ಪುರಾಣಗಳ ಆಧಾರವಿಲ್ಲದ ಹಾಗೂ ಒಮ್ಮೊಮ್ಮೆ ವಿಜ್ಞಾನಿಗಳು ನಂಬುವಂತೆ ಆಗುವ ಮನುಷ್ಯನ ದೇಹದ ಅಂಗ ಚಲನೆಗಳು, ನಿತ್ಯ ಮಾಡುವ ಕೆಲಸದಲ್ಲಿ ನಂಬಿಕೆಗೆ ಪೂರಕವಾದದ್ದು. ಥಟ್ ಅಂತ ಕೈ ಜಾರಿ ಬಿದ್ದರೆ, ಮಂಗಳಾರತಿ ತೆಗೆದುಕೊಳ್ಳುವಾಗ ನಮ್ಮ ಉಸಿರಾಟಕ್ಕೂ, ಗಾಳಿಗೂ ದೀಪ ಆರಿದರೆ, ದೇವರ ಫೋಟೋ ವಿಗ್ರಹಗಳು ಅಕಸ್ಮಾತ್ ಬಿದ್ದರೆ, ಮೈಮೇಲಿರುವ ಬಟ್ಟೆ ದೀಪಕ್ಕೆ ತಗುಲಿದರೆ, ಕಾಡುವ ಅನುಮಾನಗಳು, ಪ್ರಯಾಣಕ್ಕೆ ಹೊರಡುವ ಸಮಯದಲ್ಲಿ ಸಂಭವಿಸುವ ಅಹಿತಕರ ಅಥವಾ ಶುಭ ಸೂಚನೆ (Omen), ಇವುಗಳನ್ನು ನಂಬುವುದೋ, ಬಿಡುವುದೋ, ಗೊಂದಲಗಳೇ ಸರಿ. ಮೇಲಿಂದ ಮೇಲೆ ಒಳ್ಳೆಯದೇ ಆಗುತ್ತಿದ್ದರೆ, ನಾವು ಮಾಡುವ ಪೂಜಾ ಫಲ ಅಥವಾ ಭಗವಂತನ ಅನುಗ್ರಹ, ನಮ್ಮ ಧರ್ಮ, ಕರ್ಮ, ನಮ್ಮ ಒಳ್ಳೆಯತನ ಹೀಗೆ ನಮ್ಮ ಬೆನ್ನನ್ನು ತಟ್ಟಿಕೊಂಡು ಖುಷಿಪಡುತ್ತೇವೆ (Bad Omen).
ಶಕುನ ಮುನ್ಸೂಚನೆ ಅಂತೆ-ಕಂತೆಗಳ ಪುರಾಣದ ಬೆನ್ನುಹತ್ತಿ ನೋಡಿದಾಗ!
ಅದೇ ಸ್ವಲ್ಪ ಯಡವಟ್ಟಾದರೆ, ಏನು ಗ್ರಹಚಾರವೋ ಯಾರಿಗೆ ಗೊತ್ತು ಹಾಳಾದ್ದು ಏನು ಕರ್ಮವೋ, ಗೊತ್ತಿತ್ತು ನನಗೆ ಬೆಳ್ಳಂಬೆಳಗ್ಗೆನೆ ದರಿದ್ರ ಕರಿ ಬೆಕ್ಕಿನ ದರ್ಶನ ವಾಯಿತು, ಅಂದ್ಕೊಂಡಿದ್ದೆ, ಏನೋ ಆಗುತ್ತೇಂಥ ಎರಡ್ಮೂರು ದಿನಗಳಿಂದ ಸುಡುಗಾಡು ಬಲಗಣ್ಣು ಹಾರ್ತಿತ್ತು, ಇದು ಕಣ್ಣೀರು ಹಾಕಿಸದೆ ಇರುವುದಿಲ್ಲ. ಇಂಟರ್ವ್ಯೂಗೆ ಹೊರಡಲು ಹೊರಟಿದ್ದೆ, ಆ ಪ್ಯಾಥೋ ಮುಖದ ಒಂಟಿಬಡಕ ಬ್ರಾಹ್ಮಣ ಅಡ್ಡ ಬಂದ, ಎಂದೂ ಬರದ ಬಾಳೆಕಟ್ಟೆಮನೆ ಆ ಹೆಗ್ಗಡತಿ ಎದುರಿಗೆ ಬಂದ್ಲು ಆವಾಗ್ಲೇ ಅಂದುಕೊಂಡೆ – ಇವತ್ತು ಏನಾದ್ರೂ ಆಗುತ್ತೆ ಅಂತ.
