ಗೋವಾದ ಕವಳೆಯಲ್ಲಿರುವ ಶ್ರೀ ಗೌಡಪಾದಾಚಾರ್ಯ ಮಠದ 77ನೇ ಯತಿವರ್ಯರಾಗಿರುವ ಶ್ರೀಮದ್ ಶಿವಾನಂದ ಸರಸ್ವತಿ ಗೌಡಪಾದಾಚಾರ್ಯರು ಈ ಬಾರಿ ಸಾಗರದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ದಿನಾಂಕ 13ನೇ ಜುಲೈನಿಂದ 10ನೇ ಸಪ್ಟೆಂಬರ್ (ಆಷಾಡ ಪೌರ್ಣಮಿಯಿಂದ–ಭಾದ್ರಪದ ಪೌರ್ಣಮಿಯ)ವರೆಗೆ ತಮ್ಮ ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ. ಈ ಸಮಯಲ್ಲಿ ದೇವಸ್ಥಾನದಲ್ಲಿ ನಾಗರಪಂಚಮಿ, ಋಗ್ ಉಪಾಕರ್ಮ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ಅನಂತ ಚತುರ್ದಶಿ, ಅಖಂಡ ಭಜನಾ ಸಪ್ತಾಹ, ವಿವಿಧ ಧಾರ್ಮಿಕ ಕಾರ್ಯಕಮಗಳು ನಡೆಲಿವೆ.
ಶ್ರೀ ಗೌಡಪಾದಾಚಾರ್ಯ ಮಠದ ಪರಿಚಯ
ಕ್ರಿಸ್ತಶಕ 740ರಲ್ಲಿ ಶ್ರೀ ಗೌಡಪಾದಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಈ ಮಠವು ಅದ್ವೈತ ಸಿದ್ದಂತಾದ ಆದಿ ಮಠವಾಗಿದೆ. ಜಗದ್ಗುರು ಆದಿ ಶಂಕರಾಚಾರ್ಯರ ಗುರುಗಳಾಗಿದ್ದ ಶ್ರೀ ಗೋವಿಂದ ಭಗವತ್ಪಾದರಿಗೆ ಸನ್ಯಾಸತ್ವ ದಯಪಾಲಿಸಿದ್ದು ಶ್ರೀ ಗೌಡಪಾದಾಚಾರ್ಯರು.
ಉತ್ತರ ಭಾರತದ ಗೌಡ ಪ್ರದೇಶದಲ್ಲಿ ನೆಲೆ ನಿಂತಿದ್ದ ಸಾರಸ್ವತ ಬ್ರಾಹ್ಮಣ ಸಮಾಜದ ದತ್ತದೇವನೆಂಬ ಯುವಕನು ವೇದಾದ್ಯಯನ ನಂತರ ವೇದಗಳ ಸಾರವನ್ನು ತಿಳಿಯಲು ವೇದವ್ಯಾಸ ಮುನಿಗಳನ್ನು ಕುರಿತು ಬದ್ರಿಕಾಶ್ರಮದಲ್ಲಿ ಕಠಿಣ ತಪಸ್ಸನ್ನಾಚರಿಸಿದ. ತಪ್ಪಸ್ಸಿಗೆ ಮೆಚ್ಚಿದ ವ್ಯಾಸಮುನಿಗಳು ದೇವದತ್ತನಿಗೆ ವೇದಗಳ ಸಾರ ತಿಳಿಸಲು ತಮ್ಮ ಪುತ್ರನಾದ ಶುಕಮುನಿಗೆ ಸೂಚಿಸಿದರು. ಅದರಂತೆ ಶುಕಮುನಿಗಳು ಸಾರಗಳನ್ನು ಬೋಧಿಸಿ ದೇವದತ್ತನಿಗೆ ಗೌಡಪಾದಾಚಾರ್ಯ ಹೆಸರಿನ್ನಿಟ್ಟು ಎಂಬ ಯೋಗಪಟ್ಟವನ್ನು ದಯಪಾಲಿಸಿದರು. ನಂತರ ಗೌಡಪಾದರು ಹೆಚ್ಚಿನ ಸಾಧನೆಗಾಗಿ ಗೋಮಾಂತಕದೆಡೆಗೆ ಬಂದು ಗೋಮತಿ ನದಿತೀರದಮೇಲೆ ಆಶ್ರಮವನ್ನು ಕಟ್ಟಿ ಹಲವಾರು ಶಿಷ್ಯರಿಗೆ ವೇದ ಸೂತ್ರಗಳನ್ನು ಬೋಧಿಸುತ್ತಿದ್ದರು.
