ಏಸೊಂದು ಮುದವಿತ್ತು : ಸ್ಥಿರವಾಣಿ ಜಂಗಮವಾಣಿಗಳ ನಡುವಿನೆಳೆಯಲ್ಲಿ ಜೀಕುತ್ತಿರುವ ರೇಣುಕಾ ಮಂಜುನಾಥ

|

Updated on: May 13, 2021 | 4:40 PM

‘ಬಿಎಸ್‌ಎನ್ಎಲ್ ಸಿಬ್ಬಂದಿ, ಈಗ ನೀವೊಂದು ಕರೆ ಮಾಡಿ ಎಂದಾಗ, ನಾನು ಮನೆಯವರನ್ನೆಲ್ಲಾ ತಡೆದು... ಇರಿ, ಮೊದಲ ಕರೆ ತೂಕದ್ದಾಗಿರಬೇಕು. ಈ ಸೌಲಭ್ಯವನ್ನು ಸಾಮಾಜಿಕ ಸೇವೆಗೆ ಮೊದಲು ಬಳಸಬೇಕೆಂದು, ನಾನು ಆಗ ಸಮಾಜಸೇವೆಯೆಂದು ಬಗೆದು ತೊಡಗಿಕೊಂಡಿದ್ದ ಸಂಸ್ಥೆಗೆ ಫೋನ್ ಮಾಡಿ, ನಮ್ಮ ಮನೆಗೆ ಫೋನ್ ಬಂದಿದೆ, ನಂಬರ್ ಬರೆದುಕೊಳ್ಳಿ. ಇನ್ನುಮುಂದೆ ಇದರ ಮೂಲಕ ಹೆಚ್ಚಿನ ಸೇವೆ ಮಾಡಬಹುದು ಎಂದು ಹೇಳಿ ಹೆಮ್ಮೆಯಿಂದ ಬೀಗಿದ್ದೆ! ಈಗ? ಈಗ ನಾನೂ, ನನಗಿರುವ ಸಮಾಜಸೇವೆ ಬಗೆಗಿನ ಮನಸ್ಥಿತಿ ಎಲ್ಲವೂ ಆ ಬಿಎಸ್‌ಎನ್‌ಎಲ್ ಹಾಗೂ ಅವರಿಂದ ಸ್ಥಾಪಿತಗೊಂಡ ನನ್ನ ಲ್ಯಾಂಡ್‌ಲೈನ್ ಫೋನಿನಂತೆಯೇ ಆಗಿದೆ.’ ರೇಣುಕಾ ಮಂಜುನಾಥ

ಏಸೊಂದು ಮುದವಿತ್ತು : ಸ್ಥಿರವಾಣಿ ಜಂಗಮವಾಣಿಗಳ ನಡುವಿನೆಳೆಯಲ್ಲಿ ಜೀಕುತ್ತಿರುವ ರೇಣುಕಾ ಮಂಜುನಾಥ
ಲೇಖಕಿ ರೇಣುಕಾ ಮಂಜುನಾಥ ಮತ್ತವರ ತಾಯಿ
Follow us on

