ಏಸೊಂದು ಮುದವಿತ್ತು : ಹುಬ್ಬಳ್ಳಿಯ ಸಿದ್ಧಾರೂಢನನ್ನು ನೆನೆಯುತ್ತ ಕತಾರಿನಲ್ಲಿ ಮಂಡ್ಯದ ಚೈತ್ರಾ

‘ಅಪ್ಪನಿಗೆ ಬರುತ್ತಿದ್ದ ಎಪ್ಪತ್ತೈದು ರೂಪಾಯಿ ಸಂಬಳದಲ್ಲಿದ್ದ ಸುಖ, ಸಂತೋಷ, ನೆಮ್ಮದಿ ಎಪ್ಪತ್ತೈದು ಸಾವಿರವಾದಾಗ ಇರಲಿಲ್ಲ ಎನ್ನುವುದನ್ನು ಅಪ್ಪ-ಅಮ್ಮ ಮಾತ್ರವಲ್ಲದೆ ನಾನೂ ಒಪ್ಪಿಕೊಳ್ಳುತ್ತಿದ್ದೆ, ಈಗಲೂ ಒಪ್ಪಿಕೊಳ್ಳುತ್ತೇನೆ. ಅಮ್ಮನ ತವರಿನಿಂದ ಅಪ್ಪನಿಗೆ ವರದಕ್ಷಿಣೆಯಾಗಿ ಬಂದಿದ್ದ ಬಜಾಜ್ ಸ್ಕೂಟರ್ ನಮ್ಮ ಪಾಲಿಗೆ ಯಾವ ಮರ್ಸಿಡಿಸ್ ಕಾರಿಗೂ ಕಡಿಮೆಯಿರಲಿಲ್ಲ. ಮೊದಲಿಗೆ ಮೂವರ, ನಂತರದಲ್ಲಿ ನಾಲ್ವರ ಪುಟ್ಟ ಕುಟುಂಬವೊಂದನ್ನು ಇಡೀ ಕರ್ನಾಟಕ ಸುತ್ತಿಸಿದ ಹೆಗ್ಗಳಿಗೆ ಆ ಸ್ಕೂಟರ್ದು.’ ಚೈತ್ರಾ ಅರ್ಜುನಪುರಿ

ಏಸೊಂದು ಮುದವಿತ್ತು : ಹುಬ್ಬಳ್ಳಿಯ ಸಿದ್ಧಾರೂಢನನ್ನು ನೆನೆಯುತ್ತ ಕತಾರಿನಲ್ಲಿ ಮಂಡ್ಯದ ಚೈತ್ರಾ
ಶ್ರೀ ಸಿದ್ದಾರೂಢರು ಮತ್ತು ಲೇಖಕಿ ಚೈತ್ರಾ ಅರ್ಜುನಪುರಿ
Follow us
ಶ್ರೀದೇವಿ ಕಳಸದ
|

Updated on:May 11, 2021 | 5:02 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

ಮಂಡ್ಯ ಮೂಲದ ಚೈತ್ರಾ ಅರ್ಜುನಪುರಿ ಲೇಖಕಿ, ಪತ್ರಕರ್ತೆ ಮತ್ತು ಛಾಯಾಗ್ರಾಹಕಿ. ಸದ್ಯ ವಾಸಿಸುತ್ತಿರುವುದು ಕತಾರ್​ನಲ್ಲಿ. ಹುಬ್ಬಳ್ಳಿಯ ಸಿದ್ದಾರೂಢನ ಜಾತ್ರೆ, ರಾಮನವಮಿಯ ನೆಪದಲ್ಲಿ ಮಂಡ್ಯದಿಂದ ಹುಬ್ಬಳ್ಳಿ ಧಾರವಾಡದವರೆಗಿನ ನೆನಪುಗಳ ಸಮ್ಮಿಶ್ರ ಯಾತ್ರೆಯನ್ನಿಲ್ಲಿ ಹಂಚಿಕೊಂಡಿದ್ದಾರೆ.

*

ನೆನಪುಗಳೇ ಹಾಗೆ, ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಮನದ ಕೋಣೆಯಿಂದ ಹೊರಬಂದು ಕಾಡಿಬಿಡುತ್ತವೆ. ಆಗಾಗ ಒಳ್ಳೆಯ ನೆನಪುಗಳು ಕಚಗುಳಿಯಿಟ್ಟರೆ, ಕೆಟ್ಟ ನೆನಪುಗಳು ಕಣ್ಮುಂದೆ ಬಂದು ದಿಸ್ ಟೂ ಶಲ್ ಪಾಸ್ ಎಂದು ಧೈರ್ಯ ತುಂಬುತ್ತವೆ. ಕೆಲವು ನೆನಪುಗಳು ಸಣ್ಣ ವಿಷಯಗಳಾದರೂ ಜೀವನವನ್ನು ಸಾಕಷ್ಟು ಬಾರಿ ತುಂಬಾ ಪ್ರೀತಿಸುವ ಹಾಗೆ ಮಾಡಿಬಿಡುತ್ತವೆ. ಬಾಲ್ಯದ ನೆನಪುಗಳು ನಮ್ಮಲ್ಲಿರುವ ಮಗುವನ್ನು ಜೀವಂತವಾಗಿಡುವುದಲ್ಲದೆ ಆಗಾಗ ನಮಗರಿವಿಲ್ಲದೇ ಮುಖದ ಮೇಲೊಂದು ಮಂದಹಾಸದ ಸೆಲೆ ತರಿಸಿಬಿಡುತ್ತವೆ.