ಶ್ರೀ ಗೋವಿಂದ ಭಗವತ್ಪಾದಾಚಾರ್ಯರು ಗೌಡಪಾದರ ಪ್ರಮುಖ ಮತ್ತು ಶ್ರೇಷ್ಠ ಶಿಷ್ಯರಲ್ಲಿ ಒಬ್ಬರು. ಅವರ ಪೂರ್ವಾಶ್ರಮದ ಹೆಸರು ಚಂದ್ರ ಶರ್ಮಾ. ಇವರು ಸನ್ಯಾಸಾಶ್ರಮದ ನಂತರ ನರ್ಮದಾ ತೀರದ ಗುಹೆಯೊಂದರಲ್ಲಿ ಯೋಗ ಅನುಷ್ಠಾನಕ್ಕೆಂದು ನೆಲೆನಿಂತರು.
ಕೇರಳದ ಕಾಲಟಿಯಿಂದ ಸೂಕ್ತ ಗುರುವನ್ನು ಅರಸುತ್ತ ಬಂದಿದ್ದ ಶಂಕರನು ಗೋವಿಂದ ಭಗವತ್ಪಾದಾಚಾರ್ಯರ ಬಳಿ ಬಂದು ಕ್ರಮ ಸನ್ಯಾಸತ್ವ ಪಡೆದು ಶಂಕರಾಚಾರ್ಯ ಎಂದು ಪ್ರಸಿದ್ಧನಾದನು. ಅವರನ್ನು ಸನಾತನ ಧರ್ಮದ ಉಳಿವಿಗಾಗಿ ದೇಶ ಸಂಚಾರಕ್ಕೆ ಸೂಚಿಸಿ ಜಗದ್ಗುರು ಶಂಕರಾಚಾರ್ಯರಾಗಲು ಕಾರಣೀಭೂತರಾಗುತ್ತಾರೆ. ಅದೇ ಕಾಲದಲ್ಲಿ ಶ್ರೀ ವಿವರಣಾನಂದ ಸರಸ್ವತಿ ಎಂಬ ಶಿಷ್ಯನಿಗೆ ಮೂಲ ಮಠದಲ್ಲಿ ಮಠಾಧಿಪತಿಯಾಗಿ ನೇಮಿಸಿ ಮಠ ಪರಂಪರೆ ಮುಂದುವರೆಸಲು ಸೂಚಿಸಿದರು.
ಶ್ರೀ ಶಂಕರಾಚಾರ್ಯರ ಅವತಾರದ ಅಂತ್ಯದಲ್ಲಿ ಗೌಡಪಾದಾಚಾರ್ಯರು ಬದ್ರಿಕಾಶ್ರಮದಲ್ಲಿ ದರ್ಶನ ನೀಡಿ ನಿಮ್ಮ ಸೂತ್ರ, ಭಾಷ್ಯ ಮತ್ತು ಕೃತಿಗಳು ಪಾಠಶಾಲೆಗಳಲ್ಲಿ ಪಠ್ಯವಾಗಿವೆ ಎಂದು ಶಂಕರರನ್ನು ಶ್ಲಾಘಿಸುತ್ತಾರೆ. ತದನಂತರ ಶಂಕರರು ಕೇದಾರದ ಮೂಲಕ ಕೈಲಾಸಕ್ಕೆ ಪಯಣ ಬೆಳೆಸಿದರು ಎಂದು ದಾಖಲೆಗಳು ಹೇಳುತ್ತವೆ.
ಇದನ್ನು ಓದಿ: ಪೂಜೆ ಎಂದರೇನು? ನಮ್ಮ ಪೂಜೆಯು ಸಾರ್ಥಕ್ಯವಾಗುವುದು ಹೇಗೆ?
ಶ್ರೀ ಮಠದ ಪ್ರಸ್ತುತ ಮಠಾಧಿಪತಿಗಳಾಗಿರುವ ಶ್ರೀಮದ್ ಶಿವಾನಂದ ಸರಸ್ವತಿ ಗೌಡಪಾದಾಚಾರ್ಯರು ಮಠದ 77ನೇ ಯತಿವರ್ಯರಾಗಿದ್ದಾರೆ. ಶ್ರೀ ಮಠವು ಭಾಗವತ ಸಂಪ್ರದಾಯವನ್ನು ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ. ಶಿವ ಪಂಚಾಯತನ ಪೂಜಾ ವಿಧಿಯನ್ನು ಪಾಲಿಸುವ ಈ ಮಠದಲ್ಲಿ ಶ್ರೀ ಭವಾನಿಶಂಕರ ದೇವರನ್ನು ಮಠದ ಅಧಿದೇವನಾಗಿ ಪೂಜಿಸಲಾಗುತ್ತದೆ. ಸ್ಮಾರ್ತ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರಾಜಪುರಿ ಸಾರಸ್ವತ ಬ್ರಾಹ್ಮಣರು ಶ್ರೀ ಮಠದ ಅನುಯಾಯಿಗಳಾಗಿದ್ದಾರೆ.