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com
*
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲೇಖಕಿ ರೇಣುಕಾ ಮಂಜುನಾಥ ಅವರದು ವಿಶಿಷ್ಟ ಗ್ರಹಿಕೆ, ಒಳನೋಟ ಮತ್ತು ಸಮಾಜಮುಖಿ ಚಿಂತನೆಗಳಿಂದ ಕೂಡಿದ ಲವಲವಿಕೆಯ ವ್ಯಕ್ತಿತ್ವ. ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಿಂದ ಸ್ವಯಂನಿವೃತ್ತಿ ಪಡೆದ ನಂತರ, ಕೆಲ ವರ್ಷಗಳ ಕಾಲ ಹವ್ಯಾಸಿ ಪತ್ರಕರ್ತೆಯಾಗಿದ್ದರು. ‘ಚರಕ ಪ್ರಶಸ್ತಿ’ (ಸಿಡಿಎಲ್​) ಪುರಸ್ಕೃತರಾದ ಇವರ ಲೇಖನಗಳು ನಾಡಿನ ಎಲ್ಲಾ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಲಂಡನ್‌ನಿಂದ ಮಗನ ಫೋನ್ ಬಂತು. ಎತ್ತಿದೊಡನೆ ಅವನ ದನಿಯಲ್ಲಿ ಗಾಬರಿಯಿತ್ತು!
“ಅಮ್ಮಾ, ಎಲ್ಲಿದೀಯಾ? ಎಷ್ಟು ಸಾರಿ ಫೋನ್ ಮಾಡೋದು? ಹೇಗಿದೀರಾ ಇಬ್ಬರೂ? ”
“ಓ, ಹೌದಾ ಮಗಾ? ನಾನು ಹೊರಗೆ ಬಟ್ಟೆ ಒಣಗಿಹಾಕ್ತಿದ್ದೆ. ಈಗ ಒಳಗೆ ಬಂದೆ…”
“ಅಪ್ಪಾಜಿನೂ ಫೋನ್ ಎತ್ತುತಿಲ್ಲ. ಹೆಂಗಿದಾರೆ? ”
“ಅಯ್ಯೊ, ಹೌದಾ? ಗಿಡಕ್ಕೆ ನೀರು ಹಾಕ್ತಿದ್ರು. ಇಬ್ಬರೂ ಗಮನಿಸಿಲ್ಲ”
“ಲ್ಯಾಂಡ್‌ಲೈನಿಗೇನಾಗಿದೆ, ತೆಗೆಸಿಬಿಟ್ರಾ ಹೇಗೆ? ಅದೂ ರಿಂಗ್ ಆಗ್ತಿಲ್ಲ, ಎಂಗೇಜ್ ಇದೆ! ಹೇಗಿದೀರ ಇಬ್ಬರೂ? ಈ ಸಮಯದಲ್ಲಿ ಸ್ವಲ್ಪ ಫೋನ್‌ಕಡೆ ಗಮನ ಕೊಡಿ. ಅಲ್ಲಿನ ಪರಿಸ್ಥಿತಿ ನಮಗೆಲ್ಲಾ  ಗಾಬರಿ ಹುಟ್ಟಿಸುತ್ತಿದೆ, ಅರ್ಥ ಮಾಡ್ಕೊಳ್ಳಿ …” ಎಂದು ಮಾತಾಡುತ್ತಿದ್ದ ಮಗನ ಮಾತು ಕೇಳಿಸಿಕೊಳ್ಳುತ್ತಾ,  ‘ಮನೆಯಲ್ಲಿ ಎಲ್ಲೇ ಇದ್ದರೂ ಅದರ ಕರೆ ಕೇಳಿಸುವ ನಮ್ಮ  ಲ್ಯಾಂಡ್‌ಲೈನಿಗೇನಾಗಿದೆ’ ಎಂದು ಅದರ ಬಳಿ‌ಹೋದಾಗ, ಬೆಳಿಗ್ಗೆ ಎಲ್ಲೋ ಇಟ್ಟಿದ್ದ ಮೊಬೈಲ್‌ನ್ನು ಹುಡುಕಲು ಅದರಿಂದ ರಿಂಗ್ ಕೊಟ್ಟು, ರಿಸೀವರ್ ಪಕ್ಕಕ್ಕಿಟ್ಟು ಮೊಬೈಲ್ ಹುಡುಕುತ್ತಾ, ಅದು ಸಿಕ್ಕ ನಂತರ ಬೇರೆ ಕೆಲಸದ ಕಡೆ ಗಮನ ಹರಿದು, ರಿಸೀವರ್ ಸ್ವಸ್ಥಾನಕ್ಕೆ ಹೋಗದೇ ಇದ್ದುದರಿಂದ ಮಗನಿಗೆ ಅದೂ ಲಭ್ಯವಾಗಿಲ್ಲ.

ಒಟ್ಟಿನಲ್ಲಿ ಎಲ್ಲಾ ಇದ್ದೂ, ಮನೆಯಲ್ಲಿರುವ ಇಬ್ಬರ ಬಳಿ ನಾಲ್ಕು ಸಿಮ್ಮು, ಒಂದು ಲ್ಯಾಂಡ್‌ಲೈನಿದ್ದೂ ಮಗನಿಗೆ ತಕ್ಷಣಕ್ಕೆ ಸಿಗಲಿಲ್ಲವೆಂದರೆ ಇದೆಂತಹಾ ವಿಪರ್ಯಾಸ! ಆಗಾಗ ಮಕ್ಕಳು ಊರಿಗೆ ಬಂದಾಗ, ಅವರಿಗಾಗಿ ಇಟ್ಟಿರುವ ಲೋಕಲ್ ಸಿಮ್‌ಗಳು, ಒಟಿಪಿಗಾಗಿ ಅವಕ್ಕೂ ಮಿನಿಮಮ್ ಹಣ ತುಂಬುತ್ತಾ ಬರೋಬ್ಬರಿ ಈಗ  ನಾಲ್ಕು ಸಿಮ್ಮಾಗಿವೆ.

ಇದು ಅತಿವೃಷ್ಟಿಯಾ, ಅರಾಜಕತೆಯಾ, ಅಶಿಸ್ತಾ… ಒಟ್ಟಿನಲ್ಲಿ, ನನಗೆ ಆ ನನ್ನ ಲ್ಯಾಂಡ್‌ಲೈನನ್ನು ಮತ್ತೆ ಯಥಾಸ್ಥಿತಿಗೆ ಇಡುವಾಗ, ಅದು ನಮ್ಮ ಮನೆಗೆ ಬಂದ ದಿನದ ನೆನಪಾಯ್ತು. ಈ ನನ್ನ ಲ್ಯಾಂಡ್‌ಲೈನ್ ಮೊದಲ ಸಾರಿ ಮನೆಗೆ ಬಂದ ದಿನ ನನಗಿನ್ನೂ ನೆನಪಿದೆ. ಅಂದಿನ ಆ ಸಂದರ್ಭ, ಆಗಿನ ನನ್ನ  ಮನಸ್ಥಿತಿ.

