
ಸಾಮಾನ್ಯವಾಗಿ ಹೊಸ ಮನೆ ಕಟ್ಟಿದಾಗ, ಹಳೆ ಮನೆಯಿಂದ ಹೊಸ ಮನೆಗೆ ಹೋಗುವಂತಹ ಸಂದರ್ಭದಲ್ಲಿ ಹಳೆಯ ಫೋಟೋಗಳು ಹೊಸ ಮನೆಗೆ ಸಾಕಷ್ಟು ಜನರು ತೆಗೆದುಕೊಂಡು ಹೊಗುವುದಿಲ್ಲ. ಹೊಸ ಮನೆಗೆ ಈ ಹಳೇ ಫೋಟೋಗಳು ಸೆಟ್ ಆಗಲ್ಲ ಎಂಬ ಕಾರಣಕ್ಕೆ ಸಾಕಷ್ಟು ಜನರು ಈ ರೀತಿ ಮಾಡುವುದುಂಟು. ಇದಲ್ಲದೇ ಕೆಲವೊಮ್ಮೆ ಹಳೆಯ ಗೆದ್ದಲು ಹಿಡಿದ ದೇವರ ಫೋಟೋ, ನೀರು ಬಿದ್ದು ಹಾಳಾದ ಫೋಟೋಗಳನ್ನು ಎಲ್ಲಿ ಇಡುವುದು ಎನ್ನುವ ಗೊಂದಲ ಹಲವರಿಗಿರುತ್ತದೆ. ಇದರಿಂದಾಗಿ ಅನೇಕ ಜನರು ದೇವರ ಫೋಟೋಗಳನ್ನು ದೇವಸ್ಥಾನದ ಹೊರಗಡೆ, ಮರದ ಕಟ್ಟೆಯ ಕೆಳಗಡೆ ಹೀಗೆ ಎಲ್ಲೋ ಒಂದು ಕಡೆ ಎಸೆದು ಬರುತ್ತಾರೆ. ಆದರೆ ಇನ್ಮುಂದೆ ಈ ರೀತಿಯ ಮಾಡದಿರಿ. ಬದಲಾಗಿ HSR ಲೇಔಟ್ನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆಯುವ ಹಳೆಯ ಫೋಟೋಗಳ ವಿಸರ್ಜನೆ ಪೂಜೆಯಲ್ಲಿ ಆ ಫೋಟೋಗಳನ್ನು ತಂದುಕೊಡಿ.
ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ದೇವರ ಹಳೆಯ ಅಥವಾ ಹಾಳಾದ ಪೋಟೋವನ್ನು ಏನು ಮಾಡುವುದು ಎಂಬ ಪ್ರಶ್ನೆಗೆ ಈ ವಿಡಿಯೋದಲ್ಲಿ ಉತ್ತರವನ್ನು ನೀಡಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ನಟರಾಜನ ಪ್ರತಿಮೆ ಇಡಬಾರದು ಎಂದು ಹೇಳುವುದೇಕೆ?
@hsrcitizenforum ಎಂಬ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಬೆಂಗಳೂರಿನ HSR ಲೇಔಟ್ನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಇದೇ ತಿಂಗಳ 26ನೇ ತಾರೀಕಿನಂದು ಬೆಳಿಗ್ಗೆ 11 ಗಂಟೆಗೆ ಹಳೆಯ ಫೋಟೋಗಳ ವಿಸರ್ಜನೆ ಪೂಜೆ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಕಸ ವಿಲೇವಾರಿ, ಕಸ ನಿರ್ವಹಣೆ, ಮರು ಉಪಯೋಗ, ಮರುಬಳಕೆ. ಅಂದರೆ ದೇವರ ಹಳೆಯ ಫೋಟೋಗಳನ್ನು ಅಲ್ಲಲ್ಲಿ ಬಿಸಾಕುವ ಬದಲು ಇಲ್ಲಿ ನೀವು ತಂದುಕೊಡಬಹುದು. ಇಷ್ಟು ದಿನ ಪೂಜೆ ಮಾಡಿಕೊಂಡು ಬಂದಿದ್ದ ಫೋಟೋಗಳನ್ನು ಏಕಾಏಕಿ ಬಿಸಾಕುವುದು ತಪ್ಪು, ಆದ್ದರಿಂದ ಸರಿಯಾದ ಕ್ರಮದಲ್ಲಿ ವಿಸರ್ಜನೆಯನ್ನು ಮಾಡಿ ಅದನ್ನು ವಿಲೇವಾರಿ ಮಾಡುವಂತಹ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ಆದ್ದರಿಂದ ಬೆಂಗಳೂರಿಗರೇ ದೇವರ ಹಳೆಯ ಫೋಟೊಗಳನ್ನು ಅಲ್ಲಲ್ಲಿ ಎಸೆಯುವ ಬದಲು ಇಲ್ಲಿಗೆ ತಂದುಕೊಡಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Wed, 23 July 25