ಈ ಮಠವು ಮೊದಲಿಗೆ ಗೋವಾದ ಕುಶಸ್ಥಳಿ ಎಂಬಲ್ಲಿ ಇತ್ತು, ವಿದೇಶಿ ಮತ್ತು ಪೋರ್ಚುಗೀಸ್ ಆಕ್ರಮಣಗಳಿಂದ ಮಠವು ನಶಿಸಿ ಹೋಗಿ ಮಠಾಧಿಪತಿಗಳು ಕಾಶಿಯಲ್ಲಿ ನೆಲೆನಿಂತಿದ್ದರು ನಂತರ ಕವಳೆಯಲ್ಲಿ ಈಗಿರುವ ಮಠವನ್ನು ಸ್ಥಾಪಿಸಲಾಯಿತು. ಈ ಮಠದ ಶಾಖ ಮಠಗಳು ಹಲವೆಡೆ ಇವೆ. ಅತ್ಯಂತ ಪುರಾತನ ಮಠವಾಗಿರುವ ಕಾರಣ ಹಲವು ದಾಖಲೆಗಳು ಲಭ್ಯವಿಲ್ಲ. ವಿಶೇಷವೆಂದರೆ ಗೋಕರ್ಣದಲ್ಲಿ ಮಹಾಬಲೇಶ್ವರ ರಥವೇರಿದ ಬಳಿಕ ಮೊದಲ ಪೂಜೆ ಮಾಡುವ ಹಾಗೂ ಮಂಗಳಾರತಿ ಮಾಡುವ ಹಕ್ಕು ಗೌಡಪಾದಾಚಾರ್ಯರ ಮಠದ ಯತಿವರ್ಯರಿಗಿದೆ.
ಸಾರಸ್ವತ ಬ್ರಾಹ್ಮಣ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ಇತಿಹಾಸ
ಸಾರಸ್ವತ ಬ್ರಾಹ್ಮಣರು ಋಗ್ವೇದ ಕಾಲದ ಸರಸ್ವತಿ ನಾಗರಿಕತೆಗೆ ಸೇರಿದವರು. ಭಾರತದ ಮತ್ತು ದಕ್ಷಿಣ ಏಷ್ಯಾದ ಪುರಾತನ ನಾಗರೀಕತೆಯವರು ಎಂದು ಗುರುತಿಸಲ್ಪಡುವ ಇವರು, ಸಾರಸ್ವತ ಮುನಿಯ ಶಿಷ್ಯರಾಗಿದ್ದರು. ಸರಸ್ವತಿ ನದಿ ತಟದಲ್ಲಿ ವಾಸವಿದ್ದ ಇವರು ಸರಸ್ವತಿ ನದಿಯು ಗುಪ್ತಗಾಮಿನಿಯಾದ ನಂತರ ಉತ್ತರದ ಪಂಚ ಗೌಡ ದೇಶಗಳಿಗೆ ವಲಸೆ ಬಂದರು. ಗೌಡ ದೇಶವೆಂದರೆ ಆ ಭಾಗದಲ್ಲಿ ಜಾಸ್ತಿ ಬೆಲ್ಲ ಬೆಳೆಯುತ್ತಿದ್ದರು. ಅಲ್ಲಿ ಸ್ಥಳೀಯವಾಗಿ ಬೆಲ್ಲವನ್ನು ಗೌರ್ ಅಥವಾ ಗೂಡ್ ಎಂದು ಕರೆಯುತ್ತಿದ್ದರು ಅದೇ ಮುಂದೆ ಗೌಡ ಎಂಬುದಾಗಿ ಬದಲಾಗಿದೆ ಎಂದು ಕೆಲ ಇತಿಹಾಸಕಾರದ ಅಂಬೋಣ. ನಂತರ ದಕ್ಷಿಣ ಭಾರತಕ್ಕೆ ಅದರಲ್ಲೂ ಗೋಮಾಂತಕ (ಗೋವಾ) ದೇಶದೆಡೆಗೆ ಮುಖ ಮಾಡಿದ ಸಾರಸ್ವತರನ್ನು ಸ್ಥಳೀಯರು ಗೌಡ ಪ್ರದೇಶದ ಸಾರಸ್ವತ ಬ್ರಾಹ್ಮಣರು ಎಂದು ಗುರುತಿಸಲು ಪ್ರಾರಂಭಿಸಿದರು.