ಬಿಎಸ್‌ಎನ್‌ಎಲ್‌ನವರು ಕೈಲಿ ಕಟಿಂಗ್ ಪ್ಲೇಯರ್, ವೈರ್‌ಗಳನ್ನು ಹಿಡಿದುಕೊಂಡು ಬಂದು ಮನೆ ಒಳಗೆ ಹೊರಗೆ ಮೇಲೆಲ್ಲಾ ವೀಕ್ಷಣೆ ಮುಗಿಸಿ, ಅದಕ್ಕೊಂದು ಜಾಗವನ್ನು ಚರ್ಚಿಸಿ, ನಿರ್ಧರಿಸಿ ಹಾಕಿ, ಅದರಿಂದ  ಹೊರ ಕರೆ ಚೆಕ್ ಮಾಡಿ, ಒಳಕರೆ ಬರುವಂತೆ ಮಾಡಿದಾಗ, ಮನೆಯೊಳಗೆ ಅದು, ನಮ್ಮ ಮನೆಯೊಳಗೇ ಅದು ರಿಂಗಣಿಸಿದಾಗ ಮನೆಯವರಿಗೆಲ್ಲಾ ಆಗಿದ್ದ ಆ ರೋಮಾಂಚನ! ನಮ್ಮ ಮನೆ ವಿಶ್ವಕ್ಕೇ ಕನೆಕ್ಟ್ ಆಯಿತೆಂಬ ಆ ಭಾವದಿಂದ ಮನಗೇ ಬಡ್ತಿ ಸಿಕ್ಕ ಸಂತೋಷ. ಬಿಎಸ್‌ಎನ್ ಎಲ್ ಸಿಬ್ಬಂದಿ, ಈಗ ನೀವೊಂದು ಕರೆ ಮಾಡಿ ಎಂದಾಗ, ನಾನು ಮನೆಯವರನ್ನೆಲ್ಲಾ ತಡೆದು… “ಇರಿ, ಇರಿ ಮೊದಲ ಕರೆ ತೂಕದ್ದಾಗಿರಬೇಕು. ನಾನೇ ಮಾಡುವೆ” ಎನ್ನುತ್ತಾ, ಮನೆಗೆ ಬಂದ ಈ ಸೌಲಭ್ಯವನ್ನು ಸಾಮಾಜಿಕ ಸೇವೆಗೆ ಮೊದಲು ಬಳಸಬೇಕೆಂದು, ನಾನು ಆಗ ಸಮಾಜಸೇವೆಯೆಂದು ಬಗೆದು ತೊಡಗಿಕೊಂಡಿದ್ದ ಸಂಸ್ಥೆಗೆ ಫೋನ್ ಮಾಡಿ, ನಮ್ಮ ಮನೆಗೆ ಫೋನ್ ಬಂದಿದೆ, ನಂಬರ್ ಬರೆದುಕೊಳ್ಳಿ. ಇನ್ನು ಮುಂದೆ ಇದರ ಮೂಲಕ ಹೆಚ್ಚಿನ ಸೇವೆ ಮಾಡಬಹುದು ಎಂದು ಹೇಳಿದ್ದೆ, ಹೆಮ್ಮೆಯಿಂದ ಬೀಗಿದ್ದೆ! ಈಗ? ಈಗ ನಾನೂ, ನನಗಿರುವ ಸಮಾಜಸೇವೆ ಬಗೆಗಿನ ಮನಸ್ಥಿತಿ ಎಲ್ಲವೂ ಆ ಬಿಎಸ್‌ಎನ್‌ಎಲ್ ಹಾಗೂ ಅವರಿಂದ ಸ್ಥಾಪಿತಗೊಂಡ ನನ್ನ ಲ್ಯಾಂಡ್‌ಲೈನ್ ಫೋನಿನಂತೆಯೇ ಇದೆ.

ಸೌಜನ್ಯ : ಅಂತರ್ಜಾಲ

ನಮ್ಮ ಮನೆಗೆ ಫೋನ್ ಬಂದಿದ್ದು ಗೊತ್ತಾದೊಡನೆ, ನಮ್ಮಮ್ಮನಿಗೆ ನಮ್ಮನೆಗೆ ಬರಲು ಮುಂಚಿಗಿಂತಾ ಹೆಚ್ಚಿನ ಉತ್ಸಾಹ. ಬಂದೊಡನೆ ತನ್ನೊಡಲ ಕುಡಿಗಳೆಲ್ಲರ ನಂಬರುಗಳನ್ನು ತನ್ನ ಬ್ಯಾಗಿನಿಂದ ತೆಗೆದು, ಮುಂದಿಟ್ಟುಕೊಂಡು, ಟೊರ್‌ಟೊರ್ ಎಂದು ತಿರುಗಿಸುತ್ತಾ, “ಮಗಾ , ಎಂಗಿದೀಯವ್ವಾ, ಎಂಗಿದ್ಯಪ್ಪಾ, ಮಕ್ಳೆಂಗವೆ, ಉಷಾರು ಮನೆಕಡೆ” ಎಂದೆಲ್ಲಾ ಮಾತು ಮೊದಲು. ನಂತರ ನನ್ನೊಂದಿಗೆ ಮಾತು. ಅಮ್ಮನಿಗೆ ಈ ಪರಿಯ ಖುಷಿ ಕೊಡಲು ನನ್ನಿಂದಾಯ್ತೆಂಬ ಖುಷಿ ನನ್ನದು, ಖುಷಿಗೆ ಕಾರಣವಾದ ಆ ಲ್ಯಾಂಡ್‌ಲೈನ್ ಬಗ್ಗೆಯೇ ಒಂದು ರೀತಿಯ ಅಕ್ಕರೆ ಪ್ರೀತಿ.

