ಏಸೊಂದು ಮುದವಿತ್ತು: ಕೌದಳ್ಳಿಯ ಬಳೆಗಾರ ಶೆಟ್ಟಿಯನ್ನು ನೆನೆಯುತ್ತಿರುವ ’ಧೂಪದ ಮಗ’

‘ನನ್ನ ಹೆಂಡತಿ ತವರಿಗೆ ಹೋಗಬೇಕೆನ್ನಿಸಿದರೆ ಒಂದು ಫೋನು ಮಾಡಿ, ಗಾಡಿ ತೆಗೆದುಕೊಂಡು ಹೊರಟುಬಿಡುತ್ತಾಳೆ. ಆದರೆ ನನ್ನವ್ವ ಬಳೆಗಾರನಿಗಾಗಿ ಕಾಯ್ದು, ತೊಡಸಿಕೊಳ್ಳುವಾಗ ಅವನಿಗೆ ಸೂಕ್ಷ್ಮವಾಗಿ ಹೇಳಬೇಕಿತ್ತು. ಹೀಗಾಗಿ ಅಜ್ಜಿ ಕಳಿಸಲು ಒಪ್ಪದಿದ್ದಾಗಲೂ ಅಥವಾ ತವರೂರಿಂದ ಕರೆದೊಯ್ಯಲು ಯಾರೂ ಬರದಿದ್ದಾಗಲೂ ಆಕೆ ಮರೆಯಲ್ಲಿಯೋ, ನನ್ನನ್ನು ತಬ್ಬಿಕೊಂಡೋ ಬಿಕ್ಕುತ್ತಿದ್ದ ಸದ್ದು ಈಗಲೂ ಕಿವಿಯಲ್ಲಿ ಮೊರೆತಂತಾಗುತ್ತದೆ. ಕೇವಲ ನಾಲ್ಕೇ ಮಂದಿ ಇರುವ ಮನೆಯಲ್ಲಿ ನಲವತ್ತು ಸಲ ಜಗಳ ಮುನಿಸು ಮಾಡಿಕೊಳ್ಳುವ ಈ ಕಾಲವೆಲ್ಲಿ? ನಲವತ್ತು ಮಂದಿ ಇದ್ದರೂ ನಾಕು ಮಾತು ಹೆಚ್ಚಿಗೆ ಮಾತನಾಡದ ಆ ಕಾಲವೆಲ್ಲಿ? ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ. ಆದರೆ ಭಾವನೆಗಳಲ್ಲವಲ್ಲ?‘ ಸ್ವಾಮಿ ಪೊನ್ನಾಚಿ

ಏಸೊಂದು ಮುದವಿತ್ತು: ಕೌದಳ್ಳಿಯ ಬಳೆಗಾರ ಶೆಟ್ಟಿಯನ್ನು ನೆನೆಯುತ್ತಿರುವ ’ಧೂಪದ ಮಗ’
ಅವ್ವ ಗೌರಿಯೊಂದಿಗೆ ಕಥೆಗಾರ ಸ್ವಾಮಿ ಪೊನ್ನಾಚಿ.
Follow us
ಶ್ರೀದೇವಿ ಕಳಸದ
|

Updated on:May 08, 2021 | 4:17 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

ಕವಿ, ಕಥೆಗಾರರಾದ ಸ್ವಾಮಿ ಪೊನ್ನಾಚಿ ಅವರು ಕಥೆಗಳ ಸಹವಾಸದಿಂದ ಕೊಂಚ ಬಿಡಿಸಿಕೊಂಡು ಈ ಸರಣಿಗಾಗಿ ಬರೆದುಕೊಟ್ಟಿರುವ ಆಪ್ತಶೈಲಿಯ ಪ್ರಬಂಧವಿದು. ಓದುತ್ತ ಓದುತ್ತ ಬಾಲ್ಯದ ಬೇರುಗಳಿಗೆ ಜಾರುತ್ತಲೇ ನಮಗರಿವಿಲ್ಲದಂತೆ ದೊಡ್ಡ ನಿಟ್ಟುಸಿರೊಂದು ಹೊಮ್ಮುತ್ತದೆ, ವಿವರಿಸಲಸಾಧ್ಯವಾದ ಸಂಕೀರ್ಣಭಾವ ಮತ್ತು ವಿಚಾರಗಳೊಂದಿಗೆ ಕಾಡುತ್ತದೆ.    