ಗೌಡ ಸಾರಸ್ವತರು ಮೂಲತಃ ಸ್ಮಾರ್ತ ಸಂಪ್ರದಾಯದ ಅದ್ವೈತ ಸಿದ್ಧಾಂತ ಪಾಲಿಸುವ ಗೌಡಪಾದಾಚಾರ್ಯ ಮಠದ ಅನುಯಾಯಿಗಳಾಗಿದ್ದರು. ನಂತರ ಮದ್ವಾಚಾರ್ಯರ ದ್ವೈತ ಸಿದ್ಧಾಂತ ಪ್ರಭಾವಕ್ಕೆ ಒಳಗಾಗಿ ಒಂದಿಷ್ಟು ಕುಟುಂಬಗಳು ಮಾದ್ವ ಸಂಪ್ರದಾಯವನ್ನು ನೆಚ್ಚಿಕೊಂಡರು. ಗೌಡ ಸಾರಸ್ವತರು ಮಾತೃಭಾಷೆಯಾಗಿ ಕೊಂಕಣಿಯನ್ನು ಮಾತನಾಡುತ್ತಾರೆ. ವಿದೇಶಿ ಆಕ್ರಮಣ ಮತ್ತು ಇತರೆ ಕಾರಣಗಳಿಗೆ ಗೋವಾ ದಿಂದ ಕರ್ನಾಟಕ, ಮಹಾರಾಷ್ಟ, ಕೇರಳ ಮತ್ತು ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ ಇವರು ನೆಲಸಿದ್ದಾರೆ. ಆದರೆ ಇಂದಿಗೂ ಇವರ ಬಹುಪಾಲು ಕುಲದೇವಸ್ಥಾನಗಳು ಇರುವುದು ಗೋವದಲ್ಲಿಯೇ.
ಪ್ರಸ್ತುತ ಗೌಡಸಾರಸ್ವತ ಬ್ರಾಹ್ಮಣರು ಐದು ಮಠಪರಂಪರೆಯನ್ನು ಅನುಸರಿಸುತ್ತಿದ್ದಾರೆ.
ಶ್ರೀಗೌಡಪಾದಾಚಾರ್ಯ ಶ್ರೀಕವಳೇಮಠ, ಗೋವಾ. (ಸ್ಮಾರ್ಥ ಸಂಪ್ರದಾಯ)
ಶ್ರೀಕಾಶೀಮಠ, ವಾರಣಾಸಿ. (ವೈಷ್ಣವ ಸಂಪ್ರದಾಯ)
ಶ್ರೀಗೋಕರ್ಣಪರ್ತಗಾಳಿಮಠ, ಗೋವಾ. (ವೈಷ್ಣವ ಸಂಪ್ರದಾಯ)
ಶ್ರೀಚಿತ್ರಾಪುರಮಠ, ಶಿರಾಲಿ, ಭಟ್ಕಳ. (ಸ್ಮಾರ್ಥ ಸಂಪ್ರದಾಯ)
ಶ್ರೀದಾಭೋಲಿಮಠ (ಕುಡಾಲ್ ದೇಶಕಾರ್‍ಮಠ), ಮಹಾರಾಷ್ಟ್ರ. (ಸ್ಮಾರ್ಥ ಸಂಪ್ರದಾಯ)
ಮಠ ಪರಂಪರೆಗಳಲ್ಲಿ ವ್ಯತ್ಯಾಸವಿದ್ದರು, ಸಕಲ ಸಾರಸ್ವತ ಸಮಾಜದವರು ಈ ಎಲ್ಲಾ ಮಠ ಮತ್ತು ಮಠಾಧಿಪತಿಗಳನ್ನು ಗೌರವಿಸುತ್ತಾರೆ. ಅಲ್ಲದೆ ಈ 5 ಮಠದ ಅನುಯಾಯಿಗಳ ಜೀವನ ಶೈಲಿ ಆಹಾರ ಪದ್ದತಿಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ.