ಹೌದು, ಆಗ ಎಷ್ಟೊಂದು ಮುದವಿತ್ತು!

ಆದರೆ,  ಈ ‘ಮುದ’ವೆಂಬ ಭಾವ ‘ಇತ್ತು ‘ ಎಂಬ ಭೂತಕಾಲಕ್ಕೆ ಯಾಕೆ ಸರಿಯಿತು? ಭಾವಜಗತ್ತೂ ಮಾಲಿನ್ಯಕ್ಕೆ ಒಳಗಾಗಿದೆಯೇ? ಹೌದು. ಮುದಕ್ಕೂ ಮುದಿತನವೇ? ಮುದವೆಂಬುದು ಬರಿಯ ವಯಸ್ಸಿನೊಂದಿಗೆ ಮಾಸಿಹೋಗುವುದಷ್ಟೇ ಅಲ್ಲ. ಮುದನೀಡುವ ವಿಷಯಗಳು ಅತಿವೃಷ್ಟಿ, ಅನಾವೃಷ್ಟಿಗೆ ಒಳಗಾಗುತ್ತಿವೆ. ಹಾಗಾಗಿ ಮುದಕ್ಕೆ ಬೇಕಾದ ಹದ ಕೈತಪ್ಪುತ್ತಿದೆ. ಹಾಗಿದ್ದರೆ, ಮುದವಿದ್ದ ಕಡೆ ಏನಿತ್ತು? ಅಲ್ಲಿ ‘ಭಾವಸಮೃದ್ಧಿ’ಯಿತ್ತು. ಈಗ ಸಮೃದ್ಧಿಯೆಂಬುದು ಭಾವಜಗತ್ತಿನಿಂದ ಐಹಿಕ ಸುಖದ ಸಮೃದ್ಧಿಗೆ ಸ್ಥಿತ್ಯಂತರಗೊಂಡಿದೆ. ಸೌಕರ್ಯಗಳು ಕಾಲುಗಳಿಗೆ, ಕೈಗಳಿಗೆ, ಬೆರಳುಗಳಿಗೆ ಎಡತಾಕತೊಡಗಿವೆ. ಅದಕ್ಕೆ ಬೇಕಾದ ದುಡಿಮೆ ಕೈಹತ್ತಿದರೆ ಸಾಕು ಅಥವಾ ದುಡಿಮೆಯನ್ನು ಅತಿಸೌಕರ್ಯದ ಬದುಕಿಗೆ ಸುರಿಯುತ್ತಿದ್ದೇವೆ.

ಆಗ ಎಲ್ಲರೂ ಇರಲು ಮನೆಯೊಂದು ಬೇಕಿತ್ತು. ಈಗ ಎಲ್ಲರಿಗೂ ಅವರದ್ದೇ ಕೋಣೆ ಬೇಕು. ಆಗ ಮನೆಗೊಂದು ದೂರವಾಣಿಯಿತ್ತು‌. ಅದು ಎಲ್ಲರ ಸ್ವತ್ತಾಗಿತ್ತು. ಅಲ್ಲಿಗೆ ಕರೆ ಬಂದರೆ, ಇಡೀ ಮನೆಯವರನ್ನೇ ಕರೆದಂತಿತ್ತು. ಮನೆಯವರೆಲ್ಲಿ ಯಾರು ಬೇಕಾದರೂ  ಅದು ‘ನಮ್ಮದೆಂದು’ ಮುತುವರ್ಜಿ ಕುತೂಹಲದಿಂದ ಎತ್ತಿಕೊಂಡು, ಆ ಕುಟುಂಬದ ಪ್ರತಿನಿಧಿಯಾಗಿ  ಮಾತಾಡಿ, ಅದನ್ನು ಮನೆಯವರೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಎಲ್ಲರೂ ಅದರ ಸುತ್ತ ಬೆರಗು, ಖುಷಿಯ ಭಾವದೊಂದಿಗೆ ನಿಂತು, ಒಬ್ಬರಾದ ಮೇಲೊಬ್ಬರು, ಕುಟುಂಬಸಮೇತರಾಗಿ, ಒಟ್ಟಾಗಿ ಮಾತನಾಡುತ್ತಿದ್ದೆವು.

