
ಮಮ್ಮಲೇಶ್ವರ ಮಹಾದೇವ, ಹಿಮಾಚಲ ಪ್ರದೇಶ(Mamleshwar Mahadev Temple): ಪಾಂಡವರು ವನವಾಸದಲ್ಲಿದ್ದಾಗ ಹಿಮಾಚಲ ಪ್ರದೇಶದಲ್ಲಿ ಸ್ವಲ್ಪ ಸಮಯ ಕಳೆಯುತ್ತಾರೆ. ಈ ವೇಳೆ ಪಾಂಡವರು ಮಮ್ಮಲೇಶ್ವರ ಮಹಾದೇವನನ್ನು ಸ್ಥಾಪಿಸುತ್ತಾರೆ. ಇಲ್ಲಿ ಭೀಮನು ಹಿಡಿಂಬೆಯನ್ನು ಭೇಟಿಯಾದ ಬಳಿಕ ಆಕೆ ಅವನ ಹೆಂಡತಿಯಾದಳು. ಈ ದೇವಾಲಯವು 5000 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಭೀಮನ ಡೋಲು ಮತ್ತು 200 ಗ್ರಾಂ ಗೋಧಿ ಧಾನ್ಯಗಳಿವೆ. ಈ ಗೋಧಿ ಧಾನ್ಯವನ್ನು ಪಾಂಡವರು ಬೆಳೆದರು ಎಂದು ನಂಬಲಾಗಿದೆ. ಮಹಾಭಾರತ ಕಾಲದಿಂದಲೂ ನಿರಂತರವಾಗಿ ಉರಿಯುತ್ತಿರುವ ಜ್ವಾಲೆಯು ಈ ದೇವಾಲಯದಲ್ಲಿದೆ.

ಅಘಂಜರ ಮಹಾದೇವ ದೇವಸ್ಥಾನ, ಹಿಮಾಚಲ ಪ್ರದೇಶ(Aghanjar Mahadev Temple): ಈ ದೇವಾಲಯವು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಖನಿಯಾರಾ ಗ್ರಾಮದಲ್ಲಿದೆ. ವನವಾಸದ ಸಮಯದಲ್ಲಿ, ಅರ್ಜುನನು ಶ್ರೀಕೃಷ್ಣನ ಮಾರ್ಗದರ್ಶನದೊಂದಿಗೆ ಈ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು ಎನ್ನಲಾಗುತ್ತೆ. ಹಾಗೂ ಶಿವನು ಅರ್ಜುನನ ಪೂಜೆಯಿಂದ ಸಂತೋಷಪಟ್ಟು ಅರ್ಜುನನಿಗೆ ಪಶುಪತಿ ಆಯುಧವನ್ನು ನೀಡಿದನು.

ಗಂಗೇಶ್ವರ ದೇವಸ್ಥಾನ, ಗುಜರಾತ್(Gangeshwar Temple): ಗಂಗೇಶ್ವರ ದೇವಸ್ಥಾನವು ಗುಜರಾತ್‌ನ ದಿಯು ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪದುಮ ಗ್ರಾಮದಲ್ಲಿದೆ. ಗಂಗಾ ಮತ್ತು ಈಶ್ವರನಿಂದ ಗಂಗೇಶ್ವರ ಎಂಬ ಹೆಸರು ಬಂದಿದೆ. ಇದರ ಅರ್ಥ ಗಂಗೆಯ ಅಧಿಪತಿ ಎಂದು. ಈ ದೇವಾಲಯವು ಕಡಲತೀರದ ಬಂಡೆಗಳ ನಡುವೆ ಇರುವ ಗುಹೆಯಲ್ಲಿದೆ. ಇಲ್ಲಿ ಐದು ಶಿವಲಿಂಗಗಳಿವೆ, ಇದನ್ನು ಪಾಂಡವರು ತಮ್ಮ ದೈನಂದಿನ ಪೂಜೆಗಾಗಿ ಸ್ಥಾಪಿಸಿದರು. ಸಮುದ್ರದ ನೀರು ಏರುವ ಸಮಯದಲ್ಲಿ ಈ ಶಿವಲಿಂಗಗಳು ಸಮುದ್ರದಲ್ಲಿ ಮುಳುಗುತ್ತವೆ ಮತ್ತು ನೀರು ಇಳಿಯುವ ಸಮಯದಲ್ಲಿ ಮಾತ್ರ ಕಾಣಿಸುತ್ತವೆ. ಈ ದೇವಾಲಯವನ್ನು 'ಸಮುದ್ರ ಮಂದಿರ' ಎಂದೂ ಕರೆಯಲಾಗುತ್ತದೆ.

