Ganesh Chaturthi 2022: ಐಕ್ಯತೆಯ ದ್ಯೋತಕ ಈ ಗಣೇಶ ಹಬ್ಬ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 31, 2022 | 11:33 AM

ಲೋಕ ವಿಖ್ಯಾತನಾದ ಗಣಪನ ಹಬ್ಬ ಗಣೇಶ ಚತುರ್ಥಿ ವೈಭವದ ಇತಿಹಾಸವನ್ನು ಹೊಂದಿದೆ. ಛತ್ರಪತಿ ಶಿವಾಜಿ ಮಹಾರಾಜರು ಪುಣೆಯಲ್ಲಿ ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಮುಂದಡಿ ಇಟ್ಟರು. ಶಿವಾಜಿ ಹಬ್ಬದ ಮೂಲಕ ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸುತ್ತಿದ್ದರು.

Ganesh Chaturthi 2022:  ಐಕ್ಯತೆಯ ದ್ಯೋತಕ ಈ ಗಣೇಶ ಹಬ್ಬ
Ganesh Chaturthi 2022
Follow us on

ಹಿಂದೂ ಧರ್ಮದ ನಂಬಿಕೆಯಂತೆ ಆಚಾರವಿಚಾರಗಳ ಆದಿಯಲ್ಲಿ ಗಣಪತಿಯನ್ನು ಆರಾಧಿಸಿದರೆ ನಮ್ಮ ಸಂಕಲ್ಪವು ಈಡೇರುವುದು. ಇಲ್ಲವಾದಲ್ಲಿ ಗಣಪತಿ ವಿಘ್ನವುಂಟು ಮಾಡುತ್ತಾನೆ ಎಂಬ ತಾತ್ಪರ್ಯವಿದೆ. ಆದರೆ ಗಣಪ ವಿಘ್ನವಿನಾಶಕನಷ್ಟೇ ಅಲ್ಲ, ವಿದ್ಯಾಧರಾದಿಯೂ ಹೌದು, ಬುದ್ಧಿಯ ಅಧಿದೇವತೆಯೂ ಹೌದು. ಅವನನ್ನು ವೈದಿಕ ಮಂತ್ರಗಳಲ್ಲಿ “ಕವಿಂ ಕವೀನಾಂ” ಎಂದು ಉಲ್ಲೇಖಿಸುತ್ತಾರೆ. ಮಹಾಭಾರತದ ಬರವಣಿಗೆಯಲ್ಲಿ ಗಣಪತಿಯು ಬುದ್ಧಿ ಕೌಶಲವನ್ನು ಅದ್ವಿತೀಯವಾಗಿ ಬಳಸಿದ್ದಾನೆ. ಹೀಗೆ ಅನೇಕ ರೀತಿಯಲ್ಲಿ ಆತ ಹೆಸರುವಾಸಿಯಾಗಿದ್ದಾನೆ.

ಲೋಕ ವಿಖ್ಯಾತನಾದ ಗಣಪನ ಹಬ್ಬ ಗಣೇಶ ಚತುರ್ಥಿ ವೈಭವದ ಇತಿಹಾಸವನ್ನು ಹೊಂದಿದೆ. ಛತ್ರಪತಿ ಶಿವಾಜಿ ಮಹಾರಾಜರು ಪುಣೆಯಲ್ಲಿ ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಮುಂದಡಿ ಇಟ್ಟರು. ಶಿವಾಜಿ ಹಬ್ಬದ ಮೂಲಕ ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸುತ್ತಿದ್ದರು. ಶಿವಾಜಿಯ ನಂತರ ಪೇಶ್ವೆಗಳು ಈ ಪದ್ಧತಿಯನ್ನು ಮುಂದುವರೆಸಿದರು. ಪೇಶ್ವೆಗಳ ಅವಸಾನದ ನಂತರ ಹಬ್ಬವು ಕುಟುಂಬಕ್ಕೆ ಮಾತ್ರ ಸೀಮಿತವಾಯಿತು.

