Akshaya Tritiya 2021: ಅಕ್ಷಯ ತೃತೀಯ ಆಚರಣೆಯ ಪೌರಾಣಿಕ ಹಿನ್ನೆಲೆ, ಮಹತ್ವ ಮತ್ತು ಚಿನ್ನ ಖರೀದಿಗೆ ಶುಭ ಮುಹೂರ್ತ ತಿಳಿಯಿರಿ
Akshaya Tritiya History in Kannada: ಅಕ್ಷಯ ತೃತೀಯ ಆಚರಣೆಯ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆಯೇನು? ಚಿನ್ನ ಖರೀದಿಗೆ ಉತ್ತಮ ಸಮಯ ಯಾವುದು? ವಿಶೇಷ ಪೂಜೆಯನ್ನು ಯಾವಾಗ ಕೈಗೊಳ್ಳಬೇಕು? ಎಂಬೆಲ್ಲಾ ವಿವರಗಳು ಇಲ್ಲಿವೆ.
ಈ ಬಾರಿಯ ಅಕ್ಷಯ ತೃತೀಯ ಆಚರಣೆಯನ್ನು ಮೇ 14ರಂದು ಅಂದರೆ ನಾಳೆ ಆಚರಿಸಲಾಗುತ್ತಿದೆ. ಈ ದಿನ ಹೊಸ ಕೆಲಸಗಳು, ಹೊಸ ವ್ಯವಹಾರಕ್ಕೆ ಮೊದಲ ಹೆಜ್ಜೆ ಜೊತೆಗೆ ಚಿನ್ನ ಖರೀದಿಗಳನ್ನು ಮಾಡುವುದರಿಂದ ಜೀವನದುದ್ದಕ್ಕೂ ಸುಖ, ಸಮೃದ್ಧಿ ದೊರೆಯುತ್ತದೆ ಎಂಬುದು ಸಾಂಪ್ರದಾಯಿಕವಾಗಿ ಬಂದ ನಂಬಿಕೆ. ಈ ದಿನ ಹೆಚ್ಚು ಉಪಕಾರ, ದಾನ ಮಾಡಲು ಜನರು ಮುಂದಾಗುತ್ತಾರೆ. ನಾವು ಬೇರೆಯವರಿಗೆ ಮಾಡಿದ ಉಪಕಾರ ಬೇರೊಂದು ರೀತಿಯಲ್ಲಿ ನಮಗೆ ಲಭಿಸುತ್ತದೆ ಎಂಬ ಮಾತು ಸತ್ಯವಾದುದು. ದಾನ-ಧರ್ಮದಲ್ಲಿ ತೊಡಗಿಕೊಳ್ಳುವುದರ ಮೂಲಕ ಹೆಚ್ಚಿನ ಜನರು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಯಾವುದಕ್ಕೇ ಆಗಲಿ ಒಳ್ಳೆಯ ಮನಸ್ಸು ಬೇಕಷ್ಟೆ. ಮನಸ್ಸು ಸ್ವಚ್ಛವಾಗಿದ್ದರೆ ಶುಭ ಕೆಲಸಗಳು ತಾನಾಗಿಯೇ ಸುಸೂತ್ರವಾಗಿ ಆಗುತ್ತದೆ. ಆದ್ದರಿಂದ ಪೂಜೆ-ಪುನಸ್ಕಾರ, ದಾನ-ಧರ್ಮಗಳನ್ನು ಹಿರಿಯರು ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದಿದ್ದಾರೆ.
ಅಕ್ಷಯ ತೃತೀಯ ಆಚರಣೆಯ ಪೌರಾಣಿಕ ಹಿನ್ನೆಲೆ ಹಿಂದೂ ಪುರಾಣಗಳ ಪ್ರಕಾರ ತ್ರೇತಾಯುಗ ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ವೈಶಾಖ ಮಾಸದ (ಏಪ್ರಿಲ್-ಮೇ) ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಸಂಸ್ಕೃತದಲ್ಲಿ ವೈಶಾಖ ಎಂದರೆ ಮಂಥನದ ಕೋಲು ಎಂಬ ಅರ್ಥವಿದೆ. ಎಲ್ಲವನ್ನೂ ಮಥಿಸಿ ಅತ್ಯಂತ ಶುಭದ ದಿನ ಹಾಗೂ ಶುಭ ವಿಚಾರಗಳನ್ನು ಕೊಡುವ ದಿನ ಎಂಬ ನಂಬಿಕೆ.
ಪರಶುರಾಮನ ಜಯಂತಿಯನ್ನೂ ಇದೇ ದಿನ ಆಚರಿಸಲಾಗುತ್ತದೆ. ವಿಷ್ಣುವಿನ ಆರನೇ ಅವತಾರ ಪರಶುರಾಮ ಎಂದು ಪರಿಗಣಿಸಲಾಗಿದ್ದು, ಭೂಮಿ ದೇವಿಯ ಮೇಲೆ ಕ್ರೂರ ದೌರ್ಜನ್ಯಗಳು ನಡೆಯುತ್ತಿರುವಾಗ ಇವುಗಳನ್ನೆಲ್ಲಾ ತಡೆಯಲು ಭಗವಾನ್ ವಿಷ್ಣುವು ಪರಶುರಾಮನ ಅವತಾರದಲ್ಲಿ ಬಂದ ಎಂಬುದನ್ನು ಪುರಾಣಗಳು ಹೇಳುತ್ತವೆ. ಭಗೀರಥನ ಪೂರ್ವಜನ ಆತ್ಮಗಳನ್ನು ಶುದ್ಧೀಕರಿಸುವಂತೆ ಶಿವನು ಗಂಗೆಗೆ ಹೇಳುವ ದಿನ ಕೂಡಾ ಇದೇ ದಿನವಾದ್ದರಿಂದ ಗಂಗಾ ಸಪ್ತಮಿಯ ಆಚರಣೆಯನ್ನೂ ಇದೇ ದಿನದಂದು ಆಚರಿಸಲಾಗುತ್ತದೆ.
