Lord Shiva: ಮಹಾದೇವ ಶಿವನ 19 ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭೋಲೆನಾಥ, ಮಹಾದೇವ, ಶಂಕರ ಮತ್ತು ಇತರ ಹೆಸರುಗಳಿಂದಲೂ ಕರೆಯುವ ಶಿವನು ಬಹು ಉದ್ದೇಶಗಳನ್ನು ಪೂರೈಸಲು ಹಲವಾರು ಬಾರಿ ಅವತರಿಸಿದ್ದಾರೆ. ಶಿವನ 19 ಅವತಾರಗಳನ್ನು ಇಲ್ಲಿ ವಿವರಿಸಲಾಗಿದೆ.
ಕೈಲಾಸವಾಸಿ, ಸ್ಮಶಾನವಾಸಿ ಭಗವಾನ್ ಶಿವ(Lord Shiva)ಹಿಂದೂ ತ್ರಿಮೂರ್ತಿಗಳ ಅತ್ಯುನ್ನತ ದೇವತೆಗಳಲ್ಲಿ ಒಬ್ಬರು. ಜಗತ್ ಪಿತಾಮಹ ಶಿವ ಪ್ರಕೃತಿಯ ಅಥವಾ ಪ್ರಪಂಚದ ಸಮತೋಲನ ಕಾಪಾಡಲು ಅನೇಕ ಅವತಾರಗಳನ್ನೆತ್ತಿದ್ದಾರೆ. ಭೋಲೆನಾಥ, ಮಹಾದೇವ, ಶಂಕರ ಮತ್ತು ಇತರ ಹೆಸರುಗಳಿಂದಲೂ ಕರೆಯುವ ಶಿವನು ಬಹು ಉದ್ದೇಶಗಳನ್ನು ಪೂರೈಸಲು ಹಲವಾರು ಬಾರಿ ಅವತರಿಸಿದ್ದಾರೆ. ಶಿವನ 19 ಅವತಾರಗಳನ್ನು ಇಲ್ಲಿ ವಿವರಿಸಲಾಗಿದೆ.
1.ಪಿಪ್ಲಾದ ಅವತಾರ ಭಗವಾನ್ ಶಿವನ ಈ ಅವತಾರವು ಋಷಿ ದಧೀಚಿಯ ಮಗನ ರೂಪದ್ದಾಗಿದೆ. ಋಷಿ ದಧೀಚಿ ದಂಪತಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಅವತರಿಸುತ್ತಾರೆ. ಒಮ್ಮೆ ಶನಿ ದೆಸೆಯಿಂದಾಗಿ ದಧೀಜಿ ಮುನಿಗಳಿಗೆ ಮನೆ ಬಿಟ್ಟು ಹೋಗಬೇಕಾಗಿ ಬರುತ್ತದೆ. ಇದರಿಂದ ಕೋಪಗೊಂಡ ಪಿಪ್ಲಾದನು ಶನಿಯನ್ನು ಶಪಿಸಿ ಗ್ರಹಕಾಯ ಸ್ಥಾನದಿಂದ ಹೊರಗೆ ಹಾಕಿದನು. ಬಳಿಕ ಶನಿಯ ಪ್ರಾರ್ಥನೆಗೆ ಕ್ಷಮಿಸಿ 16 ವರ್ಷ ಪ್ರಾಯದೊಳಗಿನ ಯಾರಿಗೂ ತೊಂದರೆ ಕೊಡ ಬಾರದೆಂದು ಶನಿಯಿಂದ ಮಾತು ಪಡೆದನು. ಹೀಗಾಗಿ ಶಿವನ ಈ ಪಿಪ್ಲಾದ ಅವತಾರವನ್ನು ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎನ್ನಲಾಗಿದೆ.