ಭಾರತ ಬ್ರಿಟೀಷರ ಕಪಿಮುಷ್ಠಿಯೊಳಗಿದ್ದಾಗ ಭಾರತೀಯರಲ್ಲಿ ಒಗ್ಗಟ್ಟು ಬರಿಯ ಮಾತಾಗಿತ್ತು, ಸ್ವಾತಂತ್ರ್ಯ ಕೇವಲ ಕನಸಾಗಿತ್ತು. ಜನರ ನಡುವಿನ ಕ್ಷುಲಕ ಕಾರಣಗಳ ಸಂಘರ್ಷವನ್ನು ತೊಡೆದು, ಐಕ್ಯತೆಯನ್ನು ಒಡಮೂಡಿಸಲು, ಗಣೇಶ ಹಬ್ಬವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವ ಪರಿಕಲ್ಪನೆಯನ್ನು ಬಾಲಗಂಗಾಧರ ತಿಲಕರು ತಮ್ಮ ಕೇಸರಿ ಪತ್ರಿಕೆಯಲ್ಲಿ ಕುರಿತು ಬರೆದಿದ್ದರು. ಸಾಮೂಹಿಕವಾಗಿ “ದೇವರು ಸರ್ವರಿಗೂ ಸೇರಿದವನು” ಎಂದು ಕರೆ ನೀಡಿದ್ದರು. ಚದುರಿ ಹೋಗಿದ್ದ ಅಂದಿನ ಸಮಾಜವು ತಿಲಕರ ಕರೆಗೆ ಸ್ಪಂದಿಸಿತು.‌ ಜಾತಿ ಧರ್ಮಗಳ ಭೇದ ಬಿಟ್ಟು ಒಂದೇ ವೇದಿಕೆಯಡಿ ಏಕೀಕರಣಗೊಂಡಿತು. ತಿಲಕರ ನೇತೃತ್ವದಲ್ಲಿ 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭವಾಯಿತು.

ಗಣೇಶ ಹಬ್ಬದ ಮುಖೇನ ಯುವಕರಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಹೊತ್ತಿಸಿ, ಸ್ವಾತಂತ್ರ್ಯ ಯಜ್ಞದ ಜ್ವಾಲೆಯನ್ನು ಧಗಧಗಿಸುವಂತೆ ಮಾಡಲಾಯಿತು.‌ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು. ಭಾರತೀಯರು ಒಂದಾದರೆ ತಮ್ಮಗಿಲ್ಲಿ ಉಳಿಗಾಲವಿಲ್ಲ ಎಂದು ಬ್ರಿಟೀಷರು ಮನಗಂಡರು. ಹಬ್ಬದ ತಡೆಗಾಗಿ ಅನೇಕ ನಿರ್ಬಂಧಗಳನ್ನು ಹೇರಿದರು. ಆದ್ಯಾಗಿಯೂ ಹಬ್ಬವು ಸಾಂಗವಾಗಿ ನಡೆಯುತ್ತಿತ್ತು; ಗುರಿಯನ್ನು ಸಾಧಿಸುತ್ತಿತ್ತು.

ಐಕ್ಯತೆಯನ್ನು ಬೆಸೆಯಲು ಹಾಗೂ ಬ್ರಿಟೀಷರಲ್ಲಿ ನಡುಕ ಹುಟ್ಟಿಸಲು ಹೇತುವಾದ ಗಣೇಶ ಚತುರ್ಥಿಯು ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು. ಅಂದಿನಂತೆ ಇಂದೂ ಕೂಡಾ ಹಬ್ಬದ ಆಚರಣೆಯನ್ನು ವಿರೋಧಿಸಿ ಹಲವಾರು ಕೂಗುಗಳು ಕೇಳುತ್ತಲೇ ಇದೆ.‌ ಆದರೆ ಗಣಪನು ಭಕ್ತರ ಅಭೀಷ್ಟವನ್ನು ನೆರವೇರಿಸದೇ ಇದ್ದಾನೆಯೇ!?

ಪಂಚಮಿ ಬಾಕಿಲಪದವು