ಚಾತುರ್ಮಾಸ್ಯದ ಹಿನ್ನಲೆ ಮತ್ತು ಆಚರಣೆ
ಆಷಾಢಮಾಸದ ಶುಕ್ಲ ಏಕಾದಶಿ, ದ್ವಾದಶಿ ಅಥವಾ ಹುಣ್ಣಿಮೆಯ ದಿನದಂದು ಸನಾತನ ಧರ್ಮದ ಪ್ರತಿಯೋರ್ವ ಯತಿಗಳು ವೇದವ್ಯಾಸ ಮುನಿಯನ್ನು ಪೂಜಿಸಿ ಚಾತುರ್ಮಾಸ್ಯ ವೃತ ಕೈಗೊಳ್ಳುತ್ತಾರೆ. ಈ ವೃತದ ಸಮಯದಲ್ಲಿ ಯತಿಗಳು ಅಧ್ಯಯನ, ದಾನ, ಜಪ, ಧ್ಯಾನ ಹಾಗೂ ನಾನಾ ವಿಧದ ಹೋಮ ಮಾಡುವುದರಿಂದ ಅಧಿಕ ಸಾಧನೆಯೆಡೆಗೆ ತೊಡಗುತ್ತಾರೆ.
ಸನ್ಯಾಸಿಗಳು ಸಾಮಾನ್ಯವಾಗಿ ಒಂದು ಸ್ಥಳದಲ್ಲಿ ಹೆಚ್ಚಿನ ಕಾಲ ಇರುವಂತಿಲ್ಲ, ಕಾರಣ ಆ ಸ್ಥಳದ ಮೇಲೆ ಮೋಹ ಬೆಳೆಯಬಾರದೆಂದು. ಆದರೆ ಈ ವೃತಾಚರಣೆಯ ಕಾಲದಲ್ಲಿ ನಾಲ್ಕು ಮಾಸ (ಪಕ್ಷ)ಗಳಕಾಲ ತಮ್ಮ ಪರಿವ್ರಾಜಕತ್ವಕ್ಕೆ ವಿರಾಮ ನೀಡುತ್ತಾರೆ. ಚಾತುರ್ಮಾಸ್ಯ, ನಾಲ್ಕು ತಿಂಗಳ ವ್ರತ. ಆದರೆ ‘ಪಕ್ಷೋ ವೈ ಮಾಸ’ ಎಂಬ ಶ್ರುತಿವಾಕ್ಯಕ್ಕೆ ಅನುಗುಣವಾಗಿ ಒಂದು ಪಕ್ಷವನ್ನೇ ಒಂದು ತಿಂಗಳೆಂದು ಭಾವಿಸಿ 4 ಪಕ್ಷಗಳಿಗೆ ವೃತವನ್ನು ಸಂಪನ್ನಗೊಳಿಸುತ್ತಾರೆ.
ಚಾತುರ್ಮಾಸ್ಯದ ಹಿನ್ನಲೆ
ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ಭಗವಂತನು ಮಲಗುವುದರಿಂದ ಈ ಏಕಾದಶಿಯನ್ನು “ಶಯನೀ ಏಕಾದಶಿ” ಎಂದು ಕರೆಯುವರು.
ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯ ತನಕ ಭಗವಂತನ ಯೋಗ ನಿದ್ರಾಕಾಲ. ಈ ಕಾಲದಲ್ಲಿ ಮದುವೆ ಬ್ರಹ್ಮೋಪದೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಈ ಕಾಲದಲ್ಲಿ ಮಾಡುವ ಸಣ್ಣ ವೃತ, ಉಪಾಸನೆಗಳು ಕೂಡ ಅನಂತ ಪುಣ್ಯವನ್ನು ನೀಡುತ್ತವೆ ಎಂದು ಪುರಾಣಗಳು ಹೇಳುತ್ತವೆ. ಇದೆ ಕಾರಣಕ್ಕೆ ಮಠಾಧಿಪತಿಗಳು ಸಂಚಾರವನ್ನು ಬಿಟ್ಟು ಒಂದೆಡೆ ನೆಲೆ ನಿಂತು ಲೋಕ ಕಲ್ಯಾಣಾರ್ಥಕ್ಕಾಗಿ ಉಪಾಸನೆ ಕೈಗೊಳ್ಳುತ್ತಾರೆ.
