ಸನಾತನ ಸಂಸ್ಕೃತಿಯ ಮೇಲೆ ಶ್ರದ್ಧೆಯಿರುವ ಆಸ್ತಿಕರಿಗೆ ಭಗವಾನ್ ಶ್ರೀಕೃಷ್ಣನ ವಿಶ್ವರೂಪ ದರ್ಶನದ ಬಗ್ಗೆ ತಿಳಿದೇ ಇದೆ. ವಿಶ್ವರೂಪ ದರ್ಶನವೆಂದಾಗ ಕಣ್ಣಮುಂದೆ ಬರುವುದು ಮೊದಲು ತಾಯಿ ಯಶೋದೆಗೆ ಬಾಯಿಯಲ್ಲಿ ಜಗವ ತೋರಿದ ಕ್ಷಣ ಮತ್ತು ಗೀತೋಪದೇಶದ ಸಮಯ. ಇದಲ್ಲದೆ ಭಗವಂತನು ಮತ್ತು ಒಂದು ಸಲ ತನ್ನ ಸ್ವರೂಪದರ್ಶನ ಮಾಡಿಸಿರುತ್ತಾನೆ. ಅದು ಅಭಿಮನ್ಯು ಪುತ್ರನಾದ ಭಾಗವತೋತ್ತಮ ರಾಜಾ ಪರೀಕ್ಷಿತನಿಗೆ. ಹೌದು ಅಶ್ವತ್ಥಾಮ ಪಾಂಡವರ ಮೇಲೆ ಎರಡು ಬಾರಿ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ. ಮೊದಲನೇಯದ್ದು ದ್ರೌಪದಿಯ ಐವರು ಮಕ್ಕಳನ್ನು ಅಶ್ವತ್ಥಾಮ ಹತ್ಯೆ ಮಾಡಿದಾಗ ಅವನ ಮೇಲೆ ಅರ್ಜುನ ಯುದ್ಧ ಸಾರಿ ದಾಳಿ ನಡೆಸುವ ಸಂದರ್ಭದಲ್ಲಿ ಭಯಭೀತನಾದ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಎರಡನೇಯ ಸಲ ಸಾಕಷ್ಟು ಅವಮಾನಿತನಾಗಿದ್ದರೂ ಪಾಠ ಕಲಿಯದ ಅಶ್ವತ್ಥಾಮ ಪುನಃ ಅಭಿಮನ್ಯುವಿನ ಸಂತಾನ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿರುವುದನ್ನು ತಿಳಿದ ಅಶ್ವತ್ಥಾಮ ಪಾಂಡವರ ವಂಶದ ನಿರ್ವಂಶಕ್ಕಾಗಿ ಅವಳ ಗರ್ಭದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ.
ಭಯಭೀತಳಾದ ಉತ್ತರೆ ಕೃಷ್ಣನನ್ನು ಪಾರ್ಥಿಸುತ್ತಾಳೆ. ಬ್ರಹ್ಮಾಸ್ತ್ರದ ತೇಜಸ್ಸು ಉತ್ತರೆಯ ಗರ್ಭದಲ್ಲಿರುವ ಶಿಶುವನ್ನು ಸುಡುಲು ಧಾವಿಸಿ ಬರುತ್ತಿರುವಾಗ ಗರ್ಭದಲ್ಲಿರುವ ವೀರ ಶಿಶುವಿನ ಮುಂದೆ ಪೀತಾಂಬರ ಧಾರಿಯಾದ ಅದ್ಭುತವಾದ ತೇಜಸ್ಸು ಗರ್ಭವನ್ನು ಆವರಿಸಿತಂತೆ. ಅದನ್ನು ವ್ಯಾಸರು ಈ ರೀತಿ ವರ್ಣಿಸುತ್ತಾರೆ ಆ ಚೈತನ್ಯ ಅಣುವಿನಲ್ಲಿ ಅಣುವಾಗಿಯೂ ಮಹತ್ತಾದ್ದರಲ್ಲಿ ಅತ್ಯಂತ ಮಹತ್ತಾಗಿಯೂ ಇತ್ತು. ಅಲ್ಲದೇ ಗಾತ್ರ ಸಣ್ಣಕ್ಕಿದ್ದರೂ ಅದರ ತೇಜಸ್ಸಿನ ಮುಂದೆ ಬ್ರಹ್ಮಾಸ್ತ್ರವೂ ಕಾಣದಾಯಿತು ಎಂದು. ಸೂರ್ಯನ ಕಿರಣ ಲೀಲಾಜಾಲವಾಗಿ ಮಂಜನ್ನು ಹೊಡೆದೋಡಿಸುವಂತೆ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದಲ್ಲಿರುವ ಶಿಶುವಿನ ಕಡೆ ಬಂದಂತಹ ಬ್ರಹ್ಮಾಸ್ತ್ರವನ್ನು ನಿಸ್ತೇಜಗೊಳಿಸಿತು. ತಂದೆಯಾದ ಅಭಿಮನ್ಯು ಗರ್ಭದಲ್ಲಿರುವಾಗ ಯುದ್ಧಕಲೆ ಕಲಿತಂತೆ. ಅವನ ಮಗನು ಗರ್ಭದಲ್ಲಿರುವಾಗಲೇ ಭಗವಂತನ ಪೂರ್ಣ ರೂಪವನ್ನು ನೋಡಿ ನೀನಾರು ಎಂದು ಪ್ರಶ್ನಿಸಿದನಂತೆ.
ಇದನ್ನೂ ಓದಿ: Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?
ಭಗವಂತನ ಸ್ವರೂಪದರ್ಶನ ಫಲದಿಂದಲೇ ಅರ್ಜುನನ ದುಃಖನಾಶವಾಗಿ ಧರ್ಮ ಸಂರಕ್ಷೆಣೆ ಮಾಡುವಲ್ಲಿ ಯಶಸ್ವಿಯಾದ. ಅದೇ ರೀತಿ ಅವನ ಮೊಮ್ಮಗ ಅರ್ಥಾತ್ ಅಭಿಮನ್ಯುವಿನ ಪುತ್ರ ಪರೀಕ್ಷಿತ ಗರ್ಭದಲ್ಲೇ ಭಗವಂತನೆ ವಿಶ್ವರೂಪ ದರ್ಶನ ಪಡೆದು ಸುಲಗ್ನದಲ್ಲಿ ಎಲ್ಲಾ ಗ್ರಹರೂ ಅನುಕೂಲವಾಗಿರುವ ಘಳಿಗೆಯಲ್ಲಿ ಜನ್ಮ ಪಡೆಯುತ್ತಾನೆ.
ಅಲ್ಲದೇ ಪರಮ ಶ್ರೇಷ್ಠವಾದ ಭಾಗವತ ಮಹಾಪುರಾಣದ ಜನನಕ್ಕೆ (ರಚನೆಗೆ) ಕಾರಣೀಭೂತನಾಗುತ್ತಾನೆ. ಅರ್ಜುನ ಗೀತೆಗೆ ನಿಮಿತ್ತನಾದ ಭಗವತ್ಸ್ ರೂಪ ದರ್ಶನದಿಂದ. ಪರೀಕ್ಷಿತ ಭಾಗವತದ ರಚನೆಗೆ ಕಾರಣೀಭೂತನಾದ ಗರ್ಭದಲ್ಲೇ ಭಗವತ್ಸ್ ರೂಪ ಕಂಡು. ಭಗವದ್ಗೀತೆ ಮತ್ತು ಭಾಗವತವೆಂಬುದು ಭಗವಂತನ ವಿಶ್ವರೂಪ ದರ್ಶನದ ಕಾರಣದಿಂದಾಗಿದೆ ಮತ್ತು ಪಾಂಡು ವಂಶ ಇದಕ್ಕೆ ಮೂಲ ಹೇತುವಾಗಿದೆ. ಈ ಕಾರಣದಿಂದ ಅಭಿಮನ್ಯು ಪುತ್ರನಾದ ಪರೀಕ್ಷಿತನಿಗೂ ವಿಶ್ವರೂಪದರ್ಶನವಾಗಿದೆ ಎಂಬುದು ಸ್ಪಷ್ಟ.
ಡಾ.ಕೇಶವ ಕಿರಣ. ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
Published On - 9:54 am, Fri, 3 March 23