
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಭಕ್ತಾದಿಗಳಿಗೆ ದೇವಾಲಯ ಆಡಳಿತ ಮಂಡಳಿಯು ಪ್ರಮುಖ ಸೂಚನೆಯೊಂದನ್ನು ನೀಡಿದೆ. ಬದಲಾಗುತ್ತಿರುವ ಚಳಿ ಮತ್ತು ಹವಾಮಾನ ವೈಪರೀತ್ಯವನ್ನು ಗಮನದಲ್ಲಿಟ್ಟುಕೊಂಡು ಶ್ರೀ ರಾಮಲಲ್ಲಾನ ದಿನನಿತ್ಯದ ಪೂಜೆ, ಆರತಿ, ನೈವೇದ್ಯ ಹಾಗೂ ದರ್ಶನದ ಸಮಯವನ್ನು ಪರಿಷ್ಕರಿಸಲಾಗಿದೆ. ಈ ನೂತನ ವೇಳಾಪಟ್ಟಿಯು ನವೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ದೇವಾಲಯದ ಆಡಳಿತ ಮಂಡಳಿಯ ಪ್ರಕಾರ, ದೇವಾಲಯದ ಬಾಗಿಲುಗಳು ಇನ್ಮುಂದೆ ಬೆಳಗಿನ ಜಾವ 3:45 ರ ಬದಲು ಬೆಳಿಗ್ಗೆ 4:00 ಗಂಟೆಗೆ ತೆರೆಯಲಿವೆ. ತದನಂತರ ಬೆಳಿಗ್ಗೆ 4:30 ಕ್ಕೆ ಮಂಗಳಾ ಆರತಿ ಹಾಗೂ ಬೆಳಿಗ್ಗೆ 6:30 ಕ್ಕೆ ಶೃಂಗಾರ ಆರತಿಯನ್ನು ನೆರವೇರಿಸಲಾಗುತ್ತದೆ. ಭಕ್ತರಿಗೆ ಶ್ರೀ ರಾಮಲಲ್ಲಾನ ಸಾಮಾನ್ಯ ದರ್ಶನವು ಬೆಳಿಗ್ಗೆ 7:00 ಗಂಟೆಯಿಂದ ಆರಂಭವಾಗಲಿದೆ.
ದೇವಾಲಯದಲ್ಲಿ ಬಾಲರಾಮನ ಭೋಗ್ ಅರ್ಪಣೆ ಹಾಗೂ ವಿಶ್ರಾಂತಿಯ ಸಮಯದಲ್ಲಿ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 8:00 ರಿಂದ 8:10 ರವರೆಗೆ ಬಾಲಭೋಗ್‌ಗಾಗಿ ಬಾಗಿಲು ಮುಚ್ಚಲಾಗುತ್ತದೆ, ನಂತರ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:00 ರವರೆಗೆ ರಾಜಭೋಗ್ ಅರ್ಪಿಸಲಾಗುತ್ತದೆ. ಮಧ್ಯಾಹ್ನ 12:30 ರಿಂದ 1:30 ರವರೆಗೆ ರಾಮಲಲ್ಲಾನ ವಿಶ್ರಾಂತಿ ಸಮಯವಾಗಿದ್ದು, ಮಧ್ಯಾಹ್ನ 1:35 ಕ್ಕೆ ದರ್ಶನ ಪ್ರಕ್ರಿಯೆಯು ಪುನರಾರಂಭಗೊಳ್ಳುತ್ತದೆ.
ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಸಂಜೆಯ ಪೂಜಾ ಆಚರಣೆಗಳಲ್ಲಿ ಭಾಗವಹಿಸುವ ಭಕ್ತರು ಹೊಸ ಸಮಯವನ್ನು ಗಮನಿಸಬೇಕಾಗಿದೆ. ಸಂಜೆ ಆರತಿಯು ಸರಿಯಾಗಿ ಸಂಜೆ 7:00 ಗಂಟೆಗೆ ನಡೆಯಲಿದೆ. ಪ್ರಸ್ತುತ ರಾತ್ರಿ 10:30 ಕ್ಕೆ ದೇವಾಲಯ ಮುಚ್ಚಲಾಗುತ್ತಿದ್ದು, ನವೆಂಬರ್ 1 ರಿಂದ ರಾತ್ರಿ 9:30 ಕ್ಕೆ ಶಯನ/ನಿದ್ರಾ ಆರತಿ ನೆರವೇರಿದ ನಂತರ ರಾತ್ರಿ 10:00 ಗಂಟೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Tue, 27 October 26