ಏಸೊಂದು ಮುದವಿತ್ತು : ನಿಮ್ಮಂಥವರು ಬೇಕೀಗ ಏನಿಗದಲೆಯ ಸುಬ್ಬಮ್ಮಜ್ಜಿ, ಕೈವಾರದ ಕೊರಸಪ್ಪ, ಸಾವಿತ್ರಮ್ಮ, ಬಂಗಾಳಿ ರೀತಾ…
‘ಮರೆತು ಹೋದ ಮನುಷ್ಯತ್ವವ ನೆನಪಿಸಲೇ ಬಂದಂಥವವೇ ಈ ರೋಗಗಳೆಲ್ಲ? ಬದುಕಿನಲ್ಲಿ ಮನುಷ್ಯ ಒಂದೇ ದೊಡ್ಡ ಸಿದ್ದಾಂತ ಮತ್ತು ಧರ್ಮ ಅದು ಬಿಟ್ಟು ಬೇರೆ ಯಾವುದೂ ಇಲ್ಲ ಎಂದು ಮನುಕುಲವ ಒಪ್ಪಿಸಲು ಬಂದಂಥವೇ, ಅಥವಾ ಸಾವು-ನೋವುಗಳ ನಡುವೆಯೂ ಜಾತಿ, ಧರ್ಮ, ಪಕ್ಷ ಎಂದು ಮತ್ತಷ್ಟು ಅಜ್ಞಾನದಿಂದ ಹೊಡೆದು ಸಾಯಿರಿ ಎಂದು ಹೇಳಲು ಬಂದವೆ? ನಿಜಕ್ಕೂ ಗೊತ್ತಿಲ್ಲ. ನಾ ಕಂಡ, ನಾ ಬಾಳಿದ ದಿನಗಳು ಖಂಡಿತಾ ಇವಲ್ಲವೇ ಅಲ್ಲ.‘ ಶುಭಾ ಎ. ಆರ್.
ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.
ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com
‘ಪುಸ್ತಕಗಳ ಕೈಯಿಂದ ಮುಟ್ಟಿ ಖುಷಿಪಟ್ಟು ಓದುವ, ಲೈಬ್ರರಿಯಲ್ಲಿ ಗಂಟೆಗಟ್ಟಲೆ ಬೇಕಾದ ಪುಸ್ತಕ ಹುಡುಕಿ ಓದುವ, ಭೇದಭಾವವಿಲ್ಲದೆ ಕಬಡ್ಡಿ, ಮರಕೋತಿ, ಚಿನ್ನಿದಾಂಡು, ಕುಂಟೆಬಿಲ್ಲೆ ಆಡುವ, ಜಾತಿ, ಧರ್ಮ, ಪಂಥಗಳ ವಾದವಿವಾದಗಳಿಗೆ ಸಿಲುಕದೆ ಒಬ್ಬರನೊಬ್ಬರು ಇದ್ದಂತೆಯೇ ಸ್ವೀಕರಿಸುವ, ಅವರ ಪಾಡಿಗವರ ಬದುಕಲು ಬಿಡುವ, ಬದುಕಲು ಸಹಾಯ ಮಾಡುವ ಆ ದಿನಗಳೆಲ್ಲಿ ಹೋದವು?’ ಲೇಖಕಿ ಶುಭಾ ಎ. ಆರ್.
*
ಎಲ್ಲಿಗೆ ಬಂದು ನಿಂತುಬಿಟ್ಟೆವು ನಾವು? ಸುತ್ತಮುತ್ತಲ ಪರಿಸರದಲ್ಲಿ, ಕೆಲಸ ಮಾಡುವೆಡೆಯಲ್ಲಿ, ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ… ಎಲ್ಲೆಲ್ಲಿಯೂ ಜಾತಿ, ಧರ್ಮ, ರಾಜಕೀಯ, ಎಡ, ಬಲಪಂಥಗಳ ಕೆಸರೆರೆಚಾಟ. ಛೇ… ಇಲ್ಲ ಇದಲ್ಲ ನಾನು ಕಂಡ ಜಗತ್ತು, ನಾನು ಕಂಡ ಜನ. ದಶಕಗಳ ಹಿಂದೆ ಹೀಗಿತ್ತೆ? ಅಥವಾ ಇದ್ದರೂ ಅದು ಇಷ್ಟು ತೀವ್ರವಾಗಿ ಎದ್ದು ಕಾಣುವ ಅವಕಾಶಗಳಿರಲಿಲ್ಲವೆ?
