Holi 2023: ಹೋಲಿ ಹಬ್ಬದ ಮಹತ್ವ, ಆಚರಣೆ, ಹೇಗೆ? ಈ ದಿನದಂದು ಯಾವ ಮಂತ್ರವನ್ನು ಪಠಿಸಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 04, 2023 | 7:16 AM

ಪ್ರಾಚೀನ ಪರಂಪರೆಯ ಆಚರಣೆಗೆ ಅದರದ್ದೇ ಆದ ಮಹತ್ವ ಮತ್ತು ತಾತ್ಪರ್ಯ ಸ್ಪಷ್ಟವಾಗಿ ಇರುತ್ತದೆ. ಪ್ರತೀ ಸಲವೂ ಪ್ರಕೃತಿಯಲ್ಲಾಗುವ ಬದಾಲವಣೆಗೆ ನಾವು ಸಲ್ಲಿಸುವ ಗೌರವವೇನಿದೆ ಅದೇ ಕೆಲವು ಸಲ ಹಬ್ಬ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

Holi 2023: ಹೋಲಿ ಹಬ್ಬದ ಮಹತ್ವ, ಆಚರಣೆ, ಹೇಗೆ? ಈ ದಿನದಂದು ಯಾವ ಮಂತ್ರವನ್ನು ಪಠಿಸಬೇಕು?
ಸಾಂದರ್ಭಿಕ ಚಿತ್ರ
Follow us on

ಪ್ರಾಚೀನ ಪರಂಪರೆಯ ಆಚರಣೆಗೆ ಅದರದ್ದೇ ಆದ ಮಹತ್ವ ಮತ್ತು ತಾತ್ಪರ್ಯ ಸ್ಪಷ್ಟವಾಗಿ ಇರುತ್ತದೆ. ಪ್ರತೀ ಸಲವೂ ಪ್ರಕೃತಿಯಲ್ಲಾಗುವ ಬದಾಲವಣೆಗೆ ನಾವು ಸಲ್ಲಿಸುವ ಗೌರವವೇನಿದೆ ಅದೇ ಕೆಲವು ಸಲ ಹಬ್ಬ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಸನಾತನ ಭಾರತೀಯ ಪರಂಪರೆಯೇನಿದೆ ಅದು ಎಂದೂ ಪ್ರಕ್ರತಿಯನ್ನು ಬಿಟ್ಟು ಸಾಗಲು ಸಾಧ್ಯವೇ ಇಲ್ಲ. ಆದಕಾರಣವೇ ಇಲ್ಲಿ ನಡೆಯುವ ಯಾವುದೇ ಸಂಸ್ಕಾರಕ್ಕಾದರೂ ಅಥವಾ ಸಂಸ್ಕಾರದಲ್ಲಾದರೂ ಪ್ರಕೃತಿಗೆ ಗೌರವ ನೀಡಿಯೇ ನೀಡುತ್ತೇವೆ. ಅದರಲ್ಲೂ ಕೆಲವು ಆಚರಣೆಗಳಂತೂ ಪ್ರಕೃತಿಯನ್ನುದ್ದೇಶಿಸಿಯೇ ಮಾಡುವಂತಹದ್ದು. ಅದು ನೀಡುವ ಸೌಭಾಗ್ಯ ಸಂಪದಗಳಿಗೆ ನಾವು ಸಲ್ಲಿಸಲೇ ಬೇಕಾದ ಕೃತಜ್ಞೆತೆ ಅದು.