ಹಲ್ಲಿಯಂತೆ ಲೊಚಗುಟ್ಟುವುದು, ಕಪ್ಪೆಯಂತೆ ವಟಗುಟ್ಟುವುದು ಮಾಡ್ತಾನೆ ಇರ್ತೀವಿ. ( ಕೆಲವರು ಎದುರಿಗೆ ಹೇಳದಿರಬಹುದು, ಮನಸ್ಸಿನಲ್ಲಂತೂ ಇರುತ್ತೆ). ಇವೆಲ್ಲ ಎಷ್ಟು ಸುಳ್ಳೋ, ನಿಜವೋ, ಗೊತ್ತುಗುರಿ ಇಲ್ಲದ ಇಂಥ ವಿಚಾರಗಳು ನಮ್ಮ ತಲೆಯಲ್ಲಿ ಯಾವಾಗಲೂ ಗಿರಿಕಿ ಹೊಡೆಯುತ್ತಲೆ ಇರುತ್ತದೆ. ಥೂ ಥು ನಾವು ಅದನ್ನೆಲ್ಲ ನಂಬಲ್ಲಪ್ಪಾ ಎಂದು ಎಷ್ಟೇ ಎದುರಿಗೆ ಹೇಳಿದರೂ, ಮನಸ್ಸಿಗೆ ಹಿತವಲ್ಲದ್ದು ಏನಾಗಲ್ಲ ಏನಾಗಲ್ಲ ಅಂದುಕೊಂಡು ನಡೆದುಬಿಟ್ಟರೆ ಮೂಲೆಯಲ್ಲಿ ಚಿಂತೆಯೊಂದು ಕಾಡುತ್ತಿರುತ್ತದೆ. ಕಾಕತಾಳಿಯವೆಂಬಂತೆ ಬಹಳಷ್ಟು ಹಾಗೆಯೇ ನಡೆಯುತ್ತದೆ. ಇಂಥ ನಂಬಿಕೆಗಳು ಎಂದಿನಿಂದಲೋ ನಮ್ಮ ಜೊತೆ ಹಾಸುಹೊಕ್ಕಾಗಿ ಬಂದುಬಿಟ್ಟಿದೆ. ಅದರಲ್ಲಿ ಕೆಲವೊಂದು ತುಣುಕುಗಳನ್ನು ನೋಡೋಣ ಬನ್ನಿ.