ಅಪ್ಪಟ ದೈವಭಕ್ತೆ ಅಮ್ಮ. ನಾವು ಇನ್ನೊಬ್ಬರಿಗೆ ತೊಂದರೆ ಮಾಡದೆ ಬದುಕುವುದೇ ಪೂಜೆ ಎಂದುಕೊಂಡಿದ್ದ ಅಣ್ಣ (ಅಪ್ಪ) ನನ್ನ ಮುದಗೊಳಿಸುವ ನೆನಪುಗಳು ಆರಂಭವಾಗುವುದೇ ನನ್ನ ಬಾಲ್ಯದಿಂದ. ಸ್ವಾಭಿಮಾನಿ ಅಣ್ಣ ಕೆಲಸಕ್ಕೆ ರಾಜೀನಾಮೆ ಎಸೆದು ಬದುಕಿಗಾಗಿ ಹೊಸ ದಾರಿ ಹುಡುಕುತ್ತಿದ್ದ ದಿನಗಳವು. ಆಟವಾಡುತ್ತಿದ್ದ ನಮ್ಮನ್ನು ಕಂಡ ಇಗ್ಗಲೂರಿನ ಶಾಲಾ ಮಾಸ್ತರರು ನನ್ನನ್ನು ಮತ್ತು ಅಕ್ಕನನ್ನು ಶಾಲೆಗೆ ದಾಖಲಿಸಿದ್ದಾಗಿತ್ತು. ದಿನವೂ ಬೆಳಿಗ್ಗೆ ಹಾಗೂ ಸಂಜೆ ಚಂದಾಪುರದಿಂದ ಇಗ್ಗಲೂರಿಗೆ ಕಾಲ್ನಡಿಗೆಯಲ್ಲಿ ಪಯಣ. ದಾರಿಯುದ್ದಕ್ಕೂ ಇದ್ದ ಮರಗಳಿಂದ ಅತ್ತಿಹಣ್ಣು, ಹುಣಸೆಕಾಯಿ, ನೇರಳೆಹಣ್ಣು, ವಾರ್ಜಿಪ್ ಕಾಯಿಗಳು ಕಲ್ಲು ಹೊಡೆದು ಕೆಳಗೆ ಬೀಳಿಸಿ ಚೀಲದ ತುಂಬಾ ತುಂಬಿಕೊಂಡು ಸಮಯ ಸಿಕ್ಕಾಗಲೆಲ್ಲ ಮೆಲ್ಲುವ ಸಮೃದ್ಧ ಬಾಲ್ಯವದು.
ನಮ್ಮ ಜೊತೆಗೇ ಚಂದಾಪುರದಿಂದ ಇಗ್ಗಲೂರಿನ ಪ್ರಾಥಮಿಕ ಶಾಲೆಗೆ ಒಬ್ಬರು ಟೀಚರು ಬರುತ್ತಿದ್ದರು. ಅವರು ಸದಾ ಕಾವಿಯುಟ್ಟು ಜಟೆ ಕಟ್ಟುತ್ತಿದ್ದುದರಿಂದ ಅವರನ್ನು ಎಲ್ಲರೂ ಸನ್ಯಾಸಿ ಟೀಚರು ಎಂದೇ ಕರೆಯುತ್ತಿದ್ದರು. ಎತ್ತರದ ಸೈಜುಗಲ್ಲುಗಳಿಂದ ಸುತ್ತುವರಿದಿದ್ದ ವಿಶಾಲ ಜಾಗೆಯಲ್ಲಿದ್ದ ಅವರ ಮನೆಗೆ ಬಹುಶಃ ಯಾರಿಗೂ ಪ್ರವೇಶವಿರಲಿಲ್ಲ. ಅವರ ಬಗ್ಗೆ ಭಯ ಹುಟ್ಟಿಸುವ ಏನೇನೊ ಕಥೆಗಳು ಕೇಳಿಬರುತ್ತಿದ್ದವು. ಚಿಕ್ಕವರಾದ ನಾವುಗಳು ಮೊದಮೊದಲು ಭಯದಿಂದಲೇ ಅವರ ಜೊತೆ ಹೋದರೂ ನಂತರ ಅವರು ಆಗಾಗ ಚಂದಾಪುರದಿಂದ ಆನೇಕಲ್ ರಸ್ತೆಯಲ್ಲಿ ಸಾಗುವ ಎತ್ತಿನ ಗಾಡಿಗೋ, ಅರೆಬರೆ ಸಾಮಾನು ತುಂಬಿದ ಟ್ರ್ಯಾಕ್ಟರಿಗೋ ಕೈ ಮಾಡಿ ನಮ್ಮನ್ನೆಲ್ಲ ಹತ್ತಿಸಿ ತಾವೂ ಹತ್ತಿ ಮೌನವಾಗಿ ಕುಳಿತುಕೊಳ್ಳುತ್ತಿದ್ದರು. ಆಗಲೇ ಜನರ ಮಾತುಗಳ ಕೇಳಿ ಯಾರ ಬಗ್ಗೆಯೂ ಯಾವ ನಿರ್ಧಾರವನ್ನೂ ತಾಳಬಾರದೆಂದು ಅನಿಸಲಾರಂಭಿಸಿದ್ದು.
ಮುಂದೆ ಐದನೆಯ ತರಗತಿಗೆ ಬ್ಯಾಗಡದೇನಹಳ್ಳಿಯಲ್ಲಿ ಸೇರಿದಾಗ ಅಯ್ನೋರೇ, ಅಮ್ಮಣ್ಣಿ ಎಂದು ಎಲ್ಲರೂ ಗೌರವದಿಂದ ಅಮ್ಮ ,ಅಣ್ಣನನ್ನು ಮಾತನಾಡಿಸುತ್ತಿದ್ದಾಗ ಯಾಕೆ ಹೀಗೆ ಎಂದು ಬೆರಗು ಪಡುತ್ತಿದ್ದೆ! ಅಯ್ನೋರೇ ಆ ಮನೆ ಸರಿಯಿಲ್ಲ. ಅಲ್ಲಿ ಕಾಟ ಇದೆ ಅಲ್ಲಿರಬೇಡಿ ಎಂದು ಕಾಳಜಿ ತೋರಿ ಊರಂಚಿನಲ್ಲಿದ್ದ ದೊಡ್ಡ ಮನೆಬಿಡಿಸಿ ಊರೊಳಗಿನ ಬುಡ್ಡಕ್ಕನ ಮನೆ ಬಾಡಿಗೆ ಹಿಡಿವಂತೆ ಮಾಡಿದ ಜನರಿಗೆ ನಮ್ಮ ಕಂಡರೆ ಅದಾವ ದ್ವೇಷವಿರಲು ಸಾಧ್ಯ ಹೇಳಿ?
ಪಕ್ಕದ ಮನೆಯಲ್ಲೇ ಇದ್ದ, ಅಕ್ಕಪಕ್ಕದವರು ಮಾತಾಡಲೂ ಹೆದರುತ್ತಿದ್ದ ತಿಮ್ಮಕ್ಕನಿಗೆ (?) ನಮ್ಮ ಬಗ್ಗೆ ಮಾತ್ರಾ ವಿಶೇಷ ಅಭಿಮಾನ. ಎಲ್ಲರಿಗೂ ಕಚ್ಚುತ್ತಿದ್ದ ಅವಳ ನಾಯಿ ಕೆಂಚ ನಮ್ಮ ಮನೆಯ ಅಂಗಳದಲ್ಲಿ ಸಾಧುವಾಗಿ ಕುಳಿತಿರುತ್ತಿತ್ತು. ಪಕ್ಕದ ಮನೆಯ ರೇಖಾಳ ತಂದೆ ಹಸು ಮಾರಾಟದವರಾಗಿದ್ದರು. ಹಸುವನ್ನು ಕೊಂಡುತಂದು