ಸಾಮಾನ್ಯವಾಗಿ ಸಂಚಾರದಲ್ಲೇ ಇರುವ ಸನ್ಯಾಸಿಗಳಿಗೆ ಈ ಸಮಯದಲ್ಲಿ ಬೀಸುವ ಗಾಳಿ ಅಬ್ಬರದ ಮಳೆಯಿಂದ ಓಡಾಟಕ್ಕೆ ಮತ್ತು ಶೀತ ವಾತಾವರಣದಿಂದ ಆರೋಗ್ಯಕ್ಕೆ ಸಮಸ್ಯೆಯಾಗುವ ಸಾಧ್ಯತೆ ಜಾಸ್ತಿ ಆದಕಾರಣ, ಹಾಗೂ ಮಳೆಗಾಲದಲ್ಲಿ ಭೂಮಿ ಕೆಸರಾಗಿ ಹುಳ, ಹುಪ್ಪಟೆ, ಜಂತುಗಳು ಹುಟ್ಟಿಕೊಳ್ಳುವ ಸಮಯ ಆ ಸಮಯದಲ್ಲಿ ಅಹಿಂಸೆಯನ್ನು ಪ್ರತಿಪಾದಿಸುವ ಯತಿಗಳು ಅವುಗಳಿಗೂ ಹಿಂಸೆ ನೀಡಬಾರದೆಂಬ ಕಾರಣಕ್ಕೂ ಸಂಚಾರ ನಿಲ್ಲಿಸಿ ಒಂದೆಡೆ ವಾಸ್ತವ್ಯ ಹೂಡುತ್ತಾರೆ. ಕೇವಲ ವೈದಿಕ ಪಂಥದ ಸನ್ಯಾಸಿಗಳು ಮಾತ್ರವೇ ಅಲ್ಲದೆ, ಬೌದ್ಧ–ಜೈನ ಸನ್ಯಾಸಿಗಳೂ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಾರೆ.
ಚಾತುರ್ಮಾಸ್ಯದ ನಿಯಮಗಳು
1.ಆಷಾಡ ಹುಣ್ಣಿಮೆಯಂದು ಕೇಶಮುಂಡನ ಮಾಡಿಕೊಂಡು ವೃತ ಪ್ರಾರಂಭಿಸುವ ಸನ್ಯಾಸಿಗಳು ವೃತ ಮುಗಿಯುವವರೆಗೂ ಕ್ಷೌರ ಮಾಡಿಸಿಕೊಳ್ಳುವಂತಿಲ್ಲ
2.ನದಿ ದಾಟುವಂತಿಲ್ಲ. ಆಗೆಲ್ಲ ಊರಿನ ಗಡಿ ನದಿಗಳೇ ಆಗಿರುತ್ತಿದ್ದವು ಅಲ್ಲದೆ ಅವು ಪ್ರವಾಹದಿಂದ ಕೂಡಿರುವ ಕಾಲವಾಗಿರುತ್ತಿತ್ತು. ಆದ ಕಾರಣ ವೃತ ಸಂಪನ್ನಗೊಂಡ ಮೇಲೆ ಸೀಮೋಲಂಘನ ಮಾಡಿಯೇ ಸಂಚಾರ ಪ್ರಾರಂಭಿಸಬೇಕಿತ್ತು.
3.ಅಧ್ಯಾತ್ಮದೆಡೆಗೆ ಹೆಚ್ಚಿನ ಗಮನ ಹರಿಸಿ ವೇದ, ಉಪನಿಷತ್, ಗೀತೆ, ಸೂತ್ರಗಳನ್ನು ಅಧ್ಯಯನ ಮಾಡಿ ಜನತೆಗೆ ಬೋಧಿಸಬೇಕು.
4.ಆತ್ಮೋನ್ನತಿಗಾಗಿ ಮತ್ತು ಅಂತಃಕರಣ ಶುದ್ಧಿಗಾಗಿ ಭೋಗಗಳನ್ನು ತ್ಯಜಿಸಿ ಕಠಿಣ ಅನುಷ್ಠಾನ ಕೈಗೊಳ್ಳಬೇಕು.
5.ಆಹಾರದಲ್ಲಿ ಕಟ್ಟು ನಿಟ್ಟಿನ ಪತ್ಯ ಮತ್ತು ನಿಯಮಗಳನ್ನು ಪಾಲಿಸಬೇಕು.
