ರಾಮ (rama) ಅಂದಾಕ್ಷಣ ಎಲ್ಲರ ಕಣ್ಣಮುಂದೆ ಕರುಣರಸದ ಕೋಡಿಯೇ ಹರಿದುಬರುವುದು ಸಹಜ. ರಾಮನ ನಡೆ ಕೃಷ್ಣನ ನುಡಿ ಎಂಬುದು ಜಗತ್ಪ್ರಸಿದ್ಧ. ಅಂತಹ ಭಗವಂತನ ಅವತಾರಕ್ಕೆ ಕಾರಣ ಇರಲೇ ಬೇಕು. ಪ್ರಯೋಜನಮ್ ಅನುದ್ದಿಶ್ಯನ ಮಂದೋಪಿ ಪ್ರವರ್ತತೇ ಎಂಬುದು ಸುಭಾಷಿತದ ಮಾತು. ಪ್ರಯೋಜನವಿಲ್ಲದೇ ಮೂಢನೂ ಸಹ ಕಾರ್ಯದಲ್ಲಿ ತೊಡಗುವುದಿಲ್ಲ ಎಂದು ಆ ವಾಕ್ಯದ ಅರ್ಥ. ಇನ್ನು ಜಗದ್ರಕ್ಷಕನಾದ ಭಗವಂತವನು ಅವತರಿಸಲು ಬಲವಾದ ಕಾರಣಗಳು ಇರಲೇಬೇಕು. ಅದು ಕೇವಲ ಅವತಾರವಾಗಿರುವುದಿಲ್ಲ ಅಲ್ಲಿ ಒಂದು ತಾತ್ವಿಕ ಸಂದೇಹವೂ ಇರುತ್ತದೆ. ಕೆಲವೊಂದು ನಮಗೆ ಸುಲಭವಾಗಿ ಕಾಣುತ್ತದೆ. ಇನ್ನು ಕೆಲವು ಸೂಕ್ಷ್ಮತೆಯಿಂದ ಗಮನಿಸಬೇಕು. ಇನ್ನೂ ಕೆಲವಕ್ಕೆ ಅನುಸಂಧಾನ ಅಥವಾ ಅಧ್ಯಯನ ಬೇಕು.
ರಾಮಾವತಾರದ ಮುಖ್ಯ ಉದ್ದೇಶ ರಾವಣ ಸಂಹಾರವಾದರೂ ಅದರೊಂದಿಗೆ ಸಹ ಕಾರಣಗಳು ಬೇರೆಯೂ ಇದೆ. ಅದರಲ್ಲಿ ಒಂದು ಈ ನಾರದರ ಶಾಪ. ಕೇವಲ ನಾರದರು ಮಾತ್ರವಲ್ಲ. ಅವರೊಂದಿಗೆ ಪರ್ವತ ಮುನಿಯೂ ಸೇರಿ ಶಪಿಸಿದ್ದರ ಫಲವೂ ಇದರಲ್ಲಿದೆ. ಅರೇ !!!! ಸದಾ ನಾರಾಯಣ ಸ್ಮರಣೆಯಲ್ಲೇ ಇರುವ ನಾರದರು. ತ್ರಿಲೋಕ ಸಂಚಾರಿಗಳು. ಸಾರ್ವಕಾಲಿಕ ಜ್ಞಾನಿಗಳು. ಇವರು ಶಪಿಸಿದರೇ ಎಂದು ಸಂದೇಹ ಬರಬಹುದು. ವಿಷಯ ಕಹಿಯಾದರೂ ಸತ್ಯ. ನಾರದರು ಮತ್ತು ಪರ್ವತ ಮುನಿಗಳು ಜೊತೆಯಾಗಿ ಭಗವಂತ ನಾರಾಯಣನಿಗೆ ರಾಮಾವತಾರದ ಮೊದಲು ಶಪಿಸುತ್ತಾರೆ. ಅದೇ ಕಾರಣ ಸೀತೆಯು ರಾವಣನಿಂದ ಅಪರಿಸಲ್ಪಡಲು ಮತ್ತು ರಾಮ ವಿರಹಿಯಾಗಲು.
ಹೌದಾ…. ಎಂದರೆ ಹೌದು ಎಂದೇ ಉತ್ತರವಿಲ್ಲಿ. ಭೂಲೋಕದಲ್ಲಿ ರಾಜಾ ಅಂಬರೀಷ ಎಂಬ ಪರಮ ವಿಷ್ಣುಭಕ್ತನೋರ್ವ ರಾಜ್ಯಭಾರ ಮಾಡುತ್ತಿದ್ದ. ಭಗವದನುಗ್ರಹದಿಂದ ಅವನಿಗೆ ಶ್ರೀಮತಿ ಎಂಬ ಮಗಳಿರುತ್ತಾಳೆ. ಸಂಸಾರ ಚಕ್ರ ತಿರುಗುತ್ತಿರಲು ಅಂಬರೀಷ ರಾಜನು ತನ್ನ ಮಗಳಿಗಾಗಿ ವರಾನ್ವೇಷಣೆ ಆರಂಭಿಸುತ್ತಾನೆ. ಪರಮ ವಿಷ್ಣು ಭಕ್ತೆಯಾದ ಅವಳು ತಾನು ನಾರಾಯಣನ್ನೇ ವರಿಸುವ ಸಂಕಲ್ಪ ಮಾಡಿರುತ್ತಾಳೆ. ತಂದೆ ತೋರಿಸಿದ ಯಾವ ವರನನ್ನು ಒಪ್ಪದಿದ್ದ ಅವಳಿಗಾಗಿ ರಾಜನು ಸ್ವಯಂವರವನ್ನು ನಿಗದಿ ಮಾಡುತ್ತಾನೆ. ಈ ಸಂದರ್ಭದಲ್ಲಿ ಶ್ರೀಮತಿಯ ಮೇಲೆ ನಾರದರಿಗೂ ಮತ್ತು ಪರ್ವತ ಮುನಿಗಳಿಗೂ ಅನುರಾಗವುಂಟಾಗುತ್ತದೆ.