ಅದು ಕರು ಹಾಕಿದ ಕೆಲವು ದಿನಗಳ ನಂತರ ಮಾರಿಬಿಡುತ್ತಿದ್ದರು. ಆ ಮುದ್ದು ಕರುಗಳಿಗೆ ನಾವುಗಳು ಹಣೆಗೆ ಬೊಟ್ಟಿಡುವುದೇನೂ, ನಮ್ಮ ಕೊರಳ ಸರ ತೆಗೆದು ಅದಕ್ಕೆ ಹಾಕಿ ಮುದ್ದಿಸುವುದೇನು…
ಹಿಂದಿನ ಮನೆಯ ಜಯಲಕ್ಷ್ಮಿಯ ತೋಟದಲ್ಲಿ ಮಡುಗಳಿಗೆ ನೀರು ಕಟ್ಟಲು, ಏತದಿಂದ ನೀರೆತ್ತಲು ಎತ್ತುಗಳ ಹೊಡೆಯಲು ನಾನು ಸದಾ ಹಾತೊರೆಯುತ್ತಿದ್ದೆ. ಬೇಡ, ನೀವಿದೆಲ್ಲ ಮಾಡಬಾರದು ಎಂದರೂ ನಾನು ಮಾಡುವವಳೇ ಸರಿ. ಹುಡುಗ ಹುಡುಗಿಯರೆಲ್ಲ ಮೈಲುಗಟ್ಟಲೆ ನಡೆದು ಸರ್ವೆ ಮರದ ತೋಪುಗಳಲ್ಲಿ ಉದುರಿ ಬಿದ್ದ ಅದರ ಎಲೆಗಳನ್ನ, ನಾವದಕ್ಕೆ ಸರ್ವೆ ಸೀಕು ಎನ್ನುತ್ತಿದ್ದೆವು ಬಾಚಿಯಿಂದ ಬಾಚಿ ತೆಗೆದು ಪೈಪೋಟಿಯ ಮೇಲೆ ದೊಡ್ಡ ಹೊರೆ ಮಾಡಿ ಒಬ್ಬರಿಗೊಬ್ಬರು ಹೊರೆ ಹೊರೆಸಿ ಬೀಗಿ ನಡೆವಾಗ ಯಾವ ಜಾತಿ, ಧರ್ಮ, ಲಿಂಗ, ಪಕ್ಷ, ಸಿದ್ಧಾಂತಗಳ ಅರಿವೂ ಇರಲಿಲ್ಲ.
ಅಪ್ಪಿತಪ್ಪಿ ಬೇಗ ಊಟ ಮುಗಿಸಿ ಗೆಳತಿಯ ಮನೆಗೆ ಹೋದರೆ ಒಮ್ಮೊಮ್ಮೆ ಮನೆಯಾಚೆಯ ಒಲೆಯಲ್ಲಿ ಮಡಕೆಯೂ, ಅವರುಗಳು ಮನೆಯಾಚೆಯೇ ಗೋಡೆಯತ್ತ ಮುಖ ಮಾಡಿ ಕುಳಿತು ಊಟ ಮಾಡುವುದೂ ಕಾಣುತ್ತಿತ್ತು. ಅಯ್ಯೋ ನೀನು ಇವತ್ತು ನಮ್ಮ ಮನೆಗೆ ಬರಬೇಡ ಎಂದ ಅವರುಗಳು ಗಾಬರಿಯಿಂದ ಹೇಳುವುದೂ, ಯಾಕೆ ಎಂದು ನಾನು ಹಠ ಮಾಡುವುದೂ ನಡೆಯುತ್ತಿತ್ತು. ಕೊನೆಗೂ ನನ್ನ ಪ್ರಶ್ನೆಗೆ ಅಮ್ಮ ಹೇಳುವವರೆಗೂ ಉತ್ತರ ಸಿಕ್ಕಿರಲಿಲ್ಲ.