ನಮ್ಮ ಹಬ್ಬಗಳಲ್ಲಿ ಪ್ರಕೃತಿಯನ್ನಾಧರಿಸಿ ಮಾಡುವ ಹಬ್ಬಗಳೇ ಹೆಚ್ಚು. ಅವುಗಳಲ್ಲಿ ಒಂದು ಹೋಲಿ ಅಥವಾ ವಸಂತೋತ್ಸವ. ಈ ಹೋಲಿಗಿಂತ ಮೊದಲು ಮಲೆನಾಡು ಮತ್ತು ಕರಾವಳಿಯ ಉತ್ತರ ಭಾಗದಲ್ಲಿ ಸುಗ್ಗಿಕುಣಿತ ಎಂಬುದಾಗಿ ಹಾಲಕ್ಕಿಸಮಾಜದವರು ನಡೆಸುತ್ತಾರೆ. ಇದೊಂದು ಜಾನಪದ ಸಂಪ್ರದಾಯ. ಸಾಮಾನ್ಯವಾಗಿ ಒಂದು ಸಲದ ಬೆಳೆ ಮುಗಿದು ಎರಡೆನೇಯ ಬೆಳೆಯ ಆರಂಭಕ್ಕೂ ಮುನ್ನ ಈ ಆಚರಣೆ ಮಾಡುತ್ತಾರೆ. ನಾನಾ ವಿಧವಾದ ಪಾರಂಪರಿಕ ವೇಷಗಳನ್ನು ಧರಿಸಿ ಮನೆ ಮನೆಗೂ ತಿರುಗುತ್ತಾ ಸಂತೋಷವೃದ್ಧಿಯನ್ನು ಮಾಡುತ್ತಾರೆ. ದುಡಿದು ದಣಿದ ರೈತನಿಗೆ ಇದು ಆನಂದವನ್ನು ನೀಡುತ್ತದೆ.

ಇದು ಮುಗಿಯುತ್ತಿದ್ದಂತೆಯೇ ಬರುವ ಹುಣ್ಣಿಮೆಯೇನಿದೆ ಅದು ಹೋಲಿಹುಣ್ಣಿಮೆ. ಇದನ್ನು ಕೆಲವರು ವಸಂತೋತ್ಸವವೆಂದು ಕರೆಯುವುದೂ ಉಂಟು. ಈ ಹುಣ್ಣಿಮೆಯನ್ನು ನಾಲ್ಕು ಭಾಗ ಮಾಡಿ ಇದರ ಕೊನೆಯ ಭಾಗದಲ್ಲಿ ಹೋಲಿದಹವನ್ನು ಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ.

ಹುಣ್ಣಿಮೆಯ ಪೂರ್ವದಿನ ಕಟ್ಟಿಗೆಯನ್ನು ತಂದು ಅದಕ್ಕೆ ಗೋಮಯ (ಸಗಣಿಯನ್ನು) ಬಳಿದು ಸಿದ್ಧಪಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರಾಕ್ಷಸಾಕಾರದ ಪ್ರತಿಮೆ ಮಾಡುವ ರೂಢಿಯೂ ಇದೆ. ಅದನ್ನು ಫಾಲ್ಗುನ ಮಾಸದ ಹುಣ್ಣಿಮೆಯಂದು ಸಾಯಂಕಾಲ ಅರ್ಥಾತ್ ಸಂಧ್ಯಾಕಾಲದ ನಂತರದ ದಹನ ಮಾಡಬೇಕು.

ಇದಕ್ಕೂ ಪೂರ್ವದಲ್ಲಿ ಒಂದು ಸಂಕಲ್ಪವನ್ನು ಮಾಡಿ ಪೂಜೆ ಮಾಡುವ ಕ್ರಮವಿದೆ. ಇತ್ತೀಚಿನ ಕಾಲಮಾನದಲ್ಲಿ ಅದು ಅರಿವಿಗೇ ಬಾರದಂತೆ ಲೋಪವಾಗಿದೆ. ಅದರ ಸ್ವರೂಪ ಹೀಗಿದೆ:

“ಸಕುಟುಂಬಸ್ಯ ಮಮ ಢುಂಢಾ ರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾ ಪರಿಹಾರಾರ್ಥಂ ಹೋಲಿಕಾ ಪೂಜಾರಾಧನಂ ಕರಿಷ್ಯೇ” ಎಂಬುದಾಗಿ ಸಂಕಲ್ಪ. ಢುಂಢಾ ಎಂಬ ರಾಕ್ಷಸಿಯೊಬ್ಬಳು ನಮ್ಮ ಮನೋವಿಕಾರವನ್ನು ಮಾಡಿ ನಮಗೆ ಆಪತ್ತುಗಳು ತಂದೊಡ್ಡುವಳು ಎಂಬ ಕಾರಣಕ್ಕಾಗಿ ಈ ಪೂಜೆಯನ್ನು ಮಾಡಬೇಕು. ಮೇಲಿನ ಸಂಕಲ್ಪದ ನಂತರ ಕಟ್ಟಿಗೆಯಲ್ಲಿ ಮಾಡಿದ ಆಕಾರಕ್ಕೆ ಮೂರು ಪ್ರದಕ್ಷಿಣೆ ಬಂದು ಬೆಂಕಿಸ್ಪರ್ಶ ಮಾಡಬೇಕು. ಬಾಣಂತಿ ಇರುವ ಮನೆಯಿಂದ ಬೆಂಕಿ ತಂದರೆ ಇಲ್ಲಿ ವಿಶೇಷ ಫಲವಿದೆ. ಬೆಂಕಿ ಕೊಟ್ಟ ನಂತರ –

ಅಸ್ಮಾಭಿಃ ಭಯ ಸಂತ್ರಸ್ತೈಃ ಕೃತಾತ್ವಂ ಹೋಲಿಕೇಯುತಃ |

ಅತಃ ತ್ವಾಂ ಪೂಜಯಿಷ್ಯಾಮಿ ಭೂತೇ ಭೂತಿ ಪ್ರದಾ ಭವ||

ಎಂಬ ಮಂತ್ರವನ್ನು ಹೇಳಿ “ಶ್ರೀ ಹೋಲಿಕಾಯೈ ನಮಃ” ಎಂಬುದಾಗಿ ಹನ್ನೆರಡು ಸಲ ಪುಷ್ಪಾರ್ಚನೆಯನ್ನು ಮಾಡಿ ಧೂಪ ದೀಪ ನೈವೇದ್ಯ ಆರತಿಗಳನ್ನು ಮಾಡಬೇಕು. ಆನಂತರ ಉರಿಯುತ್ತಿರುವ ಅಗ್ನಿಗೆ ಎಲ್ಲರೂ ಮೂರು ಸುತ್ತು ಬಂದು ಮನಸ್ಸಿಗೆ ಬಂದಂತೆ ಕಿರುಚಾಡಬೇಕು. ಇದರಿಂದ ಮನೋವಿಕಾರವನ್ನು ಮಾಡುವ ಢುಂಢಾ ಎಂಬ ರಾಕ್ಷಸಿಗೆ ತೃಪ್ತಿಯಾಗುತ್ತದೆ ಮತ್ತು ನಮ್ಮ ಬೆಳೆದ ಬೆಳೆಗೆ ಅಥವಾ ಮನಸ್ಸಿಗೆ ಹಾನಿಯನ್ನುಂಟು ಮಾಡುವುದಿಲ್ಲ ಎಂಬ ನಂಬಿಕೆ ಅನೂಚಾನವಾಗಿ ನಡೆದು ಬಂದಿದೆ.

ಜ್ಯೋತಿರ್ನಿಬಂಧ ಎಂಬ ಶಾಸ್ತ್ರ ಗ್ರಂಥದಲ್ಲಿ ಫಾಲ್ಗುನ ಮಾಸದ ಶುಕ್ಲ ಪಕ್ಷದ ಪಂಚಮಿಯಿಂದಾರಂಭಿಸಿ ಹದಿನೈದು ದಿನಗಳ ಕಾಲ ಅತ್ಯಂತ ಪುಣ್ಯಕಾಲವೆಂದು ಹೇಳಿದೆ. ಈ ಕಾಲದಲ್ಲಿ ಕಟ್ಟಿಗೆ ಕದಿಯುವುದು ಇತ್ಯಾದಿ ಕಳ್ಳಾಟ ಮಾಡುವ ಜಾನಪದ ಕ್ರಮ ಕೆಲವೆಡೆ ಇದೆ.

