ಕರ್ನಾಟಕದಲ್ಲಿ ಪ್ರಸಿದ್ಧ ದೇವಾಲಯಗಳಿದ್ದು ಅದ್ದರಲ್ಲಿಯೂ ಪವಾಡಗಳು ನಡೆಯುವ ಹಲವಾರು ದೇವಸ್ಥಾನಗಳನ್ನು ನಾವು ಕಾಣಬಹುದಾಗಿದೆ. ಅದೇ ರೀತಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿಯಲ್ಲಿರುವ ಮತ್ತಿತಾಳೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾದುದು. ಇಲ್ಲಿನ ವಿಶೇಷತೆ ಏನು? ಸಾವಿರಾರು ಜನ ಯಾವ ಕಾರಣಕ್ಕೆ ಇಲ್ಲಿಗೆ ಭೇಟಿ ನೀಡುತ್ತಾರೆ? ತಿಳಿದುಕೊಳ್ಳಿ.
ಕರ್ನಾಟಕದಲ್ಲಿ ನಾಗರ ಪಂಚಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದೇ ರೀತಿ ಮಂಡ್ಯದ ಈ ಮತ್ತಿತಾಳೇಶ್ವರ ದೇವಸ್ಥಾನದಲ್ಲಿಯೂ ಕೂಡ ಈ ಹಬ್ಬವನ್ನು ಉತ್ಸಾಹದಿಂದ ಆಚರಣೆ ಮಾಡಲಾಗುತ್ತದೆ ಆದರೆ ಇಲ್ಲಿನ ವಿಶೇಷತೆ ಏನು ಗೊತ್ತಾ?
ಈ ದೇವಸ್ಥಾನವು ಮತ್ತಿ ಮರದ ಕೆಳಗೆ ಇರುವುದರಿಂದ ಈ ಸ್ಥಳಕ್ಕೆ 'ಮತ್ತಿತ್ತಲೇಶ್ವರ' ಅಥವಾ ಮತ್ತಿತಾಳೇಶ್ವರ ಎಂದು ಹೆಸರು ಬಂದಿದೆ. ಇಲ್ಲಿ ದೇವರ ಸುತ್ತ ಹುತ್ತವಿದ್ದು ಆ ಮಣ್ಣು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಎಲ್ಲಾ ರೀತಿಯ ಚರ್ಮ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಇದು ಒಳಗೊಂಡಿದೆ.
ಈ ದೇವಸ್ಥಾನದಲ್ಲಿ ನಾಗರ ಪಂಚಮಿಯ ಹೊರತಾಗಿ ಪ್ರತಿ ಭಾನುವಾರ ಮತ್ತು ಗುರುವಾರ ವಿಶೇಷ ಪೂಜೆ ನಡೆಯುತ್ತದೆ. ಚರ್ಮ ರೋಗಗಳಿಂದ ಬಳಲುತ್ತಿರುವವರು ಇಲ್ಲಿಗೆ ಬರುತ್ತಾರೆ. ನಂತರ ಪುರೋಹಿತರು ನೀಡುವ ದೇವರ ಮಣ್ಣನ್ನು ತೆಗೆದುಕೊಂಡು ಯಾವುದೇ ರೀತಿಯ ಚರ್ಮ ರೋಗವಿದ್ದರೂ ಆ ಜಾಗಕ್ಕೆ ಹಚ್ಚುವುದರಿಂದ ಇದು ಗುಣವಾಗುತ್ತವೆ ಎಂಬ ನಂಬಿಕೆ ಇದೆ.
ಈ ದೇವಸ್ಥಾನವೂ ಬೆಂಗಳೂರಿನಿಂದ ನೂರು ಕಿ.ಮೀ., ಮೈಸೂರಿನಿಂದ ಅರವತ್ತು ಹಾಗೂ ಮಂಡ್ಯದಿಂದ ಐವತ್ತು, ಮಳವಳ್ಳಿಯಿಂದ ಹತ್ತು ಕಿ. ಮೀ. ದೂರದಲ್ಲಿದೆ. ಇಲ್ಲಿಗೆ ಹೋಗುವವರು ಭಾನುವಾರ ಅಥವಾ ಗುರುವಾರ ಭೇಟಿ ನೀಡುವುದು ಒಳ್ಳೆಯದು.