ಅಪ್ಪನಿಗೆ ಬರುತ್ತಿದ್ದ ಎಪ್ಪತ್ತೈದು ರೂಪಾಯಿ ಸಂಬಳದಲ್ಲಿದ್ದ ಸುಖ, ಸಂತೋಷ, ನೆಮ್ಮದಿ ಎಪ್ಪತ್ತೈದು ಸಾವಿರವಾದಾಗ ಇರಲಿಲ್ಲ ಎನ್ನುವುದನ್ನು ಅಪ್ಪ-ಅಮ್ಮ ಮಾತ್ರವಲ್ಲದೆ ನಾನೂ ಒಪ್ಪಿಕೊಳ್ಳುತ್ತಿದ್ದೆ, ಈಗಲೂ ಒಪ್ಪಿಕೊಳ್ಳುತ್ತೇನೆ. ಅಮ್ಮನ ತವರಿನಿಂದ ಅಪ್ಪನಿಗೆ ವರದಕ್ಷಿಣೆಯಾಗಿ ಬಂದಿದ್ದ ಬಜಾಜ್ ಸ್ಕೂಟರ್ ನಮ್ಮ ಪಾಲಿಗೆ ಯಾವ ಮರ್ಸಿಡಿಸ್ ಕಾರಿಗೂ ಕಡಿಮೆಯಿರಲಿಲ್ಲ. ಮೊದಲಿಗೆ ಮೂವರ, ನಂತರದಲ್ಲಿ ನಾಲ್ವರ ಪುಟ್ಟ ಕುಟುಂಬವೊಂದನ್ನು ಇಡೀ ಕರ್ನಾಟಕ ಸುತ್ತಿಸಿದ ಹೆಗ್ಗಳಿಗೆ ಆ ಸ್ಕೂಟರ್ದು. ಸ್ಕೂಟರಿನಲ್ಲಿ ಕುಟುಂಬವಾಗಿ ನಾವು ಓಡಾಡಿದಷ್ಟು ಅಪ್ಪ ಕಾರು ತೆಗೆದುಕೊಂಡ ಮೇಲೆ ಓಡಾಡಲೇ ಇಲ್ಲ. ಕಾರೆಂಬ ಆ ಮಾರುತಿ ಕಾರು ಅಪ್ಪ ಮತ್ತವರ ಗೆಳೆಯರ ಪ್ರತಿಷ್ಠೆಯ ವಾಹನವಾಗಿಬಿಟ್ಟಿತ್ತೇ ವಿನಃ ಕುಟುಂಬದ ಉಪಯೋಗಕ್ಕೆ ಬರುತ್ತಲೇ ಇರಲಿಲ್ಲ!

ಹುಬ್ಬಳ್ಳಿ ನಂಟು

ಪ್ರತಿ ವರ್ಷ ಶ್ರೀ ರಾಮನವಮಿಯನ್ನೇ ಚಾತಕ ಪಕ್ಷಿಗಳ ಹಾಗೆ ಕಾಯುತ್ತಿದ್ದ ನಮಗೆ ಒಮ್ಮೊಮ್ಮೆ ಆ ೧೫-೨೦ ದಿನಗಳಲ್ಲಿ ಮಂಡ್ಯದಿಂದ ಗುಲ್ಬರ್ಗಾ, ಬೀದರ್ವರೆಗೂ ನಮಗೆ ಎಲ್ಲಾ ಜಿಲ್ಲೆಗಳ ದರ್ಶನ ಮಾಡಿಸುತ್ತಿದ್ದ ಹೆಗ್ಗಳಿಕೆ ಆ ಸ್ಕೂಟರ್ದು. ಪ್ರತಿ ಜಿಲ್ಲೆಯಲ್ಲೂ ಅಪ್ಪನಿಗಿದ್ದ ಗೆಳೆಯರ ಮನೆಯಲ್ಲಿ ಒಂದೆರಡು ದಿನಗಳು ಉಳಿದುಕೊಂಡು ಅಲ್ಲಿನ ಸುತ್ತಮುತ್ತಲಿನ ಜಾಗಗಳನ್ನು ನೋಡಿಕೊಂಡು ಮತ್ತೆ ಸ್ಕೂಟರ್ ಹತ್ತಿದರೆ ಮುಂದಿನ ನಿಲ್ದಾಣ ಮತ್ತೊಬ್ಬ ಗೆಳೆಯರ ಮನೆಯಲ್ಲಿ, ಮತ್ತೊಂದು ಜಿಲ್ಲೆಯಲ್ಲಿ.

ಸ್ಕೂಟರಿನಲ್ಲಿ ಅಪ್ಪನ ಸೀಟಿನ ಮುಂದೆ ಹ್ಯಾಂಡಲ್ ಹಿಡಿದುಕೊಂಡು ಎದುರಿನಿಂದ ಬರುತ್ತಿದ್ದ ಗಾಳಿಗೆ ಮುಖವೊಡ್ಡಿ ನಿಂತರೆ ತಲೆಯ ಮೇಲಿರುತ್ತಿದ್ದ ಪುಟ್ಟು ಜುಟ್ಟುಗಳ ನಡುವಲ್ಲಿ ಬಂಡಾಯವೆದ್ದಂತೆ ಪುಡಿ ಕೂದಲುಗಳು ಮೊಗದ ಮೇಲೆಲ್ಲಾ ಹರಡಿಕೊಳ್ಳುತ್ತಿದ್ದವು. ಕಣ್ಣು ಕಿರಿದು ಮಾಡಿಕೊಂಡು ಖುಷಿಯಲ್ಲಿ ಅತ್ತಿತ್ತ ನೋಡುತ್ತಾ ಸಾಗುತ್ತಿದ್ದರೆ ಅದೇ ನನ್ನ ಪಾಲಿಗೆ ಆಗ ಏರೋಪ್ಲೇನು, ಟೈಟಾನಿಕ್ ಹಡಗು.

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಶ್ರೀರಾಮನವಮಿ ಹಬ್ಬದಾಚರಣೆಗೆಂದು ಹೋದರೆ ನಮ್ಮ ಸಂಭ್ರಮ ಹೇಳತೀರದು. ಮೂರು ತಿಂಗಳ ಮುಂಚೆಯೇ ರೈಲಿನಲ್ಲಿ ರಾಮನವಮಿಯ ಮೂರ್ನಾಲ್ಕು ದಿನ ಮುಂಚೆ ಹುಬ್ಬಳ್ಳಿ ತಲುಪುವ ಹಾಗೆ ಅಪ್ಪ ಎಲ್ಲರಿಗೂ ರಿಸರ್ವೇಶನ್ ಮಾಡಿದರೆ, ಅಲ್ಲಿಂದಲೇ ಹುಬ್ಬಳ್ಳಿ ತಲುಪಲು ಇನ್ನೆಷ್ಟು ದಿನಗಳಿವೆಯೆಂದು ಎಣಿಸಲು ಶುರು ಮಾಡಿಕೊಳ್ಳುತ್ತಿದ್ದೆವು.

