ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯ ಆಗಿರುವುದರಿಂದ, ಇಂದು ಸೂರ್ಯ ಆರಾಧನೆಯ ರಥ ಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ಅಚಲ ಸಪ್ತಮಿ, ರಥ ಆರೋಗ್ಯ ಸಪ್ತಮಿ, ಭಾನು ಸಪ್ತಮಿ, ಆರ್ಕ ಸಪ್ತಮಿ, ಸೂರ್ಯರಥ ಸಪ್ತಮಿ, ಸಂತಾನ ಸಪ್ತಮಿ ಮತ್ತು ಮಾಘಿ ಸಪ್ತಮಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಪ್ತಮಿಯನ್ನು ವರ್ಷದ ಸಪ್ತಮಿಯಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿನ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಬಟ್ಟೆಗಳನ್ನು ದಾನ ಮಾಡುವುದು, ಏಳು ಜನ್ಮಗಳ ಪಾಪಗಳನ್ನು ತೊಡೆದುಹಾಕುತ್ತದೆ ಎನ್ನುವ ನಂಬಿಕೆಯಿದೆ.
ರಥ ಸಪ್ತಮಿ 2022 ಶುಭ ಮುಹೂರ್ತ
ಈ ಬಾರಿ ರಥ ಸಪ್ತಮಿಯನ್ನು ಫೆಬ್ರವರಿ 07ರಂದು ಆಚರಿಸಲಾಗುತ್ತೆ. ರಥ ಸಪ್ತಮಿಯಂದು ಸೂರ್ಯೋದಯ ಸಮಯ ಬೆಳಗ್ಗೆ -07:06
ಸಪ್ತಮಿ ತಿಥಿ ಪ್ರಾರಂಭವಾಗುವುದು -ಫೆಬ್ರವರಿ 07 ರ ಬೆಳಗ್ಗೆ 04:37
ಸಪ್ತಮಿ ತಿಥಿ ಕೊನೆಗೊಳ್ಳುವುದು -ಫೆಬ್ರವರಿ 08 ರ ಬೆಳಗ್ಗೆ 06:15
ರಥ ಸಪ್ತಮಿ ಅತ್ಯಂತ ಮಂಗಳಕರ ದಿನವಾಗಿದೆ. ಈ ದಿನದಂದು ಸೂರ್ಯನನ್ನು ಆರಾಧಿಸುವುದರಿಂದ ಮತ್ತು ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಪಡೆಯಬಹುದು. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ತಿಳಿದ, ತಿಳಿಯದೆ, ಮಾತಿನ ಮೂಲಕ, ದೇಹದಿಂದ, ಮನಸ್ಸಿನಿಂದ, ಪ್ರಸ್ತುತ ಜನ್ಮದಲ್ಲಿ ಮತ್ತು ಹಿಂದಿನ ಜನ್ಮಗಳಲ್ಲಿ ಮಾಡಿದ ಏಳು ರೀತಿಯ ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ರಥ ಸಪ್ತಮಿಯಂದು ಅರುಣೋದಯ ಸಮಯದಲ್ಲಿ ಸ್ನಾನ ಮಾಡಬೇಕು. ರಥ ಸಪ್ತಮಿ ಸ್ನಾನವು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಸೂರ್ಯೋದಯಕ್ಕೆ ಮೊದಲು ಅರುಣೋದಯ ಸಮಯದಲ್ಲಿ ಸೂರ್ಯೋದಯದ ಮೊದಲು ಸ್ನಾನ ಮಾಡುವುದರಿಂದ ಆ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ ಮತ್ತು ಎಲ್ಲಾ ರೀತಿಯ ಕಾಯಿಲೆಗಳು ಮತ್ತು ರೋಗಗಳಿಂದ ಮುಕ್ತನಾಗುತ್ತಾನೆ. ಈ ನಂಬಿಕೆಯಿಂದಾಗಿ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ.