ಈಗ, ಎಲ್ಲರ ಕೈಲಿ ಅವರದ್ದೇ ಒಂದೊಂದು ಸ್ಮಾರ್ಟ್ ಫೋನಿದೆ. ಅದು ಮೊಬೈಲ್. ಹಾಗಾಗಿ ಅದು ಅವರ ದೇಹದ ಮತ್ತೊಂದು ಅಂಗವಾಗಿ ಅವರಿದ್ದಲ್ಲಿ ಇರುತ್ತದೆ. ಅವರು ಯಾವ ಕೋಣೆಯಲ್ಲಿರುವರೋ ಅಲ್ಲೇ ಅದಿರುತ್ತದೆ. ಅದು ಪೂಜಾಕೋಣೆಯಿಂದ ಸ್ನಾನ-ಶೌಚದಲ್ಲಿಯೂ ಅಲ್ಲೆಲ್ಲಾದರೂ ಒಂದು ಜಾಗ ಪಡೆದು ಪರಸ್ಪರ ಕಣ್ಗಾವಲಿನಲ್ಲಿರುತ್ತೆ. ಹೀಗಾಗಿ ಅವರೆಲ್ಲಿದ್ದರೂ, ಅವರೇ ನೇರವಾಗಿ ಸಿಗುವಾಗ, ಬೇಕಾದವರು ಅವರಿಗೇ ಫೋನಾಯಿಸುವರು. ಲ್ಯಾಂಡ್‌ಲೈನಿಗೆ ಫೋನ್ ಮಾಡುವ ಭೂಪ ತಲೆಮಾರು ಹಿಂದಿನ ಮನಸ್ಥಿತಿಯವನಷ್ಟೆ ಎಂಬಂತಾಗಿದೆ. ಲ್ಯಾಂಡ್‌ಲೈನಿಗೆ ಫೋನಾಯಿಸುವವನಿಗೆ ಕುಟುಂಬದ ಯಾರಾದರೂ ಫೋನೆತ್ತಿದರಾಯ್ತು ಎಂಬ ಭಾವ ಇದ್ದರೂ, ಆ ಫೋನು ರಿಂಗಣಿಸಿದರೆ, ಮನೆಯಲ್ಲಿರುವವರಿಗೆ ಫೋನ್ ಮಾಡಿದವರ ಮೇಲೇ ಕೋಪ, ಅಸಡ್ಡೆ. ಹೋಗಿ ಫೋನೆತ್ತುವವರಾದರೂ ಯಾರು? ಆ ಫೋನೆತ್ತುವವರಿಗೆ ಇಡೀ ಕೌಟುಂಬಿಕ ಪ್ರಜ್ಞೆಯಿರಬೇಕು, ಜವಾಬ್ದಾರಿಯಿರಬೇಕು. ವ್ಯವಧಾನವಿರಬೇಕು. ಹಾಗಿದ್ದವರಿಗಷ್ಟೇ, ಆ ಫೋನೆತ್ತಿ ಉತ್ತರಿಸುವ ಸ್ಪಂದಿಸುವ ಮನಸ್ಸಿರುತ್ತೆ. ಇಲ್ಲವಾದರೆ  ಹಾಗೆ ಇಡೀ ಕುಟುಂಬಕ್ಕೆಂದು ಸ್ಥಾವರಗೊಂಡ ಆ ಫೋನಾಗಲೇ ಎಲ್ಲರ ಕಣ್ಣಿನಲ್ಲಿ ಅಲಕ್ಷ್ಯಕ್ಕೊಳಗಾದ, ಒಂದು ಕಡೆ ಬಿದ್ದುಕೊಂಡು ಆಗಾಗ ವಟವಟವೆನ್ನುವ ಕುಟುಂಬದ ವೃದ್ಧರಂತೆ ಕಾಣುತ್ತದೆ.  ಅದೇನಾದರೂ ರಿಂಗಣಿಸಿದರೆ, ಅದು ಯಾವುದೋ ಸರ್ಕಾರೀ ಜಾಹಿರಾತಾಗೂ ಬರಲಿಕ್ಕೆ ಸಾಧ್ಯ ಅಥವಾ ಪುಟ್ಟಮಕ್ಕಳು ಅದರ ಶಬ್ಧಕ್ಕೆ ಓಡೋಡಿ ಹೋಗಿ ಫೋನ್ ಎತ್ತುವುದಿರುತ್ತೆ. ಆ ಕಡೆಯವರ ಪಾಡು ಯಾರಿಗೂ ಬೇಡ. ಆ ಮಗು ತೊದಲುನುಡಿಯಲ್ಲಿ ಏನೋ ಹೇಳುತ್ತೆ, ಆ ಕಡೆಯವರು ಅದನ್ನು ರಮಿಸುತ್ತಾ, ಅವರಿಗೆ ಯಾರು ಬೇಕೋ ಅವರನ್ನು ಕರೆಯಲು ಹೇಳಬೇಕು. ಅಷ್ಟರ ಮಟ್ಟಿಗೆ ಅರ್ಥಮಾಡಿಕೊಂಡು, ಅವರಿಗೆ ಹೇಳುವ ಮಟ್ಟಕ್ಕೆ ಬೆಳೆದ ಮಗು ಸಹಾ ಲ್ಯಾಂಡ್ ಲೈನ್ ಎತ್ತುವುದಿಲ್ಲ. ಹೊರಗಿನಿಂದ ಒಳಕರೆಗಳ ಪಾಡು ಇದಾದರೆ, ಯಾರೂ ಅದರ ಮೂಲಕ ಮನೆಯಿಂದ ಕರೆಮಾಡುವುದಿಲ್ಲವೇ? ಮಾಡುವುದುಂಟು.

