Bhishma Ashtami 2022: ಭೀಷ್ಮ ಅಷ್ಟಮಿಯಂದು ತರ್ಪಣ ನೀಡಿದರೆ ಈ ಪ್ರಯೋಜನ ಪ್ರಾಪ್ತಿಯಾಗುತ್ತದೆ

| Updated By: ಆಯೇಷಾ ಬಾನು

Updated on: Feb 08, 2022 | 3:45 PM

ಭೀಷ್ಮ ಅಷ್ಟಮಿಯ ದಿನದಂದು ಭೀಷ್ಮ ಪಿತಾಮಹನು ತನ್ನ ದೇಹವನ್ನು ತೊರೆದರು. ಪಂಚಾಂಗದ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಭೀಷ್ಮ ತಮ್ಮ ದೇಹವನ್ನು ತೊರೆದರು ಎನ್ನಲಾಗುತ್ತೆ.

Bhishma Ashtami 2022: ಭೀಷ್ಮ ಅಷ್ಟಮಿಯಂದು ತರ್ಪಣ ನೀಡಿದರೆ ಈ ಪ್ರಯೋಜನ ಪ್ರಾಪ್ತಿಯಾಗುತ್ತದೆ
ಭೀಷ್ಮ
Follow us on

2022ರ ಫೆಬ್ರವರಿ 8ರಂದು ಅಂದರೆ ಇಂದು ಭೀಷ್ಮ ಅಷ್ಟಮಿಯ(Bhishma Ashtami) ದಿನವಾಗಿ ಆಚರಿಸಲಾಗುತ್ತೆ. ಈ ದಿನ ಭೀಷ್ಮ ಪಿತಾಮಹನಿಗೆ(Bhishma pitamah) ತರ್ಪಣ ನೀಡಲಾಗುತ್ತೆ. ಮಹಾಭಾರತ ಮಹಾ ಕಾವ್ಯದಲ್ಲಿ ಬರುವ ಅತ್ಯಂತ ಪ್ರಸಿದ್ದ ಪಾತ್ರಗಳಲ್ಲೊಂದು ಭೀಷ್ಮ ಪಿತಾಮಹ. ಇವರು ಮಹಾರಾಜ ಶಾಂತನು ಮತ್ತು ಮಾತಾ ಗಂಗಾರ ಪುತ್ರ. ಭೀಷ್ಮ ಅಷ್ಟಮಿಯ ದಿನದಂದು ಭೀಷ್ಮ ಪಿತಾಮಹನು ತನ್ನ ದೇಹವನ್ನು ತೊರೆದರು. ಪಂಚಾಂಗದ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಭೀಷ್ಮ ತಮ್ಮ ದೇಹವನ್ನು ತೊರೆದರು ಎನ್ನಲಾಗುತ್ತೆ. ಹೀಗಾಗಿಯೇ ಮಾಘ ಶುಕ್ಲ ಅಷ್ಟಮಿಯ ದಿನವನ್ನು ಭೀಷ್ಮ ಅಷ್ಟಮಿ ಎಂದು ಹೇಳುತ್ತಾರೆ. ಇನ್ನು ಈ ದಿನ ಭೀಷ್ಮನಿಗೆ ತರ್ಪಣವನ್ನು ಮಾಡುವ ವ್ಯಕ್ತಿಯು ಅವನಂತಹ ಮಗನನ್ನು ಪಡೆಯುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.

ಭೀಷ್ಮ ಅಷ್ಟಮಿ 2022ರ ಶುಭ ಮುಹೂರ್ತ
ಭೀಷ್ಮ ಅಷ್ಟಮಿ 2022ರ ದಿನಾಂಕವು ಫೆಬ್ರವರಿ 8ರಂದು ಮಂಗಳವಾರ ಬೆಳಗ್ಗೆ 6.16ರಿಂದ ಆರಂಭವಾಗುತ್ತದೆ. ಮತ್ತು ಭೀಷ್ಮ ಅಷ್ಟಮಿ 2022ರ ದಿನಾಂಕವು ಫೆಬ್ರವರಿ 9ರಂದು ಬುಧವಾರ ಬೆಳಗ್ಗೆ 8.31ಕ್ಕೆ ಕೊನೆಗೊಳ್ಳುತ್ತದೆ.