ಬೆಂಗಳೂರು, ತುಮಕೂರು, ಪುಣೆ, ಬಾಂಬೆಯಿಂದ ಬರುತ್ತಿದ್ದ ಗೆಳೆಯರೆಲ್ಲರೂ ವರ್ಷಕ್ಕೊಮ್ಮೆ ಸೇರುತ್ತಿದ್ದ ಆ ದಿನಗಳು ಮನಸ್ಸಿನಲ್ಲಿ ಈಗಲೂ ಹಸಿ ಹಸಿ. ಮಕ್ಕಳಾದ ನಾವು ಕಾದು ಕೆಂಡವಾಗಿರುತ್ತಿದ್ದ ಕೆಂಬಣ್ಣದ ನೆಲದ ಮೇಲೆ ಕಾಲುಗಳನ್ನು ಹಪ್ಪಳ ಮಾಡಿಕೊಂಡು ಚಿಕ್ಕ ಅಡುಗೆಮನೆ, ದೊಡ್ಡ ಅಡುಗೆಮನೆ, ಕೈಲಾಸ ಮಂಟಪ, ಅನುಗ್ರಹ ಮಂದಿರದಲ್ಲಿ ಓಡಾಡುತ್ತಾ, ಅಪ್ಪ ಅಮ್ಮನಿಗೆ ತಿಳಿಯದಂತೆ ಅಡುಗೆ ಮನೆಯ ಹಿಂದಿದ್ದ ಮಾವಿನ ತೋಪಿನಲ್ಲಿ ಪೀಚು ಮಾವಿನಕಾಯಿಗಳನ್ನು ಕಿತ್ತು, ಕೊಳದ ಕೆಂಪು ನೀರಿನಲ್ಲಿ ತೊಳೆದು, ಕಲ್ಲಿನಲ್ಲಿ ಜಜ್ಜಿ, ಅಡುಗೆಮನೆಯಿಂದ ಪೇಪರಿನಲ್ಲಿ ಕಟ್ಟಿಕೊಂಡು ಬಂದಿದ್ದ ಉಪ್ಪಿನ ಜೊತೆಯಲ್ಲಿ ನೆಂಚಿಕೊಂಡು ತಿನ್ನುತ್ತಿದ್ದರೆ ಯಾರು ಹೇಳುತ್ತಿದ್ದರು ಸ್ವರ್ಗ ಬೇರೆಲ್ಲೋ ಇದೆಯೆಂದು!

Yesondu mudavittu

ಎಲ್ಲ ಸಿದ್ಧಾರೂಢನಿಗಾಗಿ

ಹೂವುಗಳ ಸುವಾಸನೆ

ಸೇವಂತಿಗೆ, ಚೆಂಡು ಹೂವಿನ ಮತ್ತು ಸುಗಂಧರಾಜದ ಹೂ ಮಾಲೆಗಳನ್ನು ಸೂಜಿಯಿಂದ ಚುಚ್ಚಿ ದಾರದಲ್ಲಿ ಪೋಣಿಸಿ ದಿನವೂ ಆರೂಢರಿಗೆ ಕಟ್ಟುತ್ತಿದ್ದ ಹೂಮಾಲೆಗಳಲ್ಲಿ ನಾನು ಕಟ್ಟುವ ಮಾಲೆಗಳೂ ಇರುತ್ತಿದ್ದವು ಎನ್ನುವ ನೆನಪುಗಳು ಈಗಲೂ ಮೈ ನವಿರೇಳಿಸುತ್ತವೆ. ಅಪ್ಪಾಜಿ ಮಗಳು ಎಲ್ಲಿ ಎಂದರೆ ಅಲ್ಲಿದ್ದ ಅಷ್ಟೂ ಜನರಿಗೆ ತಿಳಿದಿತ್ತು, ಒಂದೋ ಹುಡುಗಿ ಹೂವು ಕಟ್ಟುವ ಗುಂಪಿನಲ್ಲಿದ್ದಾಳೆ, ಇಲ್ಲವೇ ಕೈಲಾಸ ಮಂಟಪದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದಾಳೆಂದು.

ಇದಲ್ಲದೆ, ಸುಗಂಧರಾಜ ಹೂವುಗಳ ಸುವಾಸನೆಯನ್ನು ನಾನು ಈಗಲೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಸೂಜಿಗೆ ಒಂದೊಂದೇ ಹೂವನ್ನು ಸೂಕ್ಷ್ಮವಾಗಿ, ಮೃದು ದಳಗಳು ಹರಿಯದಂತೆ, ಮುರಿಯದಂತೆ ಸೂಜಿಗೆ ಚುಚ್ಚಿ, ನಡುವಲ್ಲಿ ನಾಗಪುಷ್ಪ, ಗುಲಾಬಿ ಹೂವುಗಳನ್ನೂ ಸೇರಿಸಿ ದಾರಕ್ಕೆ ನವಿರಾಗಿ ಸರಿಸುವಾಗ, ಒಮ್ಮೊಮ್ಮೆ ಸೂಜಿಯ ಮೊನಚಾದ ತುದಿ ಬೆರಳಿಗೆ ತಾಕಿ ಬಾಯಿಂದ ಸಿದ್ಧಾರೂಢ ಎನ್ನುವ ಉದ್ಘಾರ ಹೊರಬಂದಾಗ, ಪಕ್ಕದಲ್ಲಿ ಹೂ ಕಟ್ಟುವ ಹೆಂಗಸರು, “ಜ್ವಾಕಿ, ಕೂಸೇ,” ಎನ್ನುವುದು ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಈ ಹಳೆಯ ಸಂಗತಿಗಳನ್ನು ಹಿಂತಿರುಗಿ ನೋಡಿದಾಗಲೆಲ್ಲಾ ನನ್ನ ಮೂಗಿಗೆ ಸುಗಂಧರಾಜ, ನಾಗಪುಷ್ಪ, ಗುಲಾಬಿ ಹೂವು ಮಿಶ್ರಿತ, ಸುಮಧುರ, ವಿಶಿಷ್ಟ ಪರಿಮಳ ಮೂಗಿಗೆ ಬಡಿದಂತಾಗುತ್ತದೆ.

ಚಿಕ್ಕ ಅಡುಗೆಮನೆಯಲ್ಲಿ ಅಜ್ಜನವರಿಗಿಡುತ್ತಿದ್ದ ಪ್ರಸಾದದ ತಟ್ಟೆಯನ್ನು ನನಗಾಗಿ ಎತ್ತಿರಿಸುತ್ತಿದ್ದ ಗೋವಿಂದ ಸ್ವಾಮಿಗಳು, “ಇದು ಅಪ್ಪಾಜಿ ಮಗಳಿಗೆ. ದಿನವೂ ಎಷ್ಟು ಚೆನ್ನಾಗಿ ಅಜ್ಜನಿಗೆ ಹೂವು ಕಟ್ಟುತ್ತೆ ಹುಡುಗಿ,” ಎಂದು ಅಪ್ಪ, ಇಲ್ಲವೇ ಅಮ್ಮನ ಕೈಯಲ್ಲಿ ಕೊಟ್ಟು ಕಳುಹಿಸುತ್ತಿದ್ದರು. ಜೋಳದ ಖಡಕ್ ರೊಟ್ಟಿ, ಬದನೆ ಎಣ್ಣೆಗಾಯಿ, ಕೋಸಂಬರಿ, ಅನ್ನ, ಬದನೆ, ಕುಂಬಳ ಸಾರು, ಮಜ್ಜಿಗೆ, ಪಾನಕ, ಅಜ್ಜನವರ ಪ್ರಸಾದಕ್ಕಾಗಿಯೇ ವಿಶೇಷವಾಗಿ ಮಾಡುತ್ತಿದ್ದ ಕೊಬ್ಬರಿ ಒಬ್ಬಟ್ಟು, ಪಂಚಾಮೃತ, ಗೋಧಿ ಹುಗ್ಗಿಯಿರುತ್ತಿದ್ದ ಪ್ರಸಾದದ ತಟ್ಟೆಯನ್ನು ಅಜ್ಜನೇ ನನಗಾಗಿ ಕಳುಹಿಸಿದ್ದಾರೆಂದು ಖುಷಿಯಲ್ಲಿ ಸವಿಯುತ್ತಿದ್ದೆ.