ಇದನ್ನು ಓದಿ: Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?
ಇಬ್ಬರೂ ಸ್ವಯಂವರದಲ್ಲಿ ಭಾಗವಹಿಸುವ ಇಚ್ಛೆಯುಳ್ಳವರಾಗಿ ನಾರಾಯಣನನ್ನು ಭೇಟಿ ಮಾಡುತ್ತಾರೆ. ಮೊದಲು ನಾರದರು ಶ್ರೀಮನ್ನಾರಾಯಣನ ಬಳಿ ಬಂದು ಹೀಗೆ ಹೇಳುತ್ತಾರೆ ನಾಳೆ ನಡೆಯುವ ಸ್ವಯಂವರದಲ್ಲಿ ಪರ್ವತಮುನಿಯ ಮುಖ ಕಪಿಯಂತೆ ಕಾಣಲಿ ಎಂದು ಪ್ರಾರ್ಥಿಸುತ್ತಾರೆ. ನಾರಾಯಣನು ತಥಾಸ್ತು ಎಂದು ಅನುಗ್ರಹಿಸುತ್ತಾನೆ. ನಂತರ ಪರ್ವತರು ಬಂದು ನಾಳೆ ನಡೆಯುವ ಸ್ವಯಂವರದಲ್ಲಿ ನಾರದರ ಮುಖವು ಕರಡಿಯಂತೆ ಕಾಣಲಿ ಎಂದು ಪ್ರಾರ್ಥಿಸುತ್ತಾರೆ. ನಾರಾಯಣನು ಅವರಿಗೂ ಅನುಗ್ರಹಿಸುತ್ತಾನೆ.
ಆದರೆ ಶ್ರೀಮತಿಯ ನಿಷ್ಕಲ್ಮಷ ಪ್ರೀತಿತುಂಬಿದ ಭಕ್ತಿಗೆ ಸೋತ ಭಗವಂತನು ಅವಳ ಇಚ್ಛೆ ಪೂರೈಸುವ ಸಲುವಾಗಿ ಅವಳ ಸ್ವಯಂವರದಲ್ಲಿ ಭಾಗವಹಿಸಲೇ ಬೇಕಾಯಿತು. ಯಾಕೆಂದರೆ ಅವನು ಭಕ್ತಪೋಷಕ. ಮರುದಿನ ನಡೆದ ಸ್ವಯಂವರದಲ್ಲಿ ಶ್ರೀಮತಿಯು ನಾರದರನ್ನು ನೋಡಿದಾಗ ಅವರ ಮುಖವು ಕರಡಿಯಂತೆಯೂ, ಪರ್ವತರ ಮುಖವು ಕಪಿಯಂತೆಯೂ ಕಂಡಿತು. ಆಗ ಶ್ರೀಮತಿಯು ನಗುತ್ತಾಳೆ. ಅಲ್ಲದೇ ತನ್ನ ಪರಮ ಸಂಕಲ್ಪದಂತೆ ಅವಳು ಶ್ರೀಮನ್ನಾರಾಯಣನನ್ನೇ ವರಿಸಿದಳು. ಆಗ ಕುಪಿತಗೊಂಡ ತಪಸ್ವಿಗಳಿಬ್ಬರೂ ನಾರಾಯಣನಿಗೆ ಮತ್ತು ಶ್ರೀಮತಿಗೆ ಶಪಿಸುತ್ತಾರೆ. ಶ್ರೀಮತೀ ನಿನಗೆ ಮುಂದಿನ ದಿನಗಳಲ್ಲಿ ನಿನಗೂ ಪತಿವಿರಹದುರುಬೆ ಕಾಡಲಿ. ನಾರಾಯಣ ನಿನಗೆ ಕಪಿಯ ಮತ್ತು ಕರಡಿಯ ಸಹಾಯದಿಂದಲೇ ನಿನ್ನ ಪತ್ನಿಯ ಪ್ರಾಪ್ತಿಯಾಗಲಿ ಎಂದು.
ಭಗವಂತನನ್ನಾದರೂ ನೊಂದವರು ಶಪಿಸಿದರೆ ಅದರ ಫಲ ಅನುಭವಿಸಲೇಬೇಕು ಎಂಬುದನ್ನು ಜಗತ್ತಿಗೆ ಸಾರಲೋ ಎಂಬಂತೆ ಭಗವಂತ ರಾಮಾವತಾರದಲ್ಲಿ ಕಪಿಯ ಮತ್ತು ಕರಡಿಯ (ಜಾಂಬವನ) ಪರಮ ಸಹಾಯದಿಂದಲೇ ತನ್ನ ಪತ್ನಿಯನ್ನು ಮರಳಿ ಪಡೆಯಲು ಸಾಧ್ಯವಾಯಿತು. ಕರ್ಮಫಲ ಅನುಭವಿಸಲೇಬೇಕು ಅಲ್ಲವೇ?
ಡಾ.ಕೇಶವ ಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Wed, 25 January 23