ಭಾರತದಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬವನ್ನು ಮೂರು ಅಥವಾ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಕಾರ್ತಿಕ ಮಾಸದ ಶುಕ್ಷ ಪಕ್ಷದ ಪ್ರತಿಪಾದ ದಿನದಂದು ಗೋಪೂಜೆ ಅಥವಾ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಹೌದು ಉತ್ತರ ಭಾರತದಾದ್ಯಂತ ಗೋವರ್ಧನ ಪೂಜೆಯನ್ನು ಮಾಡಿದರೆ ಈ ಶುಭ ದಿನ ದಕ್ಷಿಣ ಭಾರತದಲ್ಲಿ ಗೋ ಮಾತೆಯನ್ನು ಪೂಜಿಸಲಾಗುತ್ತದೆ. ಒಟ್ಟಾರೆ ಗೋಪೂಜೆ ದಿನದಂದು ಶ್ರೀಕೃಷ್ಣ, ಪ್ರಕೃತಿ ಮಾತೆ ಮತ್ತು ಗೋಮಾತೆಯನ್ನು ಪೂಜಿಸುವ ಸಂಪ್ರದಾಯವಿದೆ. ಈ ಬಾರಿ ಗೋ ಪೂಜೆಯನ್ನು ಯಾವಾಗ ಆಚರಿಸಲಾಗುತ್ತದೆ, ಇದರ ಮಹತ್ವ, ಪೂಜೆ ವಿಧಿ-ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗೋಪೂಜೆಯ ಪ್ರತಿಪಾದ ತಿಥಿಯು ನವೆಂಬರ್ 1 ರಂದು ಅಂದರೆ ಇಂದು ಸಂಜೆ 6:16 ಕ್ಕೆ ಪ್ರಾರಂಭವಾಗಿ ನವೆಂಬರ್ 2 ರಂದು ಅಂದರೆ ನಾಳೆ ರಾತ್ರಿ 8:21 ಕ್ಕೆ ಮುಕ್ತಾಯಗೊಳ್ಳಲಿದೆ. ಉದಯ ತಿಥಿಯ ಪ್ರಕಾರ ಈ ಬಾರಿ ಗೋ ಪೂಜೆಯನ್ನು ನವೆಂಬರ್ 2 ಅಂದರೆ ನಾಳೆ ಆಚರಿಸಲಾಗುತ್ತದೆ.
ಗೋಪೂಜೆ ಶುಭ ಮುಹೂರ್ತ: ಗೋ ಪೂಜೆಯ ಪ್ರಾತಃಕಾಲ ಮುಹೂರ್ತವು ನವೆಂಬರ್ 2 ರಂದು ಬೆಳಗ್ಗೆ 6:14 ರಿಂದ 8:46 ರವರೆಗೆ ಇರುತ್ತದೆ. ಗೋ ಪೂಜೆಗೆ ಪ್ರಶಸ್ತವಾದ ಎರಡನೇ ಮುಹೂರ್ತವು ಮಧ್ಯಾಹ್ನ 3:23 ರಿಂದ 5:35 ರ ವರೆಗೆ ಇರುತ್ತದೆ. ಮೂರನೇ ಮುಹೂರ್ತವು ಸಂಜೆ 5:35 ರಿಂದ 6:01 ರ ವರೆಗೆ ಇರುತ್ತದೆ.