ಚಾತುರ್ಮಾಸ್ಯದ ಆಹಾರ ಕ್ರಮಗಳು
ಚಾತುರ್ಮಾಸ್ಯದ ವೃತದ ಸಮಯದಲ್ಲಿ ದೈಹಿಕ ಸ್ವಾಸ್ಥ್ಯಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಸಮಯದಲ್ಲಿ ಯಾವ ಯಾವ ಆಹಾರ ಸೇವಿಸಬೇಕು ಎಂಬುದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೊದಲ ಮಾಸ: ಶಾಕ ವೃತ
ಈ ಸಮಯದಲ್ಲಿ ಮಳೆಯ ಅಬ್ಬರಕ್ಕೆ ಹುಳ–ಹುಪ್ಪಟೆಗಳು ರಕ್ಷಣೆಗಾಗಿ ತರಕಾರಿಗಳಲ್ಲಿ ಸೇರುವ ಸಾದ್ಯತೆಗಳಿರುವರಿಂದ ತರಕಾರಿಗಳನ್ನು ಚಕ್ಕೆ, ಬೇರು, ಗೆಡ್ಡೆಗೆಣಸು ಮತ್ತು ಕೆಲ ಕಾಳುಗಳನ್ನು ಆಹಾರಕ್ಕಾಗಿ ಬಳಸುವಂತಿಲ್ಲ. ಈ ಕಾಲದಲ್ಲಿ ವಾತದೋಷವಾಗುವ ಸಂಭವವಿರುದರಿಂದ ಶಾಕಾಹಾರ ನಿಷಿದ್ಧ ಆದರೆ ಮಾವಿನ ಹಣ್ಣು, ಉದ್ದು, ಹೆಸರು, ಬೇಳೆಕಾಳುಗಳು ನಿಷಿದ್ಧವಲ್ಲ.
ಎರಡನೇ ಮಾಸ: ದಧಿ ವೃತ
ಈ ಮಾಸದಲ್ಲಿ ಕಫ ರೋಗ ತಡೆಗೆ ಮತ್ತು ಹಾಲುಕೊಡುವ ಪ್ರಾಣಿಗಳು ಮೈತುನ ಕ್ರಿಯೆಯಲ್ಲಿ ತೊಡಗುವುದರಿಂದ ಮೊಸರಿನಲ್ಲಿ ದೋಷ ಉಂಟಾಗುವ ಸಾಧ್ಯತೆಗಳಿರುವುದರಿಂದ ಮೊಸರನ್ನು ಬಳಸುವಂತಿಲ್ಲ. ಆದರೆ ಮಜ್ಜಿಗೆ ನಿಷಿದ್ಧವಿಲ್ಲ.
ಮೂರನೇ ಮಾಸ: ಕ್ಷೀರ ವೃತ
ಈ ಕಾಲದಲ್ಲಿ ಹಾಲು ಕೊಡುವ ಪ್ರಾಣಿಗಳು ಗರ್ಭಧರಿಸುವ ಕಾಲವಾಗಿದ್ದು, ಹಾಲಿನಲ್ಲಿ ದೋಷ ಉಂಟಾಗುವ ಸಾಧ್ಯತೆ ಜಾಸ್ತಿ ಆದಕಾರಣ ಹಾಲನ್ನು ಸೇವಿಸುವಂತಿಲ್ಲ. ಅಲ್ಲದೆ ಇದು ಕಫ ರೋಗ ಬಾರದಂತೆ ಮುನ್ನೆಚ್ಚರಿಕಾ ಕ್ರಮ.
ನಾಲ್ಕನೇ ಮಾಸ: ದ್ವಿದಳ ವ್ರತ
ಮೊದಲ ಮೂರೂ ಮಾಸದಲ್ಲಿ ದ್ವಿದಳ ಧಾನ್ಯಗಳನ್ನೇ ಬಳಸಿ ವಾತ ದೋಷ ಉಂಟಾಗುವ ಸಂಭವವಿರುದರಿಂದ ಮತ್ತು ಹೊಸ ಧಾನ್ಯಗಳು ಉತ್ಪತ್ತಿಯಾಗುವ ಕಾಲವಾದ್ದರಿಂದ ಈ ಮಾಸದಲ್ಲಿ ದ್ವಿದಳ ಸಸ್ಯಗಳಾಗಲೀ ಸಸ್ಯೋತ್ಪನ್ನಗಳಾಗಲಿ ಬಳಸುವಂತಿಲ್ಲ.
ಈ ವೃತಗಳು ಅರೋಗ್ಯ ರಕ್ಷಣೆಗೆ ಪಥ್ಯವಿಂದಂತೆ.
ಚಾತುರ್ಮಾಸ್ಯದ ಮುಕ್ತಾಯ
ಚಾತುರ್ಮಾಸ್ಯ ಕಾಲದಲ್ಲಿ ಒಂದೇ ಸ್ಥಳದಲ್ಲಿ ನೆಲೆನಿಂತು ಆದ್ಯಾತ್ಮಿಕ ಸಾಧನೆ ಮತ್ತು ಲೋಕ ಕಲ್ಯಾಣಕ್ಕಾಗಿ ಹಲವಾರು ವೃತ ಆಚರಣೆಗಳನ್ನು ಕೈಗೊಂಡ ಸನ್ಯಾಸಿಗಳು ಮಳೆಯ ಅಬ್ಬರ ಕಡಿಮೆಯಾಗುತ್ತಿದಂತೆ ಗಂಗಾ ಪೂಜೆ ಮಾಡಿ ಸಾಂಕೇತಿಕವಾಗಿ ನದಿಯನ್ನು ದಾಟಿ ಸೀಮೋಲಂಘನ ಮಾಡುತ್ತಾರೆ. ನಂತರ ತಮ್ಮ ಪರಿವ್ರಾಜಕತ್ವವನ್ನು ಮುಂದುವರಿಸುತ್ತಾರೆ.