ಯಾರದ್ದಾದರೂ ಮೊಬೈಲ್ ಕಳೆದಿದ್ದರೆ, ಎಲ್ಲಿದೆಯೆಂದು ಹುಡುಕಲಷ್ಟೆ. ರಿಂಗ್ ಕೊಟ್ಟು ಮೊಬೈಲ್ ಹುಡುಕಲಷ್ಟೆ
ಹಿರಿಯರು ಕಾಳಜಿಯಿಂದ ಕಿರಿಯರೆಲ್ಲಿದ್ದಾರೆ, ಕ್ಷೇಮವೇ, ಕುಶಲವೇ ಎಂದು ವಿಚಾರಿಸಿಕೊಳ್ಳುವಂತಿರುತ್ತದೆ ಅದರಿಂದ ಮೋಬೈಲ್ ಹುಡುಕುವಾಗಿನ ಅದರ ಕೆಲಸ. ಅಸಲಿಗೆ ಲ್ಯಾಂಡ್‌ಲೈನಿನಿಂದ ಕರೆಮಾಡುವುದೆಂದರೆ ಫೋನ್ ನಂಬರ್ ಬೇಕು, ಅದು ಯಾರ ತಲೆಯಲ್ಲಿ ನೆನಪಾಗುಳಿದಿರುತ್ತೆ? ಅದಕ್ಕೆ ಮತ್ತೆ ಹಾಳೆ ಪೆನ್ನುಗಳು ಬೇಕು. ಮೊಬೈಲಿನಿಂದ ಯಾವುದೇ ಲ್ಯಾಂಡ್‌ಲೈನಿಗೆ ಕರೆಮಾಡಲು ಆ ಊರಿನ ಪಿನ್‌‌ ನಂಬರ್ ಬೇರೆ ಗೊತ್ತಿರಬೇಕು.

ಈಗ ಮನೆಯ ಪ್ರತಿ ಸದಸ್ಯರೂ ವಿವಿಧ ಬ್ರ್ಯಾಂಡ್​ಗಳ, ವಿವಿಧ ಸಾಮರ್ಥ್ಯ ಹೊಂದಿರುವ ಮೊಬೈಲ್ ಕೊಂಡಾಗಾಗಲೀ, ಕೊಡಿಸಿದಾಗಾಗಲೀ ಮುದವಿದೆಯೇ? ಅಲ್ಲಿ ಮೊಬೈಲ್ ಬೆಲೆ ಆಯಾ ವ್ಯಕ್ತಿಯ ಅವಶ್ಯಕತೆ, ಕೊಳ್ಳುವ ಸಾಮರ್ಥ್ಯ, ತಾಂತ್ರಿಕ ಜ್ಞಾನ, ಬಳಸುವ ಚಾಕಚಕ್ಯತೆಗನುಗುಣವಾಗಿ ಅವರವರ ಫೋನು. ಪ್ರತಿಯೊಬ್ಬರಿಗೂ ಅದು ಅವರ ಪ್ರೈವೆಸಿ ಕಾಪಾಡಿದೆಯೇ ಹೊರತು ನಾವು ಬಯಸುವ ಸ್ಪೇಸನ್ನೇನೂ ಅದು ಕರುಣಿಸಿಲ್ಲ. ಹಾಗೇ, ಮಕ್ಕಳ ಮೇಲಿನ ಮಮಕಾರಕ್ಕೆ, ಹಾಗೊಮ್ಮೆ ಹೆಚ್ಚಿನ ದರದ ಮೊಬೈಲ್ ಕೊಡಿಸಿದ ಪೋಷಕರಿಗೆ ಕೊಡಿಸಿದ ಸಂದರ್ಭದಲ್ಲಷ್ಟೇ ಪರಸ್ಪರ ಖುಷಿ. ನಂತರ ಶುರುವಾಗುತ್ತೆ ಒಳಗೇ ದುಗುಡ, ಭಯ, ಆತಂಕ.