ಬಹುಶಃ ಬದುಕಿನ ಪಾಠ ಕಲಿಯಲಾರದವರಿಗೆ ಕೋವಿಡ್ ಅಲ್ಲ ಇದಕ್ಕಿಂತಲೂ ಭಯಾನಕ ಮಹಾಮಾರಿ ಬಂದರೂ ಕೂಡ ಕಲಿಯುವುದಿಲ್ಲ. ಸೂಕ್ಷ್ಮತೆ, ಪ್ರಜ್ಞೆ, ಪರಂಪರೆಯ ಅರಿವಿರುವವರಿಗೆ ಅದರಲ್ಲೂ ಕೊಂಚ ಹೃದಯವಂತಿಕೆ ಇರುವವರಿಗೆ ಮಾತ್ರ ಮುಲಾಜಿಲ್ಲದೆ ಪ್ರಕೃತಿಯಿಂದ ಮತ್ತು ತನ್ನ ಸುತ್ತಮುತ್ತಲಿನ ಸಾಮಾಜಿಕ ಪರಿಸರದಿಂದ ಬದುಕಿನ ಎಷ್ಟೋ ಸಂಗತಿಗಳನ್ನು ಕಲಿಯುವುದಲ್ಲದೆ ಬದುಕನ್ನು ಆಸ್ವಾದಿಸುವುದು ಹೇಗೆನ್ನುವುದೂ ಗೊತ್ತಿರುತ್ತದೆ. ಯಾಕೆಂದರೆ, ಈ ಕಾಲಮಾನದ ಬಾಲ್ಯ ಯೌವನವೆಲ್ಲ ಮೊಬೈಲು, ಚಾಟಿಂಗ್​ಗಷ್ಟೇ ಸೀಮಿತವಾಗಿ ಜೀವನದ ನೈಜ ರಸಘಳಿಗೆಗಳನ್ನೇ ಕಳೆದುಕೊಳ್ಳುತ್ತಿದೆ ಎನ್ನಿಸಿದೆ.

Yesondu mudavittu

ಆಕಾಶದ ತೊಟ್ಟಿಲಲ್ಲಿ

ನನ್ನ ಮಕ್ಕಳಿಗೆ, ಹಳ್ಳಿಗಾಡಿನಲ್ಲಂತೂ ಬೆಳೆಯುವ ಅವಕಾಶ ಸಿಗಲಿಲ್ಲ. ಅಲ್ಲಿಯ ಆಟಗಳನ್ನಾದರೂ ಕಲಿತು ಸಂಭ್ರಮಿಸಲಿ ಎಂದು ಅಳಿಗುಳಿಮಣೆ, ಒಂದಷ್ಟು ಗೋಲಿಗಳು, ಬುಗುರಿ ದಾರ, ಚೌಕಾಬಾರದ ದಾಳಗಳು, ಜತೆಗೆ ಒಂದು ಕೇರ್ಂ ಬೋರ್ಡ್ ತಂದಿಟ್ಟೆ. ಖುಷಿಗೆ ಎರಡು ದಿನ ಕೈಯ್ಯಾಡಿಸಿದರು. ಮತ್ತೆ ಮೂರನೇ ದಿನದಿಂದ ಅದೇ ಯೂಟ್ಯೂಬ್, ಗೇಮ್ಸ್ ಮತ್ತು ವಿಡಿಯೋ. ಇದನ್ನೂ ದೂಷಿಸುವಂತೆಯೂ ಇಲ್ಲ. ನಾವು ಮಕ್ಕಳೊಟ್ಟಿಗೆ ಎಷ್ಟು ಹೊತ್ತು ಅಂತ ಗೋಲಿ, ಬುಗುರಿ, ಅಳಿಗುಳಿ ಆಡುವುದಕ್ಕಾಗುತ್ತದೆ? ಅವರಿಗೆ ಸಮವಯಸ್ಕರು ಮತ್ತು ಅಂತಹ ವಾತಾವರಣವಿದ್ದಾಗ ಮಾತ್ರ ಆ ಆಟಗಳು ಅಪ್ಯಾಯಮಾನ ಎನ್ನಿಸುತ್ತವೆ. ಇದಕ್ಕೆ ಹೋಲಿಸಿಕೊಂಡರೆ ನಮ್ಮೂರಿನ ಹಳ್ಳಿ ಭಿನ್ನ. ಭಿನ್ನ ಅನ್ನುವುದಕ್ಕಿಂತ ಅಲ್ಲಿ ಯಾವುದೇ ಮೊಬೈಲ್ ನೆಟ್​ವರ್ಕ್​ ಇಲ್ಲದುದರ ಪರಿಣಾಮವಾಗಿ ಮೊಬೈಲ್​ ಕೆಲಸಕ್ಕೆ ಬಾರದ ಒಂದು ವಸ್ತು ಅಷ್ಟೇ! ನಮ್ಮೂರಿನ ಅಷ್ಟೂ ಹುಡುಗರು ಈಗಲೂ ಗೋಲಿ, ಬುಗುರಿ ಚಿಣ್ಣಿದಾಂಡು ಮರಕೋತಿಗಳನ್ನು ಆಡುತ್ತಾರೆ. ದೈಹಿಕ, ಮಾನಸಿಕ ವಿಕಾಸಕ್ಕೆ ಇದಕ್ಕಿಂತ ಬೇರೆ ಬೇಕೆ? ಮಾನಸಿಕ ಮತ್ತು ದೈಹಿಕ ವಿಕಾರಕ್ಕೆ ಕಾರಣವಾಗುತ್ತಿರುವ ಮೊಬೈಲ್ ಯಾಕೆ ಬೇಕು? ಪದೇಪದೆ ಮೊಬೈಲ್ ಪದ ಬಳಸಿ ಅದು ಬಹಳ ಕೆಟ್ಟ ಅಪಾಯಕಾರಿ ವಸ್ತು ಎಂದು ಬಿಂಬಿಸುತ್ತಿದ್ದೇನೆ ಎಂದುಕೊಳ್ಳಬೇಡಿ. ಈವತ್ತಿನ ಕಾಲಮಾನಕ್ಕೆ ಅದೊಂದು ರೂಪಕವಷ್ಟೇ.

