Ganesh Chaturthi 2022: ದೇವಿ ಪಾರ್ವತಿಯ ಅಂಗರಾಗದಿಂದ ಹುಟ್ಟಿದ ಗಣೇಶ ಗಜಾನನ ಆಗಿದ್ದೇಗೆ?
'ಗಜ' ಎಂದರೆ ಆನೆ. ಆನನ ಎಂದರೆ ಮುಖ ಎಂದರ್ಥ. ಆನೆಯಂತೆ ಮುಖವನ್ನು ಹೊಂದಿರುವ ಕಾರಣ ಗಜಾನನ ಎಂಬ ಹೆಸರು ಗಣಪತಿಗೆ ಬಂತು. ಆನೆ ಮತ್ತು ಮುಖ ಎಂಬ ಶಬ್ದಗಳಿಗೆ ಸಮಾನಾರ್ಥಕವಾದ ಹಲವು ಶಬ್ದಗಳನ್ನು ಸೇರಿಸಿ ಗಜಮುಖ, ಗಜವದನ, ಗಜವಕ್ತ್ರ, ಕರಿವದನ, ಕರಿಮುಖ, ಇಭವಕ್ತ್ರ, ದ್ವಿಪವದನ ಇತ್ಯಾದಿಯಾಗಿ ಹಲವಾರು ಹೆಸರುಗಳಿಂದ ಸ್ತುತಿಸುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಶುಸರ್ವದಾ
ಹಿಂದೂ ಸಂಪ್ರಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆ ಹಾಗೂ ಧಾರ್ಮಿಕ ಸಂಪ್ರದಾಯ ಹೊಂದಿವೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಅತ್ಯಂತ ಪ್ರಮುಖವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಗೌರಿ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆಯಿದ್ದು, ಗೌರಿಯನ್ನು ಭೂಮಿಯಲ್ಲಿ ಸ್ವಾಗತಿಸಲು ಗಣೇಶ ಬರುತ್ತಾನೆಂಬ ಪ್ರತೀತಿಯಿದೆ. ಗಣೇಶ ಚತುರ್ಥಿ ಗಣೇಶನ ಹುಟ್ಟಿದ ದಿನ.
ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ, ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ ಕೆಲಸದ ಪ್ರಾರಂಭದ ಮೊದಲು ಗಣಪತಿಯ ಸ್ತುತಿ ಹಾಗೂ ಆರಾಧನೆ ಪ್ರಥಮವಾಗುತ್ತದೆ.
ಇದರ ಪ್ರಯುಕ್ತ ವಿವಿಧ ಪ್ರಕಾರದ, ಆಕಾರದ ಹಾಗೂ ಆಕರ್ಷಕ ಗಣೇಶನ ಮೂರ್ತಿಗಳನ್ನು ಪೂಜಿಸಲು ತಯಾರಿಸಿ ಮಾಡಲಾಗುವುದು. ಕೆರೆಯ ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಎಲೆ, ಹೂವು, ಬಾಳೆ ಕಂಬದಿಂದ ಅಲಂಕೃತವಾದ ಮಂಟಪದಲ್ಲಿ ಇರಿಸಿ, ಮೋದಕ, ಕಡುಬು ಮುಂತಾದ ಭಕ್ಷ್ಯ ಭೋಜ್ಯಗಳನ್ನು ಅರ್ಪಿಸಿ ಭಕ್ತಿಭಾವದಿಂದ ಪೂಜಿಸುವುದು ಇದರ ಪರಂಪರೆ.
ಗಣಪನನ್ನು ಗಜಾನನ ಎನ್ನುವುದೇಕೆ?
‘ಗಜ’ ಎಂದರೆ ಆನೆ. ಆನನ ಎಂದರೆ ಮುಖ ಎಂದರ್ಥ. ಆನೆಯಂತೆ ಮುಖವನ್ನು ಹೊಂದಿರುವ ಕಾರಣ ಗಜಾನನ ಎಂಬ ಹೆಸರು ಗಣಪತಿಗೆ ಬಂತು. ಆನೆ ಮತ್ತು ಮುಖ ಎಂಬ ಶಬ್ದಗಳಿಗೆ ಸಮಾನಾರ್ಥಕವಾದ ಹಲವು ಶಬ್ದಗಳನ್ನು ಸೇರಿಸಿ ಗಜಮುಖ, ಗಜವದನ, ಗಜವಕ್ತ್ರ, ಕರಿವದನ, ಕರಿಮುಖ, ಇಭವಕ್ತ್ರ, ದ್ವಿಪವದನ ಇತ್ಯಾದಿಯಾಗಿ ಹಲವಾರು ಹೆಸರುಗಳಿಂದ ಸ್ತುತಿಸುತ್ತಾರೆ. ಅಲ್ಲದೇ ಆನೆಯ ಕಿವಿ ಇರುವ ಕಾರಣ ಗಜಕರ್ಣಕ ಎಂದೂ ಮೊರದಂತಹ ಕಿವಿಯಿರುವ ಕಾರಣ ಶೂರ್ಪಕರ್ಣನೆಂದೂ ಗಣೇಶನ ನಾಮಾಂತರಗಳು. ಗಜಾನನ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಪುರಾಣಗಳಲ್ಲಿ ಹಲವಾರು ಕಥಾನಕಗಳನ್ನು ಕಾಣಬಹುದು.
ಒಮ್ಮೆ ಪಾರ್ವತಿಯು ಮೈಗೆ ಲೇಪಿಸಿಕೊಂಡ ಅಂಗರಾಗದಿಂದ ಒಂದು ಬಾಲಕನ ಮೂರ್ತಿಯನ್ನು ಮಾಡಿ ಅದರಲ್ಲಿ ಜೀವಕಳೆಯನ್ನು ತುಂಬಿದಳು. ಸ್ನಾನಕ್ಕೆ ಹೋಗುವಾಗ ಯಾರಿಗೂ ಒಳಕ್ಕೆ ಬರಲು ಬಿಡಬಾರದೆಂದು ಕಾವಲಿಗೆ ಆತನನ್ನು ನೇಮಿಸಿ ಹೋದಳು. ಆಗ ಅಲ್ಲಿಗೆ ಬಂದ ಪರಶಿವನಿಗೂ ಬಾಲಕನಿಗೂ ಕಲಹವುಂಟಾಗಿ ಕೊನೆಗೆ ಭಯಂಕರ ಯುದ್ಧವೇ ಆಗಿ ಶಿವನು ಆ ಬಾಲಕನ ತಲೆಯನ್ನು ಕಡಿದುಬಿಟ್ಟನು. ಮಗನ ಶಿರಚ್ಛೇದದಿಂದ ಕೋಪಗೊಂಡ ಪಾರ್ವತಿಯನ್ನು ಶಾಂತಗೊಳಿಸಲು ಶಿವನು ಉತ್ತರದಿಕ್ಕಿಗೆ ತಲೆ ಮಾಡಿ ಮಲಗಿದ್ದ ಆನೆಯ ತಲೆಯನ್ನು ತಂದು ಆ ಬಾಲಕನ್ನು ಪುನರ್ಜೀವಗೊಳಿಸಿದನು. ಹೀಗೆ ಆತನಿಗೆ ಆನೆಯ ಮುಖ ಪ್ರಾಪ್ತವಾಯಿತು. ಪಾರ್ವತಿಯು ಅಂಗರಾಗದಿಂದ ಮೂರ್ತಿಯನ್ನು ಮಾಡಿದ ಈ ಕಥಾನಕವಂತೂ ವಿಶ್ವಪ್ರಸಿದ್ಧವಾದುದೇ ಆಗಿದೆ.