ಮಗ ಇಡೀ ವಿಶ್ವಕ್ಕೇ ಕನೆಕ್ಟ್ ಆಗುತ್ತಿದ್ದಾನೆ, ಅವನಿಗೆ ಕನೆಕ್ಟ್ ಆಗುವವರು, ಕನೆಕ್ಟ್ ಆಗುವ ವಿಷಯಗಳ ಬಗ್ಗೆ ಆತಂಕ ಶುರುವಾಗುತ್ತೆ. ಬಾಗಿಲು ಹಾಕಿಕೊಂಡು ಬೆಳೆದ ಮಗ ಕೊಡಿಸಿದ ಮೊಬೈಲ್‌ನೊಂದಿಗಿದ್ದಾನೆಂದರೆ, ಬೆರಳತುದಿಯಲ್ಲಿ ಲಭ್ಯವಿರುವ ಎಲ್ಲರೀತಿಯ ವಿನಾಶಕಾರಿ ಚಿತ್ರಗಳಲ್ಲೇನಾದರೂ ಅವನು ಮುಳುಗಿದ್ದರೆ, ಅವನ ಓದು, ಪರೀಕ್ಷೆ, ಮಾರ್ಕ್ಸು ಮತ್ತೊಂದರ ಬಗ್ಗೆ ಆತಂಕ, ಅವನಿಗೆ ಬರುವ ಮೆಸೇಜುಗಳ ಬಗ್ಗೆ ಸಂಶಯ ಎಲ್ಲವನ್ನೂ ಮನದಲ್ಲಿಟ್ಟುಕೊಂಡು, ಅದೇನನ್ನೂ ತೋರಗೊಡದೆ ಟೀನೇಜರುಗಳೊಂದಿಗೆ ವ್ಯವಹರಿಸಬೇಕು. ಇನ್ನು ಮಗಳಿಗೆ ಕೊಡಿಸಿದರೆ ಅದು ಇನ್ನೂ ಹೆಚ್ಚಿನ ಆತಂಕ. ಮಗಳು ಆಗಾಗ ಮೊಬೈಲ್ ಹಿಡಿಯುವುದು, ಅದು ಟುವ್ವಿಟುವ್ವಿ ಎಂದರೆ ಸಾಕು, ಅವಳು ಅನ್ಯಮನಸ್ಕಳಾದರೆ ಸಾಕು, ಅವಳು ಅನವಶ್ಯಕವಾಗಿ ತನ್ನಷ್ಟಕ್ಕೆ ತಾನೊಂದು ಸ್ಮೈಲ್ ಕೊಟ್ಟುಕೊಂಡರೆ ಸಾಕು ಎಲ್ಲವೂ ಆತಂಕ ತರುವ ಅಂಶಗಳೇ ಆಗುತ್ತವೆ.

ಇದೆಲ್ಲದರೊಂದಿಗೆ ಮನೆಯವರೆಲ್ಲಾ ಅವರವರ ಮೊಬೈಲ್ ಹಿಡಿದು ಅವರವರು ಗಳಿಸಿದ ಅವರ ಸರ್ಕಲ್‌ನಲ್ಲಿ ಸುತ್ತುಹೊಡೆಯುತ್ತಾ, ಸಂಭ್ರಮಿಸುತ್ತಾ, ಅವರವರದ್ದೇ ವ್ಯಾಪ್ತಿಯಲ್ಲಿ ವಿಸ್ತಾರಗೊಂಡ ಫೇಸ್‌ಬುಕ್ ಮಾಯಾಲೋಕದಲ್ಲಿ ಮುಳುಗಿದ್ದರೆ, ಒಂದು ಮೂಲೆಯಲ್ಲಿ ಕುಂತು ಎಲ್ಲವನ್ನೂ ನೋಡುತ್ತಿರುವ ಲ್ಯಾಂಡ್‌ಲೈನ್ ಎಂಬ ಸ್ಥಾವರ ತನ್ನ ಉಳಿವಿಗಾಗಿ ಹಂಬಲಿಸುತ್ತಿದೆಯೆನಿಸದಿರದು. ಕೆಲವರಂತೂ ಅದನ್ನು, ಅದರ ಅವಶ್ಯಕತೆಯೇ ಇಲ್ಲವೆಂದು ವಯಸ್ಸಾದವರನ್ನು ವೃದ್ಧಾಶ್ರಮಕ್ಕೆ ಅಟ್ಟಿದಂತೆ ಅದನ್ನು ಮನೆಯಿಂದ ಹೊರಗೆ ಹಾಕಿ, ಅದರ ಇರವನ್ನೇ ಮರೆತಿರುವುದಿದೆ. ನನ್ನಂತಹಾ ಕೆಲವರು, ಆ ನಂಬರ್ ಸಮೇತ, ಅದು ಬಂದಾಗಿನಿಂದ ಅದರಿಂದ ಸಿಕ್ಕ ಸೇವೆಯ ನೆನಪಾಗಿ, ಅದೊಂದು ಗತಕಾಲದಿಂದ ನಮ್ಮೊಂದಿಗೆ ಬಾಳಿಬದುಕಿದ ಕುರುಹಾಗಿ, ಮನೆಗೆ ಭೂಷಣವಾಗಿ ಅದನ್ನು ಉಳಿಸಿಕೊಂಡಿರುವುದಂತೂ ಸತ್ಯ. ಅದರ ಈ ಜಂಗಮವಾಣಿಗಳಂತೂ, ವಿಧವಿಧ ವಾದ್ಯಸದ್ದುಗಳೊಂದಿಗೆ, ‘ಸಮಾನರಾರಿಹರು, ನನ್ನ ಸಮಾನರಾರಿಹರು, ಜಂಗಮಕ್ಕಳಿವಿಲ್ಲ’ ಎಂಬಂತೆ  ಮೆರೆಯುವ ಪರಿ ಇಡೀ ಕುಟುಂಬದಲ್ಲಾಗುತ್ತಿರುವ ಸ್ಥಿತ್ಯಂತರಕ್ಕೆ ಸಾಕ್ಷಿಯಾಗುತ್ತದೆ. ಈ ಕ್ಷಿಪ್ರ ಬೆಳವಣಿಗೆಗಳಲ್ಲಿ ಅದಕ್ಕೆಂತಹಾ ಕೊನೆ ಸಿಗುವುದೆಂಬುದನ್ನು ಊಹಿಸಲಾಗದು.