ಭಯಹರಣ ಮಹಾದೇವ ದೇವಸ್ಥಾನ, ಉತ್ತರ ಪ್ರದೇಶ(Bhaya Harana Mahadeva Temple): ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಭೀಮನು ತನ್ನ ವನವಾಸದ ಸಮಯದಲ್ಲಿ ಭಯಹರಣ ಮಹಾದೇವ ದೇವಾಲಯವನ್ನು ಸ್ಥಾಪಿಸಿದನು ಎನ್ನಲಾಗಿದೆ. ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಭಕ್ತರು ಭಯ ಮತ್ತು ಗೊಂದಲದಿಂದ ಮುಕ್ತರಾಗುತ್ತಾರೆ. ದೇವಾಲಯದಲ್ಲಿ ಶಿವಲಿಂಗದ ಜೊತೆಗೆ, ಹನುಮಂತ, ಶಿವ-ಪಾರ್ವತಿ, ಸಂತೋಷಿ ಮಾತಾ, ರಾಧಾ-ಕೃಷ್ಣ, ವಿಶ್ವಕರ್ಮ, ಬೈಜು ಬಾಬಾ ಮುಂತಾದವರ ದೇವಾಲಯವೂ ಇದೆ. ಶ್ರಾವಣ ಮತ್ತು ಮಹಾಶಿವರಾತ್ರಿಯಂದು ಇಲ್ಲಿ ಭಾರೀ ಜನಸಂದಣಿ ಕಂಡುಬರುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ರಾಕ್ಷಸ ಬಕಾಸುರನನ್ನು ಕೊಲ್ಲಲು ಭೀಮನು ಈ ಶಿವಲಿಂಗವನ್ನು ಸ್ಥಾಪಿಸಿದನು.

ಲಾಖಾಮಂಡಲ ದೇವಾಲಯ, ಉತ್ತರಾಖಂಡ(Lakha Mandal Temple): ಲಾಖಾಮಂಡಲ ದೇವಾಲಯವು ದೆಹರಾದೂನ್‌ನಿಂದ 128 ಕಿಮೀ ದೂರದಲ್ಲಿ ಯಮುನಾ ನದಿಯ ದಡದಲ್ಲಿದೆ. ಪುರಾಣಗಳ ಪ್ರಕಾರ, ಪಾಂಡವರು ಲಕ್ಷಗೃಹದಿಂದ ತಪ್ಪಿಸಿಕೊಂಡು ಬಹಳ ಕಾಲ ಇಲ್ಲಿಯೇ ಇದ್ದರು. ಈ ಸಮಯದಲ್ಲಿ ಅವರು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಇಲ್ಲಿ ಎರಡು ಶಿವಲಿಂಗಗಳು ವಿವಿಧ ಬಣ್ಣಗಳು ಮತ್ತು ಗಾತ್ರಗಳೊಂದಿಗೆ ನೆಲೆಗೊಂಡಿವೆ. ದೇವಾಲಯದ ಒಳಗಿನ ಬಂಡೆಯ ಮೇಲೆ ಪಾರ್ವತಿಯ ಹೆಜ್ಜೆ ಗುರುತುಗಳನ್ನು ಕಾಣಬಹುದು. ಮಹಾಶಿವರಾತ್ರಿಯಂದು ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರ ಆಸೆಯು ಈಡೇರುತ್ತದೆ ಎನ್ನುವ ನಂಬಿಕೆಯಿದೆ.