ಬಾಲ್ಯದ ತುಂಟಾಟಗಳು

ತುಮಕೂರಿನಿಂದ ಬರುತ್ತಿದ್ದ ಚೆನ್ನಮ್ಮಜ್ಜಿಗೆ ಎಲೆ ಅಡಿಕೆಯನ್ನು ಕುಟಾಣಿಯಲ್ಲಿ ಕುಟ್ಟಿಕೊಡುತ್ತಿದ್ದದ್ದು ಆಕೆಯ ಬೈಗುಳದ ಭಯಕ್ಕೆ ಎನ್ನುವುದು ಆಕೆಗೂ ತಿಳಿದಿತ್ತು. ಹತ್ತಿಮತ್ತೂರು ದಾಸೋಹದಲ್ಲಿ, ಕೆಲವೊಮ್ಮೆ ಬ್ರಾಹ್ಮಣರ ದಾಸೋಹದಲ್ಲಿ ಚೆನ್ನಮ್ಮಜ್ಜಿ ಕಂಡರೆ ಆಕೆಯ ಕಣ್ಣುಗಳಿಂದ ತೃಪ್ಪಿಸಿಕೊಳ್ಳಲು ಕಂಬದ ಹಿಂಬದಿಗಳಲ್ಲಿ ನಿಂತು ಆಕೆ ಅತ್ತಿತ್ತ ನೋಡುವಾಗ ಮಕ್ಕಳೆಲ್ಲಾ ಅಲ್ಲಿಂದ ಮೆಲ್ಲನೆ ಜಾರಿಕೊಳ್ಳುತ್ತಿದ್ದೆವು. ಆ ಅಜ್ಜಿಯ ಬಾಯಿಗೆ ಹೆದರುತ್ತಿದ್ದ ಲಿಸ್ಟಿನಲ್ಲಿ ಮಕ್ಕಳು ಮಾತ್ರವಲ್ಲದೆ ಮಠಕ್ಕೆ ಬರುತ್ತಿದ್ದ ಭಕ್ತರೂ ಇದ್ದರು ಎನ್ನುವುದನ್ನು ನೆನಸಿಕೊಂಡರೇ ನಗು ಬರುತ್ತದೆ.

ಚಿಕ್ಕ ಅಡುಗೆಮನೆಯಲ್ಲಿ ಕಸ ಗುಡಿಸಿ, ಪಾತ್ರೆ ತೊಳೆದುಕೊಡಲು ಬರುತ್ತಿದ್ದ ಗಂಗಮ್ಮ ಕಾಕೂ ತುಂಬಿಸಿಡುತ್ತಿದ್ದ ನೀರಿನಲ್ಲಿ ಆಟವಾಡಿ ಆಕೆಯ ಬೈಗುಳಗಳಿಗೆ ಬಲಿಯಾಗುತ್ತಿದ್ದ ನೆನಪುಗಳೂ ಮನಸ್ಸಿಗೆ ಮುದ ನೀಡುತ್ತವೆ. “ಈ ಬೆಂಗ್ಳೂರ್ ಮಂದಿ ಹೇಳಿದ್ ಮಾತೆ ಕೇಳ್ವೊಲ್ರು ನೋಡ್ ಬೇ. ಮತ್ತೆ ಇತ್ತ ಪಾಣ್ಯಾನೆ ಖೇಳತ್ ಆಹೆ, ಸಕಾಳ್ ಜಳಕಕ್ ನಾ ಪಾಣಿ ಕೊಡಂಗಿಲ್ಲ ನೋಡ್ ಮತ್ತ ನಿಂಗ,” ಎಂದು ಮರಾಠಿ ಮಿಶ್ರಿತ ಕನ್ನಡದಲ್ಲಿ ಗದರಿ ನಮ್ಮನ್ನು ಹೊರಗೆ ಅಟ್ಟುತ್ತಿದ್ದಳು. ಅವಳ ಬೆದರಿಕೆಗೆ ಜಗ್ಗದಿದ್ದರೆ, “ತಾಳ ಮತ್ತ, ಕರೀತೀನಿ ನಿನ್ನ ಆಯಿನ,” ಎನ್ನುತ್ತಾ “ರೀ, ಲತಾ ಬಾಯಿ, ಬರ್ರೀ, ನೋಡ್ರಿ ನಿಮ್ಮ ಮಗ್ಳು ಅವತಾರಾನ,” ಎಂದು ಕೂಗು ಹಾಕಿದರೆ ಮುಗಿಯಿತು, ಅಮ್ಮನ ಹೊಡೆತಕ್ಕೆ ಬೆದರಿ ಕಾಲುಗಳು ಚಿಗರೆಯ ಹಾಗೆ ಚಿಕ್ಕ ಅಡುಗೆ ಮನೆಯನ್ನು ದಾಟಿ ಕೊಳದ ಕಡೆಗೋ, ಕೈಲಾಸ ಮಂಟಪದ ಕಡೆಗೋ ಚಿಮ್ಮುತ್ತಿದ್ದವು.

Yesondu mudavittu

ಹುಬ್ಬಳ್ಳಿಯ ಸಿದ್ಧಾರೂಢ ಮಠ

ಬೀಗವಿರದ ಕೋಣೆ

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ನನಗೆ ಅತಿ ಪ್ರಿಯವಾದ ಸ್ಥಳ ಕೈಲಾಸ ಮಂಟಪ. ಅದರ ಎತ್ತರದ ಚಾವಣಿಗೋ, ಅಥವಾ ಅಲಂಕಾರಿಕ ಟೈಲ್ಸ್ಗೋ, ಅಥವಾ ಬಿರುಬೇಸಿಗೆಯಲ್ಲೂ ತಂಪಾಗಿರುತ್ತಿದ್ದ ಕಾರಣಕ್ಕೋ ಗೊತ್ತಿಲ್ಲ ಕೈಲಾಸ ಮಂಟಪ ನನಗೆ ಚಿಕ್ಕಂದಿನಿಂದಲೂ ಅಚ್ಚುಮೆಚ್ಚು. ಹನುಮಂತು ಮಾಮನನ್ನ ನೆನಪಿಸಿಕೊಳ್ಳದೆ ಕೈಲಾಸ ಮಂಟಪವನ್ನು ನೆನೆಸಿಕೊಳ್ಳಲೂ ಸಾಧ್ಯವಿಲ್ಲ.

