ಇಂದು ಗಂಗಾ ಸಪ್ತಮಿ ಇದರ ಮಹತ್ವವೇನು ಗೊತ್ತಾ? ಈ ದಿನವನ್ನು ಗಂಗೆಯ ಪುನರ್ಜನ್ಮವೆನ್ನುವುದೇಕೆ?

| Updated By: ಆಯೇಷಾ ಬಾನು

Updated on: May 08, 2022 | 4:54 PM

ಗಂಗೆಯು ಜಹ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ಜಾಹ್ನವಿ ಎಂದು ಕರೆಯಲಾಗುತ್ತದೆ. ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ಗಂಗಾಜಲ ವೆಂದೇ ಭಾವಿಸಲಾಗುತ್ತದೆ.

ಇಂದು ಗಂಗಾ ಸಪ್ತಮಿ ಇದರ ಮಹತ್ವವೇನು ಗೊತ್ತಾ? ಈ ದಿನವನ್ನು ಗಂಗೆಯ ಪುನರ್ಜನ್ಮವೆನ್ನುವುದೇಕೆ?
ಗಂಗಾ
Follow us on

ಗಂಗಾ ಸಪ್ತಮಿಯ ಮಹತ್ವವನ್ನು ‘ಪದ್ಮ ಪುರಾಣ’, ‘ಬ್ರಹ್ಮ ಪುರಾಣ’ ಹಾಗೂ ‘ನಾರದ ಪುರಾಣ’ ಗಳಲ್ಲಿ ನೋಡಬಹುದು. ಭಗೀರಥ ಮಹಾರಾಜನ ಪೂರ್ವಜರು ಶ್ರೀಕಪಿಲ ಮಹರ್ಷಿಯ ಶಾಪಕ್ಕೆ ತುತ್ತಾಗಿದ್ದರು. ಇವರ ಮುಕ್ತಿಗಾಗಿ ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಪ್ರಾರ್ಥಿಸಿ, ಜೇಷ್ಠಮಾಸ‌ ದಶಮಿಯಂದು ಭೂಲೋಕಕ್ಕೆ ಕರೆತಂದ. ಈ ದಿನವನ್ನು ಗಂಗಾವತರಣ ದಿನ ಎಂದು ಕರೆಯಲಾಗುತ್ತದೆ. ಭುವಿಗಿಳಿದ ಗಂಗೆ ತಾನು ಮೋಕ್ಷದಾಯಕಳು ಎಂಬ ಅಹಂ ನಿಂದ ಭೋರ್ಗರೆದು ಹರಿಯಲಾರಂಭಿಸುತ್ತಾಳೆ. ಈ ವೇಳೆ ಶ್ರೀಜಹ್ನು ಮಹರ್ಷಿಯ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತು. ಇದರಿಂದ ಕುಪಿತರಾದ ಜಹ್ನು ಮಹರ್ಷಿಗಳು ಗಂಗೆಯನ್ನು ಆಪೋಶಿಸಿದರು(ಕುಡಿದರು).

ಇದನ್ನು ನೋಡಿ ದೇವತೆಗಳು ಹಾಗೂ ಗಂಗೆಯನ್ನು ಭುವಿಗೆ ಕರೆ ತಂದಿದ್ದ ಭಗೀರಥ ಗಾಭರಿಗೊಂಡರು. ಎಲ್ಲರೂ ಸೇರಿ ಜಹ್ನು ಮಹರ್ಷಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದರು. ಕೋಪದಿಂದ ಇದ್ದ ಜಹ್ನು ಮಹರ್ಷಿ, ಇವರ ಮನವಿಗೆ ಮನಸೋತು, ಗಂಗೆಗೆ ಅಹಂಕಾರ ತೊಲಗಬೇಕು. ಹಾಗಾಗಿ ಹನ್ನೊಂದು ತಿಂಗಳ ನಂತರ ಗಂಗೆಯನ್ನು ಹೊರಹಾಕುವುದಾಗಿ ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಗಂಗೆಯನ್ನು ತನ್ನ ಬಲ ಕಿವಿಯಿಂದ ವೈಶಾಖ ಶುಕ್ಲ ಪಕ್ಷ ಸಪ್ತಮಿಯಂದು ಹೊರಗೆ ಹರಿಯ ಬಿಟ್ಟರು. ಈ ದಿನ ಗಂಗೆಯು ಪುನರ್ಜನ್ಮವನ್ನು ಪಡೆದದ್ದರಿಂದ ಗಂಗೋತ್ಪತ್ತಿ ದಿನ ಎನ್ನಲಾಗುತ್ತದೆ.

ಗಂಗೆಯು ಜಹ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ಜಾಹ್ನವಿ ಎಂದು ಕರೆಯಲಾಗುತ್ತದೆ. ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ಗಂಗಾಜಲ ವೆಂದೇ ಭಾವಿಸಲಾಗುತ್ತದೆ. ನಾವು ಸ್ನಾನ ಮಾಡುವ, ಪೂಜೆಗೆ ಬಳಸುವ ಹಾಗೂ ಕುಡಿಯುವ ನೀರನ್ನು ಗಂಗೆಯೆಂದೇ ಪೂಜ್ಯ ಭಾವನೆಯಿಂದ ಬಳಸುತ್ತೇವೆ. ಇಂತಹ ಪವಿತ್ರ ನದಿ ಎರಡನೇ ಬಾರಿ ಮರುಹುಟ್ಟು ಪಡೆದ ದಿನ. ಆ ಗಂಗಾದೇವಿಯನ್ನು ಸ್ಮರಿಸೋಣ, ಪೂಜಿಸೋಣ.