ಇದನ್ನೂ ಓದಿ: Spiritual: ಮಾತೆಯರಿಗೆ ಕುಂತಿಯ ಆಶೀರ್ವಾದವೇನು? ‘ಭಾಗ್ಯವಂತಂ ಪ್ರಸೂಯೇತ’ ಎಂದರೇನು?

ಹೋಳಿಹುಣ್ಣಿಮೆಯ ಮರುದಿನ ಪ್ರಾತಃಕಾಲ ಎದ್ದು ಹಿಂದಿನ ದಿನ ಸುಡಲ್ಪಟ್ಟ ಭಸ್ಮದ ಅವಶೇಷವನ್ನು ನೋಡಿ ಸ್ನಾನ ಮಾಡಿ ಶ್ವೇತ ವಸ್ತ್ರವನ್ನುಂಟು ಓಕುಳಿ ಆಟವನ್ನು ಆಡಬೇಕು ಎಂಬುದು ಸಂಪ್ರದಾಯ. ಢುಂಢಾ ಎಂಬ ರಾಕ್ಷಸಿಯ ಭಯ ನಾಶವಾದ ಮೇಲೆ ಸಂತೋಷದಿಂದ ರಂಗಿನಾಟವಾದುವುದಕ್ಕೆ ಓಕುಳಿ ಆಟ ಎಂಬ ಹೆಸರು ಬಂದಿದೆ. ಈ ಸಂಭ್ರಮ ರಂಗಪಂಚಮಿಯ ತನಕ ವ್ಯಾಪಿಸಿಕೊಂಡಿರುತ್ತದೆ. ರಂಗಪಂಚಮಿಯೆಂಬುದು ಹೋಳಿಹುಣ್ಣಿಮೆಯ ನಂತರದ ಐದನೇಯ ದಿನ. ಪಂಚಾಂಗ ಪ್ರಕಾರ ಹೇಳುವುದಾದರೆ ಹುಣ್ಣಿಮೆಯ ನಂತರ ಬರುವ ಪಂಚಮಿ ತಿಥಿಯ ತನಕ. ಈ ದಿನಗಳಲ್ಲಿ ಜನರೆಲ್ಲಾ ಸಮೂಹವಾಗಿ ರಂಗಿನಾಟ ಆಡುವರು.

ಹೋಲಿಹಬ್ಬದ ದಹನದ ನಂತರ ವಸ್ತ್ರ ಧಾನ್ಯಗಳ ದಾನ ಮಾಡುದರಿಂದ ವಿಶೇಷ ಫಲಪ್ರಾಪ್ತಿಯಾಗುತ್ತದೆ ಎಂಬು ಪುರಾಣಗಳಲ್ಲಿ ಉಲ್ಲೇಖವಿದೆ. ಅದೇ ಇರಲಿ ಈ ರೀತಿಯಾಗಿ ಪ್ರಕೃತಿಯ ಆರಾಧನೆ ಆಯಾ ಕಾಲದಲ್ಲಿ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಂತು ಸತ್ಯ. ಅದೇ ರೀತಿ ನಾವು ಆಶ್ರಯಿಸಿರುವ ನಮ್ಮ ಸುತ್ತಲಿನ ಪ್ರಕೃತಿಗೆ ಗೌರವ ನೀಡಿದಂತಾಗುತ್ತದೆ. ಅದು ನಮ್ಮ ಕರ್ತವ್ಯವೂ ಹೌದು. ಈ ಹೋಲಿ ಸರ್ವರಿಗೂ ಶುಭವ ನೀಡಲಿ.

ಡಾ.ಕೇಶವ ಕಿರಣ ಬಿ