ಕೈಲಾಸ ಮಂಟಪದಲ್ಲಿ ವಾಸವಿದ್ದ ಸನ್ಯಾಸಿ (ಹೆಸರು ಮರೆತಿದ್ದೇನೆ)ಯೊಬ್ಬರ ಮಗ ಹನುಮಂತು. ಅವನು ರಾಮನವಮಿಯ ಸಮಯಕ್ಕೆ ಬೆಂಗಳೂರಿನ ಹಾಸ್ಟೆಲಿನಿಂದ ಬರುತ್ತಿದ್ದ. ಮಕ್ಕಳೆಲ್ಲರೂ ಅವನನ್ನು ಭಾವೂ ಎಂದು ಕರೆದರೆ ನಾನು ಅವನನ್ನು ಮಾಮ ಎಂದೇ ಕರೆಯುತ್ತಿದ್ದೆ. ಹನುಮಂತು ಮಾಮ ಮಧ್ಯಾಹ್ನದ ಪ್ರಸಾದವಾದ ಮೇಲೆ ಕಥೆಗಳನ್ನು ಹೇಳುವುದು ಮಾತ್ರವಲ್ಲದೆ ಮಠದ ಸುತ್ತಮುತ್ತಲೂ ಕರೆದುಕೊಂಡು ಹೋಗುತ್ತಿದ್ದ.

ಅವನ ತಂದೆ ಕೈಲಾಸ ಮಂಟಪದಲ್ಲಿ ಸನ್ಯಾಸಿಗಳಿಗೆ ಮೀಸಲಾಗಿರುವ ಕೋಣೆಗಳೊಂದರಲ್ಲಿದ್ದರು. ಮಂಟಪದ ಮೇಲಿರುವ ಆರೂಢರ ಮೂರ್ತಿಯನ್ನು ತಲುಪಲು ಇದ್ದ ಮೆಟ್ಟಿಲುಗಳು ಹನುಮಂತುವಿನ ತಂದೆಯ ಕೋಣೆಯೊಳಗಿದ್ದವು. ಮರದ ಮೆಟ್ಟಿಳುಗಳನ್ನೇರಿ ಮೆಲ್ಲಗೆ ಮೇಲಿನಿಂದ ಹೊರಗೆ ಕುತೂಹಲದಿಂದ ಇಣುಕಿ ಕೈಲಾಸ ಮಂಟಪವನ್ನು ನೋಡುತ್ತಿದ್ದ ದಿನಗಳು ಮನಸ್ಸಿನಲ್ಲಿ ಆಗಾಗ ಇಣುಕಿ ಹೋಗುತ್ತವೆ. ಸನ್ಯಾಸಿಯಾಗಿದ್ದ ಹನುಮಂತುವಿನ ತಂದೆಯ ಮಂಚದ ಮೇಲೆ ಜಿಂಕೆಯ ಚರ್ಮದ ಹಾಸಿತ್ತು. ಅಲ್ಲಿಗೆ ಹೋದಾಗಲೆಲ್ಲಾ ಅದನ್ನು ಸವರಿ ಅದರ ನುಣುಪನ್ನು ನೋಡುವುದು, ಅವನ ತಂದೆ ಧರಿಸುತ್ತಿದ್ದ ಮರದ ಆವುಗೆಗಳನ್ನು ನಾನು ಹಾಕಿಕೊಳ್ಳಲು ಪ್ರಯತ್ನಿಸುವುದೆಲ್ಲವನ್ನೂ ನೆನೆಸಿಕೊಂಡರೆ ನಗು ಬರುತ್ತದೆ.

ಹನುಮಂತು ಮಾಮ ನೋಡಲು ನಟ ಶಿವರಾಜ್ಕುಮಾರ್ ಥರ ಎಂದು ಹೇಳುತ್ತಿದ್ದ ನಾನು ಅವನನ್ನು ರೇಡಿಯೋದಲ್ಲಿ ಹಾಡುಗಳನ್ನು ಹಾಕಲು ಪೀಡಿಸುತ್ತಿದ್ದೆ, ಅದೇನಿದ್ದರೂ ಸುದ್ದಿ ಕೇಳಲು ಮಾತ್ರ ಎಂದು ಅವನು ನಕ್ಕು ನಮ್ಮ ಗಮನವನ್ನು ಕಥೆಗಳ ಕಡೆಗೆ ಹೊರಳಿಸುತ್ತಿದ್ದ. ಲೌಕಿಕವನ್ನು ತೊರೆದ ಸನ್ಯಾಸಿಯ ಕೋಣೆಯಲ್ಲಿ ಚಿತ್ರಗೀತೆಗಳು ಏಕೆ ನಿಷಿದ್ಧವೆನ್ನುವುದು ನನಗೆ ಆ ಸಣ್ಣ ವಯಸ್ಸಿನಲ್ಲಿ ಅರ್ಥವಾಗುತ್ತಿರಲಿಲ್ಲ.

ಅವರು ವಾಸವಿದ್ದ ಆ ಕೋಣೆಗೆ ಯಾವುದೇ ಬೀಗವಿಲ್ಲದಿರುವುದು ಬೇರೆ ಮಕ್ಕಳಿಗೆ ಸದಾ ಸೋಜಿಗವಾದರೆ ನನಗೆ ಅದರಲ್ಲಿ ಯಾವ ಅಚ್ಚರಿಯೂ ಕಾಣುತ್ತಿರಲಿಲ್ಲ. ಸನ್ಯಾಸಿಯ ಕೋಣೆಯಲ್ಲಿ ಕದಿಯಲು ನಾಲ್ಕು ಜೊತೆ ಕಾವಿ ಬಟ್ಟೆ, ಒಂದು ಜೊತೆ ಆವುಗೆ, ಹಳೆಯ ರೇಡಿಯೋ, ಕುಡಿಯಲು ಮಡಕೆಯಲ್ಲಿ ತುಂಬಿರಿಸಿದ್ದ ತಂಪಾದ ನೀರು ಬಿಟ್ಟರೆ ಲೌಕಿಕವಾದ ವಸ್ತು ಬೇರೇನಿತ್ತು?

