ಹೇಳಿ ಕೇಳಿ ಭಾರತ ಮಂದಿರಗಳ ನೆಲವೀಡು. ದೇವಾನುದೇವತೆಗಳಿಗೆ ಅಸಂಖ್ಯಾತ ದೇಗುಲಗಳಿವೆ. ಇತ್ತೀಚೆಗೆ ಮನುಷ್ಯರಿಗೂ ಮಂದಿರಗಳನ್ನು ಕಟ್ಟಲಾಗುತ್ತಿದೆ! ಇವುಗಳ ಸಮ್ಮುಖದಲ್ಲಿ ಸ್ವಾಮಿ ನಿಷ್ಠೆ ಮತ್ತು ನಿಯತ್ತಿಗೆ ಮತ್ತೊಂದು ಹೆಸರು ಶ್ವಾನ ಎಂಬುದು ನಿರ್ವಿವಾದ. ಮನುಷ್ಯರೂ ಸಹ ಇಂತಹ ನಾಯಿಗಳ ಬಗ್ಗೆ ನಿಷ್ಠೆ ಹೊಂದಿದ್ದು, ನಿಯತ್ತಿನಿಂದ ಬಹುತೇಕ ಕಡೆಗಳಲ್ಲಿ ನಾಯಿಗಳನ್ನು ಪೂಜಿಸುತ್ತಾರೆ. ಹೀಗೆ ನಾಯಿಗಳನ್ನು ಪೂಜಿಸಲು ಭಾರತದಲ್ಲಿ ಅನೇಕ ಕಡೆ ದೇವಾಲಯಗಳನ್ನು ನಿರ್ಮಿಸಲಾಗಿದೆ. ಗಮನಾರ್ಹವೆಂದರೆ ನಾಯಿಗಳಿಗಾಗಿ ಸ್ಥಾಪಿಸಲಾಗಿರುವ ಈ ದೇವಾಲಯಗಳು ಜನರ ನಂಬಿಕೆ ಗೌರವದ ಸಂಕೇತವಾಗಿದ್ದು ಶ್ರದ್ಧಾ ಭಕ್ತಿಯಿಂದ ಕಾಲಕಾಲಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಇಲ್ಲಿಗೆ ಬರುವ ಸಾವಿರಾರು ಜನರು ಯಾವುದೇ ಧಾರ್ಮಿಕ ಸ್ಥಳದಲ್ಲಿನ ಸಂಪ್ರದಾಯದಂತೆ ತಲೆಬಾಗಿ ಶ್ವಾನಗಳಿಗೆ ನಮಿಸುತ್ತಾರೆ. ನಾಯಿಗಳ ಈ ದೇವಾಲಯಗಳಿಗೆ ಸಂಬಂಧಿಸಿದಂತೆ ಅನೇಕ ಆಸಕ್ತಿದಾಯಕ, ರೋಚಕ ಕಥೆಗಳು ಮತ್ತು ಪುರಾಣಗಳು ಇವೆ. ನೀವು ಕೂಡ ಕೇಳಿರಬಹುದು. ಆದರೆ ನೀವು ಇಲ್ಲಿಯವರೆಗೆ ಅಂತಹ ದೇವಾಲಯಗಳ ಬಗ್ಗೆ ತಿಳಿದಿಲ್ಲದಿದ್ದರೆ, ಅದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಉತ್ತರ ಪ್ರದೇಶದ ಸಿಕಂದರಾಬಾದ್‌ನಿಂದ 15 ಕಿ.ಮೀ. ದೂರದಲ್ಲಿರುವ ಬುಲಂದ್‌ಶಹರದಲ್ಲಿ (Sikandrabad town of Uttar Pradesh’s Bulandshahr district) ಸುಮಾರು 100 ವರ್ಷಗಳಷ್ಟು ಹಳೆಯದಾದ ದೇವಾಲಯವಿದೆ. ಇಲ್ಲಿ ನಾಯಿಯ ಸಮಾಧಿಗೆ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಹೋಳಿ, ದೀಪಾವಳಿಯಂದು ಇಲ್ಲಿ ಜಾತ್ರೆಯಂತೆ ನಡೆಯುತ್ತದೆ. ಶ್ರಾವಣ ಮತ್ತು ನವರಾತ್ರಿಗಳಲ್ಲಿ ಉಚಿತ ಆಹಾರ ಸೇವೆ ಸಹ ಆಯೋಜಿಸಲಾಗುತ್ತದೆ. ಇಲ್ಲಿ ಜನರ ಕೋರಿಕೆಗಳು ಈಡೇರುತ್ತದೆ ಎಂಬ ಗಾಢವಾದ ನಂಬಿಕೆಯಿದೆ. ಸುಮಾರು 100 ವರ್ಷಗಳ ಹಿಂದೆ ಲಾಟುರಿಯಾ ಬಾಬಾ ಇಲ್ಲಿ ವಾಸಿಸುತ್ತಿದ್ದರಂತೆ. ಅವರೊಂದಿಗೆ ನಾಯಿ ಕೂಡ ವಾಸಿಸುತ್ತಿತ್ತು ಎಂದು ಜನಪದ ಹೇಳುತ್ತದೆ. ಲಾತುರಿಯಾ ಬಾಬಾಗೆ (Laturiya Baba) ಸಿದ್ಧಿ ಜ್ಞಾನವಿತ್ತು. ಬಾಬಾ ತನ್ನ ಕಣ್ಣುಗಳಿಂದ ನೋಡುತ್ತಿರಲಿಲ್ಲ. ಬಾಬಾ ತಮಗೆ ಏನಾದರೂ ಬೇಕೆಂದರೆ ಅವರು ತಮ್ಮ ನಾಯಿಯ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರು. ಆ ನಾಯಿ ಸಾಮಾನ್ಯದ್ದಾಗಿರಲಿಲ್ಲ.
ಆ ನಾಯಿ ಎಷ್ಟು ತಿಳಿವಳಿಕೆಯುಳ್ಳದ್ದಾಗಿತ್ತೆಂದರೆ ಬಾಬಾ ಚೀಲವೊಂದನ್ನು ಅದರ ಕುತ್ತಿಗೆಗೆ ನೇತು ಹಾಕಿದಾಗ, ಅದು ಸೀದಾ ಮಾರುಕಟ್ಟೆಗೆ ಹೋಗಿ ಅದರಲ್ಲಿ ಬಾಬಾ ಸೂಚಿಸಿದ್ದ ಸಾಮಾನುಗಳನ್ನು ತರುತ್ತಿತ್ತು. ಸುಮಾರು 100 ವರ್ಷಗಳ ಹಿಂದೆ, ಬಾಬಾ ಸಮಾಧಿಯಾಗುವ ವೇಳೆ ಸಾಕು ನಾಯಿ ಕೂಡ ಅದೇ ಸಮಾಧಿಯೊಳಕ್ಕೆ ಹಾರಿತು. ಜನರು ನಾಯಿಯನ್ನು ಹೊರಗೆ ಕರೆದುಕೊಂಡರು. ಆದರೆ ನಾಯಿ ಮತ್ತೆ ಮತ್ತೆ ಅದರೊಳಗೆ ಹಾರಿತು. ಜನರು ಬಾಬಾ ಸಮಾಧಿಯಿಂದ ನಾಯಿಯನ್ನು ಅನೇಕ ಬಾರಿ ಹೊರತೆಗೆದರೂ… ಆದರೆ ಮುಂದೆ ನಾಯಿ ಆಹಾರ ತಿನ್ನುವುದನ್ನು ನಿಲ್ಲಿಸಿತು. ಅದಕ್ಕೂ ಮುನ್ನ, ಭವಿಷ್ಯದಲ್ಲಿ ನನ್ನನ್ನು ಪೂಜಿಸುವುದರ ಜೊತೆಗೆ ಆ ನಾಯಿಯನ್ನು ಸಹ ಪೂಜಿಸಬೇಕು ಎಂದು ಲತೂರಿಯಾ ಬಾಬಾ ಅವರು ಪ್ರಾಣ ತ್ಯಾಗ ಮಾಡುವ ಮುನ್ನ ತಮ್ಮ ಸೇವಕರಿಗೆ ಸೂಚಿಸಿದ್ದರಂತೆ. ಹಾಗಾಗಿ ಇಲ್ಲಿ ಈ ನಾಯಿಯ ಪೂಜೆ ಆರಂಭವಾಯಿತು. ನಾಯಿಯ ಕಾಲಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂದು ಭಕ್ತರು ಇಂದಿಗೂ ಭಕ್ತಿಭಾವ ಹೊಂದಿದ್ದಾರೆ.