2.ನಂದಿ ಅವತಾರ ಶಿವನ ಈ ರೂಪವು ಶಿಲಾದ ಋಷಿಗೆ ಜನಿಸಿದ ಮಗುವಿನದ್ದಾಗಿದೆ. ಶಿಲಾದ ಋಷಿಯು ಶಿವನ ಆಶೀರ್ವಾದವನ್ನು ಪಡೆಯಲು ತೀವ್ರ ತಪಸ್ಸು ಮಾಡಿದರು ಮತ್ತು ಅಮರನಾಗಿ ಉಳಿಯುವ ಮಗುವನ್ನು ಕೇಳಿದರು. ಆಗ ಋಷಿಯ ಭಕ್ತಿಯಿಂದ ಸಂತೋಷಗೊಂಡ ಶಿವನು ನಂದಿಯಾಗಿ ಜನ್ಮ ತಾಳಿದನು.
3.ವೀರಭದ್ರ ಅವತಾರ ಶಿವನ ವೀರಭದ್ರ ಅವತಾರವು ಅವನ ಉಗ್ರ ರೂಪಗಳಲ್ಲಿ ಒಂದಾಗಿದೆ. ಪ್ರಜಾಪತಿ ದಕ್ಷನ ಯಜ್ಞಕುಂಡದಲ್ಲಿ ತನ್ನ ಪತ್ನಿ ಸತಿಯ ಮರಣದ ನಂತರ ಶಿವನು ಉಗ್ರ ರೂಪ ತಾಳಿ ಕೋಪದಿಂದ ತನ್ನ ಕೂದಲನ್ನು ಒಂದೊಂದಾಗಿ ಕಿತ್ತು ಬಿಸಾಡಿದನು. ಈ ರೀತಿ ಬಿದ್ದ ಕೂದಲ ಎಳೆಯಿಂದ ವೀರಭದ್ರ ಮತ್ತು ರುದ್ರಕಾಳಿ ಹುಟ್ಟಿಕೊಂಡರು. ಕೊನೆಗೆ ಶಿವನ ವೀರಭದ್ರ ರೂಪವು ರಾಜ ದಕ್ಷನ ತಲೆಯನ್ನು ಕತ್ತರಿಸಿತು.
4.ಭೈರವ ಅವತಾರ ಭೈರವ ಅವತಾರವು ಶಿವನ ಉಗ್ರ ಅವತಾರಗಳಲ್ಲಿ ಒಂದಾಗಿದೆ. ದಂಡಪಾಣಿ ಎಂದು ಕರೆಯಲ್ಪಡುವ ಭೈರವ ಅವತಾರವು ದುರಾಸೆ, ಕಾಮ ಮತ್ತು ಸೊಕ್ಕಿನವರನ್ನು ಶಿಕ್ಷಿಸುತ್ತದೆ. ಈ ಋಣಾತ್ಮಕ ಲಕ್ಷಣಗಳು ಸಾಮಾನ್ಯವಾಗಿ ಒಬ್ಬರ ಅವನತಿಗೆ ಕಾರಣವಾಗುತ್ತವೆ ಮತ್ತು ಇದುವೇ ಭೈರವ ಅವತಾರದ ಉದ್ದೇಶ. ಬ್ರಹ್ಮನಿಗೆ ತಾನೇ ಶ್ರೇಷ್ಠನೆಂಬ ಅಹಂಕಾರವಿತ್ತು. ಆಗ ಶಿವನು ಇದೇ ಭೈರವ ಅವತಾರವನೆತ್ತಿ ಬ್ರಹ್ಮನ ಐದನೇ ಶಿರಸ್ಸನ್ನು ಕಡಿದದ್ದು. ಅಲ್ಲದೆ ಮತ್ತೊಂದು ಕಡೆ ಸತಿಯ ದೇಹದ ತುಂಡರಿಸಿದ ತುಂಡುಗಳಿಂದ ನಿರ್ಮಾಣವಾದ ಶಕ್ತಿ ಪೀಠಗಳನ್ನು ಸಂರಕ್ಷಣೆ ಮಾಡುವ ಹೊಣೆ ಕೂಡ ಭೈರವ ಅವತಾರಕ್ಕೆ ನೀಡಲಾಗಿದೆ.