ಬಾಗಿಲಲ್ಲದ ಬಾಗಿಲಿನ ಮನೆ

ಹಾಗೆ ನೋಡಿದರೆ ಆಗ ಊರಿನಲ್ಲಿದ್ದ ನಮ್ಮ ಮನೆಗೆ ಚಿಲಕವಿರಲಿ, ಸರಿಯಾದ ಬಾಗಿಲೇ ಇರಲಿಲ್ಲ. ನಾಲ್ಕೈದು ರಿಪೀಸ್ ಪಟ್ಟಿಗಳನ್ನು ಸೇರಿಸಿ ಎಂಟೋ-ಹತ್ತೋ ಮೊಳೆ ಹೊಡೆದು ಬಾಗಿಲೆಂದು ಅದನ್ನು ಅಪ್ಪ ಹೊಸ್ತಿಲಿಗೆ ನಿಲ್ಲಿಸಿದ್ದರು. ರಾತ್ರಿ ಹೊತ್ತು ಯಾರಾದರೂ ಆ ಬಾಗಿಲಲ್ಲದ ಬಾಗಿಲನ್ನು ಒದ್ದು ಒಳ ನುಗ್ಗುತ್ತಾರೆನ್ನುವ ಭಯಕ್ಕೆ ಎರಡು ಖಾಲಿ ಟಾರಿನ ಡ್ರಮ್ಮುಗಳನ್ನಿರಿಸಿ, ಅದರೊಳಗೆ ದಿಂಡುಗಲ್ಲುಗಳನ್ನು ಹಾಕಿಡುತ್ತಿದ್ದರು. ಮನೆಯಲ್ಲಿ ಪಾತ್ರೆಗಳು, ನಮ್ಮ ಬಟ್ಟೆಬರೆ, ಅಪ್ಪ ಸಂಗ್ರಹಿಸಿದ್ದ ಪುಸ್ತಕದ ರಾಶಿ ಬಿಟ್ಟರೆ ಕದಿಯಲು ಬೇರೇನೂ ಇರಲಿಲ್ಲ. ಅಮ್ಮನ ಕತ್ತಿನಲ್ಲಿದ್ದ ತಾಳಿ ಸರ ಬಿಟ್ಟರೆ ತವರಿನಿಂದ ಆಕೆಗೆ ಮದುವೆಯಲ್ಲಿ ಕೊಟ್ಟಿದ್ದ ಒಡವೆಗಳೆಲ್ಲಾ ಸದಾ ಗಿರವಿ ಅಂಗಡಿಗಳಲ್ಲೇ ಕೊಳೆಯುತ್ತಿದ್ದವು. ಅಷ್ಟಕ್ಕೂ ಅಮ್ಮನ ಒಡವೆಗಳು ಆಕೆಯ ಮೈಮೇಲೆ ರಾರಾಜಿಸಿದ್ದಕ್ಕಿಂತ ಸೇಠುಗಳ, ಬ್ಯಾಂಕುಗಳ ತಿಜೋರಿಯಲ್ಲಿ ಅವಿತುಕೊಂಡಿದ್ದದ್ದೇ ಹೆಚ್ಚು. ಒಡವೆಗಳಿಲ್ಲದೆ ಸಂಬಂಧಿಕರ ಮುಂದೆ ಹೋಗಲು ಅವಮಾನವೆಂದು ಅಮ್ಮ ಮದುವೆ ಮುಂಜಿಗಳಿಗೂ ಹೋಗುವುದನ್ನೂ ನಿಲ್ಲಿಸಿಬಿಟ್ಟಿದ್ದರು.

ರಾತ್ರಿ ಅಪ್ಪ ಮತ್ತು ನಾವು ಎಂಟು ಗಂಟೆಗೆಲ್ಲಾ ಮಲಗಿದರೆ, ಅಮ್ಮ ಪ್ರತಿ ರಾತ್ರಿ ಎರಡು ಗಂಟೆಯವರೆಗೆ ಎಚ್ಚರವಿದ್ದು, ಮಾರನೆಯ ಬೆಳಗ್ಗೆ ನಮಗೆ ತಿಂಡಿ ಮತ್ತು ಊಟಕ್ಕೆ ಬೇಕಾಗುವ ತರಕಾರಿಗಳನ್ನು ಹೆಚ್ಚಿ, ಪುಸ್ತಕಗಳನ್ನು ಓದಿಕೊಂಡು ಮನೆಯ ಕಾವಲು ಕಾಯುತ್ತಿದ್ದರು. ಎರಡು ಗಂಟೆಯಿಂದ ಬೆಳಗಾಗುವವರೆಗೂ ಪಿಎಚ್​.ಡಿ ಓದು, ಬರವಣಿಗೆಯ ಜೊತೆಗೆ ನಮ್ಮನ್ನು ಕಾಯುವ ಸರದಿ ಅಪ್ಪನದಾಗಿತ್ತು. ಅಪ್ಪನಿಗೆ ಬರುತ್ತಿದ್ದ ತಿಂಗಳ ಸಂಬಳದಲ್ಲಿ ಮನೆ ಖರ್ಚಿನ ಜೊತೆಗೆ ಮನೆ ಕಟ್ಟಿಸುವ ಕಾರ್ಯವೂ ಜೊತೆ ಜೊತೆಯಲ್ಲಿಯೇ ಆಮೆಗತಿಯಲ್ಲಿ ಸಾಗುತ್ತಿತ್ತು. ಗೋಡೆಗಳಿಗಾಗಲಿ, ನೆಲಕ್ಕಾಗಲಿ ಗಾರೆಯಿಲ್ಲದ; ಹೊಸ್ತಿಲಿಗಾಗಲಿ, ಕಿಟಕಿಗಳಿಗಾಗಲಿ ಬಾಗಿಲಿಲ್ಲದ, ಆ ನಮ್ಮ ಮನೆಯಲ್ಲಿ ಸೀಮೆ ಎಣ್ಣೆಯ ಲಾಟೀನು ರಾತ್ರಿಯೆಲ್ಲ ಉರಿಯುತ್ತಿತ್ತು.