ಜನದಟ್ಟಣೆ ಇರುವ ನಗರ ಪ್ರದೇಶಗಳಲ್ಲಿ ಕೋವಿಡ್ ಹೆಚ್ಚು ಹರಡುತ್ತದೆ ಎಂಬ ಕಾರಣಕ್ಕಾಗಿ ಹೆಂಡತಿ ಮಕ್ಕಳನ್ನು ಊರಿಗೆ ಕರೆದುಕೊಂಡು ಹೋದೆ. ಅಲ್ಲಿನ ಹಳ್ಳಿಮಕ್ಕಳೊಂದಿಗೆ ಬೆರೆತು ಆಡಲು ನನ್ನ ಮಕ್ಕಳಿಗೆ ಎರಡು ದಿನ ಬೇಕಾಯಿತು. ಈ ಮೊದಲ ದೀರ್ಘ ಅವಧಿ ಊರಲ್ಲಿರಲು ಅವಕಾಶ ಸಿಕ್ಕಿಲ್ಲದ್ದರಿಂದ ಈಗ ಹೆಚ್ಚು ಸಮಯವಿರುವುದರಿಂದ ಹಳ್ಳಕೊಳ್ಳ, ಕಾಡುಮೇಡೆನ್ನದೆ ಬರೀ ಅಲೆದದ್ದೇ ಆಯಿತು. ನಗರ ಜೀವನದಲ್ಲಿ ಕಳೆದು ಹೋಗಿದ್ದ ಬಾಲ್ಯದ ಸಂಗತಿಗಳೆಲ್ಲ ಮರುಕಳಿಸಿದಂತಾಗಿ, ಯಾವ ಸಾಧನೆಗಾಗಿ ಊರುಬಿಟ್ಟು ಬರುವುದು, ಯಾವ ಸಂತೋಷಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಸಂಪಾದಿಸುವುದು, ಎಷ್ಟು ವರ್ಷ ಹೆಚ್ಚು ಬದಕುವುದಕ್ಕಾಗಿ ಕಸ ಕಡ್ಡಿಯನ್ನು ತಿನ್ನುವುದು ಎನ್ನಿಸಿದ್ದು ಸುಳ್ಳಲ್ಲ. ನನ್ನ ಮಟ್ಟಿಗೆ ನಿಜವಾದ ಆತ್ಮಾನಂದ ಇರುವುದು ಹಳ್ಳಿಗಾಡುಗಳಲ್ಲಿಯೇ. ಐದು ನಿಮಿಷ ಮುಖ ಕೊಟ್ಟು ಮಾತನಾಡಲಾಗದ ಗಡಿಬಿಡಿಯ ಸಂತೆ ಎನ್ನಿಸಿಕೊಂಡ ನಗರಕ್ಕಿಂತ ಮುಸ್ಸಂಜೆ ಅರಳೀಕಟ್ಟೆಯ ಮೇಲೆ ಲೋಕಾಭಿರಾಮವಾಗಿ ಯಾವುದೇ ಆತಂಕವಿಲ್ಲದೆ ಬೀಡಿ ಹೊಡೆಯುತ್ತಾ ಕೂತ ಹಿರಿಯಜ್ಜರೊಂದಿಗೆ ಮಾತನಾಡಿಕೊಂಡು ಕಾಲ ಕಳೆಯುವುದಿದೆಲ್ಲ! ಅದರ ಮಜ ಅನುಭವಿಸಿದವರಿಗೇ ಗೊತ್ತು.