ಬೆಳೆದು ಕಾಲೇಜಿಗೆ ಬರುತ್ತಿದ್ದಂತೆ ಎನ್ಎಸ್ಎಸ್ ಸೇರಿ ಕ್ಯಾಂಪ್ಗಳಿಗೆ ಹೋದಾಗ ಅದೆಷ್ಟು ಜನರ ಸ್ನೇಹ ದೊರೆಯುತ್ತಿತ್ತು. ಯಾರೋ ಮಾಡಿದ ಅಡುಗೆ, ಯಾರದೋ ತಟ್ಟೆಗೆ ಹೊಟ್ಟೆಗೆ ಹಿತವಾಗುವ ಆ ದಿನಗಳೆಲ್ಲಿ ಕಳೆದುಹೋದವೋ. ಮಗ ಹುಟ್ಟಿದ ಮೂರು ದಿನಕ್ಕೇ ಆಪದ್ಭಾಂದವಳಾಗಿ ಬಂದ ಬಂಗಾಳಿ ತಾಯಿ ರೀತಾ ಅದಾವ ಜನ್ಮದ ನೆಂಟಸ್ತಿಕೆ ಹೊತ್ತಿದ್ದಳೋ. ಮಗುವಿಗೆ ನೀರು ಹಾಕುವುದರಿಂದ ಆರಂಭಿಸಿ ನನಗಾಗದಾದಾಗ ಪಟಪಟನೆ ರೋಟಿ ಸಬ್ಜಿ ಮಾಡಿ, ‘ಖಾಲೀ ಪೇಟ್ ಮೆ ಮತ್ ರಹೋ ದೀದೀ’ ಎನ್ನುತ್ತಿದ್ದ ಅವಳ ಋಣವನ್ನು ಎಷ್ಟು ಹಣ ಕೊಟ್ಟು ತೀರಿಸಲಾದೀತು?
ಚಿಕ್ಕಬಳ್ಳಾಪುರದ ಏನಿಗದಲೆಯ ನವೋದಯದಲ್ಲಿ ನನ್ನ ಪುಟ್ಟ ಮಗನಿಗೆ ಸಿಕ್ಕ ಅಜ್ಜಿ ಸುಬ್ಬಮ್ಮಜ್ಜಿ. ಅಡಿಗೆಮನೆ ಒಳಗೆ ಬರಲು ಮೊದಮೊದಲು ಹಿಂದುಮುಂದು ನೋಡುತ್ತಿದ್ದವಳು ಕ್ರಮೇಣ ಮನೆಯ ಒಬ್ಬ ಸದಸ್ಯೆಯೇ ಆಗಿಬಿಟ್ಟಿದ್ದಳು. ಅಪ್ಪಯ್ಯ, ಅಪ್ಪಯ್ಯ ಎನ್ನುತ್ತ ಕಾಣದ ಅಜ್ಜಿಯ ಪ್ರೀತಿಯನ್ನು ನನ್ನ ಪುಟ್ಟ ಕಂದನಿಗೆ ಕೊಟ್ಟ ಸುಬ್ಬಮ್ಮಜ್ಜಿಗೆ ಅದೆಷ್ಟು ಧನ್ಯವಾದ ಹೇಳಬಹುದು? ಕೈವಾರದಲ್ಲಿ ಎರಡು ವರ್ಷದ ಕಂದನೊಂದಿಗೆ ಮನೆ ಮಾಡಿಕೊಂಡು ಮಗುವಿನ ಜೊತೆಗಿರಲು ಹುಡುಗಿಯೊಬ್ಬಳನ್ನು ಕರೆತಂದು ನೆಮ್ಮದಿಯಿಂದ ಉಸಿರು ಬಿಟ್ಟ ನಮ್ಮಿಬ್ಬರಿಗೆ ಅದೇ ಸಾಯಂಕಾಲ ಆಘಾತ ಕಾದಿತ್ತು, ಆ ಹುಡುಗಿ ಓಡಿ ತನ್ನ ಮನೆ ಸೇರಿಕೊಂಡಿದ್ದಳು! ಆಯಿತು ಇನ್ನು