ಸ್ನಾನ ಮಾಡಿದ ನಂತರ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯದಾನ ಅರ್ಪಿಸಿ ಪೂಜಿಸಬೇಕು. ಕೆರೆ, ನದಿ ಸೇರಿದಂತೆ ಹರಿಯುವ ನೀರಿರುವಲ್ಲಿ ನಿಂತಿರುವ ಭಂಗಿಯಲ್ಲಿ ಭಗವಾನ್ ಸೂರ್ಯನನ್ನು ನಮಸ್ಕಾರ ಮಾಡುತ್ತ ಸಣ್ಣ ಕಲಶದಿಂದ ಸೂರ್ಯನಿಗೆ ನಿಧಾನವಾಗಿ ನೀರನ್ನು ಅರ್ಪಿಸುವ ಮೂಲಕ ಅರ್ಘ್ಯದಾನವನ್ನು ನಡೆಸಲಾಗುತ್ತದೆ. ಇದರ ನಂತರ ಶುದ್ಧ ತುಪ್ಪದ ದೀಪವನ್ನು ಬೆಳಗಿಸಬೇಕು ಮತ್ತು ಕರ್ಪೂರ, ಧೂಪ ಮತ್ತು ಕೆಂಪು ಹೂವುಗಳಿಂದ ಸೂರ್ಯ ದೇವರನ್ನು ಪೂಜಿಸಬೇಕು. ಸೂರ್ಯದೇವನಿಗೆ ಬೆಳಗಿನ ಸ್ನಾನ, ದಾನ-ಪುಣ್ಯ ಮತ್ತು ಅರ್ಘ್ಯದಾನವನ್ನು ಮಾಡುವುದರಿಂದ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸಲಾಗುತ್ತದೆ. ರಥ ಸಪ್ತಮಿ ದಿನದಂದು ಎಲ್ಲಾ ಜನರು ಸ್ನಾನ ಮಾಡಿ ಸೂರ್ಯ ದೇವನಿಗೆ ಅಕ್ಕಿ, ಎಳ್ಳು, ದುರ್ವಾ, ಶ್ರೀಗಂಧದ ತುಂಡು ಮತ್ತು ಹಣ್ಣು ಇತ್ಯಾದಿಗಳನ್ನು ಅರ್ಪಿಸಿ ಪೂಜಿಸುವ ಪದ್ಧತಿ ಇದೆ. ಈ ದಿನ ಸೂರ್ಯದೇವನಿಗೆ ಅರ್ಘ್ಯ ನೀಡುವುದನ್ನು ಸಹ ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ನೀವು ಸೂರ್ಯ ದೇವನಿಗೆ ದಿನನಿತ್ಯ ಅರ್ಘ್ಯವನ್ನು ಅರ್ಪಿಸಲು ಬಯಸಿದರೆ ಈ ದಿನದಿಂದ ಪ್ರಾರಂಭಿಸಬಹುದು.
ರಥ ಸಪ್ತಮಿಯ ದಂತ ಕಥೆ
ದಂತಕಥೆಯ ಪ್ರಕಾರ, ಗಣಿಕಾ ಎಂಬ ಮಹಿಳೆ ತನ್ನ ಇಡೀ ಜೀವನದಲ್ಲಿ ಯಾವುದೇ ದಾನ ಕಾರ್ಯಗಳನ್ನು ಮಾಡಿರಲಿಲ್ಲ. ಆ ಮಹಿಳೆಯ ಬದುಕಿನ ಅಂತ್ಯ ಬಂದಾಗ ಆಕೆ ವಸಿಷ್ಠ ಮುನಿಯ ಬಳಿಗೆ ಹೋಗಿ ತಾನು ಯಾವತ್ತೂ ಯಾವುದೇ ದಾನ ಮಾಡಿಲ್ಲ, ಹಾಗಾಗಿ ನಾನು ಹೇಗೆ ವಿಮೋಚನೆ ಪಡೆಯುತ್ತೇನೆ ಎಂದು ಮಹಿಳೆ ಋಷಿಗೆ ಕೇಳಿದಳು. ಆಗ ಋಷಿಗಳು ಮಾಘ ಮಾಸದ ಸಪ್ತಮಿ ದಿನದಂದು ಅಂದರೆ ಅದು ರಥ ಸಪ್ತಮಿ ದಿನವಾಗಿರುತ್ತದೆ. ಈ ದಿನದಂದು ದಾನ ಮಾಡುವುದರಿಂದ ಜನ್ಮ ಜನ್ಮಗಳ ಪುಣ್ಯದ ಫಲ ಪ್ರಾಪ್ತವಾಗುತ್ತದೆ ಎಂದು ಹೇಳಿದರಂತೆ. ಈ ದಿನ, ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ, ಸೂರ್ಯ ಭಗವಂತನಿಗೆ ಅರ್ಘ್ಯ ನೀಡಿ ಮತ್ತು ದೀಪ ದಾನ ಮಾಡಬೇಕು ಮತ್ತು ದಿನಕ್ಕೆ ಒಮ್ಮೆ ಉಪ್ಪು ಇಲ್ಲದೆ ಆಹಾರವನ್ನು ಸೇವಿಸಬೇಕು. ಇದನ್ನು ಮಾಡುವುದರಿಂದ ಆ ವ್ಯಕ್ತಿಯು ಪುಣ್ಯವನ್ನು ಪಡೆಯುತ್ತಾನೆಂದು ಹೇಳಿದರಂತೆ. ವಸಿಷ್ಠ ಮುನಿಗಳ ಸಲಹೆಯಂತೇ ಮಹಿಳೆ ರಥ ಸಪ್ತಮಿ ದಿನದಂದು ದೀಪದಾನ ಮಾಡಿ, ವ್ರತದ ವಿಧಿಗಳನ್ನು ಪಾಲಿಸುತ್ತಾಳೆ. ಕೆಲವು ದಿನಗಳ ನಂತರ ಆಕೆ ತನ್ನ ದೇಹವನ್ನು ತ್ಯಜಿಸಿ ಸ್ವರ್ಗದ ರಾಜ ಇಂದ್ರನ ಅಪ್ಸರೆಗಳ ಮುಖ್ಯಸ್ಥನಾಗುವ ಭಾಗ್ಯವನ್ನು ಪಡೆದಳು ಎಂದು ಹೇಳಲಾಗಿದೆ.
ಇದನ್ನೂ ಓದಿ: ಶಾಸ್ತ್ರದ ಪಕಾರ ಯಾವ ದಿನ ಯಾವ ದೇವರನ್ನು ಪೂಜಿಸಬೇಕು?