ಗಾಜಿಯಾಬಾದ್ ಬಳಿಯ ಚಿಪಿಯಾನ ಗ್ರಾಮದ ಭೈರವ ದೇವಾಲಯವು ಬಹಳ ಜನಪ್ರಿಯವಾಗಿದೆ. ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ನಾಯಿಯ ಸಮಾಧಿಗೆ ಪೂಜೆ ಸಲ್ಲಿಸಲು ಜನರು ಇಲ್ಲಿಗೆ ಬರುತ್ತಾರೆ. ನಾಯಿಯ ಸಮಾಧಿ ಬಳಿ ಒಂದು ತೊಟ್ಟಿ ಇದೆ. ಈ ತೊಟ್ಟಿಯಲ್ಲಿ ಸ್ನಾನ ಮಾಡುವುದರಿಂದ ರೇಬಿಸ್ ಕಾಯಿಲೆ, ಕೋತಿ ಕಚ್ಚಿರುವ ಗಾಯ, ಬಿಸಿನೀರಿನ ದದ್ದುಗಳು, ಮೊಡವೆ ಮುಂತಾದ ರೋಗಗಳು ಪರಿಣಾಮಕಾರಿಯಾಗಿ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ. ಇಲ್ಲಿ ಸ್ಥಾಪಿಸಲಾಗಿರುವ ನಾಯಿಯ ಪ್ರತಿಮೆಗೆ ಜನರು ನೈವೇದ್ಯವನ್ನು ಅರ್ಪಿಸಿ, ಬಳಿಕ ಜನರಿಗೆ ಹಂಚುತ್ತಾರೆ. ಈ ನಾಯಿ ಬಾಬಾ ಕಾಲ ಭೈರವನ ವಾಹನವಾಗಿತ್ತು ಎಂಬ ಮಾತಿದೆ. ಅದಕ್ಕಾಗಿಯೇ ಇಲ್ಲಿ ನಾಯಿಯನ್ನು ಪೂಜಿಸಲಾಗುತ್ತದೆ.
ಇಲ್ಲಿನ ಭೈರವ ದೇವಾಲಯದಲ್ಲಿ ನಿರ್ಮಿಸಲಾಗಿರುವ ನಾಯಿಯ ನೈಜ ಕಥೆಯು ಬಂಜಾರ ಬುಡಕಟ್ಟು ವ್ಯಕ್ತಿಗೆ ಸಂಬಂಧಿಸಿದೆ. ಸುಮಾರು 100 ವರ್ಷಗಳ ಹಿಂದೆ, ಲಖಾ ಎಂಬ ಬಂಜಾರನು ಈ ನಾಯಿಯ ಸಮಾಧಿಯನ್ನು ಭೈರವ ದೇವಾಲಯದ ಒಳಗೆ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಈ ಸಮಾಧಿಯನ್ನು ನೋಡಿದಾಗ ಬಂಜಾರ ಬುಡಕಟ್ಟಿನ ಜನ ಸಾಕು ನಾಯಿಯನ್ನು ಹೊಂದಿದ್ದರು ಎಂಬುದು ಗೊತ್ತಾಗುತ್ತದೆ. ಸೇಠ್ ( ಸಾಲ ನೀಡುವ ವ್ಯಕ್ತಿ) ಬಳಿ ಬಂಜಾರ ವ್ಯಕ್ತಿ ಸಾಲವನ್ನು ಪಡೆದಿದ್ದ. ಸಕಾಲಕ್ಕೆ ಸಾಲ ತೀರಿಸಲಾಗದೆ ಆತ ತನ್ನ ನಾಯಿಯನ್ನು ಸೇಠ್ ಬಳಿ ಅಡಮಾನ ಇಟ್ಟಿದ್ದ. ಕೆಲವು ದಿನಗಳ ನಂತರ, ಸೇಠು ಮನೆ ದರೋಡೆಯಾಯಿತು. ಆ ವೇಳೆ ನಾಯಿಯು ದರೋಡೆಕೋರರನ್ನು ನೋಡಿ ಬೊಗಳಲಿಲ್ಲ ಅಥವಾ ಸೇಠುನನ್ನು ಎಚ್ಚರಿಸಲಿಲ್ಲ. ಬೆಳಗ್ಗೆ ಕಳ್ಳತನವಾಗಿರುವ ವಿಷಯ ತಿಳಿದ ಸೇಠ್, ನಾಯಿಯ ಮೇಲೆ ಕೋಪಗೊಂಡ. ಸ್ವಲ್ಪ ಸಮಯದ ನಂತರ, ನಾಯಿಯು ಸೇಠ್‌ನ ಧೋತಿಯನ್ನು ಹಿಡಿದು ಕಳ್ಳರು ಕದ್ದ ಮಾಲುಗಳನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ಕೊಂಡೊಯ್ದಿತು. ಕದ್ದ ಮಾಲು ಸಿಕ್ಕಾಗ ಸೇಠು ಖುಷಿಯಾದ. ಅವರು ಬಹುಮಾನವಾಗಿ ನಾಯಿಯನ್ನು ಅಡಮಾನದಿಂದ ಮುಕ್ತಗೊಳಿಸಿದರು ಮತ್ತು ಬುಡಕಟ್ಟು ವ್ಯಕ್ತಿ ಲಖಾಗೆ ಹಿಂತಿರುಗಿಸಿದರು.
ಆದರೆ ಸೇಠುಗೆ ತಾನು ಕೊಟ್ಟಿದ್ದ ಮಾತನ್ನು (ಅಡಮಾನವನ್ನು) ನಾಯಿ ಮುರಿದಿದೆ ಎಂದು ಲಖಾ ಭಾವಿಸಿದ. ಇದರಿಂದ ಕೋಪಗೊಂಡು ತನ್ನದೇ ನಾಯಿಯನ್ನು ಸಾಯಿಸಿಬಿಟ್ಟ. ಸಾಯುವಾಗ ನಾಯಿಯು ಲಖಾನ ಕಾಲಿನ ಬಳಿ ಬೀಳುವ ಮೂಲಕ ಸ್ವಾಮಿ ನಿಷ್ಠೆಯ ಪರಾಕಾಷ್ಠೆ ಮೆರೆಯಿತು, ನಂತರವಷ್ಟೇ ಅದು ಕೊನೆಯುಸಿರೆಳೆಯಿತು. ಇದಾದ ಮೇಲೆ ಸೇಠು ಲಖಾನ ಬಳಿ ಬಂದು ವಾಸ್ತವವನ್ನು ಹೇಳಿದಾಗ, ಆತ ತುಂಬಾ ವಿಷಾದಿಸಿದ. ಪಶ್ಚಾತ್ತಾಪದ ರೂಪವಾಗಿ, ಆತ ಭೈರವ್ ಬಾಬಾರ ದೇವಸ್ಥಾನದಲ್ಲಿ ನಾಯಿಯ ಸಮಾಧಿಯನ್ನು ನಿರ್ಮಿಸಿದ. ಇಂದಿಗೂ ರೇಬಿಸ್ ರೋಗಿಗಳು ಇಲ್ಲಿ ಪೂಜೆ ಸಲ್ಲಿಸಿದರೆ ತಕ್ಷಣ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ಮತ್ತೊಂದೆಡೆ, ದೇವಾಲಯದ ಹೊರಗಿನ ತೊಟ್ಟಿಯಲ್ಲಿ ಸ್ನಾನ ಮಾಡುವುದರಿಂದ ನಾಯಿ ಕಚ್ಚಿದ ಗಾಯದಿಂದ ವಾಸಿಯಾಗಬಹುದು ಎಂಬ ಮಾತಿದೆ.
ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಎ.ವಿ. ಹಳ್ಳಿ ಗ್ರಾಮವೊಂದರಲ್ಲಿ ನಾಯಿಗೆ ದೇವಾಲಯವನ್ನು ನಿರ್ಮಿಸಲಾಗಿದೆ. ನಾಯಿಗಳು ತಮ್ಮ ಮಾಲೀಕರ ಕುಟುಂಬವನ್ನು ವಿಪತ್ತುಗಳಿಂದ ರಕ್ಷಿಸುವ ನೈಸರ್ಗಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಯಾವುದೇ ರೀತಿಯ ನೈಸರ್ಗಿಕ ವಿಕೋಪವನ್ನು ಅವು ಮುಂಗಾಣುತ್ತವೆ. ಆದ್ದರಿಂದ ಈ ದೇವಾಲಯವನ್ನು ಸಾಕುಪ್ರಾಣಿ ನಾಯಿಗೆ ಸಮರ್ಪಿಸಲಾಗಿದೆ.
ಈ ದೇವಾಲಯದಲ್ಲಿ, ಎರಡು ನಾಯಿಗಳ ವಿಗ್ರಹಗಳನ್ನು ಗೌರವ ಸೂಚಕವಾಗಿ ಸ್ಥಾಪಿಸಲಾಗಿದೆ. ಅವುಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಎರಡು ನಾಯಿಗಳ ವಿಗ್ರಹಗಳನ್ನು ಇರಿಸಲಾಗಿದೆ. ಒಂದು ವಿಗ್ರಹವು ಬಿಳಿ ಬಣ್ಣದ್ದಾಗಿದೆ ಮತ್ತು ಇನ್ನೊಂದು ಕಂದು ಬಣ್ಣದ್ದಾಗಿದೆ. ದಿನಾ ಹೂ ಹಾರ ಹಾಕಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು 2010 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ನಿರ್ಮಾಣದ ಹಿಂದೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ, ಆದರೆ ನಾಯಿಗಳ ಬಗ್ಗೆ ಮನುಷ್ಯನಿಗಿರುವ ನಿಷ್ಠೆಯನ್ನು ಇದು ಎತ್ತಿ ತೋರಿಸುತ್ತದೆ.
ಝಾನ್ಸಿ ರಾಣಿ ಅಂದರೆ ಝಾನ್ಸಿಯಲ್ಲಿ ಹೆಣ್ಣು ನಾಯಿಗೊಂದು ದೇವಸ್ಥಾನ ನಿರ್ಮಿಸಲಾಗಿದೆ. ಅದರ ಬಗ್ಗೆ ನೀವು ಅಷ್ಟೇನೂ ನೋಡಿಲ್ಲದಿರಬಹುದು ಅಥವಾ ಕೇಳಿಲ್ಲದಿರಬಹುದು. ಆದರೆ, ಝಾನ್ಸಿಯಿಂದ 65 ಕಿಮೀ ದೂರದಲ್ಲಿರುವ ಮೌರಾನಿಪುರ ಪಟ್ಟಣದ ರೇವನ್ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದ ಬಗ್ಗೆ ಕೇಳಿತಿಳಿದುಕೊಂಡರೆ ಯಾರಿಗೇ ಆಗಲಿ ಶಾಕ್ ಆಗಬಹುದು. ದೇವಸ್ಥಾನದಲ್ಲಿ ಹೆಣ್ಣು ನಾಯಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸ್ಥಳೀಯರು ಪ್ರತಿದಿನವೂ ಬಂದು ಪ್ರತಿಮೆಗೆ ನೀರಾಹಾರ ಅರ್ಪಿಸುತ್ತಾರೆ. ಈ ದೇವಸ್ಥಾನಕ್ಕೆ ಯಾರೇ ಬಂದರೂ ಈ ಶ್ವಾನ ಮೂರ್ತಿಯ ಮುಂದೆ ತಲೆ ಬಗ್ಗಿಸಿ ಹೋಗುತ್ತಾರೆ. ದೇವಾಲಯದಲ್ಲಿ ಸ್ಥಾಪಿಸಲಾದ ಹೆಣ್ಣು ನಾಯಿ ರಾಣಿಯನ್ನು ತಾಳ್ಮೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಝಾನ್ಸಿಯ ಮೌರಾನಿಪುರ ಪ್ರದೇಶದಲ್ಲಿ ರೇವಾನ್ ಮತ್ತು ಕಾಕ್ವಾರಾ ಗ್ರಾಮಗಳಿವೆ. ಈ ಎರಡು ಗ್ರಾಮಗಳ ಮಧ್ಯೆ ಶ್ವಾನ ದೇವಾಲಯವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಇದರ ಮೇಲೆ ನಾಯಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ನಾಯಿಯ ಪ್ರತಿಮೆ ಕಪ್ಪು ಬಣ್ಣದ್ದಾಗಿದೆ. ವೇದಿಕೆಯ ಕೆಲ ಜಾಗವನ್ನು ಮುಚ್ಚಲಾಗಿದೆ. ಇಲ್ಲಿ ಮಹಿಳೆಯರು ಬಂದು ಪೂಜೆ ಮಾಡುತ್ತಾರೆ. ಇಲ್ಲಿ ಹೆಣ್ಣು ನಾಯಿ ರಾಣಿಯ ಪೂಜೆಗೆ ಆ ಒಂದು ಘಟನೆ ಕಾರಣವಾಗಿದೆ. ಬಹಳ ಹಿಂದೆ ಈ ನಾಯಿ ಈ ಎರಡು ಗ್ರಾಮಗಳಲ್ಲಿ ವಾಸವಾಗಿತ್ತು. ಗ್ರಾಮದ ಯಾವುದೇ ಕಾರ್ಯಕ್ರಮದಲ್ಲಿ ಈ ನಾಯಿ ಆಹಾರಕ್ಕಾಗಿ ಕೈ ಚಾಚುತ್ತಿತ್ತು. ಜನರು ರಾಣಿಗೆ ಆಹಾರವನ್ನು ನೀಡುತ್ತಿದ್ದರು. ಒಮ್ಮೆ ಈ ನಾಯಿ ಈ ಎರಡು ಹಳ್ಳಿಗಳ ನಡುವೆ ಇತ್ತು.
ಈ ಮಧ್ಯೆ, ರೇವಾನ್ ಹಳ್ಳಿಯಿಂದ ರಾಮತುಳದ ಸದ್ದು (ಕಾರ್ಯಕ್ರಮವೊಂದರಲ್ಲಿ ಊಟ ಹಾಕುವ ಬಗ್ಗೆ ತಿಳಿಸಲು ಡಂಗೂರ ಸಾರುವ ಪದ್ಧತಿ) ಕೇಳಿಸಿತು. ಆ ಸದ್ದು ಜೋರಾಗಿದ್ದು, ಬಹು ದೂರಕ್ಕೆ ಕೇಳಿಸಿತ್ತು. ಆ ಶಬ್ದವು ರಾಣಿ ನಾಯಿಯ ಕಿವಿಗೂ ಬಿದ್ದು, ಆಹಾರಕ್ಕಾಗಿ ಅದು ರೇವಾನ್ ಹಳ್ಳಿಯತ್ತ ಧಾವಿಸಿತು. ಆದರೆ ಅಷ್ಟರೊಳಗೆ ಜನ ಮೊದಲ ಪಂಕ್ತಿ ಊಟಕ್ಕೆ ಕುಳಿತುಬಿಟ್ಟಿದ್ದರು. ಅದೇ ವೇಳೆಗೆ ಕಾಕ್ವಾರ ಗ್ರಾಮದಿಂದಲೂ ರಾಮತುಳ ಮೊಳಗುವ ಸದ್ದು ಕೇಳಿಸಿತು. ಅದನ್ನು ಅನತಿ ದೂರದಲ್ಲೇ ಆಲಿಸಿದ ನಾಯಿಯು ರೇವಾನ್ ಗ್ರಾಮದಿಂದ ಕಾಕ್ವಾರ ಗ್ರಾಮದ ಕಡೆಗೆ ಓಡಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಊಟ ಮುಗಿದಿತ್ತು. ಅದರ ದುಃಸ್ಥಿತಿ ನೋಡಿ ಗ್ರಾಮದ ಹಿರಿಯ ರಾಮ್ ಬಹದ್ದೂರ್ ಅವರು ನಾಯಿಯು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಹೇಳಿದರು. ಎರಡು ಊರುಗಳ ನಡುವೆ ಓಡಿ ಓಡಿ ಅದಕ್ಕೆ ಸುಸ್ತಾಗಿದೆ. ಅದಕ್ಕೇ ಊರಿನ ಮಧ್ಯೆ ಸುಸ್ತಾಗಿ ಮಲಗಿಬಿಟ್ಟಿದೆ ಎಂದು ಗ್ರಾಮಸ್ಥರ ಗಮನ ಸೆಳೆದರು. ಈ ಮಧ್ಯೆ, ಹಸಿವು ಮತ್ತು ಅನಾರೋಗ್ಯದಿಂದ ಊರುಗಳ ಮಧ್ಯದ ಜಾಗದಲ್ಲಿ ನಾಯಿಯು ಪ್ರಾಣ ಬಿಡುತ್ತಾಳೆ.
Also Read: Toe Rings – ವಿವಾಹಿತ ಮಹಿಳೆಯರು ಏಕೆ ಕಾಲುಂಗುರ ಧರಿಸುತ್ತಾರೆ ಗೊತ್ತಾ? ಅದಕ್ಕಿರುವ ಕಾಳಜಿ-ಕಾರಣವೇನು?
ಪರಿಸ್ಥಿತಿಯನ್ನು ಅರಿತ ಗ್ರಾಮಸ್ಥರು ಅದೇ ಸ್ಥಳದಲ್ಲಿ ನಾಯಿಯನ್ನು ಸಮಾಧಿ ಮಾಡಿದರು. ಈ ನಾಯಿಯನ್ನು ಹೂಳು ಮಾಡಲಾದ ಸ್ಥಳವು ಕಾಲಾಂತರದಲ್ಲಿ ಕಲ್ಲಾಗಿ ಮಾರ್ಪಟ್ಟಿತು ಎಂದು ಜನರು ಹೇಳುತ್ತಾರೆ. ಈ ಪವಾಡವನ್ನು ನೋಡಿದ ಜನರು ನಾಯಿಗಾಗಿ ಸಣ್ಣ ದೇವಾಲಯವನ್ನು ನಿರ್ಮಿಸಿದರು. ಜನರು ಈ ದೇವಾಲಯವನ್ನು ನಾಯಿ ದೇವತೆ ಎಂದು ಪೂಜಿಸುತ್ತಾರೆ.
ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಖಾಪ್ರಿ ಗ್ರಾಮದಲ್ಲಿರುವ ‘ಕುಕುರ್‌ದೇವ್’ ದೇವಾಲಯವು ಯಾವುದೇ ದೇವರುಗಳಿಗೆ ಮೀಸಲಾಗಿಲ್ಲ ಬದಲಿಗೆ ನಾಯಿಗೆ ಮೀಸಲಾಗಿದೆ. ಮಾಹಿತಿಯ ಪ್ರಕಾರ, ಈ ದೇವಾಲಯವನ್ನು 14 ರಿಂದ 15 ನೇ ಶತಮಾನದ ನಡುವೆ ಫಣಿ ನಾಗವಂಶಿ ಅರಸರು ನಿರ್ಮಿಸಿದ್ದಾರೆ. ಅದರ ಜೊತೆಗೆ ಶಿವಲಿಂಗ ಇತ್ಯಾದಿ ವಿಗ್ರಹಗಳಿದ್ದರೂ, ಇಲ್ಲಿ ನಾಯಿಗೆ ಪ್ರಾಶಸ್ತ್ಯವಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ನಾಯಿ ಕೆಮ್ಮು ಮತ್ತು ನಾಯಿ ಕಡಿತದ ಭಯವಿಲ್ಲ ಎಂಬ ನಂಬಿಕೆಯಿದೆ.
ದೇವಾಲಯದ ಇತಿಹಾಸ: 14-15 ನೇ ಶತಮಾನದ ನಡುವೆ ನಿರ್ಮಿಸಲಾದ ಈ ದೇವಾಲಯವು ಬಹಳ ವಿಶಿಷ್ಟವಾಗಿದೆ. ಇಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ನಾಯಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಮತ್ತು ಅದರ ಪಕ್ಕದಲ್ಲಿ ಶಿವಲಿಂಗವೂ ಇದೆ. ಕುಕುರ್ ದೇವ್ ದೇವಸ್ಥಾನವು ವಿಶಾಲ ಜಾಗದಲ್ಲಿ ಹರಡಿದೆ. ದೇವಾಲಯದ ಪ್ರವೇಶ ದ್ವಾರದ ಕಮಾನಿನಲ್ಲಿ ಎರಡೂ ಕಡೆ ನಾಯಿಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯ ಶಿವನ ದೇವಾಲಯಗಳಲ್ಲಿ ನಂದಿಯನ್ನು ಪೂಜಿಸುವ ರೀತಿಯಲ್ಲಿಯೇ ಜನರು ಶಿವನ ಜೊತೆಗೆ ಕುಕುರ್ ದೇವನನ್ನು ಪೂಜಿಸುತ್ತಾರೆ. ದೇವಾಲಯದ ಗುಮ್ಮಟದ ನಾಲ್ಕು ದಿಕ್ಕುಗಳಲ್ಲಿಯೂ ಸರ್ಪಗಳ ಚಿತ್ರಗಳಿವೆ. ದೇವಾಲಯದ ಸುತ್ತಲೂ ಅದೇ ಕಾಲದ ಶಾಸನಗಳನ್ನು ಇರಿಸಲಾಗಿದೆ.
ಇನ್ನಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Fri, 9 August 24