ಕೆಲಸ ಮಾಡಿದಂತೆಯೇ ಎಂದುಕೊಂಡು ನಾವಿಬ್ಬರೂ ಒಂದು ನಾಲ್ಕು ತಿಂಗಳ ಬಾಡಿಗೆ ಕೊಟ್ಟು ಕೆಲಸಕ್ಕೆ ಸಂಬಳವಿಲ್ಲದ ರಜೆ ಬರೆದು ಏನಿಗದಲೆಗೆ ವಾಪಸ್ ಹೊರಟುಬಿಡೋಣ ಎಂದು ಚರ್ಚಿಸುತ್ತಾ ಕುಳಿತಿದ್ದಾಗ ಬೆಳಗಿನಿಂದಲೂ ನಮ್ಮ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಓನರ್ ದಂಪತಿ ದೂರದಲ್ಲೇ ನಿಂತು, ಯಾಕಪ್ಪಾ ಏನಾಯಿತು ಎಂದು ಕೇಳಿದವರು ನಮ್ಮಿಬ್ಬರ ಸಮಸ್ಯೆ ಆಲಿಸಿದವರೇ ನೋಡಪ್ಪ, ನನಗೆ ಏಳು ಜನ ಹೆಣ್ಣುಮಕ್ಕಳು, ಅಮ್ಮಯ್ಯನ್ನ ನನ್ನ ಮೊದಲನೇ ಮಗಳು ಅಂದುಕೋತೀವಿ. ನಮ್ಮನೇಲಿ ಮಗೂನ ಬಿಡಲು ನಿಮಗೆ ಒಪ್ಪಗೆ ಇದ್ದರೆ ಬಿಟ್ಟು ಹೋಗಬಹುದು. ನಮ್ಮ ಮೊಮ್ಮಗು ಹಾಗೇ ನೋಡಿಕೋತೀವಿ ಎಂದಾಗ ಇದನ್ನ ನಿರೀಕ್ಷಿಸಿಯೇ ಇರದ ನಾನು ನನ್ನವ ಮುಖ ಮುಖ ನೋಡಿಕೊಂಡಾಗ ‘ನಾವು ಗೌಡರು. ಅದೂ ಇದೂ ತಿನ್ನೋರು. ಆದ್ರೆ ನೀವು ತಲೆ ಕೆಡಿಸಿಕೋಬೇಡಿ. ಮಗೂಗೆ ನೀವು ತಿನ್ನದ ಏನೂ ತಿನಿಸಲ್ಲ’ ಎಂದವರು ನಾನಲ್ಲಿದ್ದ ಒಂದು ವರ್ಷ ಕಾಲ ನನ್ನ ಮಗುವನ್ನು ತಮ್ಮದೇ ಮನೆಯ ಮಗುವಾಗಿ ಬೆಳೆಸಿದರು. ಈಗ ಹದಿನೆಂಟನೆಯ ವಯಸ್ಸಿನಲ್ಲಿಯೂ ನನ್ನ ಮಗನಿಗೆ ಅಜ್ಜಿ ತಾತ ಎಂದರೆ ಕೈವಾರದ ಕೊರಸಪ್ಪ ತಾತ, ಸಾವಿತ್ರಮ್ಮಜ್ಜಿಯರೇ ನೆನಪಾಗುವುದು. ಮಗುವಿನ ಜೊತೆಗೆ ಶಾಲೆಯ ಕೆಲಸ ಮುಗಿಸಿ ಸುಸ್ತಾಗಿ ಬರುತ್ತಿದ್ದ ಅದರಮ್ಮನಿಗೂ ಬಹುತೇಕ ರಾತ್ರಿಗಳಲಿ ಊಟ ಹಾಕಿದ ಅಪ್ಪ ಅಮ್ಮ ಇವರಿಬ್ಬರೂ.