Yesondu mudavittu

ಪೊನ್ನಾಚಿಯ ಹಿರಿಯ ಜೀವಿಗಳು

ನಾನು ನಗರದಲ್ಲಿರುವಾಗ ಮನೆಗೆ ನೆಂಟರು ಬಂದಾಗ ಅಥವಾ ಸಂಬಂಧಿಕರು ಎರಡು ಮೂರು ದಿನ ತಂಗಿದಾಗ ನಮ್ಮ ವರ್ತನೆಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿಕೊಂಡು ಬಹಳ ಸಲ ನನ್ನ ಹಳ್ಳಿಯಲ್ಲಿ ಕಳೆದ ಬಾಲ್ಯದಲ್ಲಿದ್ದ ಅವಿಭಕ್ತ ಕುಟುಂಬವನ್ನು ನೆನೆಸಿಕೊಂಡಿದ್ದೇನೆ. ಮನೆಗೆ ಬಂದವರು ಆತ್ಮೀಯವಾಗಿ ಸಲುಗೆ ಇದ್ದವರಾದರೆ ಪರವಾಗಿಲ್ಲ ತುಸು ಮಾತಾಡಬಹುದು. ಅದು ಬಿಟ್ಟರೆ ಯಾರೇ ಬಂದರೂ, ಈಗ ಬಂದ್ರಾ ಮನೆಯಲ್ಲಿ ಹೇಗಿದ್ದಾರೆ ಎನ್ನುವ ಎರಡು ಪ್ರಶ್ನೆ ಬಗೆದು ಉತ್ತರವನ್ನೂ ನೆಟ್ಟಗೆ ಕೇಳಿಸಿಕೊಳ್ಳದೆ ಟೀ , ಕಾಫಿ, ಜ್ಯೂಸ್ ಕೊಟ್ಟರೆ, ಊಟದ ಸಮಯವಾದಲ್ಲಿ ಊಟ ಮಾಡಿಕೊಂಡು ಹೋಗಿ ಎಂದು ಒಂದೊತ್ತು ಊಟ ಹಾಕಿ ಕಳಿಸಿಬಿಟ್ಟರೆ ಅದೇ ದೊಡ್ಡ ಅತಿಥಿ ಸತ್ಕಾರ! ಬಂದವರೂ ಅಷ್ಟೇ ಎರಡೇ ಮಾತಿನಲ್ಲಿ ಬಂದ ವಿಷಯ ತಿಳಿಸಿ… ಇನ್ವಿಟೇಷನ್ನೋ ಮತ್ತೊಂದೋ ಮಗದೊಂದೋ ನೀಡಿ ಮೊಬೈಲ್​ ಹಿಡಿದುಕೊಂಡು ಇದ್ಯಾವುದೋ ಅಪರಿಚಿತ ಜಾಗ ಎನ್ನುವಂತೆ ಮುದುಡಿ ಕುಳಿದುಕೊಂಡರೆ ಮುಗೀತು. ಎಷ್ಟೊತ್ತಿಗೆ ಹೋಗುತ್ತೇವೋ ಇಲ್ಲಿಂದ ಎಂದು ಅವರು ಈ ಕೆಲಸದ ಟೈಮ್​ನಲ್ಲಿ ಬೇಗ ಎದ್ದು ಹೋದರಾಗದೆ ಎಂದು ನಾವು. ಅಲ್ಲಿಗೆ ಒಂದು ಪರಿಚಿತ ಸಂಬಂಧದ ಬೆಳವಣಿಗೆ ಕತೆ ಅಷ್ಟೇ ಮಳೆ, ಬೆಳೆ, ಸಾಲ, ಮದುವೆ, ವೈಯಕ್ತಿಕ ಸಂಗತಿಗಳನ್ನು ಮಾತಾಡುವುದಿರಲಿ, ಮಾತಾಡಿದರೆ ಎಲ್ಲಿ ಗುಟ್ಟು ರಟ್ಟಾಗುವುದೋ? ಎಂದು ಇಬ್ಬರೂ ಮೆಂಟೇನ್ ಮಾಡಿದ್ದೇ ಮಾಡಿದ್ದು. ಈ ತರಹದ ಸಂಬಂಧ ಕೊನೇವರೆಗೂ ಆತ್ಮೀಯವಾಗಿ ಹತ್ತಿರವಾಗುವುದೇ ಇಲ್ಲ.

ಇನ್ನು ಯಾವುದೋ ಅನಿವಾರ್ಯ ಕಾರಣದಿಂದಾಗಿ ಎರಡು ಮೂರು ದಿನ ಬಂದು ಉಳಿದುಕೊಳ್ಳುವ ಬಂಧುಗಳಿದ್ದರೆ ವಿಲವಿಲ ಎಂದು ಒದ್ದಾಡಿಬಿಡುತ್ತೇವೆ. ನಮ್ಮ ಸ್ವಂತಿಕೆ, ಸಹಜತೆ ಎಲ್ಲಾ ಮಾಯವಾಗಿ ನಾನೇ ಆ ಜಾಗಕ್ಕೆ ಅಪರಿಚಿತನೇನೋ ಎನ್ನುವ ಹಾಗೆ ಅಸಹಜವಾಗಿ ವರ್ತಿಸಲು ಶುರು ಮಾಡಿಬಿಡುತ್ತೇವೆ. ಇದನ್ನು ತಪ್ಪು ಎಂದು ಹೇಳುವ ಹಾಗಿಲ್ಲ. ಒಂದೇ ರೂಮು, ಚಿಕ್ಕಮನೆ, ಅಕ್ಕಪಕ್ಕ ಕಿಷ್ಕಿಂದೆ. ಸನ್ನಿವೇಶ ಹೀಗಿರುವಾಗ ಮೂರುದಿನ ಸಂಬಂಧಿಕರನ್ನು ಮೆಂಟೇನ್ ಮಾಡುವುದು ಕಷ್ಟದ ಕೆಲಸವೇ. ಜತೆಗೆ ವೈಯಕ್ತಿಕ ಕೆಲಸಗಳ ಒತ್ತಡ.

