ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ವಾಸ್ತು ಶಾಸ್ತ್ರದ ಪ್ರಕಾರ ನಿಂಬೆಹಣ್ಣಿಗೆ ಅತ್ಯಂತ ವಿಶೇಷ ಸ್ಥಾನವಿದೆ. ಆದರೆ ಮನೆಯ ಮುಂಭಾಗದಲ್ಲಿ ನಿಂಬೆ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡದಿದ್ದರೆ ಆರ್ಥಿಕ ನಷ್ಟ ಹಾಗೂ ಕುಟುಂಬದಲ್ಲಿ ಕಲಹಗಳು ಉಂಟಾಗಬಹುದು. ಹಾಗಿದ್ದರೆ ನಿಂಬೆ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು? ಯಾವ ದಿಕ್ಕಿನಲ್ಲಿ ಇರಬಾರದು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇನ್ನು ಸಾಮಾನ್ಯವಾಗಿ ಬಹುತೇಕರು ತಮ್ಮ ಮನೆಯ ಮುಂದೆ ವಿವಿಧ ರೀತಿಯ ಗಿಡ-ಮರಗಳನ್ನು ನೆಡುತ್ತಾರೆ. ಅದರಲ್ಲೂ ವಿಶೇಷವಾಗಿ ಅನೇಕರ ಮನೆಯ ಮುಂಭಾಗದಲ್ಲಿ ನಿಂಬೆ ಗಿಡ ಇರುವುದು ಸಾಮಾನ್ಯ. ಹಾಗಾದರೆ, ಮನೆಯ ಮುಂದೆ ನಿಂಬೆ ಗಿಡವಿರಬಹುದೇ? ಈ ಬಗ್ಗೆ ವಾಸ್ತು ತಜ್ಞರು ಹೇಳುವುದೇನು? ಮಾಹಿತಿ ಇಲ್ಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ನಿಂಬೆಹಣ್ಣಿಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಇದನ್ನು ಪೂಜೆ-ಪುನಸ್ಕಾರಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದು ನಕಾರಾತ್ಮಕ ಶಕ್ತಿಗಳಿಂದ (ಪ್ರತಿಕೂಲ ಶಕ್ತಿ) ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಅನೇಕರು ತಮ್ಮ ಮನೆಯ ಮುಂದೆ ಇದನ್ನು ನೆಡುತ್ತಾರೆ. ವಾಸ್ತು ಪ್ರಕಾರ ಮನೆಯ ಮುಂದೆ ನಿಂಬೆ ಮರವಿರುವುದರಿಂದ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ, ಆದರೆ ಕೆಲವು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಅನುಸರಿಸಬೇಕಾದ ಪ್ರಮುಖ ವಾಸ್ತು ನಿಯಮಗಳು:
ವಾಸ್ತು ಶಾಸ್ತ್ರದ ಪ್ರಕಾರ ನಿಂಬೆ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭ ಮತ್ತು ಉತ್ತಮ ಫಲಗಳನ್ನು ನೀಡುತ್ತದೆ. ಯಾವುದೇ ಕಾರಣಕ್ಕೂ ನಿಂಬೆ ಮರವು ಮನೆಯ ಮುಖ್ಯ ಬಾಗಿಲಿಗೆ ನೇರವಾಗಿ (ಎದುರುಗಡೆ) ಇರಬಾರದಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ನಿಮ್ಮ ಮುಖ್ಯ ಗೇಟಿಗೆ ಕನಿಷ್ಠ ಮೂರರಿಂದ ನಾಲ್ಕು ಅಡಿಗಳಷ್ಟು ದೂರದಲ್ಲಿ ನಿಂಬೆ ಗಿಡವಿರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು.
ಕೆಲವರು ತಿಳಿಯದೆ ನಿಂಬೆ ಗಿಡವನ್ನು ದಕ್ಷಿಣ, ಪಶ್ಚಿಮ ಅಥವಾ ನೈಋತ್ಯ ಮೂಲೆಗಳಲ್ಲಿ ನೆಡುತ್ತಾರೆ. ಆದರೆ, ಈ ದಿಕ್ಕುಗಳಲ್ಲಿ ನಿಂಬೆ ಗಿಡವನ್ನು ನೆಡುವುದು ಬಿಲ್ಕುಲ್ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಭಾರಿ ಆರ್ಥಿಕ ನಷ್ಟವಾಗುವ ಸಂಭವವಿರುತ್ತದೆ. ಅಲ್ಲದೆ, ಇದು ಮನೆಯ ಕುಟುಂಬ ಸದಸ್ಯರ ನಡುವೆ ಅನಾವಶ್ಯಕ ಕಲಹಗಳು ಮತ್ತು ಮನಸ್ತಾಪಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಪಂಡಿತರು ಈ ದಿಕ್ಕುಗಳಲ್ಲಿ ನಿಂಬೆ ಗಿಡವನ್ನು ನೆಡಬಾರದು ಎಂದು ಬಲವಾಗಿ ಸಲಹೆ ನೀಡುತ್ತಾರೆ.
ಇದನ್ನೂ ಓದಿ: ದುರ್ಗಾ ದೇವಿಯ ಕೈಯಲ್ಲಿರುವ ಆಯುಧಗಳ ರಹಸ್ಯವೇನು? ತ್ರಿಶೂಲದಿಂದ ಚಕ್ರದವರೆಗೆ ಎಲ್ಲದರ ಮಹತ್ವ ಇಲ್ಲಿದೆ!
ಗಮನಿಸಬೇಕಾದ ಇತರ ಪ್ರಮುಖ ಅಂಶಗಳು:
ಕೇವಲ ದಿಕ್ಕುಗಳಷ್ಟೇ ಅಲ್ಲದೆ, ಜನರು ಓಡಾಡುವ ರಸ್ತೆಯ ಮಧ್ಯಭಾಗದಲ್ಲಿ ಕೂಡ ಈ ನಿಂಬೆ ಗಿಡವಿರಬಾರದು. ವಾಸ್ತು ತಜ್ಞರ ಪ್ರಕಾರ ಹೀಗಿದ್ದರೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಎಲ್ಲಾ ವಿಧದಲ್ಲೂ ನಿಮಗೆ ತೊಂದರೆಗಳನ್ನು ತಂದೊಡ್ಡಬಹುದು. ಆದ್ದರಿಂದ, ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನಿಂಬೆ ಗಿಡವನ್ನು ನೆಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗಿ ಹೆಚ್ಚಿನ ಲಾಭ ಹಾಗೂ ಸಕಾರಾತ್ಮಕ ಫಲಗಳನ್ನು ಪಡೆದುಕೊಳ್ಳಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