ಈ ದಿನದಂದು ಒಳ್ಳೆಯ ಕಾರ್ಯ ಮಾಡಿದರೆ ಜೀವನದುದ್ದಕ್ಕೂ ಸಂತೋಷ, ನೆಮ್ಮದಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಭವಿಷ್ಯದಲ್ಲಿ ಹೆಚ್ಚಿನ ಸಂಪತ್ತು ಮತ್ತು ಏಳಿಗೆ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಜನರು ಈ ದಿನದ ವಿಶೇಷವಾಗಿ ಚಿನ್ನ ಖರೀದಿಸುವತ್ತ ಮುಂದಾಗುತ್ತಾರೆ. ಈ ದಿನ ಮಾಡಿದ ಕಾರ್ಯ ಜೀವನದಲ್ಲಿ ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆಯೂ ಕೂಡಾ ಇದೆ.
ಅಕ್ಷಯ ತೃತೀಯದ ಪೂಜಾ ಸಮಯ: ಹಿಂದೂ ಜ್ಯೋತಿಷ್ಯದ ಪ್ರಕಾರ ಅಕ್ಷಯ ತೃತೀಯದ ಸಂಪೂರ್ಣ ದಿವೂ ಕೂಡಾ ಶುಭ ಸಮಯವೇ ಆಗಿದೆ. ಅದಾಗ್ಯೂ ಹೆಚ್ಚಿನ ಸಮೃದ್ಧಿ ಮತ್ತು ಗರಿಷ್ಠ ಲಾಭವನ್ನು ಪಡೆಯಲು ಒಳ್ಳೆಯ ಸಮಯವನ್ನು ಜ್ಯೋತೀಷ್ಯರಲ್ಲಿ ಕೇಳುತ್ತೇವೆ. ಶುಭ ಮುಹೂರ್ತ 2021ರ ಮೇ 14 ನೇ ತಾರೀಕು ಬೆಳ್ಳಿಗ್ಗೆ 5:38ರಿಂದ ಪ್ರಾರಂಭಗೊಳ್ಳುತ್ತದೆ. ಮೇ 15 ನೇ ತಾರಿಕು ಅಂದರೆ ಮಾರನೇ ದಿನ ಬೆಳಿಗ್ಗೆ 7:59ಕ್ಕೆ ಕೊನೆಗೊಳ್ಳುತ್ತದೆ.
ಇನ್ನು, ಅಕ್ಷಯ ತೃತೀಯ ವಿಶೇಷ ಆಚರಣೆಯ ಪೂಜಾ ಮುಹೂರ್ತ ಬೆಳಿಗ್ಗೆ 5:38ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಇದೆ. ಈ ಸಮಯದಲ್ಲಿ ಜನರು ಹೆಚ್ಚಾಗಿ ವಿಷ್ಣುವಿನ ಪ್ರಾರ್ಥನೆಯಲ್ಲಿ ಮತ್ತು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಲ್ಲಿ ತೊಡಗಿಕೊಳ್ಳುತ್ತಾರೆ. ಜೀವನದಲ್ಲಿ ಸುಖ, ನೆಮ್ಮದಿ ಜೊತೆಗೆ ಸಂಪತ್ತು ವೃದ್ಧಿಸಲಿ ಎಂದು ಬೇಡಿಕೊಳ್ಳುತ್ತಾರೆ. ಈ ದಿನ ಬಹಳ ವಿಶೇಷವಾದ್ದರಿಂದ ಯಜ್ಞ-ಯಾಗಾದಿಗಳನ್ನು ಮಾಡುವುದು ಹೆಚ್ಚು.
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಸಮಯ: ಸಂಪತ್ತು ವೃದ್ಧಿಸಲಿ ಎಂಬ ಕಾರಣಕ್ಕೆ ಈ ದಿನ ವಿಶೇಷವಾಗಿ ಚಿನ್ನ ಖರೀದಿಸುವುದು ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ಚಿನ್ನ ಖರೀದಿಸಲು ಉತ್ತಮ ಸಮಯ ನೋಡಿ, ಅದೇ ಸಮಯಕ್ಕೆ ಚಿನ್ನ ಕೊಳ್ಳುವುದರಿಂದ ಜೀವನದಲ್ಲಿ ಸಂಪತ್ತು ವೃದ್ಧಿಸುತ್ತದೆ ಎಂಬ ವಿಶ್ವಾಸ ಜನರಲ್ಲಿದೆ.
ಚಿನ್ನ ಖರೀದಿಗೆ ಒಳ್ಳೆಯ ಸಮಯ 2021 ಮೇ 14ರ ಬೆಳಿಗ್ಗೆ 5:38 ರಿಂದ ಮೇ 15 ರಂದು ಬೆಳಿಗ್ಗೆ 5:50ರವರೆಗೆ ಚಿನ್ನ ಕೊಳ್ಳಲು ಉತ್ತಮ ಸಮಯವಿದೆ.
ಇದನ್ನೂ ಓದಿ: Akshaya Tritiya 2021 Date: ಅಕ್ಷಯ ತೃತೀಯ ದಿನ, ಸಮಯ, ಶುಭ ಮುಹೂರ್ತ ಮತ್ತು ಆಚರಣೆಯ ಮಹತ್ವ ತಿಳಿಯಿರಿ