Yesondu mudavittu

ಸ್ವಾಮಿ ಪೊನ್ನಾಚಿಯವರ ಅವಿಭಕ್ತ ಕುಟುಂಬ

ನಮ್ಮೂರಿನಂತ ಹಳ್ಳಿಗಳಲ್ಲಿ ಹೀಗಿಲ್ಲ. ನಾನು ಚಿಕ್ಕಂದಿನಲ್ಲಿದ್ದಾಗ ನಮ್ಮ ಮನೆಯಲ್ಲಿ ಇದ್ದವರು ಬರೋಬ್ಬರಿ 21 ಜನ! ಇಷ್ಟು ಜನಕ್ಕೂ ಒಂದೇ ಜಾಗದಲ್ಲಿ ಅಡುಗೆ. ಒಂದು ದಿನ್ಕಕೂ ಕೂಡ ಅಡುಗೆ ಅದ್ವಾನವಾಗುವುದಿರಲಿ, ಸಾಕಾಗಲಿಲ್ಲ ಎನ್ನುವ ಪ್ರಮೇಯವೇ ಬರಲಿಲ್ಲ. ಪ್ರತಿದಿನ ಕೊನೆಯಲ್ಲಿ ಇಬ್ಬರಿಗಾಗುವಷ್ಟು ಊಟ ಮಿಕ್ಕೇ ಮಿಗುತ್ತಿತ್ತು. ಬೇರೆ ಊರಿನಿಂದ ನಡೆದುಕೊಂಡು ಭಿಕ್ಷಾಟನೆಗೆ ಬರುವ ದಾಸಯ್ಯರು ಚೌಲಿ, ಪಾತ್ರೆ, ಹುಣಸೇಹಣ್ಣು ವ್ಯಾಪಾರಕ್ಕೆ ಬರುವ ಯಾರಾದರೊಬ್ಬರು ಇದ್ದೇ ಇರುತ್ತಿದ್ದರು. ನಮ್ಮಜ್ಜಿ ಅವರಿಗೆ ಊಟೋಪಚಾರ ಮಾಡುತ್ತಿದ್ದುದಲ್ಲದೆ ಹೊರಜಗತ್ತಿನ ಅಷ್ಟೂ ಸಂಗತಿಗಳನ್ನು ಬಿಟ್ಟೂಬಿಡದೆ ಮಾತಾಡಿ, ಅವರು ನಮ್ಮ ಕುಟುಂಬದ ಭಾಗವೇ ಆಗಿಹೋಗಿ ಹಬ್ಬಹರಿದಿನಗಳಿಗೆ ನೆಂಟರಂತೆ ಬಂದು ಹೋಗುತ್ತಿದ್ದರು. ನಮ್ಮ ಮನೆಗೆ ಬಂದು ತಂಗುವ ಸಂಬಂಧಿಕರೊಂದಿಗೆ ಅವ್ವ, ಅಜ್ಜಿ ಸೇರಿಕೊಂಡು ನಿದ್ದೆ ಮಾಡದೇ ಇಡೀ ರಾತ್ರಿ ಮಾತನಾಡಿ ಕಷ್ಟ ಸುಖ ಹಂಚಿಕೊಂಡು ಹಗುರಾಗುತ್ತಿದ್ದರು. ಈ ಕಾಲದಲ್ಲಿ ಅಂಥ ಮಾತುಕತೆಗಳೆಲ್ಲಿವೆ, ಯಾರು ಮಾತನಾಡುತ್ತಾರೆ? ಮಾತನಾಡಿದರೂ ಕೆಲಸಕ್ಕೆ ಬರದ ವಿಚಾರಗಳ ಚರ್ಚೆಯಷ್ಟೇ. ವಾರ ತಿಂಗಳುಗಟ್ಟಲೇ ಬಂಧುಗಳು ಉಳಿದುಕೊಂಡರೂ ಕೂಡ ಅವರ ಇರವು ಖುಷಿ ಕೊಡುತ್ತಿದ್ದೇ ವಿನಾ ಯಾವತ್ತಿಗೂ ಇವರು ಇಲ್ಲಿಂದ ಜಾಗ ಖಾಲಿ ಮಾಡಲಿ ಎನ್ನುವ ಮನೋಭಾವವೇ ಬರುತ್ತಿರಲಿಲ್ಲ. ಅವರು ಊರಿಗೆ ಹೊರಟು ನಿಂತ ದಿನ ಮನೆಮಂದಿಯ ಕಣ್ಣು ತೇವವಾಗುತ್ತಿದ್ದವು.

