IPL Auction 2021; RCB ಸೇರಿದ ಈ ನಾಲ್ಕು ಹೊಸ ಆಟಗಾರರ ಪರಿಚಯ ನಿಮಗಿದೆಯೇ?
ಯುವ ಆಟಗಾರ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಓಪನರ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಆರ್ಸಿಬಿ ಈ ಬಾರಿ ನಾಲ್ಕು ಹೊಸ ಆಟಗಾರರನ್ನು ಖರೀದಿಸಿದೆ.
ಐಪಿಎಲ್ 2021ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 7 ಆಟಗಾರರನ್ನು ಖರೀದಿಸಿದೆ. ಮೂರು ಅನುಭವಿ ಆಟಗಾರರು ಇದರಲ್ಲಿದ್ದರೆ, ನಾಲ್ಕು ಹೊಸ ಮುಖಗಗಳನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಯುವ ಆಟಗಾರ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಓಪನರ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಆರ್ಸಿಬಿ ಈ ಬಾರಿ ನಾಲ್ಕು ಹೊಸ ಆಟಗಾರರನ್ನು ಖರೀದಿಸಿದೆ. ಇವರ ಪರಿಚಯ ನಿಮ್ಮ ಮುಂದೆ.
ಮೊಹಮ್ಮದ್ ಅಜರುದ್ದೀನ್: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ 137 ರನ್ ಸಿಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದವರು ಕೇರಳದ ಮೊಹಮ್ಮದ್ ಅಜರುದ್ದೀನ್. ಮಧ್ಯಮ ಕ್ರಮಾಂಕದಲ್ಲಿ ಆಡುವ ಚಾಕಚಕ್ಯತೆ ಮೊಹಮ್ಮದ್ ಅಜರುದ್ದೀನ್ಗೆ ಇದೆ. ಹೀಗಾಗಿ, ಸಂಕಷ್ಟದ ಸಮಯದಲ್ಲಿ ಆಟದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಮೊಹಮ್ಮದ್ಗೆ ಇದೆ. ಇವರನ್ನು ಆರ್ಸಿಬಿ 20 ಲಕ್ಷ ರೂಪಾಯಿಗೆ ಕೊಂಡುಕೊಂಡಿದೆ.
ಸುಯಶ್ ಪ್ರಭುದೇಸಾಯಿ: 1997ರಲ್ಲಿ ಜನಿಸಿದ ಸುಯಶ್ ಪ್ರಭುದೇಸಾಯಿ 2017ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ಪರವಾಗಿ ಆಡಿದ್ದರು. 2018-19ರಲ್ಲಿ ರಣಜಿ ಟ್ರೋಫಿ ಆಡಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಪಾದಾರ್ಪಣೆ ಮಾಡಿದ್ದರು. ಇಂಡು ನಡೆದ ಹರಾಜಿನಲ್ಲಿ, ಪ್ರಭುದೇಸಾಯಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಲಕ್ಷ ರೂಪಾಯಿಗೆ ಖರೀದಿಸಿತು.
ಕೆ.ಎಸ್.ಭರತ್: ಆಂಧ್ರ ಪ್ರದೇಶ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಕೆ.ಎಸ್. ಭರತ್ ಅವರನ್ನು ಆರ್ಸಿಬಿ ಖರೀದಿಸಿದೆ. ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ ಖ್ಯಾತಿ ಇವರಿಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಸ್ಟ್ಯಾಂಡ್ ಬೈ ಆಟಗಾರರಾಗಿ ಕೆ.ಎಸ್. ಭರತ್ ಆಯ್ಕೆಯಾಗಿದ್ದಾರೆ.
ಸಚಿನ್ ಬೇಬಿ: ಸಚಿನ್ ಬೇಬಿ ಅವರನ್ನು 20 ಲಕ್ಷ ರೂಪಾಯಿಗೆ ಆರ್ಸಿಬಿ ಖರೀದಿಸಿದೆ. ವಿವಿಧ ಟೂರ್ನಿಗಳಲ್ಲಿ ಕೇರಳ ತಂಡದ ಪರವಾಗಿ ಆಡುತ್ತಿರುವ ಇವರು ಉತ್ತಮ ದಾಖಲೆ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ 2013ರಲ್ಲಿ ಇವರನ್ನು ಖರೀದಿ ಮಾಡಿತ್ತು. ಆದರೆ, ಒಂದು ಪಂದ್ಯ ಆಡಲು ಮಾತ್ರ ಅವಕಾಶ ಸಿಕ್ಕಿತ್ತು. 2016ರಲ್ಲಿ ಆರ್ಸಿಬಿ ಇವರನ್ನು ಖರೀದಿಸಿತ್ತು. 2018ರಲ್ಲಿ ಹೈದರಾಬಾದ್ ಖರೀದಿಸಿದರೆ, ಈ ವರ್ಷ ಮತ್ತೆ ಆರ್ಸಿಬಿ ಇವರನ್ನು ಪಡೆದುಕೊಂಡಿದೆ.
ಇದನ್ನೂ ಓದಿ: IPL 2021 Auction: RCB ಖರೀದಿಸಿದ 7 ಆಟಗಾರರು ಇವರೇ..