ನೆನಪಿರಲಿ, ಇವೆಲ್ಲಾ ದಶಕಗಳ ಹಿಂದಿನ ವಾಸ್ತವಗಳು. ಈಗಲೂ ನೆನೆದರೆ (ಮರೆತರೆ ತಾನೆ ನೆನೆವುದು) ಮನಸನ್ನು ಅರಳಿಸಿ ಆ ನೆನಪಲ್ಲೇ ಬದುಕಲು ಪ್ರೇರೇಪಿಸುವಂಥವು. ಕ್ರಮೇಣ ಸಮಾಜದ ಕ್ರೂರತೆಯ ಅರಿವಾಗತೊಡಗಿತು. ಇದುವರೆಗೂ ಕಾಡದ ಜಾತಿ, ಧರ್ಮಗಳ ಕಾದಾಟಗಳು ಅಹಂಗಳು ಕಾಡತೊಡಗಿದವು. ಬಹುಶಃ ಎಲೆಕ್ಟ್ರಾನಿಕ್ ಮಾಧ್ಯಮಗಳು, ಇಂಟರ್ನೆಟ್ ಎನ್ನುವ ಅಲ್ಲಾವುದ್ದೀನನ ದೀಪದಂತಹ ಸೌಲಭ್ಯಗಳು ಕಾಣದ, ಕೇಳದ ಸುದ್ದಿಗಳ ಬಿತ್ತರಿಸಿ, ದೃಶ್ಯಗಳ ತೋರಿಸಿ ಜನರ ಮನಸಿನಲ್ಲಿ ಹೊಗೆ ಎಬ್ನಿಸಲಾರಂಭಿಸಿವೆಯೆ? ಅಥವಾ ಹೊಸ ಹೊಸ ಅನುಭವಗಳು ಪರಿಸರಕ್ಕೆ ತೆರೆದುಕೊಳ್ಳುತ್ತಾ ಹೋದಂತೆ ಇದುವರೆಗೂ ಕಾಣದ ವಿಷ ಕಾರುವ ಹಾವುಗಳಿಗೆ ಬಲಿಯಾಗುತ್ತಿದ್ದೇವೆಯೆ?
ಇವೆಲ್ಲ ಇಲ್ಲದ ದಿನಗಳೇ ಚೆನ್ನಾಗಿದ್ದವಲ್ಲ? ಪುಸ್ತಕಗಳ ಕೈಯಿಂದ ಮುಟ್ಟಿ ಖುಷಿಪಟ್ಟು ಓದುವ, ಲೈಬ್ರರಿಯಲ್ಲಿ ಗಂಟೆಗಟ್ಟಲೆ ಬೇಕಾದ ಪುಸ್ತಕ ಹುಡುಕಿ ಓದುವ, ಭೇದಭಾವವಿಲ್ಲದೆ ಕಬಡ್ಡಿ, ಮರಕೋತಿ, ಚಿನ್ನಿದಾಂಡು, ಕುಂಟೆಬಿಲ್ಲೆ ಆಡುವ, ಜಾತಿ, ಧರ್ಮ, ಪಂಥಗಳ ವಾದವಿವಾದಗಳಿಗೆ ಸಿಲುಕದೆ ಒಬ್ಬರನೊಬ್ಬರು ಇದ್ದಂತೆಯೇ ಸ್ವೀಕರಿಸುವ, ಅವರ ಪಾಡಿಗವರ ಬದುಕಲು ಬಿಡುವ, ಬದುಕಲು ಸಹಾಯ ಮಾಡುವ ಆ ದಿನಗಳೆಲ್ಲಿ ಹೋದವು? ಹಿರಿಯರ ಮಾತು ಹಿತದ ಮಾತೆಂದು ಗೌರವಿಸುವ ಆ ಕಾಲ ಎಲ್ಲಿ ಮರೆಯಾಯಿತೋ. ಆಗೆಲ್ಲ ‘ಅಮ್ಮ ಏಳುವುದೇ’ ದೊಡ್ಡ ಕಾಯಿಲೆ ಎನ್ನುವ ದಿನಗಳು, ಮದ್ರಾಸ್ ಕಣ್ಣು ಒಂದೇ ದೊಡ್ಡ ಸಾಂಕ್ರಾಮಿಕ ರೋಗ ಎಂದು ನಂಬಿದ್ದ ದಿನಗಳು. ಕನಸಿನಲ್ಲಿಯೂ ಊಹಿಸದ ಎಬೋಲ, ಹಕ್ಕಿ ಜ್ವರ ಕೊರೋನಗಳು ಅದೆಲ್ಲಿಂದ ಬಂದವೋ ಕಾಣೆ.