ಗೋಪೂಜೆಯ ದಿನದಂದು ಮುಂಜಾನೆ ಬೇಗ ಎದ್ದು ಶುದ್ಧರಾಗಿ ದೇವರ ಕೋಣೆ ಮತ್ತು ಮನೆಯ ಅಂಗಳವನ್ನು ಸ್ವಚ್ಛಗೊಳಿಸಬೇಕು. ನಂತರ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಬೇಕು. ನಂತರ ಗೋವುಗಳಿಗೆ ತಿನ್ನಲು ಮನೆಯಲ್ಲಿಯೇ ಸಿಹಿ ಖಾದ್ಯ ಹಾಗೂ ರೊಟ್ಟಿ ಅಥವಾ ದೋಸೆಯನ್ನು ತಯಾರಿಸಬೇಕು. ಬಳಿಕ ದನದ ಕೊಟ್ಟಿಗೆ ಅಥವಾ ಗೋವನ್ನು ಕಟ್ಟುವ ಸ್ಥಳವನ್ನು ಶುದ್ಧಗೊಳಿಸಿ, ಗೋ ಮಾತೆಗೂ ಸ್ನಾನ ಮಾಡಿಸಬೇಕು. ನಂತರ ಗೋ ಮಾತೆಯ ಮೈ ಮೇಲೆ ಅರಶಿನ ಕುಂಕುಮ, ವಿಭೂತಿಯನ್ನು ಹಚ್ಚಿ, ಹೂವಿನ ಹಾರವನ್ನು ಹಾಕಬೇಕು. ಜೊತೆಗೆ ನಿಮಗೆ ಇಷ್ಟವಾಗುವಂತೆ ಗೋಮಾತೆಯನ್ನು ಅಲಂಕರಿಸಬಹುದು. ಇದಾದ ಬಳಿಕ ಶುಭ ಮುಹೂರ್ತದಲ್ಲಿ ಗೋವುಗಳ ಹಣೆಗೆ ಕಾಲಿಗೆ ಅರಶಿನ ಕುಂಕುಮವನ್ನು ಹಚ್ಚಿ, ಆರತಿ ಬೆಳಗಿ ಮೊದಲೇ ತಯಾರಿಸಿಟ್ಟ ಸಿಹಿ ಖಾದ್ಯ ಮತ್ತು ರೊಟ್ಟಿಯನ್ನು ತಿನ್ನಿಸಿ ಗೋ ಮಾತೆಯ ಆಶಿರ್ವಾದವನ್ನು ಪಡೆಯಬೇಕು.
ದಕ್ಷಿಣ ಭಾರತದ ಕಡೆ ಬಲಿಪಾಡ್ಯಮಿ ದಿನ ಗೋ ಮಾತೆಯನ್ನು ಪೂಜಿಸಿದರೆ ಉತ್ತರ ಭಾರತದ ಕಡೆ ಗೋವರ್ಧನ ಪೂಜೆಯನ್ನು ಮಾಡಲಾಗುತ್ತದೆ. ಗೋವರ್ಧನ ಪೂಜೆಯನ್ನು ಮಾಡಲು ಮೊದಲು ಈ ದಿನ ಮನೆಯ ಅಂಗಳದಲ್ಲಿ ಗೋವಿನ ಸಗಣಿಯಿಂದ ಗೋವರ್ಧನ ಪರ್ವತ ಚಿತ್ರವನ್ನು ಬಿಡಿಸಬೇಕು. ಇದಾದ ನಂತರ ಅಕ್ಷತೆ, ಪಾಯಸ, ಸಿಹಿ ಖಾದ್ಯ, ನೀರು, ಹಾಲು, ವೀಳ್ಯದೆಲೆ, ಅಡಿಕೆ, ಕುಂಕುಮ, ಹೂವನ್ನಿಟ್ಟು ಹಾಗೂ ದೀಪವನ್ನು ಬೆಳಗಿಸಿ ಗೋವರ್ಧನ ದೇವರನ್ನು ಪೂಜಿಸಬೇಕು. ಈ ದಿನದಂದು ಗೋವರ್ಧನ ಪೂಜೆಯನ್ನು ಮಾಡುವುದರಿಂದ ಶ್ರೀ ಕೃಷ್ಣನ ಅನುಗ್ರಹವು ನಿಮ್ಮ ಮೇಲೆ ಸದಾಕಾಲ ಇರುತ್ತದೆ ಎಂಬ ನಂಬಿಕೆಯೂ ಇದೆ.
ಹಿಂದೂ ಧರ್ಮದಲ್ಲಿ ಹಸುಗಳನ್ನು ಗೋಮಾತೆ ಎಂದು ಪೂಜಿಸಲಾಗುತ್ತದೆ. ಅದರಲ್ಲೂ ಮನುಷ್ಯನ ಅನೇಕ ಅವಶ್ಯಕತೆಗಳನ್ನು ಈಡೇರಿಸುವ ಕಾಮಧೇನು ದೇವಾನುದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಕೃಷ್ಣನಿಗೆ ಪ್ರಿಯವಾದ ಗೋವುಗಳನ್ನು ಪೂಜಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು ಮಾತ್ರವಲ್ಲದೆ ಹಿಂದಿನ ಜನ್ಮದಲ್ಲಿನ ಪಾಪಗಳು ಸಹ ತೊಳೆದುಹೋಗುತ್ತದೆ. ಅದರಲ್ಲೂ ಗೋಪೂಜೆಯ ದಿನ ಈ ದಿನದಂದು ಗೋವರ್ಧನ ಪರ್ವತ ಮತ್ತು ಗೋವುಗಳನ್ನು ಪೂಜಿಸುವುದರಿಂದ ಶ್ರೀಕೃಷ್ಣನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ.
