AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಹಳೆಯ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ; ಬೆಂಗಳೂರಿನ ಈ ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ

ಹಳೆಯ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಧಾರ್ಮಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಸರಿಯಲ್ಲ. ಬೆಂಗಳೂರಿನ HSR ಲೇಔಟ್‌ನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಇಂತಹ ಫೋಟೋಗಳನ್ನು ಗೌರವಯುತವಾಗಿ ವಿಸರ್ಜಿಸಿ, ಮರುಬಳಕೆ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 24ರಂದು ಈ ಸೇವೆಯನ್ನು ಬಳಸಿಕೊಂಡು, ನಿಮ್ಮ ಮನೆಯ ಹಳೆಯ ಫೋಟೋಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.

ದೇವರ ಹಳೆಯ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ; ಬೆಂಗಳೂರಿನ ಈ ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ
ಹಳೆಯ ದೇವರ ಫೋಟೋImage Credit source: instagram/@waste.siddu
ಅಕ್ಷತಾ ವರ್ಕಾಡಿ
|

Updated on:Oct 23, 2026 | 11:21 AM

Share

ಪ್ರತಿಯೊಬ್ಬರ ಮನೆಯಲ್ಲೂ ವರ್ಷಗಳು ಕಳೆದಂತೆ ಹಳೆಯ, ಗೆದ್ದಲು ಹಿಡಿದ ಅಥವಾ ಬಣ್ಣ ಮಾಸಿದ ದೇವರ ಫೋಟೋಗಳು ಸಂಗ್ರಹವಾಗುವುದು ಸಹಜ. ಆದರೆ, ಇಷ್ಟು ದಿನ ಶ್ರದ್ಧಾ-ಭಕ್ತಿಯಿಂದ ಪೂಜಿಸಿದ ಆ ಫೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡಲು ಮನಸ್ಸು ಬರುವುದಿಲ್ಲ. ಹಾಗಂತ ಮನೆ ಮುಂಭಾಗದಲ್ಲೋ, ಹೊಸ ಮನೆಯಲ್ಲೋ ಇಟ್ಟುಕೊಳ್ಳಲು ಸಾಧ್ಯವಾಗದೆ ಹಲವರು ಗೊಂದಲಕ್ಕೆ ಬೀಳುತ್ತಾರೆ. ಏನು ಮಾಡಬೇಕೆಂದು ತಿಳಿಯದೆ ಅನೇಕ ಜನರು ಅವುಗಳನ್ನು ದೇವಸ್ಥಾನದ ಹೊರಗಡೆ, ಅರಳಿಮರದ ಕಟ್ಟೆಯ ಕೆಳಗೆ ಅಥವಾ ಎಲ್ಲೋ ಒಂದು ಕಡೆ ಎಸೆದು ಬರುವುದನ್ನು ನಾವು ಕಾಣುತ್ತೇವೆ. ಆದರೆ, ಈ ರೀತಿ ಮಾಡಬಾರದು. ಏಕೆಂದರೆ, ನಂಬಿಕೆ ಮತ್ತು ಶ್ರದ್ಧೆಯಿಂದ ಪೂಜಿಸಿದ ಫೋಟೋಗಳನ್ನು ಈ ರೀತಿ ಎಸೆಯುವುದು ಧಾರ್ಮಿಕವಾಗಿಯೂ ಮತ್ತು ಪರಿಸರದ ದೃಷ್ಟಿಯಿಂದಲೂ ಸರಿಯಲ್ಲ.

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಫೋಟೋ ವಿಸರ್ಜನೆ ಪೂಜೆ:

ಬೆಂಗಳೂರಿನ ಎಚ್‌ಎಸ್‌ಆರ್ (HSR) ಲೇಔಟ್‌ನಲ್ಲಿರುವ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಇಂತಹ ಹಳೆಯ ಮತ್ತು ಹಾಳಾದ ಫೋಟೋಗಳನ್ನು ಗೌರವಯುತವಾಗಿ ವಿಸರ್ಜಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದ @waste.siddu ಎಂಬ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ದೇವರ ಫೋಟೋಗಳನ್ನು ಇಲ್ಲಿಗೆ ತಂದು ನೀಡಬಹುದಾಗಿದೆ. ಈ ವಿಸರ್ಜನಾ ಪೂಜೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಅಕ್ಟೋಬರ್ 24ರ ಶನಿವಾರದಂದು ಬೆಳಿಗ್ಗೆ 8:00 ರಿಂದ 10:30 ರ ನಡುವೆ ಎಚ್‌ಎಸ್‌ಆರ್ ಲೇಔಟ್‌ನ ವರಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ ತಮ್ಮಲ್ಲಿದ್ದ ಫೋಟೋಗಳನ್ನು ತಲುಪಿಸಬಹುದಾಗಿದೆ.

ಕಸ ವಿಲೇವಾರಿ ಮತ್ತು ಮರುಬಳಕೆಯ ಮಹತ್ವದ ಹೆಜ್ಜೆ:

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸೂಕ್ತ ಕಸ ನಿರ್ವಹಣೆ (Waste Management) ಮತ್ತು ಮರುಬಳಕೆ (Recycling) ಮಾಡುವುದಾಗಿದೆ. ಇಷ್ಟು ದಿನ ಭಕ್ತಿಯಿಂದ ಪೂಜಿಸಿದ ದೇವರ ಫೋಟೋಗಳನ್ನು ಏಕಾಏಕಿ ಎಲ್ಲೆಂದರಲ್ಲಿ ಬಿಸಾಡುವ ಬದಲು, ಧಾರ್ಮಿಕ ವಿಧಿ-ವಿಧಾನಗಳಂತೆ ವಿಸರ್ಜನೆ ಮಾಡಿ, ನಂತರ ಆ ವಸ್ತುಗಳನ್ನು ವಿಲೇವಾರಿ ಮಾಡುವ ಉದಾತ್ತ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ನಿಮ್ಮ ಬಳಿಯೂ ಇಂತಹ ಫೋಟೋಗಳಿದ್ದರೆ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:17 am, Fri, 23 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More