ನನ್ನ ಹೆಂಡತಿ ಅಮ್ಮನ ಮನೆಗೆ ಹೋಗಬೇಕೆಂದುಕೊಂಡ ಕ್ಷಣವೇ ಒಂದು ಫೋನಾಯಿಸಿ ಗಾಡಿ ತೆಗೆದುಕೊಂಡು ಹೊರಟುಬಿಡುತ್ತಾಳೆ. ಅಲ್ಲಿ ಸಿದ್ಧತೆಯಾಗಲೀ ಅಥವಾ ತವರಿಗೆ ಹೋಗುತ್ತಿದ್ದೇನೆಂಬ ಕಾತರದ ಸಂಭ್ರಮವಾಗಲೀ ಇರುವುದೇ ಇಲ್ಲ. ತವರೂರಿನ ಸುದ್ದಿ, ಮುದ ಕುತೂಹಲ, ಚಡಪಡಿಕೆ ಊಂಹೂ ಇದ್ಯಾವುದೂ ಇಲ್ಲ. ಸಂಪರ್ಕಕ್ಕೆ ಮಾಧ್ಯಮಗಳು, ಓಡಾಟಕ್ಕೆ ವಾಹನಗಳು ಸುಲಭಕ್ಕೆ ಸಿಕ್ಕ ಮೇಲೆ ಎಲ್ಲವೂ ಮಾಯವಾದವು. ಇದನ್ನು ನೋಡಿದಾಗಲೆಲ್ಲಾ ನನ್ನ ಬಾಲ್ಯದಲ್ಲಿ ನನ್ನ ತಾಯಿ ತವರಿಗೆ ಹೋಗಬೇಕಾದರೆ ಪಡುತ್ತಿದ್ದ ಪಡಿಪಾಟಲುಗಳು ಈಗಲೂ ನನ್ನನ್ನು ಆರ್ದ್ರಗೊಳಿಸುತ್ತವೆ. ಅವತ್ತಿನ ಅವಿಭಕ್ತ ಕುಟುಂಬದ ಪರಿಸ್ಥಿತಿ ಮತ್ತು ಸಂಪರ್ಕದ ಕೊರತೆಯಿಂದಾಗಿ ಪ್ರತೀ ಹೆಣ್ಣುಮಗಳಿಗೂ ತನ್ನ ತವರಿನ ಕುರಿತು ಅಪಾರ ಕುತೂಹಲ, ಕಾಳಜಿ. ತಾಯಿ, ತಂದೆ, ಅಣ್ಣತಮ್ಮಂದಿರು ಹೇಗಿರುವರೋ ಎಂಬ ಆತಂಕ ಸದಾ ಕಾಡುತ್ತಿತ್ತು. ತವರೂರಿನ ಮಂದಿ ಯಾರಾದರೂ ಅಚಾನಕ್ ಮನೆಗೆ ಬಂದರೆ ಮುಗೀತು. ಅವರಿಗೆ ಊಟೋಪಚಾರ ಮಾಡಿ ಹೆತ್ತವ್ವನ ಕುರಿತು, ದನಕರುಗಳ ಕುರಿತು ಸಾಕುಬೇಕು ಅನ್ನುವಷ್ಟು ವಿಚಾರಿಸಿ ನಿಟ್ಟುಸಿರಿಡುತ್ತಿದ್ದಳು. ನನಗೆ ಈಗಲೂ ತುಂಬಾ ಸ್ಪಷ್ಟವಾಗಿ ನೆಪಿದೆ. ಶೆಟ್ಟಿ ಎಂಬ ಕೌದಳ್ಳಿಯ ಬಳೆಗಾರ ಬಳೆ ತೊಡಿಸುವುದಕ್ಕೇ ದೊಡ್ಡದಾದ ಹೆಡಿಗೆ ಎತ್ತಿಕೊಂಡು ಬರುತ್ತಿದ್ದ. ಆ ಹೆಡಿಗೆಯೇ ಪರಸಂಗದ ಗೆಂಡೆತಿಮ್ಮನದೇ!