ಭೀಷ್ಮ ತರ್ಪಣ ದಿನ
ಭೀಷ್ಮ ಅಷ್ಟಮಿ ದಿನದಂದು ಭೀಷ್ಮನಿಗೆ ನೀರನ್ನು ಅರ್ಪಿಸಿ ಸಂತಾನವನ್ನು ಕರುಣಿಸುವಂತೆ ಬೇಡಿಕೊಂಡರೆ ಈ ಬೇಡಿಕೆಯನ್ನು ಭೀಷ್ಮ ಈಡೇರಿಸುತ್ತಾರೆ ಎನ್ನುವ ವಾಡಿಕೆ ಇದೆ. ಧವಳ ಪ್ರಬಂಧ ಪುಸ್ತಕದ ಪ್ರಕಾರ ಈ ದಿನವು ಭೀಷ್ಮನಿಗೆ ತರ್ಪಣವನ್ನು ನೀಡುವ ದಿನವೆಂದು ಉಲ್ಲೇಖಿಸಲಾಗಿದೆ. ಬ್ರಹಚಾರಿಯಾಗಿದ್ದ ಭೀಷ್ಮನಿಗೆ ತರ್ಪಣವನ್ನು ಅರ್ಪಿಸುವ ಮೂಲಕ ಹುಡುಗರು ಮತ್ತು ಹುಡುಗಿಯರು ಅದ್ಭುತ ತೇಜಸ್ಸನ್ನು ಪಡೆಯಬಹುದು ಎನ್ನಲಾಗಿದೆ.

ಭೀಷ್ಮ ಅಷ್ಟಮಿ ಮಹತ್ವ
ಭೀಷ್ಮ ಅಷ್ಟಮಿಯ ದಿನದಂದು ಮಾಡುವ ಉಪವಾಸಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ಎಳ್ಳಿನ ನೀರಿನಿಂದ ತರ್ಪಣ ಮಾಡುವವರು ಸಂತಾನ ಭಾಗ್ಯವನ್ನು ಪಡೆಯುತ್ತಾರೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಹಾಗೂ ಈ ದಿನ ಉಪವಾಸ ಮಾಡುವುದರಿಂದ ಆ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ. ಈ ದಿನದಂದು ಭೀಷ್ಮ ಪಿತಾಮಹರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣ ಮಾಡಲಾಗುತ್ತೆ. ಅಲ್ಲದೆ ಈ ದಿನ ತರ್ಪಣ ಅರ್ಪಿಸುವುದರಿಂದ ಪಿತೃದೋಷದಿಂದ ಮುಕ್ತಿ ಕೂಡ ಸಿಗುತ್ತದೆ.

ಭೀಷ್ಮ ಅಷ್ಟಮಿ ತರ್ಪಣ ವಿಧಾನ
ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ನಂತರ ಬಲ ಭುಜದ ಮೇಲೆ ದಾರವನ್ನು ಧರಿಸಿ ಅಥವಾ ಬಲ ಭುಜದ ಮೇಲೆ ಶಾಲನ್ನು ಧರಿಸಿ ಎಳ್ಳು ಮತ್ತು ನೀರನ್ನು ಕೈಯಲ್ಲಿ ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ಮುಖ ಮಾಡಿ ”ವೈಯಾಘ್ರಪದಗೋತ್ರಾಯ ಸಂಸ್ಕೃತಿಪ್ರವರಾಯ ಚ|
ಗಂಗಾಪುತ್ರಾಯ ಭೀಷ್ಮಾಯ ಪ್ರದಾಸ್ಯೇಹಂ
ತಿಲೋದಕಂ ಅಪುತ್ರಾಯ ದದಾಮ್ಯತತ್ಸಲಿಲಂ ಭೀಷ್ಮವರ್ಮಣೇ|| ಈ ಮಂತ್ರವನ್ನು ಪಠಿಸಿ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯ ಭಾಗದ ಮೂಲಕ ಪಾತ್ರೆಯಲ್ಲಿ ಎಳ್ಳು ಮತ್ತು ನೀರನ್ನು ಬಿಡಬೇಕು. ಬಳಿಕ ಎಡ ಭುಜದ ಮೇಲೆ ಜನೇವು ಅಥವಾ ಶಾಲನ್ನು ಹಾಕಿ ಭೀಷ್ಮನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಭೀಷ್ಮ ಪಿತಾಮಹನ ಹೆಸರಿನೊಂದಿಗೆ ಸೂರ್ಯನಿಗೆ ನೀರನ್ನು ಅರ್ಪಿಸಬಹುದು ಅಥವಾ ದಕ್ಷಿಣಕ್ಕೆ ಮುಖ ಮಾಡಿ ಯಾವುದೇ ಆಲದ ಮರಕ್ಕೆ ನೀರನ್ನು ನೀಡಬಹುದು. ನಂತರ ಪವಿತ್ರ ಮರ ಅಥವಾ ಆಲದ ಮರಕ್ಕೆ ತರ್ಪಣ ನೀರನ್ನು ಅರ್ಪಿಸಬಹುದು. ಕೊನೆಗೆ ಭೀಷ್ಮ ಮತ್ತು ನಮ್ಮ ಪೂರ್ವಜರಿಗೆ ನಮಸ್ಕರಿಸಬೇಕು.