ಮರೆತು ಹೋದ ಮನುಷ್ಯತ್ವವ ನೆನಪಿಸಲೇ ಬಂದಂಥವವೇ, ಬದುಕಿನಲ್ಲಿ ಮನುಷ್ಯ ಒಂದೇ ದೊಡ್ಡ ಸಿದ್ಧಾಂತ ಮತ್ತು ಧರ್ಮ. ಅದು ಬಿಟ್ಟು ಬೇರೆ ಯಾವುದೂ ಇಲ್ಲ ಎಂದು ಮನುಕುಲವ ಒಪ್ಪಿಸಲು ಬಂದಂಥವೇ, ಅಥವಾ ಸಾವು-ನೋವುಗಳ ನಡುವೆಯೂ ಜಾತಿ, ಧರ್ಮ, ಪಕ್ಷ ಎಂದು ಮತ್ತಷ್ಟು ಅಜ್ಞಾನದಿಂದ ಹೊಡೆದು ಸಾಯಿರಿ ಎಂದು ಹೇಳಲು ಬಂದವೆ? ನಿಜಕ್ಕೂ ಗೊತ್ತಿಲ್ಲ. ನಾ ಕಂಡ, ನಾ ಬಾಳಿದ ದಿನಗಳು ಖಂಡಿತಾ ಇವಲ್ಲವೇ ಅಲ್ಲ. ಬರಲಿ ಮರಳಿ ಅಂತಹ ದಿನಗಳು, ಮನುಷ್ಯ ಪ್ರೀತಿಯ, ಕಾಳಜಿಯ ನೆನಪಿಸುವ ದಿನಗಳು ಎಂದು ಮನಸಾರೆ ಹಾರೈಸುತ್ತೇನೆ.
* ಪರಿಚಯ : ದೇವಯಾನಿ ಎಂಬ ಹೆಸರಿನಡಿಯಲ್ಲಿ ಕಾಲೇಜು ದಿನಗಳಿಂದಲೂ ಕಥೆ, ಕವಿತೆಗಳನ್ನು ಬರೆಯುತ್ತಿರುವ ಶುಭಾ ಎ. ಆರ್. ಮೂಲತಃ ಸರ್ಕಾರಿ ಪ್ರೌಢಶಾಲಾ ಗಣಿತ, ವಿಜ್ಞಾನ ಶಿಕ್ಷಕಿಯಾಗಿದ್ದು ಸದ್ಯಕ್ಕೆ ಸಮಗ್ರ ಶಿಕ್ಷಣದಲ್ಲಿ ಬೆಂಗಳೂರು ಉತ್ತರ ವಲಯ-೧ ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರೌಢಶಾಲಾ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಪಠ್ಯಪುಸ್ತಕ ಸಂಘದ ಸದಸ್ಯರಾಗಿದ್ದು ವಿಜ್ಞಾನ ಪಠ್ಯಪುಸ್ತಕ, ಅಭ್ಯಾಸ ಪುಸ್ತಕಗಳ ರಚನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಿ ಎಸ್ ಇ ಆರ್ ಟಿ ವತಿಯಿಂದ ಪ್ರಕಟವಾಗಿರುವ NTSE ಪರೀಕ್ಷಾ ರೆಫರೆನ್ಸ್ ಪುಸ್ತಕ, ಆದರ್ಶ ವಿದ್ಯಾಲಯ ಶಿಕ್ಷಕರಿಗಾಗಿ ವಿಜ್ಞಾನ ಸಂಪನ್ಮೂಲ ಪುಸ್ತಕ ಹೀಗೆ ಇಲಾಖೆಯ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶಾಲಾ ಮಕ್ಕಳಿಗಾಗಿ ‘ಧರೆಯನುಳಿಸುವ ಬನ್ನಿರಿ’ ಮೂರು ವೈಜ್ಞಾನಿಕ ನಾಟಕಗಳು, ತುಂಡು ಭೂಮಿ- ತುಣುಕು ಆಕಾಶೆಂಬ ಕಥಾ ಸಂಕಲನ, ತುಟಿ ಬೇಲಿ ದಾಟಿದ ನಗು ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದು ಇವರ ಹಲವಾರು ಕಥೆಗಳು, ಕವಿತೆಗಳು ಮತ್ತು ಪ್ರಬಂಧಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಇದನ್ನೂ ಓದಿ : ಏಸೊಂದು ಮುದವಿತ್ತು : ಹುಬ್ಬಳ್ಳಿಯ ಸಿದ್ಧಾರೂಢನನ್ನು ನೆನೆಯುತ್ತ ಕತಾರಿನಲ್ಲಿ ಮಂಡ್ಯದ ಚೈತ್ರಾ
Published On - 4:23 pm, Wed, 12 May 21