Yesondu mudavittu

ಪೊನ್ನಾಚಿ ಪರಿಸರ

ಅವನು ಬಂದರೆ ಅವ್ವ ಹಿರಿಹಿರಿ ಹಿಗ್ಗುತ್ತಿದ್ದಳು. ತವರಿಂದ ಬಳೆ ತೊಟ್ಟುಕೊಳ್ಳಲು ಮೊದಲೇ ದುಡ್ಡು ಕೊಟ್ಟಿರುತ್ತಿದ್ದರು ತಾಯಿಯ ತಾಯಿ. ಜತೆಗೆ ತವರೂರಿನ ಸುದ್ದಿ. ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಅವನು ಆಪದ್ಬಾಂಧವ. ಎಲ್ಲಾ ಊರುಗಳನ್ನು ಸುತ್ತುತ್ತಿದ್ದ ಅವನಿಗೆ ಯಾವ ಹೆಣ್ಣುಮಗಳ ತವರು ಯಾವ ಊರು ಮತ್ತು ಯಾವ ಊರಿಗೆ ಈ ಮನೆಮಗಳನ್ನು ಕೊಟ್ಟಿದ್ದಾರೆ ಎಂಬ ವಿಷಯ ಚೆನ್ನಾಗಿ ತಿಳಿದಿರುತ್ತಿತ್ತು. ಸುಖದ ಸಂಗತಿಗಳನ್ನು ತುಸು ಹೆಚ್ಚೇ ವಗ್ಗರಣೆ ಹಾಕಿ ಹೇಳಿ, ದುಃಖದ ಸಂಗತಿಗಳನ್ನು ಮರೆಮಾಚಿ ಸಮಾಧಾನಪಡಿಸುತ್ತಿದ್ದನು. ಅವ್ವನಿಗೆ ತವರಿಗೆ ಹೋಗಬೇಕೆನ್ನಿಸಿದಾಗೆಲ್ಲಾ ಬಳೆ ತೊಡುವಾಗ ಸೂಕ್ಷ್ಮವಾಗಿ ಹೇಳುತ್ತಿದ್ದಳು. ಅದಾಗಿ ವಾರಕ್ಕೆ ನಮ್ಮ ಮಾವ ಏನಾದರೊಂದು ನೆಪ ಹೇಳಿ ಅವ್ವನನನ್ನು ಕರೆಯುತ್ತಿದ್ದರು.  ಈ ವಾರದಲ್ಲಿ ಅವ್ವ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ಬಟ್ಟಬರೆ ಒಪ್ಪ ಮಾಡಿಕೊಳ್ಳುವುದಲ್ಲದೆ ತಿಂಡಿತಿನಿಸನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಳು. ಮಾವ ಬರುವುದನ್ನೇ ದಾರಿ ಕಾಯುತ್ತಾ ಕಾತರದಲ್ಲಿದ್ದೆ, ನಮ್ಮಜ್ಜಿ ಮಾತ್ರ ಬಳೆಗಾರರನ್ನೂ ಸರಿಯಾಗಿ ಬೈದುಕೊಳ್ಳುತ್ತಿದ್ದರು. ತವರಿಗೆ ಹೋದ ಅವ್ವ ಒಂದು ವಾರ ಇದ್ದುಬಿಟ್ಟರೆ, ಮನೆಯ ಕೆಲಸಗಳು ಅಷ್ಟಕ್ಕಷ್ಟೇ ನಡೆಯುತ್ತಿದ್ದವು. ಹೀಗಾಗಿ ಅಜ್ಜಿ ಕಳಿಸಲು ಒಪ್ಪದಿದ್ದಾಗಲೂ ಅಥವಾ ತವರೂರಿಂದ ಕರೆದೊಯ್ಯಲು ಯಾರೂ ಬರದಿದ್ದಾಗಲೂ ಅವ್ವ ಮರೆಯಲ್ಲಿ ಬಿಕ್ಕುತ್ತಿದ್ದಳು. ಅವ್ವ ನನ್ನನ್ನು ತಬ್ಬಿಕೊಂಡು ಬಿಕ್ಕಳಿಸಿ ಅಳುತ್ತಿದ್ದ ಸದ್ದು ಈಗಲೂ ಕಿವಿಯಲ್ಲಿ ಮೊರೆದಂತಾಗುತ್ತದೆ. ಕೇವಲ ನಾಲ್ಕೇ ಮಂದಿ ಇರುವ ಮನೆಯಲ್ಲಿ ನಲವತ್ತು ಸಲ ಜಗಳ ಮುನಿಸು ಮಾಡಿಕೊಳ್ಳುವ ಈ ಕಾಲವೆಲ್ಲಿ? ನಲವತ್ತು ಮಂದಿ ಇದ್ದರೂ ನಾಕು ಮಾತು ಹೆಚ್ಚಿಗೆ ಮಾತನಾಡದ ಆ ಕಾಲವೆಲ್ಲಿ? ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ. ಆದರೆ ಭಾವನೆಗಳಲ್ಲವಲ್ಲ?