ನಿಜ ಹೇಳಬೇಕೆಂದರೆ ಆಗ ನಮಗೆ ಭಯವಿದ್ದುದ್ದು ಕದಿಯಲು ಬರುವ ಕಳ್ಳರದಲ್ಲ, ನಮ್ಮನ್ನು ಸಾಯಿಸುವಷ್ಟು ಹಗೆ ಸಾಧಿಸುತ್ತಿದ್ದ ಅಪ್ಪನ ಸಹೋದರರದ್ದು. ಒಮ್ಮೆ ಅಪ್ಪನ ತಮ್ಮಂದಿರು ಜಗಳವಾಡುತ್ತಾ ಬಾಗಿಲಲ್ಲದ ಬಾಗಿಲು ಮುರಿದು ಮನೆಯೊಳಗೇ ನುಗ್ಗಿ ಅಪ್ಪನಿಗೆ ರಿಪೀಸ್ ಪಟ್ಟಿಗಳಲ್ಲಿ ಹಿಗ್ಗಾ ಮುಗ್ಗಾ ಥಳಿಸಿದಾಗ, ನಮ್ಮನ್ನು ರಕ್ಷಿಸಲು ಬಂದದ್ದು ಮನೆಯ ಹೊರಗೆ ಜಮಾಯಿಸಿದ್ದ ಹಳ್ಳಿ ಜನರಲ್ಲ, ಬದಲಾಗಿ ಅಪ್ಪನ ಚಿಕ್ಕಪ್ಪನ ಮಗನೊಬ್ಬನೇ. ಆ ದಿನ ಅವನಿರದಿದ್ದರೆ ಬಹುಶಃ ಅಪ್ಪನನ್ನು ಅವರ ತಮ್ಮಂದಿರು ಅಂದು ಕೊಂದೇಬಿಡುತ್ತಿದ್ದರು. ಆ ರಾತ್ರಿ ಅಪ್ಪ, ಅಮ್ಮ ಎಷ್ಟು ಬೇಡವೆಂದರೂ ಬಾಗಿಲಿಲ್ಲದ ಮನೆಯ ಹೊರಗೆ ಆಂಜನೇಯನ ಹಾಗೆ ಕಾವಲು ಕೂತವನು ಅದೇ ಅಪ್ಪನ ಚಿಕ್ಕಪ್ಪನ ಮಗ!

ಆ ರಾತ್ರಿ ಮನೆಯಲ್ಲಿ ಯಾರ ಕಣ್ರೆಪ್ಪೆಯೂ ಮುಚ್ಚಿರಲಿಲ್ಲ, ಹೆದರಿಕೊಂಡು ನಾಲ್ಕೈದು ದಿನ ನಾವು ಶಾಲೆಗೂ ಹೋಗಿರಲಿಲ್ಲ. ಸಾಲಕ್ಕಾಗಿ ಯಾರ ಮುಂದೆಯೂ ಕೈಚಾಚದ ಅಪ್ಪ ತನ್ನ ಮುಂದಿನ ತಿಂಗಳ ಸಂಬಳವನ್ನು ಕಾಯದೆ, ಅಮ್ಮನ ಕತ್ತಿನಲ್ಲಿದ್ದ ತಾಳಿ ಸರವನ್ನು ಅಡವಿಟ್ಟು ಹೊಸ್ತಿಲಿಗೆ ಹದಿನೈದು ದಿನಗಳಲ್ಲಿ ಬಾಗಿಲು ಮಾಡಿಸಿ ಹಾಕಿಸಿದರು. ಮನೆಗೆ ಬಾಗಿಲು ಬಂದ ಆ ರಾತ್ರಿ ಎಲ್ಲರೂ ಎಂಟು ಗಂಟೆಗೆ ಒಟ್ಟಿಗೆ ಮಲಗಿದ ನೆನಪು ಈಗಲೂ ಮನಸ್ಸಿನಲ್ಲಿ ಹಸಿಹಸಿ. ನಿಧಾನವಾಗಿ ಮನೆಗೆ ಕರೆಂಟು, ಕಿಟಕಿಗಳಿಗೆ ಬಾಗಿಲು, ನೆಲಕ್ಕೆ ಮತ್ತು ಗೋಡೆಗಳಿಗೆ ಗಾರೆ ಬರುವಷ್ಟರಲ್ಲಿ ಮೂರ್ನಾಲ್ಕು ವರ್ಷಗಳೇ ಕಳೆದಿದ್ದವು.

ಮನೆಗೆ ಎಲ್ಲಾ ವ್ಯವಸ್ಥೆಯಾದ ಮೇಲೂ ಒಬ್ಬರಲ್ಲ ಒಬ್ಬರು ಮನೆಯೊಳಗಿದ್ದು ಕಾವಲಿರುತ್ತಿದ್ದರು, ಮನೆಗೆ ಬೀಗ ಹಾಕಿದ ನೆನಪೇ ಇಲ್ಲ. ಹುಬ್ಬಳ್ಳಿಗೆ ಹೋಗುವಾಗ ಮನೆಯಲ್ಲಿ ಕಾವಲಿಗಿರುತ್ತಿದ್ದವರು ಅಪ್ಪನ ಒಂದಿಬ್ಬರು ವಿದ್ಯಾರ್ಥಿಗಳು ಅಥವಾ ಅಪ್ಪನ ಚಿಕ್ಕಪ್ಪನ ಮಗ ಅಥವಾ ಅಮ್ಮನ ಸಂಬಂಧಿಕರು.

Yesondu mudavittu

ಮಠದ ಕೈಲಾಸ ಮಂಟಪ

ಎಮ್ಮೆ ಮಜ್ಜಿಗೆ

ಇನ್ನು ದಿನಸಿ ಮತ್ತು ತರಕಾರಿಗಳನ್ನು ತರಲು ಹುಬ್ಬಳ್ಳಿ ಪೇಟೆಗೆ ಹೋಗುತ್ತಿದ್ದ ಶಿವಾಜಿ ಕಾಕಾ ಜೊತೆಗೆ ಆಟೋದಲ್ಲಿ ಹೋಗುತ್ತಿದ್ದದ್ದು, ಚುರು ಚುರು ಬಿಸಿಲಿನಲ್ಲಿ ಮುಳ್ಳು ಸೌತೆಕಾಯಿ, ದ್ರಾಕ್ಷಿ, ಧಾರವಾಡ ಪೇಡ ತಿನ್ನುತ್ತಿದ್ದದ್ದೆಲ್ಲವೂ ಸಿಹಿ ನೆನಪುಗಳೇ. ಧಗೆಯಿಂದ ಬಾಯಾರಿಸಿಕೊಳ್ಳಲು ಕಾಕಾ ಕೊಡಿಸುತ್ತಿದ್ದ ತೆಳು ಜಿಡ್ಡುಮಜ್ಜಿಗೆ ಇಷ್ಟವಾಗದಿದ್ದರೂ, ಮೂಗು ಮುರಿದುಕೊಂಡೇ ಕುಡಿಯುತ್ತಿದ್ದೆ. ಯಾಕೆಂದರೆ ನನಗೆ ಆ ವಾಸನೆ ಹಿಡಿಸುತ್ತಿರಲಿಲ್ಲ.

