
ಹಿಂದೂ ಧರ್ಮ ಮತ್ತು ಗರುಡ ಪುರಾಣದ ಪ್ರಕಾರ, ವ್ಯಕ್ತಿಯು ಮರಣ ಹೊಂದಿದ ನಂತರವೂ ಅವರ ಕೆಲವು ವಸ್ತುಗಳೊಂದಿಗೆ ಆತ್ಮದ ಬಂಧನ ಅಥವಾ ಮೋಹ ಮುಂದುವರಿಯುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ವ್ಯಕ್ತಿಯ ಮರಣದ ನಂತರ ಅವರ ಕೆಲವು ಬಳಸಿದ ವಸ್ತುಗಳನ್ನು ತಕ್ಷಣವೇ ಧರಿಸುವುದು ಅಥವಾ ಬಳಸುವುದು ಶ್ರೇಯಸ್ಕರವಲ್ಲ ಎಂದು ಜ್ಯೋತಿಷ್ಯ ಮತ್ತು ಧಾರ್ಮಿಕ ಪಂಡಿತರು ಸಲಹೆ ನೀಡುತ್ತಾರೆ. ಮೃತರ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಗರುಡ ಪುರಾಣದಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಉಲ್ಲೇಖಿಸಲಾಗಿದೆ.
ಮೃತರ ಬಟ್ಟೆಗಳು ಅವರ ಶಕ್ತಿಯನ್ನು (Energy) ಹೆಚ್ಚು ಹೊಂದಿರುತ್ತವೆ. ಆದ್ದರಿಂದ, ಅವರು ಧರಿಸುತ್ತಿದ್ದ ಬಟ್ಟೆಗಳನ್ನು ತಕ್ಷಣವೇ ಕುಟುಂಬದವರು ಧರಿಸಬಾರದು. ಅವುಗಳನ್ನು ಅಗತ್ಯವಿರುವ ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇನ್ನು ಚಿನ್ನ ಅಥವಾ ಬೆಳ್ಳಿಯ ಆಭರಣಗಳ ವಿಷಯಕ್ಕೆ ಬಂದರೆ, ಅವುಗಳನ್ನು ತಕ್ಷಣ ಧರಿಸುವ ಬದಲು, ಶಾಸ್ತ್ರೀಯವಾಗಿ ಶುದ್ಧೀಕರಣ (ಉದಾಹರಣೆಗೆ ಗಂಗಾಜಲದಿಂದ ಪ್ರೋಕ್ಷಣೆ ಮಾಡುವುದು ಅಥವಾ ಕರಗಿಸಿ ಮರುರೂಪಿಸುವುದು) ಮಾಡಿದ ನಂತರವೇ ಬಳಸಬೇಕು ಅಥವಾ ಕುಟುಂಬದ ಆಸ್ತಿಯಾಗಿ ಇಟ್ಟುಕೊಳ್ಳಬಹುದು.
ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?
ಮೃತ ವ್ಯಕ್ತಿ ಸದಾ ಧರಿಸುತ್ತಿದ್ದ ಕೈಗಡಿಯಾರ (Watch) ಮತ್ತು ಇತರ ವೈಯಕ್ತಿಕ ವಸ್ತುಗಳು ಅವರ ಶಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತವೆ ಎಂದು ನಂಬಲಾಗಿದೆ. ನಿಂತುಹೋದ ಅಥವಾ ಮೃತರ ಗಡಿಯಾರವನ್ನು ಬಳಸುವುದರಿಂದ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಶಕ್ತಿ ಅಥವಾ ಅಡೆತಡೆಗಳು ಉಂಟಾಗಬಹುದು ಎಂಬ ನಂಬಿಕೆಯಿದೆ. ಆದ್ದರಿಂದ ಅಂತಹ ವಸ್ತುಗಳನ್ನು ನೆನಪಿಗಾಗಿ ಸೂಕ್ತ ಮತ್ತು ಪವಿತ್ರ ಸ್ಥಳದಲ್ಲಿ ಕಾಯ್ದಿರಿಸಬೇಕು ಅಥವಾ ದಾನ ಮಾಡಬೇಕು.
ಮೃತ ವ್ಯಕ್ತಿಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ದಾನ ಮಾಡುವುದರಿಂದ ಅಥವಾ ವಿಲೇವಾರಿ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಮೋಕ್ಷದ ಹಾದಿ ಸುಗಮವಾಗುತ್ತದೆ ಎಂದು ನಂಬಲಾಗಿದೆ. ಕುಟುಂಬದ ಸದಸ್ಯರು ಮೃತರ ವಸ್ತುಗಳ ಬಗ್ಗೆ ಅತಿಯಾದ ಮೋಹ ಹೊಂದುವುದರ ಬದಲಾಗಿ, ಧಾರ್ಮಿಕ ವಿಧಿವಿಧಾನಗಳಂತೆ ದಾನ-ಧರ್ಮಗಳನ್ನು ಮಾಡುವ ಮೂಲಕ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Sat, 3 October 26