5.ಅಶ್ವತ್ಥಾಮ ಅವತಾರ ಗುರು ದ್ರೋಣಾಚಾರ್ಯರು ಶಿವನನ್ನು ಮೆಚ್ಚಿಸಲು ತೀವ್ರ ತಪಸ್ಸು ಮಾಡಿದ್ದರು. ಭಗವಂತ ತನ್ನ ಮಗನಾಗಿ ಜನಿಸಬೇಕೆಂದು ಅವರು ಬಯಸಿದ್ದರು. ಆದ್ದರಿಂದ, ಗುರು ದ್ರೋಣಾಚಾರ್ಯರ ಭಕ್ತಿಯಿಂದ ಸಂತಸಗೊಂಡ ಶಿವನು ಮಹಾಭಾರತದಲ್ಲಿ ಪ್ರಮುಖ ಪಾತ್ರ ವಹಿಸಿದ ಸಮರ್ಥ ಯೋಧನಾಗಿ ಅಶ್ವತ್ಥಾಮನಾಗಿ ಜನ್ಮ ತಾಳಿದರು. ಅಲ್ಲದೆ ಮತ್ತೋಂದೆಡೆ ಈ ರೀತಿ ಉಲ್ಲೇಖವಾಗಿದೆ. ಸಮುದ್ರ ಮಂಥನದ ನಂತರ ಹಾಲಾಹಲ ಕುಡಿದ ಶಿವನಿಂದ ಹೊರಹೊಮ್ಮಿದ ವಿಷ ಪುರುಷನೇ ನಂತರ ದುಷ್ಟ ಕ್ಷತ್ರೀಯರನ್ನು ಕೊಲ್ಲಲು ಆಶೀರ್ವಾದ ಪಡೆದು ಭಾರದ್ವಾಜರ ಮೊಮ್ಮಗನಾಗಿ ಜನಿಸಿದನು. ಇದೇ ವಿಷಪುರುಷನೇ ದ್ರೋಣ ಮತ್ತು ಕೃಪಿಗೆ ಮಗನಾಗಿ ಜನಿಸಿದ ಅಶ್ವತ್ಥಾಮ ಎನ್ನಲಾಗಿದೆ.
6.ಶರಭ ಅವತಾರ ಹಿರಣ್ಯಕಶಿಪು ಎಂಬ ರಾಕ್ಷಸನನ್ನು ಕೊಂದ ನಂತರ ವಿಷ್ಣುವಿನ ಅವತಾರವಾದ ಉಗ್ರನರಸಿಂಹನನ್ನು ಶಾಂತಗೊಳಿಸಲು ಶಿವನು ಈ ರೂಪವನ್ನು ತಾಳಿದರು. ಸಿಂಹ ಮತ್ತು ಪಕ್ಷಿಯನ್ನೊಳಗೊಂಡ ಕಾಯದ ಶರಭ ಅವತಾರವಿದಾಗಿದೆ. ಈ ಅವತಾರವನ್ನು ಶರಭೇಶ್ವರ ಅಥವಾ ಶರಭೇಶ್ವರಮೂರ್ತಿ ಎಂದು ಕರೆಯುತ್ತಾರೆ.
7. ಗೃಹಪತಿ ಅವತಾರ ಭಗವಾನ್ ಶಿವನ ಗೃಹಪತಿ ಅವತಾರವು ನರ್ಮದಾ ದಡದಲ್ಲಿ ವಾಸಿಸುತ್ತಿದ್ದ ವಿಶ್ವನರ್ ಎಂಬ ಋಷಿ ಮತ್ತು ಅವರ ಪತ್ನಿ ಸುಚಿಸ್ಮತ್ತಿಗೆ ಜನಿಸಿದ ಮಗುವಿನದ್ದಾಗಿದೆ. ಋಷಿಯ ಪತ್ನಿಯು ಶಿವನು ತನ್ನ ಮಗನಾಗಿ ಜನಿಸಬೇಕೆಂದು ಬಯಸಿದಳು. ಆದುದರಿಂದ ಋಷಿಯು ಕಾಶಿಯಲ್ಲಿ ತೀವ್ರ ತಪಸ್ಸು ಮಾಡಿದನು. ಕೆಲವು ದಿನಗಳ ನಂತರ, ವಿಶ್ವಾನರ ಭಕ್ತಿಯಿಂದ ಸಂತೋಷಗೊಂಡ ಶಿವನು ಋಷಿ ಮತ್ತು ಅವನ ಹೆಂಡತಿಗೆ ಗೃಹಪತಿಯಾಗಿ ಜನಿಸಿದನು. ವೇದಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಈತನು ಗ್ರಹದೆಸೆಯಿಂದ ತನ್ನ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಬಹುದೆಂದು ತಿಳಿದು ಬಂತು. ಕಾಶಿ ಹೋಗಬೇಕೆಂಬ ಇವನಾಸೆ. ಇಂದ್ರನಿಂದಾಗಿ ಮೋಟಕುಗೊಂಡಾಗ ಸ್ವಯಂ ಶಿವನೇ ಇವನ ರಕ್ಷಣೆಗೆ ಬಂದು ಕಾಲವಜ್ರನೇ ಬಂದರೂ ಕೊಲ್ಲಲು ಸಾಧ್ಯವಿಲ್ಲವೆಂದು ಆಶೀರ್ವದಿಸಿದನು. ಗ್ರಹಪತಿ ಆರಾಧಿಸುತ್ತಿದ್ದ ಶಿವಲಿಂಗವು ನಂತರ ಅಗ್ನಿಶ್ವರಲಿಂಗ ಎಂದು ಕರೆಯಲಾಯಿತು. ಶಿವನು ಗ್ರಹಪತಿಯನ್ನು ಎಲ್ಲಾ ದಿಕ್ಕುಗಳ ದೇವತೆಯನ್ನಾಗಿಸಿ, ಅನುಗ್ರಹಿಸಿದ.
8.ದೂರ್ವಾಸ ಅವತಾರ ಭಗವಾನ್ ಶಿವನ ಈ ಅವತಾರವು ಋಷಿ ಅತ್ರಿ ಮತ್ತು ಅವರ ಪತ್ನಿ ಅನಸೂಯರಿಗೆ ಜನಿಸಿದ ದೂರ್ವಾಸ ಮುನಿಯದ್ದಾಗಿದೆ. ವಿಶ್ವದ ಶಿಸ್ತನ್ನು ಸಂರಕ್ಷಿಸಲು ಶಿವನು ಈ ಅವತಾರವನ್ನು ತಾಳಿದರು. ಮಹಾಮುನಿಯಾದ ದುರ್ವಾಸರು ತನ್ನ ಕೂಪಕ್ಕೆ ಹೆಸರಾದವರು.
9. ವೃಷಭ ಅವತಾರ ಈ ಅವತಾರಕ್ಕೆ ಸಂಬಂಧಿಸಿದ ದಂತಕಥೆಯ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ವಿಷ್ಣುವು ರಾಕ್ಷಸರನ್ನು ಮೋಸ ಮಾಡಲು ಅತಿ ಹೆಚ್ಚು ಸುಂದರಿಯರಾದ ಮಾಯಾ ಮೋಹಿನಿಯರನ್ನು ಸೃಷ್ಟಿಸಿದರು. ಈ ಸುಂದರಿಯರಿಗೆ ಮಾರು ಹೋದ ರಾಕ್ಷಸರು ಅವರನ್ನೆಲ್ಲ ಕರೆದುಕೊಂಡು ಪಾತಾಳಕ್ಕೆ ಹೋದರು. ಬಳಿಕ ಅವರು ದೇವತೆಗಳಿಂದ ಅಮೃತವನ್ನು ವಶಪಡಿಸಲು ಬಂದಾಗ ವಿಷ್ಣುವು ಅವರನ್ನೆಲ್ಲಸಂಹರಿಸಲು ಪಾತಾಳ ಲೋಕಕ್ಕೆ ಹೋದನು. ಆದರೆ ಅಲ್ಲಿ ಅವನು ತನ್ನದೇ ಮಾಯಾ ಜಾಲಕ್ಕೆ ಬಿದ್ದುದರ ಫಲವಾಗಿ ಅವನಿಗೆ ಅನೈತಿಕವಾಗಿ ಹಲವು ಕ್ರೂರಿ ಮಕ್ಕಳು ಹುಟ್ಟಿದವು. ಇವು ದೇವತೆಗಳಿಗೆ ಇನ್ನಿಲ್ಲದಂತೆ ತೊಂದರೆ ಕೊಡಲಾರಂಭಿಸಿದವು. ಆಗ ಶಿವನು ವೃಷಭದ ಅವತಾರವೆತ್ತಿ ಈ ದುಷ್ಟ ಸಂತತಿಗಳನ್ನೆಲ್ಲಾ ನಾಶಮಾಡಿರು. ವಿಷ್ಣುವೂ ಈ ವೃಷಭದೊಂದಿಗೆ ಕಾಳಗಕ್ಕೆ ನಿಂತರೂ, ಕೊನೆಗೆ ಇದು ಮಹಾಶಿವನ ಅವತಾರವೆಂದು ತಿಳಿದ ನಂತರ ವೈಕುಂಟಕ್ಕೆ ಮರಳಿದರು.
10. ಯತಿನಾಥ ಅವತಾರ ಭಗವಾನ್ ಶಿವನ ಯತಿನಾಥ ಅವತಾರವು ಆತಿಥ್ಯಕ್ಕೆ ಹೆಸರುವಾಸಿಯಾದ ಬುಡಕಟ್ಟು ದಂಪತಿಗಳನ್ನು ಪರೀಕ್ಷಿಸಲು ಎತ್ತಿದ ಅವತಾರ. ಆಹುಕ ಎಂಬ ಶಿವಭಕ್ತ ಬುಡಕಟ್ಟು ವ್ಯಕ್ತಿ ತನ್ನ ಪತ್ನಿಯೊಂದಿಗೆ ಚಿಕ್ಕದೊಂದು ಗುಡಿಸಿಲಿನಲ್ಲಿ ವಾಸವಾಗಿದ್ದರು. ಒಂದು ದಿನ ಶಿವನು ಯತಿನಾಥನೆಂಬ ಅತಿಥಿಯಾಗಿ ಗುಡಿಸಿಲಿಗೆ ಭೇಟಿ ಮಾಡಿದನು. ಗುಡಿಸಲು ಚಿಕ್ಕದಿದ್ದ ಕಾರಣ ಯತಿನಾಥನಿಗೆ ಒಳಗೆ ಮಲಗಲು ಹೇಳಿ ತಾನು ಗುಡಿಸಿಲಿನ ಹೊರಗೆ ಮಲಗಿದ್ದನು. ಈ ವೇಳೆ ಕ್ರೂರ ಮೃತವೊಂದು ಹೊರಗೆ ಮಲಗಿದ್ದ ಆಹುಕ್ನನ್ನು ಕೊಂದು ಹಾಕಿತ್ತು. ಈ ನೋವನ್ನು ತಾಳಲಾರದೆ ಪತ್ನಿ ಕೂಡ ಜೀವತ್ಯಾಗಕ್ಕೆ ಮುಂದಾದಳು. ಆಗ ಯತಿನಾಥನು ತನ್ನ ನಿಜರೂಪ ತಾಳಿ, ಮುಂದಿನ ಜನ್ಮದಲ್ಲಿ ಅವರಿಬ್ಬರಿಗೂ ನಳ ಮತ್ತು ದಮಯಂತಿ ಎಂಬ ಹೆಸರಿನಲ್ಲಿ ಸತಿ ಪತಿಯರಾಗಿ ಸೇರುವಂತೆ ಅನುಗ್ರಹಿಸಿದನು.
11. ಹನುಮಾನ್ ಅವತಾರ ಹನುಮಂತನನ್ನು ಶಿವನ ಹನ್ನೊಂದನೇ ಅವತಾರ ಎಂದು ಹೇಳಲಾಗುತ್ತದೆ. ಅವರು ಮಾತಾ ಅಂಜನಿ ಮತ್ತು ಕೇಸರಿಗೆ ಜನಿಸಿದವರು. ಸಮುದ್ರ ಮಂಥನದ ಸಮಯದಲ್ಲಿ ವಿಷ್ಣು ತಾಳಿದ ಮೋಹಿನಿ ಅವತಾರವನ್ನು ಮೆಚ್ಚಿಕೊಂಡ ಶಿವನ ವೀರ್ಯವು ನೆಲಕ್ಕೆ ಬಿದ್ದಾಗ ಅವನ ಅನುಮತಿಯಿಂದಲೇ ಸಪ್ತರಿಷಿಗಳು ಅದನ್ನು ಅಂಜನೀಯಳ ಗರ್ಭದಲ್ಲಿ ಸ್ಥಾಪಿಸುತ್ತಾರೆ. ಈ ರೀತಿ ಹನುಮಾನ್ ಜನನವಾಗುತ್ತೆ.
12. ಕೃಷ್ಣ ದರ್ಶನ ಅವತಾರ ಭಗವಾನ್ ಶಿವನ ಈ ಅವತಾರವು ಯಾಗದ ಮಹತ್ವವನ್ನು ಮತ್ತು ನಿರ್ಲಿಪ್ತವಾಗಿ ಉಳಿಯುವ ಮಹತ್ವವನ್ನು ಒತ್ತಿ ಹೇಳುತ್ತದೆ. ಮನುಷ್ಯ ಜೀವನದಲ್ಲಿ ಧರ್ಮಾಚರಣೆಗಳ ಅನುಷ್ಠಾನ, ತನ್ಮೂಲಕ ಮೋಕ್ಷ ಪ್ರಾಪ್ತಿ ದಾರಿಯ ಮಹತ್ವವನ್ನು ಸುಗಮವಾಗಿಸುವ ತತ್ವಗಳನ್ನು ಜಗತ್ತಿಗೆ ಅರಿಯಲು ಶಿವನು ಈ ಅವತಾರವೆತ್ತಿದನು.
13. ಭಿಕ್ಷುವರ್ಯ ಅವತಾರ ಹೆಸರೇ ಸೂಚಿಸುವಂತೆ, ಸತ್ಯರಥ ಎಂಬ ರಾಜನ ಮಗುವನ್ನು ಉಳಿಸಲು ಶಿವನು ಭಿಕ್ಷುಕನಾಗಿ ಕಾಣಿಸಿಕೊಂಡನು. ಮಗುವು ತನ್ನ ತಂದೆತಾಯಿಗಳನ್ನು ಕಳೆದುಕೊಂಡಿದ್ದರಿಂದ, ಶಿವನ ಆಶೀರ್ವಾದದಿಂದ ಬಡ ಮಹಿಳೆಯೊಬ್ಬರು ಅವನನ್ನು ಬೆಳೆಸಿದರು.
14. ಸುಂತಾಂತರ್ಕ ಅವತಾರ ಭಗವಾನ್ ಶಿವನು ಸುಂತಾಂತರ್ಕ ಅವತಾರದಲ್ಲಿ ಹಿಮಾಲಯದ ರಾಜನ ಆಸ್ಥಾನದಲ್ಲಿ ಕಾಣಿಸಿಕೊಂಡು ಡಮರು ನೃತ್ಯ ಮಾಡಿ ಪ್ರಶಂಸೆಗೆ ಪಾತ್ರರಾಗಿ ಪಾರ್ವತಿಯನ್ನು ತನಗೆ ವರಿಸಿ ಕೊಡುವಂತೆ ಅವಳ ತಂದೆ-ತಾಯಿಯಲ್ಲಿ ಅಪೇಕ್ಷಿಸುವ ಸಲುವಾಗಿ ಶಿವನು ಈ ಅವತಾರವನೆತ್ತಿದ.
15.ಕಿರಾತೇಶ್ವರ ಅವತಾರ ಶಿವನ ಈ ಅವತಾರವು ಅರ್ಜುನನ ಶೌರ್ಯವನ್ನು ಪರೀಕ್ಷಿಸಲು ಕಾಣಿಸಿಕೊಂಡಿತು. ಪಾಂಡವರು ವನವಾಸದಲ್ಲಿದ್ದಾಗ, ಅರ್ಜುನನು ‘ಪಾಶುಪತಾಸ್ತ್ರ’ಕ್ಕಾಗಿ ಧ್ಯಾನ ಮಾಡುತ್ತಿದ್ದನು. ಆಗ ಹಂದಿಯ ರೂಪದಲ್ಲಿದ್ದ ಮೂಕಾಸುರನ್ನು ಅರ್ಜುನನ ಮೇಲೆ ದಾಳಿ ಮಾಡಲು ಮುಂದಾಗಿತ್ತು ಈ ವೇಳೆ ಬೇಟೆಗಾರನ ರೂಪ ತಾಳಿ ಶಿವನು ಪ್ರತ್ಯಕ್ಷನಾದನು. ಹಂದಿಯ ಶಬ್ದದಿಂದ ಧ್ಯಾನ ಭಂಗ ಗೊಂಡ ಅರ್ಜುನನು ತನ್ನ ಬಾಣದಿಂದ ಅದನ್ನು ಹೊಡೆದುರುಳಿಸಿದ. ಅದೇ ಸಮಯದಲ್ಲಿ, ಕಿರಾತರೂಪದ ಶಿವನೂ ಅದನ್ನು ತನ್ನ ಬಾಣದಿಂದ ಬೀಳಿಸಿದ್ದ. ಇಬ್ಬರೂ ತಾನೇ ಮೊದಲು ಹೊಡೆದುರುಳಿಸಿದ್ದೆಂದು ವಾಗ್ವಾದಕ್ಕಿಳಿದರು. ಕೋಪಗೊಂಡ ಅರ್ಜುನನು ಶಿವನೊಂದಿಗೆ ಯುದ್ಧ ಮಾಡಿದ. ಅರ್ಜುನನ ಧೈರ್ಯ, ಸಾಹಸಕ್ಕೆ ಮೆಚ್ಚಿದ ಶಿವನು ಕೊನೆಗೆ ಅವನಿಗೆ ತನ್ನ ನಿಜ ರೂಪ ತೋರಿಸಿ ‘ಪಾಶುಪತಾಸ್ತ್ರ’ ವನ್ನಿತ್ತು ಅನುಗ್ರಹಿಸಿದ.
16. ಸುರೇಶ್ವರ ಅವತಾರ ವ್ಯಘ್ರಪಾದ ಮುನಿಯ ಮಗ ಶಿವಭಕ್ತನಾದ ಉಪಮನ್ಯುವಿನ ಭಕ್ತಿ ಪರೀಕ್ಷಿಸಲು ಶಿವ ಮತ್ತು ಪಾರ್ವತಿಯು ಇಂದ್ರ ಮತ್ತು ಇಂದ್ರಾಣಿಯ ರೂಪದಲ್ಲಿ ಬಂದು ಉಪಮನ್ಯುವಿನಲ್ಲಿ ಶಿವ ಭಕ್ತಿಯನ್ನು ತ್ಯಜಿಸಬೇಕೆಂದೂ, ಇಲ್ಲದ ಪಕ್ಷ ಘೋರ ಶಾಪಕ್ಕೊಳಗಾಗಬೇಕು ಎಂದು ಹೇಳಿದರು. ಇದಕ್ಕೆ ಹೆದರದೇ ಶಿವಭಕ್ತಿಯನ್ನು ತ್ಯಜಿಸಲಾರೆನೆಂದು ಉಪಮನ್ಯು ಹೇಳಿದಾಗ ಅವನ ಭಕ್ತಿಗೆ ಮೆಚ್ಚಿ, ಶಿವನು ಇನ್ನು ಮುಂದಕ್ಕೆ ಸದಾಕಾಲ ತಾನು ಉಪಮನ್ಯುವಿನ ಆಶ್ರಮ ಪರಿಸರದಲ್ಲೇ ಪಾರ್ವತಿಯೊಂದಿಗೆ ಇರುವೆನೆಂದು ಭರವಸೆಯನ್ನಿತ್ತು ಅದರಂತೆಯೇ ನಡೆದರು. ಇಂದ್ರನ ವೇಷದಲ್ಲಿ ಬಂದ ಕಾರಣ ಶಿವನಿಗೆ ‘ಸುರೇಶ್ವರ’ ಎಂಬ ಹೆಸರೂ ಬಂತು.