ಸೌಜನ್ಯ : ಅಂತರ್ಜಾಲ

ಈಗಿನ ವಾಟ್ಸಪ್ ಮುಂತಾದ ಆಪ್‌ಗಳು ಕುಟುಂಬವೆಂಬುದು ಇಡೀ ಜಗದಗಲ ಚದುರಿಹೋಗಿದ್ದರೂ, ಒಂದೇ ಡಿಜಿಟಲ್ ಸೂರಿನಡಿ ಎಲ್ಲರನ್ನೂ ಒಂದೆಡೆಗೆ ಸೇರಿಸಿರಬಹುದು, ಆದರೆ  ಲ್ಯಾಂಡ್‌ಲೈನ್ ಯುಗದಲ್ಲಿ, ಮಿತವಾದ ಸೌಕರ್ಯ, ಸೌಲಭ್ಯಗಳಲ್ಲೇ ಲಭ್ಯವಾಗುತ್ತಿದ್ದ ಮಾತುಕತೆಯಿಂದೊದಗುತ್ತಿದ್ದ ಮುದದ ಆಸ್ವಾದವೇ ಬೇರೆ. ಅದು ಆಗಿನ ಅಂಚೆಯಣ್ಣನ ಇನ್‌ಲ್ಯಾಂಡ್ ಲೆಟರ್ ಪೋಸ್ಟ್‌ಕಾರ್ಡ್‌ಗಳು ಜಿನುಗಿಸುತ್ತಿದ್ದ ಭಾವಧಾರೆಗೆ ಸಮ.
ಈಗಿನ ಮೊಬೈಲ್‌ಗಳು ಒಬ್ಬೊಬ್ಬರನ್ನೂ ಒಂದೇ ಸೂರಿನಡಿ ದ್ವೀಪವಾಗಿಸಿರುವುದಂತೂ ಸತ್ಯ.
ಆದರೆ, ಲ್ಯಾಂಡ್‌ ಲೈನ್ ಎಂಬುದೊಂದು ದೀಪದಂತಿದ್ದು, ಅದರಿಂದ ಬಂದೊಂದು ಕರೆ  ಮನೆಯವರೆಲ್ಲರ ಕಣ್ಣುಗಳಲ್ಲಿ ಬೆಳಕನ್ನೇ ಮಿನುಗಿಸಿ, ಎಲ್ಲರನ್ನೂ ಒಟ್ಟು ಸೇರಿಸುತ್ತಿದ್ದ ಒಂದು ಕಾಲವಿತ್ತು.

ಈಗದು ಮುದಿಯಾಗಿರಬಹುದು, ಮುದುರಿ ಮೂಲೆ ಸೇರಿರಬಹುದು. ಆದರೆ ಅದು ತಂದಿದ್ದ ಮುದವನ್ನು ಮುಂದಿನ ಮತ್ಯಾವ ಅನ್ವೇಷಣೆಯೂ ನೀಡಲಾಗದು, ಯಾಕೆಂದರೆ ಅದೂ ಇಡೀ ಕುಟುಂಬವನ್ನು ಹಿಡಿಯಾಗಿ ತನ್ನ ಸುತ್ತ ಸೇರಿಸುತ್ತಿತ್ತು. ಆಗಿನ ಕುಟುಂಬಗಳಲ್ಲೂ ಭಾವದ ಬನಿಯಿತ್ತು. ಹೌದು ಎಷ್ಟೊಂದು ಮುದವಿತ್ತು.

ಇದನ್ನೂ ಓದಿ :ಏಸೊಂದು ಮುದವಿತ್ತು : ನಿಮ್ಮಂಥವರು ಬೇಕೀಗ ಏನಿಗದಲೆಯ ಸುಬ್ಬಮ್ಮಜ್ಜಿ, ಕೈವಾರದ ಕೊರಸಪ್ಪ, ಸಾವಿತ್ರಮ್ಮ, ಬಂಗಾಳಿ ರೀತಾ

Published On - 4:39 pm, Thu, 13 May 21