Ganesh Chaturthi 2022: ಇಂದು ಗಣೇಶ ಚತುರ್ಥಿ; ಪೂಜಾ ಸಮಯ, ವಿಧಾನ, ನಿಯಮಗಳ ಮಾಹಿತಿ ಇಲ್ಲಿದೆ
ಹಿಂದೂ ಕ್ಯಾಲೆಂಡರ್ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಇಂದು (ಆಗಸ್ಟ್ 31) ಆಚರಿಸಲಾಗುತ್ತಿದೆ.
ಇಂದು ದೇಶಾದ್ಯಂತ ಗಣೇಶ ಚತುರ್ಥಿಯನ್ನು (Ganesh Chaturthi) ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿ ಹಬ್ಬವನ್ನು ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದು ಕರೆಯಲ್ಪಡುವ ಭಗವಾನ್ ಗಣೇಶನನ್ನು ಎಲ್ಲಾ ಹಿಂದೂ ದೇವರುಗಳು ಮತ್ತು ದೇವತೆಗಳಲ್ಲಿ ಮೊದಲ ಆದ್ಯತೆಯಾಗಿ ಪೂಜಿಸಲಾಗುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯನ್ನು ಇಂದು (ಆಗಸ್ಟ್ 31) ಆಚರಿಸಲಾಗುತ್ತಿದೆ. 10 ದಿನಗಳ ಗಣೇಶ ಚತುರ್ಥಿ ಆಚರಣೆಯು ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ.
ದಿನಾಂಕ ಮತ್ತು ಶುಭ ಮುಹೂರ್ತ: ಗಣೇಶ ಚತುರ್ಥಿ ಇಂದು (ಆಗಸ್ಟ್ 31) ಆರಂಭವಾಗುತ್ತದೆ. ಇಂದು ಗಣಪತಿಯ ಪೂಜೆಯ ಮುಹೂರ್ತವು ಬೆಳಿಗ್ಗೆ 10.21ರಿಂದ ಮಧ್ಯಾಹ್ನ 12.52ರವರೆಗೆ ಇರುತ್ತದೆ. ಚತುರ್ಥಿ ತಿಥಿ ಮಂಗಳವಾರ ಮಧ್ಯಾಹ್ನ 3.33ಕ್ಕೆ ಆರಂಭವಾಗಿ ಬುಧವಾರ ಮಧ್ಯಾಹ್ನ 3.22ಕ್ಕೆ ಮುಕ್ತಾಯವಾಗಲಿದೆ. ಶುಕ್ರವಾರ (ಸೆಪ್ಟೆಂಬರ್ 9) ಗಣೇಶನ ವಿಸರ್ಜನೆ ನಡೆಯಲಿದೆ.
ಇದನ್ನೂ ಓದಿ: Ganesh Chaturthi 2022: ಗಣಪತಿಗೆ ನಿಜವಾಗಲೂ ಮದುವೆಯಾಗಿತ್ತಾ?; ರಿದ್ಧಿ, ಸಿದ್ಧಿ ಬಗ್ಗೆ ನಿಮಗೆಷ್ಟು ಗೊತ್ತು?
ಗಣೇಶ ಚತುರ್ಥಿಯ ಮಹತ್ವ: ಗಣೇಶ ಚತುರ್ಥಿಯಂದು ಭಗವಾನ್ ಗಣೇಶನನ್ನು ಪೂಜಿಸುವುದರಿಂದ ಜ್ಞಾನ ಮತ್ತು ಬುದ್ಧಿವಂತಿಕೆ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಗಣೇಶನನ್ನು ಪ್ರಾರ್ಥಿಸುವುದರಿಂದ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ, ಅದಕ್ಕಾಗಿಯೇ ಗಣಪತಿಯನ್ನು ವಿಘ್ನನಿವಾರಕ ಮತ್ತು ವಿಘ್ನೇಶ್ವರ ಎಂದೂ ಕರೆಯಲಾಗುತ್ತದೆ.