ಭೀಷ್ಮ ಪಿತಾಮಹ ಸಾವು
ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರ ನಡುವೆ ಯುದ್ಧವಾಗುತ್ತೆ. ಪಿತಾಮಹ ಭೀಷ್ಮ ಕೌರವರ ಪರವಾಗಿ ಯುದ್ಧ ಮಾಡುತ್ತಿರುತ್ತಾರೆ. ಭೀಷ್ಮನಂತಹ ಮಹಾ ಯೋಧನ ವಿರುದ್ಧ ಗೆಲ್ಲುವುದು ಪಾಂಡವ ಸೈನ್ಯಕ್ಕೆ ಬಹಳ ಕಷ್ಟಕರವಾಗಿರುತ್ತು. ಆಗ ಭಗವಾನ್ ಕೃಷ್ಣನು ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾನೆ ಮತ್ತು ಅರ್ಜುನನ ರಥದಲ್ಲಿ, ಅಂಬಾ ಎಂದರೆ ಶಿಖಂಡಿಯನ್ನು ಜೊತೆಗಿರಿಸುತ್ತಾನೆ, ಏಕೆಂದರೆ ಶಿಖಂಡಿ ಅರ್ಧ ಪುರುಷ, ಆದ್ದರಿಂದ ಅವನು ಯುದ್ಧಭೂಮಿಗೆ ಬರಬಹುದು ಮತ್ತು ಮಹಿಳೆಯೂ ಆಗಿರುದರಿಂದ, ಭೀಷ್ಮನು ಯಾವುದೇ ಮಹಿಳೆಯ ಮೇಲೆ ಯುದ್ಧ ಮಾಡುವುದಿಲ್ಲ ಎಂದು ಪೂರ್ವ ವಚನ ಮಾಡಿರುತ್ತಾನೆ. ಈ ರೀತಿಯಾಗಿ ಶಿಖಂಡಿಯನ್ನು ಮುಂದಿಟ್ಟುಕೊಂಡು ಪಾಂಡವರು ಯುದ್ಧಕ್ಕೆ ಮುಂದಾಗುತ್ತಾರೆ. ಆಗ ಅರ್ಜುನನು ಪಿತಾಮಹ ಭೀಷ್ಮನ ಮೇಲೆ ಬಾಣಗಳ ಮಳೆ ಸುರಿಸಿ ಬಾಣಗಳ ಹಾಸಿಗೆಯ ಮೇಲೆ ಮಲಗಿಸುವಂತೆ ಮಾಡುತ್ತಾನೆ. ಹೀಗೆ ಅಂಬಾ ಸೇಡು ಕೂಡ ಪೂರ್ಣಗೊಳ್ಳುತ್ತದೆ. ಭೀಷ್ಮ ಪಿತಾಮಹ ಯುದ್ಧ ಮುಗಿಯುವವರೆಗೂ ಬಾಣಗಳ ಹಾಸಿಗೆಯ ಮೇಲೆಯೇ ರಕ್ತದ ಮಡಿಲಿನಲ್ಲಿಯೇ ಮಲಗಿರುತ್ತಾರೆ. ಸಾವು ಸಮೀಪವಿದ್ದರು ನೋವನ್ನು ನುಂಗಿ ಮರಣವನ್ನೇ ಹಿಡಿದಿಟ್ಟುಕೊಂಡಿರುತ್ತಾರೆ. ಭೀಷ್ಮ ಇಚ್ಛಾ ಮರಣಿಯಾದ ಕಾರಣ ಹಸ್ತಿನಾಪುರದ ಸಿಂಹಾಸನವನ್ನು ಸುರಕ್ಷಿತ ಕೈಗೆ ಒಪ್ಪಿಸುವವರೆಗೂ ಅವರು ಸಾಯಲು ಇಷ್ಟ ಪಡುವುದಿಲ್ಲ. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಅಷ್ಟಮಿಯ ದಿನದಂದು ಭೀಷ್ಮ ಪಿತಾಮಹನು ತನ್ನ ದೇಹವನ್ನು ತೊರೆಯುತ್ತಾರೆ.

ಇದನ್ನೂ ಓದಿ: ಮಹಾಭಾರತದ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಇನ್ನಿಲ್ಲ