17.ಬ್ರಹ್ಮಚಾರಿ ಅವತಾರ ಸತಿಯು ಪಾರ್ವತಿಯಾಗಿ ಜನ್ಮ ತಾಳಿದಾಗ ಮತ್ತು ಶಿವನನ್ನು ಮೆಚ್ಚಿಸಲು ತೀವ್ರವಾದ ತಪಸ್ಸು ಮಾಡಿದಾಗ, ಶಿವನು ಪಾರ್ವತಿಯ ಮುಂದೆ ಬ್ರಹ್ಮಚಾರಿಯಾಗಿ ಕಾಣಿಸಿಕೊಂಡನು. ಪಾರ್ವತಿಯ ಭಕ್ತಿಯನ್ನು ಪರೀಕ್ಷಿಸಲು ಅವನು ಶಿವನನ್ನು ನಿಂದಿಸಿದನು. ಮತ್ತು ಶಿವನನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಿದ ಪಾರ್ವತಿಯು ಬ್ರಹ್ಮಚಾರಿಗೆ ತಕ್ಕ ಉತ್ತರವನ್ನು ನೀಡುತ್ತಾಳೆ. ಅಂತಿಮವಾಗಿ, ಶಿವನು ತನ್ನನ್ನು ಬಹಿರಂಗಪಡಿಸಿದನು ಮತ್ತು ಪಾರ್ವತಿಯನ್ನು ಆಶೀರ್ವದಿಸಿದನು.
18. ಯಕ್ಷೇಶ್ವರ ಅವತಾರ ಭಗವಾನ್ ಶಿವನ ಯಕ್ಷೇಶ್ವರ ಅವತಾರವು ದೈವಿಕ ಅಮೃತವನ್ನು ಸೇವಿಸಿದ ನಂತರ ದೇವತೆಗಳ ಹೆಮ್ಮೆ / ಆತ್ಮತೃಪ್ತಿಯನ್ನು ಹತ್ತಿಕ್ಕಲು ಕಾಣಿಸಿಕೊಂಡ ಅವತಾರ. ಸಮುದ್ರ ಮಂಥನದ ತರುವಾಯ ಅಸುರರನ್ನೆಲ್ಲಾ ಸೋಲಿಸಿದ ಅಹಂಕಾರದಿಂದ ದೇವತೆಗಳು ಬೀಗುತ್ತಿದ್ದರು. ಆಗ ದೇವತೆಗಳ ಅಹಂಕಾರ ಮುರಿಯಲು ಶಿವನು ಈ ಅವತಾರವನೆತ್ತಿ ದೇವತೆಗಳಿಗೆ ಹುಲ್ಲನ್ನು ಕೊಟ್ಟು ಅದನ್ನು ಕತ್ತರಿಸಲು ಹೇಳಿದನು. ಬಹಳ ಪ್ರಯತ್ನಗಳ ಬಳಿಕ ಹುಲ್ಲನ್ನು ಕತ್ತರಿಸಲಾಗದೆ ಕೊನೆಗೆ ದೇವತೆಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಹಂಕಾರವನ್ನು ತ್ಯಜಿಸಿದರು.
19. ಅವಧೂತ ಅವತಾರ ಇಂದ್ರ ದೇವನ ಅಹಂಕಾರವನ್ನು ಮುರಿಯಲು ಶಿವನು ಅವಧೂತನ ಅವತಾರವನ್ನೆತ್ತಿದ.
ಇದನ್ನೂ ಓದಿ: Shani Trayodashi 2022: ಪ್ರದೋಷ ವ್ರತ ಪಾಲಿಸಿದ ಬಡ ಬ್ರಾಹ್ಮಣ ಮಹಿಳೆಯ ಬಾಳು ಬೆಳಗಿಸಿದ ಭಗವಾನ್ ಶಿವ