ಆಚರಣೆಗಳು: ಗಣೇಶ ಚತುರ್ಥಿ ನಾಲ್ಕು ಪ್ರಮುಖ ಆಚರಣೆಗಳನ್ನು ಹೊಂದಿದೆ. ಅವುಗಳೆಂದರೆ, ಪ್ರಾಣಪ್ರತಿಷ್ಠೆ, ಷೋಡಶೋಪಚಾರ, ಉತ್ತರಪೂಜೆ ಮತ್ತು ವಿಸರ್ಜನ ಪೂಜೆ. ಚತುರ್ಥಿಯ ದಿನದಂದು ಪೂಜಾ ಮಂಟಪಗಳು, ಮನೆಗಳು, ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸುಂದರವಾಗಿ ಅಲಂಕರಿಸಿದ ಗಣೇಶನ ಮೂರ್ತಿಗಳನ್ನು ಇರಿಸಲಾಗುತ್ತದೆ. ವಿಗ್ರಹವನ್ನು ಹೂವುಗಳು ಮತ್ತು ಮಾಲೆಗಳಿಂದ ಅಲಂಕರಿಸಲಾಗುತ್ತದೆ.
ಪ್ರಾಣಪ್ರತಿಷ್ಠಾ ಆಚರಣೆಯನ್ನು ಪುರೋಹಿತರು ಮಂತ್ರವನ್ನು ಪಠಿಸುವ ಮೂಲಕ ಮಾಡುತ್ತಾರೆ. ನಂತರ 16 ವಿವಿಧ ಆಚರಣೆಗಳನ್ನು ನಡೆಸಲಾಗುತ್ತದೆ. ಇದನ್ನು ಷೋಡಶೋಪಚಾರ ಪೂಜೆ ಎಂದು ಕರೆಯಲಾಗುತ್ತದೆ. ಗಣಪತಿಯ ಮೆಚ್ಚಿನ ಸಿಹಿ ತಿಂಡಿಯಾಗಿರುವ ಮೋದಕವನ್ನು ನೈವೇದ್ಯವಾಗಿ ನೀಡಲಾಗುತ್ತದೆ. ಪೂಜೆಯ ಸಮಯದಲ್ಲಿ ಗಣೇಶನಿಗೆ ಮೋದಕ ಮತ್ತು ಇತರ ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ಅರ್ಪಿಸಲಾಗುತ್ತದೆ.
ಇದನ್ನೂ ಓದಿ: ಗಣೇಶ ಚತುರ್ಥಿಗೆ ಬಿಬಿಎಂಪಿಯಿಂದ ಹಲವು ನಿಯಮಗಳು ಜಾರಿ; ಉಲ್ಲಂಘಿಸಿದವರ ವಿರುದ್ಧ ಕ್ರಮ: ಕಮಿಷನರ್ ತುಷಾರ್ ಗಿರಿನಾಥ್
ಗಣೇಶ ಚತುರ್ಥಿಯನ್ನು ಧಾರ್ಮಿಕ ಸ್ತೋತ್ರಗಳನ್ನು ಹಾಡುವುದು ಮತ್ತು ನುಡಿಸುವುದು, ಡ್ರಮ್ ಬೀಟ್‌ಗಳಿಗೆ ನೃತ್ಯ ಮಾಡುವುದು ಮತ್ತು ರುಚಿಕರವಾದ ಭೋಜನವನ್ನು ತಯಾರಿಸುವ ಮೂಲಕ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ಮೂರನೇ ಮುಖ್ಯ ಆಚರಣೆಯೆಂದರೆ ಉತ್ತರಪೂಜೆ – ಇದು ಗಣೇಶನಿಗೆ ವಿದಾಯ ಹೇಳುವುದು. ಅದಾದ ನಂತರ ಮೆರವಣಿಗೆ ಮೂಲಕ ಸಾಗಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು.