ ಮತ್ತು ಮಹತ್ವಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರೇಂಜರ್​ಗಳು ಅಂದರೆ ಯಾರು?

ಸಾಮಾನ್ಯವಾಗಿ ಉದ್ಯಾನವನಗಳು ಮತ್ತು ನೈಸರ್ಗಿಕವಾಗಿ ಸಂರಕ್ಷಿತ ಪ್ರದೇಶಗಳನ್ನು ಸಂರಕ್ಷಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವವರನ್ನು ಅರಣ್ಯ ಅಥವಾ ಪಾರ್ಕ್ ರೇಂಜರ್​ಗಳು ಎಂದು ಕರೆಯಲಾಗುತ್ತದೆ. ಸೇತುವೆಗಳು, ಕಾಲುದಾರಿಗಳು ಮತ್ತು ಗೇಟ್‌ಗಳನ್ನು ನಿರ್ವಹಿಸಲು ರೇಂಜರ್‌ಗಳು ಹೆಚ್ಚಾಗಿ ಇತರ ಸ್ವಯಂಸೇವಕರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಾರೆ. ತಮ್ಮ ಹೆಚ್ಚಿನ ಸಮಯವನ್ನು ಹೊರಗೆ ಕಳೆಯುವ ಅವರು ರಾಷ್ಟ್ರೀಯ ಉದ್ಯಾನ ಪ್ರಾಧಿಕಾರದ ಬೆನ್ನೆಲುಬಾಗಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ಹಾಗೂ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳಿಗೆ ಸಂಪರ್ಕದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಾರೆ. ಒಂದು ಲೆಕ್ಕದಲ್ಲಿ ನೋವುದಾದರೆ ರೇಂಜರ್​ಗಳು ರಾಷ್ಟ್ರೀಯ ಉದ್ಯಾನವನದ ಪ್ರಾಧಿಕಾರದ ಕಣ್ಣುಗಳು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

ರೇಂಜರ್​ ದಿನದ ಇತಿಹಾಸ

ಮೊದಲ ವಿಶ್ವ ರೇಂಜರ್ ದಿನವನ್ನು 2007 ರಲ್ಲಿ ಇಂಟರ್ನ್ಯಾಷನಲ್ ರೇಂಜರ್ ಫೆಡರೇಶನ್ (IRF)ನ 15 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಚರಿಸಲಾಯಿತು. ಇಂಟರ್ನ್ಯಾಷನಲ್ ರೇಂಜರ್ ಫೆಡರೇಶನ್ ಅನ್ನು 1992 ರಲ್ಲಿ ಸ್ಥಾಪಿಸಲಾಯಿತು . ವೇಲ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ರೇಂಜರ್‌ಗಳನ್ನು ಪ್ರತಿನಿಧಿಸುವ SCRA (ಸ್ಕಾಟಿಷ್ ಕಂಟ್ರಿಸೈಡ್ ರೇಂಜರ್ಸ್ ಅಸೋಸಿಯೇಷನ್), CMA (ಕಂಟ್ರಿಸೈಡ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್, ವೇಲ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ರೇಂಜರ್‌ಗಳನ್ನು ಪ್ರತಿನಿಧಿಸುವ ಸಂಘ) ಮತ್ತು ANPR (ಯುಎಸ್ ಅಸೋಸಿಯೇಶನ್ ಆಫ್ ನ್ಯಾಷನಲ್ ಪಾರ್ಕ್ ರೇಂಜರ್ಸ್) ಸಂಘಟನೆಗಳು ಸೇರಿಕೊಂಡು ಜಂಟಿ ಒಪ್ಪಂದಕ್ಕೆ ಸಹಿ ಹಾಕಿದವು. ನಮ್ಮ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸಲು ರೇಂಜರ್‌ಗಳು ಪ್ರಪಂಚದಾದ್ಯಂತ ನಿರ್ವಹಿಸುವ ಪ್ರಮುಖ ಕೆಲಸಕ್ಕಾಗಿ ಸಾರ್ವಜನಿಕ ಬೆಂಬಲ ಮತ್ತು ತಿಳುವಳಿಕೆಯನ್ನು ಹೆಚ್ಚಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

ರೇಂಜರ್​ ದಿನದ ಮಹತ್ವ

ಅರಣ್ಯಗಳು, ನೈಸರ್ಗಿಕ ಉದ್ಯಾನವನಗಳು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಉದ್ಯಾನವನ ಅಥವಾ ಅರಣ್ಯ ರಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ‘ವಿಶ್ವ ರೇಂಜರ್ ದಿನ’ವನ್ನು ಆಚರಿಸಲಾಗುತ್ತದೆ. ವನ್ಯಜೀವಿ ಅಪಘಾತಗಳಿಂದಾಗಿ ಅನೇಕ ಅರಣ್ಯ ರಕ್ಷಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಅಥವಾ ಕಳ್ಳ ಬೇಟೆಗಾರರು ಅಥವಾ ಬೇಟೆಗಾರರಿಂದ ಕೊಲ್ಲಲ್ಪಡುತ್ತಾರೆ. ಹೀಗೆ ಕರ್ತವ್ಯದ ವೇಳೆ ಸಾವನ್ನಪ್ಪಿದವರಿಗೆ ಇದೇ ದಿನದಂದು ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಮತ್ತು ಪ್ರಕೃತಿಯ ಸೇವೆಯಲ್ಲಿ ರೇಂಜರ್​ಗಳ ಕೊಡುಗೆ ಮತ್ತು ತ್ಯಾಗವನ್ನು ಜನರಿಗೆ ತಿಳಿಸಲಾಗುತ್ತದೆ.