ಇಂತಹ ಆಲೋಚನೆಗಳು ತಲೆಯಲ್ಲಿ ಬರಬಾರದು ಅಂತ ನಮ್ಮ ಹಿರಿಯರು ಒಳ್ಳೆಯ ವಿಚಾರಗಳನ್ನು ಚಿಂತನೆ ಮಾಡಲು ಪೂರಕವಾಗುವಂತೆ ನಮಗೆ ತಿಳಿಸುತ್ತಲೇ ಬಂದಿದ್ದಾರೆ. ಅದನ್ನು ಬಿಟ್ಟು ಕುತೂಹಲಕ್ಕಾಗಿ ಕೆಟ್ಟದ್ದರ ಕುರಿತು ಹುಡುಕುತ್ತೇವೆ, ಯಾರಾದರೂ ಮಾತನಾಡುತ್ತಿದ್ದರೆ ಸರಿಯಾಗಿ ಕಿವಿಗೊಟ್ಟು ಕೇಳಿಸಿಕೊಳ್ಳುತ್ತೇವೆ. ಏಳುವಾಗ ಬಲ ಮಗ್ಗುಲಲ್ಲಿ ಏಳಬೇಕು. ಅಂಗೈ ಉಜ್ಜಿ ನೋಡಿ, ದೇವರಿಗೆ ಕೈ ಮುಗಿದು ಹಿರಿಯರನ್ನು ಗೌರವಿಸಿ ಇದನ್ನೆಲ್ಲಾ ಮನೆಯಲ್ಲಿ, ಶಿಕ್ಷಕರಿಂದ, ಪಠ್ಯಪುಸ್ತಕಗಳಿಂದ ಕಲಿತಿದ್ದೇವೆ.
ಆದರೆ ಅಚಾನಕ್ ಸಿಗುವ ಸೂಚನೆ ಅಥವಾ ಶಕುನಗಳು ಅಂದರೆ, ಅಂಗೈ ತುರಿಸಿದರೆ ಧನ ಲಾಭವಾಗುತ್ತದೆ ಎಂದು ಹೇಳ್ತಾರೆ. ಕಿವಿ ತುರಿಸಿದರೆ ಒಳ್ಳೆಯ ಸುದ್ದಿ ಬರುತ್ತದೆ. ಯಾರ ನಾಲಿಗೆ ಮೂಗಿಗೆ ಮುಟ್ಟುತ್ತದೆಯೋ ಅವರು ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ. ಯಾರ ಮೂಗು ಎತ್ತರಕ್ಕೆ ಇದ್ದು ಮುಂದೆ ಚೂಪಗೆ ಬಂದಿರುತ್ತದೋ ಅವರು ಅದೃಷ್ಟವಂತರು ಅಂತ, ಹಾಗೆ ಎಡಗಣ್ಣು ಹಾರಿದರೆ ಬಹಳ ಒಳ್ಳೆಯದಾಗುತ್ತೆ. ಹಲ್ಲುಗಳು ಸಮಸಂಖ್ಯೆಯಲ್ಲಿ ಇದ್ದರೆ ಜೀವನದಲ್ಲಿ ಸುಖವಾಗಿರುತ್ತಾರೆ. ಬಾಯಿಯಲ್ಲಿ 32 ಹಲ್ಲು ಪೂರ್ತಿ ಇದ್ದವರ ಮಾತು ಸತ್ಯವಾಗುತ್ತದೆ. ನಾಲಿಗೆಯಲ್ಲಿ ಮಚ್ಚೆ ಇದ್ದವರು ನುಡಿದಂತೆ ಆಗುತ್ತದೆ. ಇವೆಲ್ಲ ಒಂದು ವಿಶೇಷ ಅಂತ ಪರಿಗಣಿಸುತ್ತಾರೆ.