ಈ ದಿನ, ಸ್ನಾನ ಮಾಡುವಾಗ ನದಿ, ತೊರೆ, ಬಾವಿ, ನಲ್ಲಿ ಈ ರೀತಿ ಯಾವುದೇ ನೀರಿರಲಿ. ಆ ನೀರಿನಲ್ಲಿ ಗಂಗೆಯನ್ನು ಮನಃಪೂರ್ತಿ ಪ್ರಾರ್ಥಿಸಿ, ಗಂಗಾದಿ ಸಪ್ತ ನದಿಗಳ ಸನ್ನಿಧಾನ ಪ್ರಾಪ್ತಿಯಾಗಲಿ ಎಂದು ಅನುಸಂಧಾನ ಮಾಡಿ, ನಂತರ ಸ್ನಾನ ಮಾಡಿ. ಈ ದಿನ ಮತ್ತೊಂದು ವಿಶೇಷ ಭಗೀರಥ ಜಯಂತಿ. ಶ್ರೀಹರಿಯ ಚರಣದಲ್ಲಿ ಉದಿಸಿದ ಗಂಗೆಯನ್ನು ತಮ್ಮ ತಪಸ್ಸಿನ ಮೂಲಕ ಭೂಲೋಕಕ್ಕೆ ತಂದಂತಹ ಮಹಾನುಭಾವರು ಭಗೀರಥ ಋಷಿ. ಇಂತಹ ಶ್ರೇಷ್ಠ ಋಷಿ ಭುವಿಯಲ್ಲಿ ಜನ್ಮತಾಳಿದ ದಿನ. ನಮ್ಮ ಪಾಪಗಳನ್ನು ತೊಳೆಯುವ ದೇವ ಗಂಗೆಯನ್ನು ಭೂಲೋಕಕ್ಕೆ ಕರೆತಂದು ಉಪಕರಿಸಿದ ಮಹರ್ಷಿಗಳನ್ನು ಸ್ಮರಿಸೋಣ, ನಮಿಸೋಣ

ಇದರ ಜತೆ ಪುಷ್ಯಾರ್ಕಯೋಗ ಮತ್ತೊಂದು ವಿಶೇಷ.
ಭಾನುವಾರದಂದು ಪುಷ್ಯಾನಕ್ಷತ್ರ ಇದ್ದರೆ, ಆ ದಿನ ಪುಷ್ಯಾರ್ಕಯೋಗ ಎನ್ನಲಾಗುತ್ತದೆ. ಪುಷ್ಯಾ ನಕ್ಷತ್ರ, ದೇವ ಗುರು ಬೃಹಸ್ಪತಿ ಗೆ ಮೀಸಲು. ಈ ದಿನ ಗುರುಗಳನ್ನು ದರ್ಶಿಸೋಣ, ಸ್ತುತಿಸೋಣ, ಸ್ಮರಿಸೋಣ.

ಗುರುವಿನ ಮಹತ್ವ
ಚಿಕ್ಕ ಇರುವೆಯೊಂದು ಹರಿದ್ವಾರ ಕ್ಷೇತ್ರದಿಂದ ಹೃಷಿಕೇಶಕ್ಕೆ ಪಯಣಿಸಬೇಕಾದರೆ 2-3 ಜನ್ಮಗಳಾದರೂ ಬೇಕು. ಅದೇ ಇರುವೆ ಹರಿದ್ವಾರದಿಂದ ಹೃಷಿಕೇಶಕ್ಕೆ ಹೋಗುವವರ ವಸ್ತ್ರದ ಮೇಲೆ ಕುಳಿತರೆ 3ರಿಂದ 4ಗಂಟೆಗಳಲ್ಲಿ ಸುಲಭವಾಗಿ ತಲುಪಬಹುದು. ಹಾಗೆಯೇ ನಮ್ಮ ಸ್ವಂತ ಪ್ರಯತ್ನದಿಂದ ಈ ಭವಸಾಗರವನ್ನು ದಾಟುವುದು ಬಹು ಕಷ್ಟ. ಸುಲಭ ಸಾಧನಕ್ಕಾಗಿ ಗುರುವಿನ ಕೈ ಹಿಡಿದು, ಅವರು ತೋರಿದ ಮಾರ್ಗದಲ್ಲಿ ಭಕ್ತಿಯಿಂದ ಸಾಗಿದರೆ ಸುಲಭವಾಗಿ ಈ ಭವಸಾಗರವನ್ನು ದಾಟಬಹುದು.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಗಂಗಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕ ಶ್ರೀತ್ರಿವಿಕ್ರಮ ದೇವರ ಅನುಗ್ರಹ ಎಲ್ಲರಿಗೂ ಪ್ರಾಪ್ತಿಯಾಗಲಿ.

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

Published On - 4:54 pm, Sun, 8 May 22