
ಹರಿಹರಪುತ್ರ ಅಯ್ಯಪ್ಪ ಸ್ವಾಮಿಯ ಮಾಲಾಧಾರಣೆ, ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಮಕರ ಸಂಕ್ರಾಂತಿಯ ದಿನದಂದು ಅಯ್ಯಪ್ಪ ಜ್ಯೋತಿ ದರ್ಶನ ಪಡೆಯಲು ಭಕ್ತರು 41 ದಿನಗಳ ಕಠಿಣ ವ್ರತವನ್ನು ಕೈಗೊಳ್ಳುತ್ತಾರೆ. ಈ ವ್ರತದಲ್ಲಿ ಪಾಲಿಸಬೇಕಾದ ನಿಯಮ ನಿಬಂಧನೆಗಳ ಬಗ್ಗೆ ಅರಿಯುವುದು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮಹತ್ವಪೂರ್ಣ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ವ್ರತಧಾರಿಗಳು ಗುರುಗಳ ಮೂಲಕ ಮಾಲೆ ಧರಿಸುತ್ತಾರೆ. ಕೆಲವರು ಕಪ್ಪು, ಕೆಂಪು, ಅಥವಾ ಕಾವಿ ಬಟ್ಟೆಗಳನ್ನು ಧರಿಸುತ್ತಾರೆ. ವ್ರತದ ಅವಧಿಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಣ್ಣೀರಿನ ಸ್ನಾನ ಮಾಡುವುದು ಪ್ರಮುಖ ನಿಯಮ. ಬರಿಗಾಲಿನಲ್ಲಿ ನಡೆಯುವುದು, ಕೋಪ, ದುರಾಸೆ, ಹಣದ ಆಸೆ ಮತ್ತು ಕೆಟ್ಟ ಆಲೋಚನೆಗಳಿಂದ ದೂರವಿರುವುದು ಅನಿವಾರ್ಯ. ಮಾತಿನಲ್ಲಿ ಸೌಮ್ಯತೆ, ಮೌನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದು, ಹಾಗೂ ಸದಾ ಅಯ್ಯಪ್ಪನ ಧ್ಯಾನದಲ್ಲಿ ಇರುವುದು ಅಗತ್ಯ.
ಅಯ್ಯಪ್ಪ ವ್ರತಧಾರಿಗಳು ಸ್ವಯಂಪಾಕ ಮಾಡಿಕೊಂಡು ಸಾತ್ವಿಕ ಆಹಾರ ಸೇವಿಸಬೇಕು, ಮಹಿಳೆಯರ ಮೇಲೆ ಅವಲಂಬಿತರಾಗಬಾರದು. ವೃತ್ತಿಯನ್ನು ಮಾಡಿಕೊಂಡರೂ, ತ್ರಿಕಾಲದಲ್ಲಿ ಅಯ್ಯಪ್ಪನ ಭಜನೆ ಮತ್ತು ಸ್ಮರಣೆಯನ್ನು ಮಾಡಬೇಕು. ದುಶ್ಚಟಗಳಿಂದ ಮತ್ತು ದುರ್ಜನರ ಸಹವಾಸದಿಂದ ಸಂಪೂರ್ಣವಾಗಿ ದೂರವಿರಬೇಕು. ಪ್ರತಿಯೊಬ್ಬರನ್ನು “ಸ್ವಾಮಿಯೇ ಶರಣಮಯ್ಯಪ್ಪ” ಅಥವಾ “ಸ್ವಾಮಿ” ಎಂದು ಸಂಬೋಧಿಸುವುದು ಸಂಪ್ರದಾಯ. ಪ್ರತಿದಿನ ಎರಡು ಬಾರಿ ತಣ್ಣೀರಿನ ಸ್ನಾನ, ಸೂರ್ಯೋದಯಕ್ಕೆ ಮುಂಚೆ ಏಳುವುದು, ತಂದೆ-ತಾಯಿಗಳಿಗೆ ನಮಸ್ಕರಿಸುವುದು, ದೇವಸ್ಥಾನದಲ್ಲಿ ಅಥವಾ ಚಾಪೆ ಮೇಲೆ ಮಲಗುವುದು ಇವೆಲ್ಲವೂ ವ್ರತದ ಅವಿಭಾಜ್ಯ ಅಂಗಗಳಾಗಿವೆ.
ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಈ ನಿಯಮಗಳ ಪಾಲನೆಯು ವೈಜ್ಞಾನಿಕವಾಗಿ ದೇಹಕ್ಕೆ ಪುಷ್ಟಿ ನೀಡುತ್ತದೆ, ಮನಸ್ಸನ್ನು ಗಟ್ಟಿ ಮಾಡುತ್ತದೆ ಮತ್ತು ಭಗವಂತನ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ. ಸಾತ್ವಿಕ ಆಹಾರ ಸೇವನೆ ಮತ್ತು ಲಘು ಆಹಾರ ಪದ್ಧತಿ ಶಕ್ತಿ, ನಿಗ್ರಹ ಶಕ್ತಿ, ಆಯಸ್ಸು ವೃದ್ಧಿ ಮತ್ತು ಉತ್ತಮ ಆಲೋಚನೆಗಳಿಗೆ ಕಾರಣವಾಗುತ್ತದೆ. ಇದರಿಂದ ಕುಟುಂಬ ಮತ್ತು ಸಮಾಜದಲ್ಲಿ ಸ್ವಾಸ್ಥ್ಯ ವಾತಾವರಣ ನಿರ್ಮಾಣವಾಗುತ್ತದೆ. ಕೇವಲ ಮೂರು ದಿನಗಳಿಗೋಸ್ಕರ ಮಾಲೆ ಹಾಕಿಕೊಂಡು ಹೋಗುವುದಕ್ಕಿಂತ, 41 ದಿನಗಳ ವ್ರತವನ್ನು ಸಂಪೂರ್ಣ ಶ್ರದ್ಧಾಭಕ್ತಿಯಿಂದ ಆಚರಿಸುವುದರಿಂದ ಸಾರ್ಥಕತೆ ಲಭಿಸುತ್ತದೆ. ಅಯ್ಯಪ್ಪನ ದರ್ಶನಕ್ಕೆ ಹೋದಾಗ ಒಂದು ಸಂಕಲ್ಪ ಇಟ್ಟುಕೊಂಡು, ಒಳ್ಳೆಯದನ್ನು ಅಳವಡಿಸಿಕೊಳ್ಳುವ ಭಾವನೆಯಿಂದ ಹೋದರೆ ವ್ರತದ ಫಲ ಸಿಗುತ್ತದೆ. ಇದು ಸನಾತನ ಸಂಸ್ಕೃತಿ ಮತ್ತು ಹಿಂದೂ ಪರಂಪರೆಯ ಪ್ರತೀಕವಾಗಿದ್ದು, ಭಾರತದಲ್ಲಿ ಜನಿಸಿ ಈ ಭಕ್ತಿಯನ್ನು ಆಚರಿಸುವುದು ಪುಣ್ಯವೆಂದು ಭಾವಿಸಲಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 am, Fri, 28 November 25