ಹೊರಡುವಾಗ ಎಡಗಾಲು ಎಡವಿದರೆ, ಅದರಲ್ಲೂ ಹೆಬ್ಬೆಟ್ಟಿಗೆ ರಕ್ತ ಬಂದರೆ, ಹೋದ ಕೆಲಸ ಸಕ್ಸಸ್. ಕಾಲಿನ ಎಡ ಪಾದ ತುರಿಸುತ್ತಿದ್ದರೆ ಒಳ್ಳೆಯ ಕಡೆ ಪ್ರಯಾಣ ಹೊರಡುತ್ತೇವೆ. ಬಲಗಾಲು ತುರಿಸಿದರೆ ನೆಂಟರು ಬರುತ್ತಾರೆ. ತುಟಿ ತುರಿಸಿದರೆ ಸುಗ್ರಾಸ ಭೋಜನ ಊಟಕ್ಕೆ ಕರೆ ಬರುತ್ತದೆ. ಕಣ್ಣಿನಲ್ಲಿ ತುರಿಸಿದರೆ ಒಳ್ಳೆಯದನ್ನು ಕಣ್ತುಂಬ ನೋಡುವ ಸಂಕೇತ, ಎದೆ ಭಾಗ ತುರಿಸಿದರೆ ಬಹಳ ದಿನಗಳಿಂದ ಕಾಯುತ್ತಿದ್ದ ಪ್ರೀತಿಪಾತ್ರರ ಭೇಟಿಯಾಗುವ ಸೂಚನೆ, ಪ್ರಯಾಣಕ್ಕೆ ಅಥವಾ ಹೊರಗೆ ಹೊರಟಾಗ ಎದುರಿಗೆ ಕುರಿಮಂದೆ, ಹಸುಗಳ ಹಿಂಡು, ಹಸಿ ಹುಲ್ಲಿನ ಹೊರೆ, ಹೂವು, ಬಾಳೆ ಹಣ್ಣಿನ ಗೊನೆ, ಮುತ್ತೈದೆ, ಹಸು-ಕರು, ಬಸವಣ್ಣನ ಜೊತೆ ಆಡಿಸುವವನು, ದಂಪತಿ, ಬಾಗಿನ ತರುತ್ತಿರುವ ಮುತ್ತೈದೆ, ಉತ್ಸವ, ಶಂಖ-ಜಾಗಂಟೆ ಮೊಳಗುವುದು, ತುಂಬಿದ ಕೊಡ ಹೊತ್ತ ಮಹಿಳೆ, ಕುರಿ ಮಂದೆ ಇವೆಲ್ಲಾ ಕಂಡರೆ ಶುಭ ಅಂತ.
ಹಾಗೆ, ಬೆಳಗ್ಗೆ ಕಾಗೆ ಕೂಗಿದರೆ ನೆಂಟರು ಬರುತ್ತಾರೆ, ಉರಿಯುತ್ತಿರುವ ಒಲೆ ಕರೆದರೆ ( ಒಲೆಯಲ್ಲಿ ಕಟ್ಟಿಗೆ ಹತ್ತಿ ಉರಿಯುತ್ತಿರುವಾಗ ಗರ್ ಅಂತ ಶಬ್ದ ಬರುತ್ತದೆ. ಗ್ಯಾಸ್ ಸ್ಟವ್ ನಲ್ಲೂ ಹೀಗೆ ಶಬ್ದ ಬರುತ್ತದೆ) ಒಲೆ ನಗುತ್ತಿದೆ ಎಂದೂ ಹೇಳುತ್ತಾರೆ. ಹೊರಗೆ ಹೊರಟಾಗ, ಬೆಕ್ಕು ಎಡದಿಂದ ಬಲಕ್ಕೆ ಹೋದರೆ, ಕಾಗೆ ಎಡದಿಂದ ಬಲಕ್ಕೆ ಹಾರಿದರೆ ಒಳ್ಳೆಯದು. ನೀರು ಸೇದುವಾಗ ಅರ್ಧ ಕೊಡ ಬಂದರೆ ನೆಂಟರು ಬರುತ್ತಾರೆ,