ಹಬ್ಬಕ್ಕೆಂದು ಅಪ್ಪ-ಅಮ್ಮನ ಜೊತೆ ಪೇಟೆಗೆ ಹೋಗಿ ಹೊಸ ಬಟ್ಟೆ ಖರೀದಿಸುವುದರೊಂದಿಗೆ ಶುರುವಾಗುತ್ತಿದ್ದ ಹುಬ್ಬಳ್ಳಿಯ ಮಠದ ವಾಸ ಮುಗಿಯುತ್ತಿದ್ದದ್ದು ಶ್ರೀರಾಮನವಮಿ ಮುಗಿದ ಎರಡನೆಯ ದಿನಕ್ಕೆ ಖಡಕ್ ರೊಟ್ಟಿ, ಧಾರವಾಡ ಪೇಡ, ಜೋಳದ ಹಿಟ್ಟು, ಬ್ಯಾಡಗಿ ಮೆಣಸು, ಮೆಣಸಿನ ಪುಡಿ, ಶೇಂಗಾ ಹಿಂಡಿ, ಗೋಧಿ ಶಾವಿಗೆ, ಹುಗ್ಗಿ ಮಾಡಲು ಗೋಧಿ ನುಚ್ಚು ಮುಂತಾದವುಗಳನ್ನು ಸೂಟ್ಕೇಸಿನಲ್ಲಿ ಪ್ಯಾಕ್ ಮಾಡಿ ಮನಸ್ಸಿಲ್ಲದ ಮನಸ್ಸಿನಿಂದ ಬೆಂಗಳೂರಿಗೆ ರೈಲು ಹತ್ತುವಾಗ. ಕತಾರಿನಲ್ಲಿ ಶ್ರೀ ರಾಮನವಮಿಗೆ ಪ್ರತಿ ವರ್ಷವೂ ಗೋಧಿ ಹುಗ್ಗಿ ಮಾಡುತ್ತೇನಾದರೂ, ಹುಬ್ಬಳ್ಳಿಯ ಮಠದ ರುಚಿಯನ್ನು ನಾಲಗೆ ಮರೆತಿಲ್ಲ.

ಕಳೆದ ಬಾರಿ ಹುಬ್ಬಳ್ಳಿಗೆ ಹೋದಾಗ ಅಪ್ಪ-ಅಮ್ಮನ ಜೊತೆಯಲ್ಲಿ ಹೋಗುತ್ತಿದ್ದ ಖಾನಾವಳಿಗೆ ಹೋಗಿ ಉತ್ತರ ಕರ್ನಾಟಕದ ಥಾಲಿಯಲ್ಲಿದ್ದ ಮಜ್ಜಿಗೆ ಕುಡಿಯುವಾಗ, “ಧಾರವಾಡದ ಎಮ್ಮೆಯ ಹಾಗೆ ಆಡ್ಬೇಡ, ಸುಮ್ನೆ ಮಜ್ಜಿಗೆ ಕುಡಿದು ಮೇಲೇಳು,” ಎಂದು ಅಮ್ಮ ಗದರುತ್ತಿದ್ದದ್ದು ನೆನಪಾಯಿತು. “ಅದೇ ರೀ, ಎಮ್ಮೆ ಮಜ್ಜಿಗೆ ಅಂತ ಬೇಡ ಅಂತಿರೋದು,” ಎಂದು ಮಾರುತ್ತರ ನೀಡುತ್ತಿದ್ದ ನೆನಪಾಗಿ ಕಣ್ಣಿಂದ ಜಾರಿದ ಹನಿಗಳನ್ನು ಕಂಡು ಪಕ್ಕದಲ್ಲಿದ್ದ ವೇಟರ್, “ಮೇಡಂ, ಮಿರ್ಚಿ ಜಾಸ್ತಿಯಾಯಿತೇನ್ರೀ, ಸಕ್ರೆ ಕೊಡ್ಲೇನ್ರೀ?” ಎಂದು ಕೇಳಿದಾಗ ಬೇಡವೆಂದು ತಲೆಯಾಡಿಸಿದ್ದೆ.

ನೆನಪುಗಳ ಮಾತು ಮಧುರ

ಅಪ್ಪ-ಅಮ್ಮ ತೀರಿಕೊಂಡ ಮೇಲೆ ಕಳೆದ ವರ್ಷ ಶಿವರಾತ್ರಿಗೆಂದು ಹುಬ್ಬಳ್ಳಿಗೆ ಹೋದರೆ ಗೋವಿಂದ ಸ್ವಾಮಿಗಳು ಮಾತ್ರವಲ್ಲದೆ, ಹಲವಾರು ಪರಿಚಿತ ಮುಖಗಳು ಇನ್ನು ಕೇವಲ ನೆನಪು ಮಾತ್ರ ಎನ್ನುವುದು ತಿಳಿದು ಮನಸ್ಸು ಚಡಪಡಿಸಿಬಿಟ್ಟಿತು. ಅವರಿಗೆ ಮಾತ್ರವಲ್ಲ ನನಗೂ ವಯಸ್ಸಾಗುತ್ತಿದೆ, ನಾಳೆಯೋ, ನಾಳಿದ್ದೋ ನಾನೂ ಅವರ ಹಾಗೆ ಕೇವಲ ನೆನಪಾಗಿಬಿಡುತ್ತೇನೆ ಎನಿಸಿದ್ದು ಸತ್ಯ.

ತಾತ ಸತ್ತ ಮೇಲೆ ಅಮ್ಮನ ತವರು, ಅಮ್ಮ ತೀರಿಕೊಂಡ ಮೇಲೆ ಈಗ ನನ್ನ ಪಾಲಿನ ತವರರಾಗಿರುವ ಹುಬ್ಬಳ್ಳಿ ಎನ್ನುವ ನನ್ನ ಪಾಲಿನ ಎರಡನೆಯ ಮನೆ ಕೊಟ್ಟಷ್ಟು ಸಿಹಿ ನೆನಪುಗಳನ್ನು ಬಹುಶಃ ಇನ್ನಾವುದೇ ಊರು ಇದುವರೆಗೂ ತಂದಿಲ್ಲ, ತರುವುದೂ ಇಲ್ಲವೇನೋ! ಈ ಬಾಲ್ಯದ ನೆನಪುಗಳು ನಮ್ಮನ್ನೇನೂ ವ್ಯಾಖ್ಯಾನಿಸುವುದಿಲ್ಲ ಸರಿ, ಆದರೆ ಖಂಡಿತವಾಗಿಯೂ ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.

* ಫೋಟೋ ಸೌಜನ್ಯ : ಶ್ರೀ ಸಿದ್ಧಾರೂಢ ಮಠದ ಫೇಸ್​ಬುಕ್​ ಪುಟ

ಇದನ್ನೂ ಓದಿ : ಏಸೊಂದು ಮುದವಿತ್ತು: ಕೌದಳ್ಳಿಯ ಬಳೆಗಾರ ಶೆಟ್ಟಿಯನ್ನು ನೆನೆಯುತ್ತಿರುವ ’ಧೂಪದ ಮಗ’

Published On - 3:58 pm, Tue, 11 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್