Ratha Saptami 2021: ಇಂದು ರಥ ಸಪ್ತಮಿ ಹಬ್ಬ; ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ

ರಥ ಸಪ್ತಮಿ: ಈ ದಿನ ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ. ಮಾಘ ಶುದ್ಧ ಸಪ್ತಮಿಯಂದು ಸಂಗಮ ಕ್ಷೇತ್ರಗಳಲ್ಲಿ ಮಿಂದೆದ್ದರೆ ಸಕಲ ರೋಗಗಳೂ ನಿವಾರಣೆಯಾಗುತ್ತವೆ.

Ratha Saptami 2021: ಇಂದು ರಥ ಸಪ್ತಮಿ ಹಬ್ಬ; ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ
ಸೂರ್ಯನ ಆರಾಧನೆ ಉತ್ತಮ ಫಲ.
Follow us
shruti hegde
| Updated By: Digi Tech Desk

Updated on:Feb 19, 2021 | 9:24 AM

ಈ ವರ್ಷದ ಮಾಘ ಶುಕ್ಲದ ಏಳನೇ ದಿನ ಅಂದರೆ ರಥ ಸಪ್ತಮಿ ಗುರುವಾರ (ಫೆ.19) ಬಂದಿದೆ. ಸಪ್ತ ಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನವಿದು. ಮಾಘ ಶುದ್ಧ ಸಪ್ತಮಿಯಂದು ಸಂಗಮ ಕ್ಷೇತ್ರಗಳಲ್ಲಿ ಅಂದರೆ, ಎರಡು ಅಥವಾ ಅದಕ್ಕಿಂತ ಹೆಚ್ಚು ನದಿಗಳು ಸೇರುವಲ್ಲಿ ಇಲ್ಲವೇ ಸಮುದ್ರವನ್ನು ನದಿ ಸೇರುವ ಸ್ಥಳದಲ್ಲಿ ಸ್ನಾನ ಮಾಡಿದರೆ ದಿವ್ಯ ಮಂಗಳವುಂಟಾಗುತ್ತದೆ. ಶರೀರ ಆರೋಗ್ಯ ಪೂರ್ಣವಾಗುತ್ತದೆ. ಚರ್ಮರೋಗಗಳು ನಿವಾರಣೆ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವೇ ರಥಸಪ್ತಮಿ. ಭೂಮಿಗೆ ಬೆಳಕನ್ನೂ, ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯ ಉತ್ತರಾಯಣದತ್ತ ಚಲಿಸುವ ಪರ್ವ. ಮಾಘ ಮಾಸದಲ್ಲಿ ಸೂರ್ಯೋದಯಕ್ಕೂ ಮೊದಲು ಮಾಡುವ ಸ್ನಾನ ಅತ್ಯಂತ ಶ್ರೇಷ್ಠ. ಮಾಘ ಶುಕ್ಲದ ಸಪ್ತಮಿಯಂದೇ ಸೂರ್ಯ ದೇವರು ಜನಿಸಿದ್ದಂತೆ. ಅಂದು ಪ್ರಥಮ ಸೂರ್ಯ ಕಿರಣಗಳು ಸಂಗಮವಾಗುವ ಜಲದ ಮೇಲೆ ಬಿದ್ದಾಗ ಅದು ದಿವ್ಯಶಕ್ತಿಯಿಂದ ಕೂಡಿದ ತೀರ್ಥವಾಗುತ್ತದೆ. ಆ ತೀರ್ಥದಲ್ಲಿ ಮಾಡುವ ಸ್ನಾನಕ್ಕೆ ಅಂಥ ಶಕ್ತಿ ಇರುತ್ತದೆ ಎಂಬುದು ಹಲವರ ನಂಬಿಕೆ.

ಮಂತ್ರ ಪಠಿಸಿ, ಸೂರ್ಯನ ನಮಿಸಿ ರಥ ಸಪ್ತಮಿಯ ಪವಿತ್ರ ದಿನದಂದು ಹೇಮಗಿರಿ, ಶ್ರೀರಂಗಪಟ್ಟಣ, ಶಿಕಾರಿಪುರ, ಇಡುಗುಂಜಿ, ಕೊಪ್ಪಳ, ಹುಲುಕುಡಿ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬ್ರಹ್ಮ ರಥೋತ್ಸವ, ಜಾತ್ರೆಗಳೂ ಜರುಗುತ್ತವೆ. ಈ ದಿನ ಧಾರ್ಮಿಕರು ನವಗ್ರಹಗಳ ಪೂಜೆ, ಹೋಮವನ್ನು ಮಾಡುತ್ತಾರೆ. ಹೋಮ, ಹವನ ಮಾಡಲಾಗದವರು, ಓಂ ಸೂರ್ಯದೇವಾಯ ವಿದ್ಮಹೇ ಆದಿತ್ಯಾಯ ಧೀಮಹಿ | ತನ್ನೋ ಸೂರ್ಯ ಪ್ರಚೋದಯಾತ್’ಎಂದು ಸೂರ್ಯನನ್ನೂ ಹಾಗೂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ| ಗುರುಃ ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ ಎಂದು ನವಗ್ರಹಗಳನ್ನೂ ವಂದಿಸುತ್ತಾರೆ.

ಪುರಾಣಗಳ ಪ್ರಕಾರ ಸೂರ್ಯ ಗ್ರಹಣದ ದಿನದಂತೆ ಮಾಘಶುದ್ಧ ಸಪ್ತಮಿ ಅರುಣೋದಯ ಕಾಲದಲ್ಲಿ ಕೂಡ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ. ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀರಾಮಚಂದ್ರ ಕೂಡ ಸೂರ್ಯ ಭಗವಾನನ ಉಪಾಸನೆ ಮಾಡಿದ್ದ ಎಂದು ರಾಮಾಯಣ ಹೇಳುತ್ತದೆ.

ನೀರಿನಲ್ಲಿ ನಿಂತು ಭಗವಂತನನ್ನು ಪ್ರಾರ್ಥಿಸಿ ರಥಸಪ್ತಮಿಯ ದಿನ ಪುಣ್ಯಪ್ರದವಾದ ಸಂಗಮ ಕ್ಷೇತ್ರದ ನೀರಿನಲ್ಲಿ ನಿಂತು ಸುವರ್ಣ, ರಜತ, ತಾಮ್ರಾದಿ ಲೋಹದ ಅಗಲ ಬಾಯಿಯ ಪಾತ್ರೆಯಲ್ಲಿ ಪ್ರಕಾಶಿಸುತ್ತಿರುವ ದೀಪವನ್ನು ಶಾಂತಮನಸ್ಸಿನಿಂದ ತಲೆಯ ಮೇಲಿಟ್ಟುಕೊಂಡು ಸೂರ್ಯ ಭಗವಂತನನ್ನು ಮನದಲ್ಲಿ ಧ್ಯಾನಿಸಿದರೆ ಸಕಲ ಪಾಪಗಳೂ ಪರಿಹಾರವಾಗಿ, ಸುಖ ಶಾಂತಿ, ನೆಮ್ಮದಿಯ ಜೊತೆಗೆ ಆಯುರಾರೋಗ್ಯ ಲಭಿಸುತ್ತವೆ ಎಂಬುದು ನಂಬಿಕೆ. ವೈಜ್ಞಾನಿಕವಾಗಿಯೂ ಸೂರ್ಯ ಸ್ನಾನದಿಂದ (ಪ್ರಥಮ ಸೂರ್ಯ ಕಿರಣ ಮೈ ಮೇಲೆ ಬೀಳುವುದರಿಂದ) ಹಲವು ರೋಗಗಳು ನಿವಾರಣೆ ಆಗುತ್ತವೆ.

ರಥಸಪ್ತಮಿಯ ದಿನ ಎಕ್ಕದೆಲೆಯಿಂದ ಮೈಉಜ್ಜಿಕೊಂಡು ಸ್ನಾನ ಮಾಡಿ ರಥಸಪ್ತಮಿಯ ದಿನ ಮುಂಜಾನೆ ಶಿರದ ಮೇಲೆ, ಉಭಯ ಭುಜಗಳ ಮೇಲೆ ಒಟ್ಟು 7 ಎಕ್ಕದೆಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು ಸಂಪ್ರದಾಯ. ಹೀಗೆ ಮಾಡುವುದರಿಂದ ಏಳೇಳು ಜನ್ಮದಲ್ಲಿ ಮಾಡಿದ ಪಾಪಗಳೂ, ರೋಗ, ಶೋಕಾದಿ ಉಪದ್ರವಗಳು ಪರಿಹಾರವಾಗುತ್ತವೆ. ಚುಮುಚುಮು ಕೊರೆಯುವ ಚಳಿ ಕಳೆದು, ಬೇಸಿಗೆ ಆರಂಭವಾಗುವ ಋತು ಪರಿವರ್ತನೆಯ ಈ ಅವಧಿಯಲ್ಲಿ ಎಕ್ಕದೆಲೆಯಿಂದ ಮೈಉಜ್ಜಿಕೊಂಡು ಸ್ನಾನ ಮಾಡಿದರೆ, ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ, ಸಿಡುಬು, ಅಮ್ಮ, ಇತ್ಯಾದಿ ಚರ್ಮರೋಗಗಳು ಬರುವುದಿಲ್ಲ ಎಂಬುದು ಆಯುರ್ವೇದ ಪಂಡಿತರ ಸಲಹೆ.

ಇದನ್ನೂ ಓದಿ: ಏಕಾದಶಿ ಉಪವಾಸ; ನಮ್ಮೊಳಗಿನ ಬೆಳಕು ಕಾಣಿಸುವ ಆಚರಣೆ

Basavaraj guruji

ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937

Published On - 9:41 pm, Thu, 18 February 21