ನಮ್ಮ ನಾಲಿಗೆಯನ್ನು ನಾವೇ ಕಚ್ಚಿಕೊಂಡರೆ ಯಾರೋ ಬೈದು ಕೊಳ್ಳುತ್ತಿದ್ದಾರೆ, ನೆತ್ತಿ ಹತ್ತಿ ಕೆಮ್ಮು ಬಂದರೆ ಯಾರು ನಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ, ಬಿಕ್ಕಳಿಕೆ ಬಂದರೆ ಪ್ರೀತಿಪಾತ್ರರು ಜ್ಞಾಪಿಸಿಕೊಳ್ಳುತ್ತಾರೆ. ಮೊಸರನ್ನ ಅಥವಾ ಮಜ್ಜಿಗೆ ಅನ್ನ ತಿನ್ನುವಾಗ ಅಕಸ್ಮಾತ್ ಅಕ್ಕಿಯ ಹುಳ ಕಂಡರೆ ಲಾಭ ಸಿಗುತ್ತದೆ. ಅಕಸ್ಮಾತ್ ಊಟದ ಬುತ್ತಿ ಸಿಕ್ಕರೆ ಲಕ್ಷ್ಮಿ ಒಲಿದಳು ಎಂದು, ಮನೆಯೊಳಗೆ ಗೊತ್ತಿಲ್ಲದಂತೆ ಸೇರಿಕೊಂಡ ಕೆರೆಹಾವು ರಾತ್ರಿ ಇದ್ದರೆ ಅಷ್ಟೈಶ್ವರ್ಯ ಬಂದಂತೆ, ತೆಂಗಿನಕಾಯಿ ಒಡೆಯುವಾಗ ತೊಟ್ಟಿಲು ತರ ಒಡೆದರೆ ಮನೆಗೆ ಮಗು ಬರುತ್ತದೆ ಎಂದು, ಪ್ರಸಾದ ಕೊಡುವಾಗ ಕಣ್ಣು ಇರುವ ಹೋಳು ಬಂದರೆ ಗಂಡು ಮಗು ಹುಟ್ಟುತ್ತದೆ ಎಂದು,
ಮೂರು ಸಂಜೆ ಹೊತ್ತು ಬಂದ ನೆಂಟರು ಹೋಗುವುದಿಲ್ಲ, ಸಂಜೆ ಬರುವ ಮಳೆಯು ಬಿಡುವುದಿಲ್ಲ, ಹಾಗೆ ಜೋಡಿ ಬಾಳೆಹಣ್ಣು ಹೆಣ್ಣುಮಕ್ಕಳು ತಿನ್ನಬಾರದೆಂದು, ಇಡೀ ಚೀನಿಕಾಯಿ, ಕುಂಬಳಕಾಯಿ, ಹೆಣ್ಣುಮಕ್ಕಳು ಒಡೆಯಬಾರದೆಂದು, ಅಪರಾಹ್ನದ ಹೊತ್ತಿನಲ್ಲಿ ಹೊಳೆ ಸ್ನಾನ ಮಾಡಬಾರದು, ಮದುವೆ ಮುಂಜಿಗಳಲ್ಲಿ ಬಂದವರಿಗೆ ಉಡುಗೊರೆ ಕೊಡುವಾಗ ಒಂಟಿ ಬಟ್ಟೆಗಳನ್ನು ಕೊಡಬಾರದೆಂದು, ಮಾತಾಡುವಾಗ ಹಲ್ಲಿ ಲೊಚಗುಟ್ಟಿದರೆ ಅದೇ ಆಗುತ್ತದೆಂದು, ಮನೆಯೊಳಗೆ ಅಶ್ವಿನಿ ದೇವತೆಗಳು ಅಸ್ತು ಎನ್ನುತ್ತಾ ಇರುತ್ತಾರೆ ಆದ್ದರಿಂದ ಒಳ್ಳೆಯ ಮಾತಾಡಬೇಕು ಎನ್ನುತ್ತಾರೆ.
ಮೂರು ಸಂಜೆ ಹೊತ್ತು ಕಥೆ ಹೇಳಿದರೆ, ಕೇಳಿದರೆ ಕಾಶಿಯಾತ್ರೆಗೆ ಹೋಗುವವರೆಗೆ ತೊಂದರೆಯಾಗುತ್ತದೆಂದು, ಆದ್ದರಿಂದ ಸ್ತೋತ್ರ ಪಟನೆ ಮಾಡಬೇಕೆಂದು, ಒಳ್ಳೆಯ ವಿಷಯ ಮಾಡುತ್ತಿರುವಾಗ ಒಂಟಿ ಸೀನು ಸೀನಬಾರದೆಂದು, ಒಟ್ಟಿಗೆ ಇರುವ ಹೆಣ್ಣು-ಗಂಡು ಕಾಗೆಗಳನ್ನು ನೋಡಬಾರದು, ನೋಡಿದರೆ ಸಾವಿನ ಸುದ್ದಿ ಬರುತ್ತದೆ. ಕನಸಿನಲ್ಲಿ ಹೊಟ್ಟೆ ತುಂಬಾ ಊಟ ಮಾಡುವುದನ್ನು ಕಾಣಬಾರದು, ಹುಷಾರಿಲ್ಲದ ರೋಗಿ ಹುಷಾರಾದಂತೆ ಕನಸಿನಲ್ಲಿ ಕಾಣಬಾರದೆಂದು, ಈ ತರಹ ನೂರೆಂಟು ಶಾಸ್ತ್ರ- ಶಕುನಗಳನ್ನು ಬಹಳಷ್ಟು ಜನರು ನಂಬುತ್ತಾರೆ. ಇದೆಲ್ಲ ಸುಳ್ಳೋ, ನಿಜವೋ ತಿಳಿಯದು ಆದರೆ ಬಾಯಿಂದ ಬಾಯಿಗೆ ಹರಿದು ಬಂದಿದೆ.
ಏನೇ ಆಗಲಿ, ಆಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಸಿದ್ಧ ಜ್ಯೋತಿಷ್ಯ ಹಾಗೂ ಖಗೋಳಶಾಸ್ತ್ರಜ್ಞರಾದ ಭಾಸ್ಕರಾಚಾರ್ಯರಿಗೆ ಲೀಲಾವತಿ ಎಂಬ ಮಗಳಿದ್ದಳು. ಅವಳಂಥ ಗಣಿತಜ್ಞೆ ಯಾರೂ ಇಲ್ಲ, ತಂದೆಯ ಮೂಲಕ ಹರಿದುಬಂದ ಗಣಿತದ ಜ್ಞಾನ. ಒಮ್ಮೆ ಭಾಸ್ಕರಾಚಾರ್ಯರು ಮಗಳ ಜಾತಕ ನೋಡಿದರು. ಅವಳ ಮದುವೆಯನ್ನು ನಿರ್ದಿಷ್ಟವಾದ ಮುಹೂರ್ತದಲ್ಲಿ ಮಾಡಿದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂದಿತ್ತು.
ಅದಕ್ಕಾಗಿ ಆಚಾರ್ಯರು ನಿರ್ದಿಷ್ಟವಾದ ಮದುವೆ ಮುಹೂರ್ತ ಇಡಲು ನೀರಿನ ಅಳತೆ ಮಾಪಕ ಯಂತ್ರವನ್ನು ತಯಾರಿಸಿದರು. ಆ ಮೂಲಕ ಸುಮುಹೂರ್ತವನ್ನೇ ಇಟ್ಟಿರುತ್ತಾರೆ. ಒಂದು ದಿನ ಕುತೂಹಲಕ್ಕಾಗಿ ಲೀಲಾವತಿ ಬಗ್ಗಿ ನೋಡುತ್ತಾಳೆ. ಅವಳ ಆಭರಣದ ಒಂದು ಹರಳು ಅವಳಿಗೆ ಗೊತ್ತಿಲ್ಲದೆ ಅದರೊಳಗೆ ಬಿದ್ದು ಆ ಸಮಯದ ಲೆಕ್ಕಚಾರ ತಪ್ಪಿತು.
