ಸಾಂದರ್ಭಿಕ ಚಿತ್ರ
ಹಿಂದೂ ಪುರಾಣಗಳಲ್ಲಿ ಪೂಜಿಸುವ ನಾಗ ಅಥವಾ ಹಾವುಗಳಿಗೆ ಸಂಪೂರ್ಣವಾಗಿ ಸಮರ್ಪಿಸಲಾಗಿರುವ ಹಬ್ಬವೇ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಈ ಬಾರಿ ಆಗಸ್ಟ್ 9 ರಂದು ನಾಗರ ಪಂಚಮಿ ಹಬ್ಬ ಬಂದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ನಾಗದೇವರು ಎಂದ ಕೂಡಲೇ ಭಕ್ತಿ ಭಾವಗಳು ಹೇಗೆ ಉಕ್ಕಿ ಬರುತ್ತದೆಯೋ ಜೀವಂತ ಹಾವುಗಳನ್ನು ಕಂಡರೆ ಅಷ್ಟೇ ಭಯವಾಗುತ್ತದೆ. ಆದರೆ ಈ ಭಾಗದ ಜನರು ಹಾವುಗಳನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ.
- ಮಹಾರಾಷ್ಟ್ರದ ಪುಣೆಯಿಂದ 200 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ ಎಲ್ಲೆಲ್ಲೂ ಹಾವುಗಳದ್ದೇ ರಾಶಿ. ಈ ಹಳ್ಳಿಯ ಹೆಸರು ಸೋಲಾಪುರ ಜಿಲ್ಲೆಯಲ್ಲಿ ಶೇಟ್ಪಾಲ್. ಇಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಹಾವುಗಳನ್ನು ನೋಡಬಹುದು. ಶಾಲೆಯಲ್ಲಿ ಹಾವುಗಳು ಅತ್ತಿಂದ ಇತ್ತ ಓಡಾಡುತ್ತವೆ. ದೊಡ್ಡವರಿಂದ ಹಿಡಿದು ಮಕ್ಕಳು ಕೂಡ ಹಾವುಗಳಿಗೆ ಭಯ ಪಡುವುದೇ ಇಲ್ಲ. ಒಂದು ವೇಳೆ ಈ ಹಳ್ಳಿಯಲ್ಲಿ ಹೊಸ ಮನೆಯನ್ನೇದಾರೂ ಕಟ್ಟಿದರೆ ಹಾವುಗಳಿಗಾಗಿ ಒಂದು ಮೂಲೆಯಲ್ಲಿ ಸ್ಥಳವಕಾಶವನ್ನು ಮಾಡಬೇಕಂತೆ. ಆ ಮೂಲೆಯು ಮನೆಯ ಜನರಿಗೆ ದೇವಸ್ಥಾನವಿದ್ದಂತೆ ಎನ್ನಲಾಗಿದೆ.
- ಬಿಹಾರದ ಸಮಸ್ತಿಪುರದಿಂದ 23 ಕಿ.ಮೀ ದೂರದಲ್ಲಿ ಸಿಂಧಿಯಾ ಘಾಟ್ ನಲ್ಲಿ ವಾಸಿಸುವ ಜನರಿಗೆ ಹಾವಿನ ಬಗ್ಗೆ ಯಾವುದೇ ಭಯವಿಲ್ಲ. ಮಕ್ಕಳು ಕೂಡ ಹಾವನ್ನು ಸಲೀಸಾಗಿ ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಆಟ ಆಡುವ ವೇಳೆಯಲ್ಲಿ ಹಾವು ಮಕ್ಕಳನ್ನು ಕಚ್ಚಿದರೆ ವಿಷವು ದೇಹಕ್ಕೆ ಏರುವುದೇ ಇಲ್ಲ, ಸಾವು ಸಂಭವಿಸುವುದೇ ಇಲ್ಲವಂತೆ.
- ಛತ್ತೀಸ್ ಗಢದ ರಾಜಧಾನಿ ರಾಯ್ ಪುರ್ ಬಳಿಯ ದಿಘಾರಿ ಗ್ರಾಮದಲ್ಲಿ, ಹಾವುಗಳು ಮತ್ತು ಮಾನವರ ನಡುವೆ ಅಗಾಧವಾದ ಸಂಬಂಧವಿದೆ. ಆದರೆ ಈ ಗ್ರಾಮದಲ್ಲಿ ಹಾವುಗಳು ಯಾರನ್ನೂ ಕಚ್ಚುವುದಿಲ್ಲ. ಹಳ್ಳಿಯ ಹೊರಗಿನ ವ್ಯಕ್ತಿಗೆ ಹಾವು ಕಚ್ಚಿದರೆ, ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು ಹಾವಿನ ವಿಷ ಇಳಿದು ಹೋಗುತ್ತದೆಯಂತೆ.
- ಉತ್ತರಾಖಂಡದ ಜೌನ್ಸರ್ ಬಾವರ್ ಎಂಬ ಹಳ್ಳಿಯ ಜನರಿಗೆ ಏನಾದರೂ ಹಾವು ಕಚ್ಚಿದರೆ ಚಿಕಿತ್ಸೆ ನೀಡಬೇಕಾಗಿಯೇ ಇಲ್ಲ. ಈ ಗ್ರಾಮದ ಜನರಿಗೆ ನಾಗದೇವರ ಆಶೀರ್ವಾದವಿದ್ದು, ಹಾವು ಕಚ್ಚಿದ ತಕ್ಷಣವೇ ಆ ವ್ಯಕ್ತಿಯು ನಾಗರಹಾವನ್ನು ನೆನಪಿಸಿಕೊಂಡ ತಕ್ಷಣವೇ ದೇಹದಿಂದ ವಿಷವು ಹೊರಗೆ ಬರುತ್ತದೆ ಎನ್ನಲಾಗಿದೆ.
- ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಶಂಕರಗಢ ಎಂಬ ಹಳ್ಳಿಯಲ್ಲಿ ಹಾವುಗಳನ್ನು ಹೊಂದಿರುವುದೇ ಘನತೆಯ ಪ್ರಶ್ನೆಯಂತೆ. ಈ ಹಳ್ಳಿಯ ಜನರು ಯಾರು ಹೆಚ್ಚು ಹಾವುಗಳನ್ನು ಹೊಂದಿರುತ್ತಾರೆಯೋ ಅವರಿಗೆ ಇಲ್ಲಿ ಗೌರವ ಹಾಗೂ ಸ್ಥಾನಮಾನವನ್ನು ಹೊಂದಿರುತ್ತಾರೆ. ಇಲ್ಲಿ ಹಾವುಗಳನ್ನು ಮನೆಯ ಸದಸ್ಯರಂತೆ ನೋಡಿ ಕೊಳ್ಳುವುದಲ್ಲದೇ, ಮಕ್ಕಳು ಆಟಿಕೆಯಂತೆ ಹಾವುಗಳೊಂದಿಗೆ ಆಡುವುದನ್ನು ಕಾಣಬಹುದಾಗಿದೆ.