ಮಂಗಳೂರು: ವರ ಬೇಕು, ವಧು ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ ನೋಡಿರಬಹುದು. ಸಾಮಾನ್ಯವಾಗಿ ಮನೆಯಲ್ಲಿ ಮದುವೆ ಮಾಡುವಾಗ, ಗಂಡು, ಹೆಣ್ಣನ್ನು ಹುಡುಕುತ್ತಿರುವಾಗ ಪತ್ರಿಕೆಯಲ್ಲಿ ಜಾಹೀರಾತನ್ನು ನೀಡುತ್ತಾರೆ. ಇದರಿಂದ ಅವರು ಸೂಕ್ತವಾದ ವಧು ಮತ್ತು ವರನನ್ನು ಹುಡುಕಬಹುದು ಎಂಬುದು ಅವರ ಉದ್ದೇಶವಾಗಿರುತ್ತದೆ. ಆದರೆ ಇತ್ತೀಚಿಗೆ ಪತ್ರಿಕೆಯಲ್ಲಿ ನೀಡಲಾದ ಮದುವೆಯ ಜಾಹೀರಾತು ಬಾರಿ ವೈರಲ್ ಆಗಿದೆ, ಅದರಲ್ಲಿ ಕುಟುಂಬವೊಂದು 30 ವರ್ಷಗಳ ಹಿಂದೆ ತೀರಿ ಹೋಗಿರುವ ಮಗಳಿಗೆ ಜೋಡಿಯನ್ನು ಹುಡುಕುತ್ತಿದೆ. ಈ ಸುದ್ದಿ ಕೇಳಿ ನಿಮಗೆ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯ. ಹಾಗಾದರೆ ಏನಿದು? ಸತ್ತವರಿಗೇಕೆ ಮದುವೆ? ಜಾಹೀರಾತಿನ ಹಿನ್ನೆಲೆಯೇನು? ಇಲ್ಲಿದೆ ಮಾಹಿತಿ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕುಟುಂಬವೊಂದು “ತಮ್ಮ ಮಗಳು 30 ವರ್ಷಗಳ ಹಿಂದೆ ನಿಧನಗೊಂಡಿದ್ದು, ನಮಗೆ 30 ವರ್ಷಗಳ ಹಿಂದೆ ನಿಧನರಾದ ವರನ ಅಗತ್ಯವಿದೆ. ಅಂತಹ ಯಾವುದೇ ವರನಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ” ಎಂದು ಪತ್ರಿಕೆಯೊಂದಕ್ಕೆ ಜಾಹೀರಾತನ್ನು ನೀಡಿದ್ದಾರೆ. ಈ ಜಾಹೀರಾತಿನ ಜೊತೆಗೆ, ಮೃತ ಹುಡುಗಿಯ ವಿವರಗಳನ್ನು ಸಹ ಸೇರಿಸಲಾಗಿದೆ. ಈ ಸುದ್ದಿ ನಮಗೆ ಆಶ್ಚರ್ಯವನ್ನುಂಟು ಮಾಡಬಹುದು ಆದರೆ ಕರಾವಳಿ ಭಾಗದ ಅದರಲ್ಲಿಯೂ ತುಳುನಾಡಿನ ಜನತೆಗೆ ಹೊಸದಲ್ಲ. ಜೊತೆಗೆ ಇದು ಅಪಹಾಸ್ಯ ಮಾಡುವ ವಿಷಯವೂ ಅಲ್ಲ. ಏಕೆಂದರೆ ಸತ್ತವರ ಮದುವೆಯನ್ನು ಮಾಡುವ ಸಂಪ್ರದಾಯ ರೂಢಿಯಲ್ಲಿದೆ. ಇದೊಂದು ನಂಬಿಕೆ, ಹಾಗಾಗಿ ಈ ಬಗ್ಗೆ ಗೊತ್ತಿಲ್ಲದವರಿಗೆ ಇದು ವಿಚಿತ್ರ ಎನಿಸಬಹುದು.
ವಯಸ್ಸಿಗೆ ಬಂದಂತಹ ಹುಡುಗ- ಹುಡುಗಿಯರು ಮದುವೆ ಆಗದೆಯೇ ನಿಧನ ಹೊಂದಿದರೆ ಅವರಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ ಎಂಬುದು ತುಳುನಾಡಿನ ಜನರ ನಂಬಿಕೆಯಾಗಿದೆ. ಹಾಗಾಗಿ ಅವರಿಗೆ ಮೋಕ್ಷ ನೀಡಲು ಈ ಆಚರಣೆಯನ್ನು ಮಾಡಲಾಗುತ್ತದೆ. ಇದು ಎಲ್ಲಾ ಕುಟುಂಬಗಳಲ್ಲಿಯೂ ಇಲ್ಲ. ಆದರೆ ಕೆಲವರು ಇದನ್ನು ಕಟ್ಟುನಿಟ್ಟಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಹುಡುಗಿ ನೋಡುವ ಶಾಸ್ತ್ರ, ನಿಶ್ಚಿತಾರ್ಥ, ಜವಳಿ ಇನ್ನಿತರ ಎಲ್ಲಾ ಮದುವೆಯ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಆದರೆ ಇವೆಲ್ಲಾ ಹಿಂದೆ ಕುಟುಂಬಕ್ಕೆ ಸೀಮಿತವಾಗಿ ಗೌಪ್ಯವಾಗಿ ನಡೆಯುತ್ತಿತ್ತು, ಆದರೆ ಕಳೆದ ಕೆಲವು ವರ್ಷಗಳಿಂದ ಇದು ಮುಕ್ತವಾಗಿ ನಡೆಯುತ್ತಿದೆ. ಹಾಗಾಗಿ ಈ ಆಚರಣೆ ಬೆಳಕಿಗೆ ಬಂದಿದೆ.
ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಸುಮಾರು 50ಕ್ಕೂ ಹೆಚ್ಚು ಜನರು ಸಂಬಂಧಗಳನ್ನು ಕಳುಹಿಸಿದ್ದು ಶೀಘ್ರದಲ್ಲೇ ಎಲ್ಲಾ ರೀತಿಯ ಆಚರಣೆಗಳನ್ನು ಮಾಡಿ ಮದುವೆ ದಿನಾಂಕ ನಿಗದಿಯಾಗಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.