ಮದುವೆ ಆಗದೆ ಲೀಲಾವತಿ ಹಾಗೆ ಉಳಿದಳು ಎಂದೂ, ಇನ್ನು ಕೆಲವು ಕಡೆ ಮದುವೆಯಾಗಿ ಅವಳ ಗಂಡ ತೀರಿಕೊಂಡನೆಂದು ಹೇಳುತ್ತಾರೆ. ಆದರೆ ಅದನ್ನೆಲ್ಲಾ ಮರೆಯುವಂತೆ ಮುಂದೆ ಭಾಸ್ಕರಾಚಾರ್ಯರು ಅಪರಿಮಿತವಾದ ಗಣಿತವನ್ನು ಅವಳಿಗೆ ಬೋಧಿಸಿ. ‘ಲೀಲಾವತಿ ಗಣಿತ ಸಿದ್ಧಾಂತ’ ಎಂದು ಜಗತ್ಪ್ರಸಿದ್ಧಿಯಾಗಿ ಲೀಲಾವತಿ ಹೆಸರು ಪ್ರಖ್ಯಾತವಾಗುವಂತೆ ಮಾಡಿದರು.
ಯಾವುದೇ ಸಮಸ್ಯೆಗಳು, ಮನಸ್ಸಿಗೆ ಕಿರಿಕಿರಿ, ಶಕುನಗಳು, ಅದೇನೆ ಆಗಿರಲಿ, ದೇವರ ಮುಂದೆ ತುಪ್ಪದ ದೀಪ ಹಚ್ಚಿ ಭಕ್ತಿಯಿಂದ ಪ್ರಾರ್ಥಿಸಿ – ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತಃ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ – ಎಂದು ಹೇಳಿ ಭಗವಂತನ ಮೇಲೆ ನಂಬಿಕೆಯಿಟ್ಟು ಕೈ ಮುಗಿದರೆ ಎಲ್ಲ ಸಮಸ್ಯೆಗಳು ಸುಸೂತ್ರವಾಗಿ ಮಂಜಿನಂತೆ ಕರಗಿ ಹೋಗುತ್ತದೆ.
ಉಚ್ಚಿಷ್ಟಂ ಶಿವ ನಿರ್ಮಾಲ್ಯಂ ವಮನಂ ಶವ ಕರ್ಪಟಂ!
ಕಾಕಾವಿಷ್ಠಾಸಮುತ್ಪನ್ನಂ ಪಂಚೈತೇತಿ ಪವಿತ್ರಕಾ!
ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ,
ಕಾಗೆಯ ಮಲದಿಂದ ಹುಟ್ಟಿದ್ದು – ಈ ಐದು ಅತ್ಯಂತ ಪವಿತ್ರವಾದವು.
ಕರುವಿನ – ಎಂಜಲು ಹಾಲು, ಶಿವನ ಜಟೆಯಿಂದ ಮುಕ್ತಳಾದ ನಿರ್ಮಾಲ್ಯ- ಗಂಗಾ ನದಿ, ಜೇನುಹುಳದ ವಾಂತಿ -ಜೇನುತುಪ್ಪ, ರೇಷ್ಮೆ ಹುಳದ ಶವದ ಬಟ್ಟೆ- ರೇಷ್ಮೆ ವಸ್ತ್ರ, ಅರಳಿ ಮರದ ಬೀಜವನ್ನು ತಿಂದ ಕಾಗೆಯ ಮಲದಿಂದ ಹುಟ್ಟಿದ – ಅಶ್ವಥ್ (ಅರಳಿಮರ)
ಲೋಕದಲ್ಲಿ ಅಪವಿತ್ರವೆಂಬುದು, ಅಶುದ್ಧವೆಂಬುದು ನಮ್ಮ ಮನಸ್ಸು ಮಾತ್ರ. ಮನಸ್ಸನ್ನು ಶುದ್ಧವಾಗಿಸಿದಲ್ಲಿ ಸಕಲವೂ ಪವಿತ್ರವಾಗಿಯೇ ಇರುವುದು. (ಬರಹ: ಆಶಾ ನಾಗಭೂಷಣ)
Published On - 7:36 am, Fri, 18 February 22