ಇದನ್ನೂ ಓದಿ: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ ಕಳಿಸಬಹುದಾದ ಸಂದೇಶಗಳಿವು
ದಂತ ಕಥೆಯ ಪ್ರಕಾರ ಮಥುರಾದ ಬ್ರಜ್ ಪ್ರದೇಶದಲ್ಲಿ ಮೊದಲು ಇಂದ್ರದನ್ನು ಪೂಜಿಸುತ್ತಿದ್ದರು. ಒಂದು ದಿನ ಯಜ್ಞ ಯಾಗಾದಿಗಳನ್ನು ಮಾಡಲು ಊರಿನ ಜನ ತಯಾರಿ ನಡೆಸುತ್ತಿರುವಾಗ ಅಲ್ಲಿಗೆ ಬಂದಂತಹ ಕೃಷ್ಣ ಇಂದ್ರನನ್ನು ಪೂಜಿಸುವ ಬದಲು ನಮಗೆ ಆಸರೆಯಾಗಿರುವಂತಹ ಹಾಗೂ ಹಸುಗಳಿಗೆ ಆಹಾರ ಒದಗಿಸುವ ಗೋವರ್ಧನ ಗಿರಿಯನ್ನು ಪೂಜಿಸಲು ಸಲಹೆ ನೀಡಿದನು. ಕೃಷ್ಣನ ಮಾತಿಗೆ ಒಪ್ಪಿಗೆ ಸೂಚಿಸಿ ಊರಿನ ಜನರೆಲ್ಲರೂ ಗೋವರ್ಧನ ಗಿರಿಯನ್ನು ಪೂಜಿಸಲು ನಿಶ್ಚಯಿಸಿದರು. ಇದರಿಂದ ಕೋಪಗೊಂಡ ಇಂದ್ರನು ಭಾರೀ ಮಳೆ ಸುರಿಸಿ ಗೋವರ್ಧನ ಬೆಟ್ಟವನ್ನೇ ಉರುಳಿಸಲು ನಿರ್ಧರಿಸಿದನು. ಇಂದ್ರ ದೇವ ಸುರಿಸಿದ ಧಾರಾಕಾರ ಮಳೆಯಿಂದಾಗಿ ಊರಲ್ಲೆಲ್ಲಾ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ಜನ ತಮ್ಮ ಸಾಕು ಪ್ರಾಣಿಗಳು ಹಾಗೂ ಕೃಷ್ಣನ ಸಮೇತ ಗೋವರ್ಧನ ಗಿರಿ ಬಳಿ ಹೋಗುತ್ತಾರೆ. ಮತ್ತು ಕೃಷ್ಣ ತನ್ನ ಜನರನ್ನು ರಕ್ಷಿಸಲು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ವೃಂದಾವನದ ಎಲ್ಲಾ ನಿವಾಸಿಗಳಿಗೂ ಅದರ ಕೆಳಗೆ ಆಶ್ರಯ ನೀಡಿದನು.
ಇದರಿಂದ ತನ್ನ ತಪ್ಪಿನ ಅರಿವಾಗಿ ಇಂದ್ರ ದೇವನ ಕೃಷ್ಣನ ಬಳಿ ಕ್ಷಮೆಯನ್ನೂ ಕೂಡಾ ಕೇಳುತತ್ತಾನೆ ಮತ್ತು ಕೃಷ್ಣನ ಶಕ್ತಿಯನ್ನು ಅರಿತು ಅದೇ ಪರ್ವತದ ಬಳಿ ಕೃಷ್ಣನನ್ನು ಪೂಜಿಸಿ ಅನ್ನ ಮತ್ತು ಖಾದ್ಯಗಳನ್ನು ಅರ್ಪಿಸಿದನು ಎಂದು ನಂಬಲಾಗಿದೆ. ಅಂದಿನಿಂದ ಇಂದಿನವರೆಗೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪಾದದ ದಿನದಂದು ಗೋವರ್ಧನ ಹಾಗೂ ಪೂಜೆಯ ಸಂಪ್ರದಾಯವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