ಬೆಳಗ್ಗೆ ಎದ್ದು ಗಡಿಬಿಡಿಯಲ್ಲಿ ರೆಡಿಯಾಗಿ ಕೆಲಸಕ್ಕೆ ಹೋದರೆ ಮತ್ತೆ ಸಂಜೆ ಎರಡುಗಂಟೆ ಟಿವಿ ನೋಡಿ ಉಂಡು ಮಲಗಿದರೆ ಅವತ್ತಿನ ಕಥೆ ಮುಗಿದಂತೆ. ಈ ಯಾಂತ್ರಿಕ ಬದುಕಿನಲ್ಲಿ ಎಷ್ಟು ದುಡಿದರೂ ಖುಷಿಯಾಗಿರುತ್ತೇವಾ, ಆರೋಗ್ಯವಾಗಿರುತ್ತೇವಾ? ಖಂಡಿತಾ ಇಲ್ಲ. ಸದಾ ಒತ್ತಡ. ನೂರು ಕಿ.ಮೀ ಸ್ಪೀಡಿನಲ್ಲಿ ಬದುಕು ಓಡುತ್ತದೆ. ಎಲ್ಲಿಗೆ ಓಡುತ್ತದೆ, ಏನು ಮಾಡುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೋಗಲಿ ನೂರು ವರ್ಷ ಬದುಕುತ್ತೀವಾ? ಊಂಹೂ ನಲವತ್ತಕ್ಕೇ ಬಿಪಿ, ಶುಗರ್, ಹಾರ್ಟ್​ ಅಟ್ಯಾಕು! ಇಷ್ಟಕ್ಕೆ ಯಾಕೆ ಅಷ್ಟು ಸ್ಪೀಡ್? ಮೊದಲೆಲ್ಲಾ ಮಳೆಗಾಲದಲ್ಲಿ ಉತ್ತು ಬಿತ್ತಿದರೆ, ಸುಗ್ಗಿ ಕಾಲಕ್ಕೆ ಒಕ್ಕಣೆ ಮಾಡಿದರೆ ಸಾಕು. ಇನ್ನಾರು ತಿಂಗಳು ಜಗಲಿ ಕಟ್ಟೆಯ ಮೇಲೆ ಹರಟೆ ಹೊಡೆದುಕೊಂಡೋ ದಾಯ, ಪಗಡೆ ಆಡಿಕೊಂಡೋ ನಾಟಕ, ಭಜನೆ ಮಾಡಿಕೊಂಡೋ ಆರಾಮಾಗಿ ಜನ ಇರುತ್ತಿದ್ದರು. ಒತ್ತಡ, ಸ್ಪರ್ಧೆ ಎನ್ನುವ ಮಾತೇ ಇರಲಿಲ್ಲ. ಜತೆಗೆ ಭರ್ತಿ ನೂರು ವರ್ಷ ರೋಗ ರುಜಿನುಗಳಿಲ್ಲದ ಸಮೃದ್ಧ ಜೀವನ. ಹೀಗಿರುವಾಗ ದುಡ್ಡು, ಬಂಗಲೆ, ವಿಪರೀತ ಒತ್ತಡದ ಕೆಲಸ. ಏನು ಸಾಧಿಸುವುದಕ್ಕೆ ಗೊತ್ತು ಗುರಿ ಇಲ್ಲದ ಪಯಣ. ಸಹಜ ಬದುಕು, ಸಂಭ್ರಮ, ಬಾಂಧವ್ಯ, ಒಡನಾಟ, ಕಲೆ, ಆಸ್ವಾದನೆ, ಮುಕ್ತತೆ, ಭಾವನೆಗಳೇ ಇಲ್ಲದೆ ರೋಬೋಗಳಂತೆ ಬದುಕಿ ಸಾಯುತ್ತೆ. ಕೊನೆಗೊಂದು ದಿನ ಹುಟ್ಟಿದ ಊರಿಗೇ ಆ್ಯಂಬುಲೆನ್ಸ್​ನಲ್ಲಿ ನಮ್ಮ ಹೆಣ ಹಾಕಿಕೊಂಡು ಬರುತ್ತಾರೆ.

Yesondu mudavittu

ಈ ಊರಿನಲ್ಲಿನ್ನೂ ಹಸಿರಿದೆ ಕೆಂಪಾದ ಮಣ್ಣಿದೆ

* ಪರಿಚಯ : ಮಹದೇವಸ್ವಾಮಿ ಕೆ.ಎಸ್. ಅವರು ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವುದು ಸ್ವಾಮಿ ಪೊನ್ನಾಚಿ ಎಂಬ ಹೆಸರಿನಿಂದ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿ ಇವರ ಊರು. ಅದೇ ಜಿಲ್ಲೆಯ ಯಳಂದೂರಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ 2021ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ’ ಕ್ಕೂ ಇವರು ಭಾಜನರಾದರು. ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದಲ್ಲಿ ಇವರ ಮೊದಲ ಕವನ ಸಂಕಲನ “ಸಾವೊಂದನ್ನು ಬಿಟ್ಟು” ಪ್ರಕಟವಾಗಿದೆ. ಈ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ. 2018 ರಲ್ಲಿ ‘ಧೂಪದ ಮಕ್ಕಳು’ ಕಥಾ ಸಂಕಲನದ ಹಸ್ತಪ್ರತಿಗೆ ಕನ್ನಡ ಯುವಜನ ಕ್ರಿಯಾ ಸಮಿತಿ, ಹಾನಗಲ್ಲು ಇವರಿಂದ ‘ಪಾಪು ಕಥಾ ಪುರಸ್ಕಾರ’ ಹಾಗೂ ಛಂದ ಪ್ರಕಾಶನ ಕೊಡಮಾಡುವ ‘ಛಂದ ಪುಸ್ತಕ ಬಹುಮಾನ’ ದೊರೆತಿದೆ. ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ನೀಡುವ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿಯೂ ಸೇರಿದಂತೆ ಬೆಂಗಳೂರಿನ ಬೇಂದ್ರೆ ಪ್ರತಿಷ್ಠಾನದ ಶಾ. ಬಾಲುರಾವ್ ಯುವ ಪ್ರಶಸ್ತಿಯೂ ದೊರೆತಿದೆ.

ಇದನ್ನೂ ಓದಿ : ಏಸೊಂದು ಮುದವಿತ್ತು : ಪಾಳಿ ಕಡಿದು ಪರೆ ಮಾಡಿ ಇಲಿಮು ಕಟ್ಟುವ ಅಪ್ಪನಿಗೆ ಬುತ್ತಿ ಒಯ್ಯುತ್ತಿರುವ ನೂರುಲ್ಲಾ

Published On - 3:36 pm, Sat, 8 May 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