ಸಾಗರದ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನ ಪರಿಚಯ
ಸಾಗರದ ಶ್ರೀರಾಮಪುರ ಬಡಾವಣೆ (ಕೊಂಕಣಿ ಬ್ಯಾಣಾ)ಯಲ್ಲಿ 1966ರಲ್ಲಿ ಶ್ರೀ ಸಂಸ್ಥಾನ ಪರ್ತಕಾಳಿ ಜಿವೋತ್ತಮ ಮಠದ ಶ್ರೀ ದ್ವಾರಕನಾಥತೀರ್ಥ ವಡೆರ್ ಸ್ವಾಮೀಜಿಗಳ ಕರಕಮಲದಿಂದ ವೆಂಕಟರಮಣನ್ನು ಪ್ರತಿಷ್ಠಾಪಿಸಿದ ಈ ಮಂದಿರದಲ್ಲಿ 1981ರಲ್ಲಿ ಗಣಪತಿಯನ್ನು 1991 ರಲ್ಲಿ ಲಕ್ಷ್ಮೀದೇವಿಯ ಮೂರ್ತಿ ಸ್ಥಾಪಿಸುವ ಮೂಲಕ ಸಾಗರದ ಜನತೆಗೆ ದೇವತಾ ಆರಾಧನೆಗೆ ಅವಕಾಶವನ್ನು ಒದಗಿಸಲಾಗಿದೆ.
ಸಾಗರ ಶಿರಿವಂತೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಸ್ತುವಾರಿಯಲ್ಲಿ ದೇವತಾ ನಿತ್ಯ ಕೈಂಕರ್ಯ ನಡೆಯುತ್ತಿದ್ದು, ನಿತ್ಯಪೂಜೆ ಮತ್ತು ಪುರೋಹಿತ್ಯಕ್ಕೆ ಮೂರು ಜನ ಅರ್ಚಕರನ್ನು ನೇಮಿಸಿಲಾಗಿದೆ, ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ಶ್ರೀನಿವಾಸ ಸಭಾಗ್ರಹ ಮತ್ತು ವಿದ್ಯಾದಿರಾಜ ಸಭಾಗ್ರಹಗಳು ಶುಭಕಾರ್ಯಗಳಿಗೆ ಹಾಗು ದೇವತಾಕಾರ್ಯಗಳನ್ನು ಕೈಗೊಳ್ಳಲು ಸ್ಥಳೀಕರಿಗೆ ಸಮಾರಂಭಗಳಿಗೆ ಸ್ಥಳಾವಕಾಶನ್ನು ಕಲ್ಪಿಸಿದೆ ಹಾಗು ಆಹಾರ ತಯಾರಿಸಲು ಸುಸಜ್ಜಿತ ಪಾಕಶಾಲೆ ಮತ್ತು ಭೋಜನ ಶಾಲೆಯನ್ನು ಹೊಂದಿದೆ, ದೂರದ ಊರಿನಿಂದ ಬಂದ ಭಕ್ತಾದಿಗಳಿಗೆ ಮತ್ತು ಅತಿಥಿಗಳಿಗೆ ವಾಸ್ತವ್ಯಕ್ಕೆ ಕೊಠಡಿಗಳು ಇವೆ. 2014ರಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ಥಗಾಳಿ ಜೀವೊತ್ತಮ ಮಠದ ಮಠಾಧೀಶರಾಗಿದ್ದ ವೃಂದಾವನಸ್ತ ಶ್ರೀಮದ್ ಶ್ರೀ ವಿದ್ಯಾಧೀರಾಜ ತೀರ್ಥ ಶ್ರೀಪಾದ ವಡೆರ ಸ್ವಾಮೀಜಿಯವರು ಚಾತುರ್ಮಾಸ ವೃತವನ್ನು ಇಲ್ಲಿಯೇ ಕೈಗೊಂಡಿದ್ದರು.
ಲೇಖನ: ಅಂಜನ್ ಕಾಯ್ಕಿಣಿ, ಸಾಗರ. 9591049799
Published On - 7:05 am, Wed, 13 July 22